ಕೆಲವರು ಕಳೆನಾಶಕದಿಂದ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುತ್ತಾರೆ, ಅದೆಲ್ಲವೂ ಅವರ ಅನುಭವದ ಮಾತಲ್ಲ. ಕಳೆಗಳನ್ನು ಮಾನವ ಶ್ರಮದಲ್ಲಿ ತೆಗೆಯುವುದಕ್ಕಿಂತ ಕಳೆನಾಶಕ ಸಿಂಪಡಿಸಿ ನಿಯಂತ್ರಣ ಮಾಡುವುದು ಸುಲಭ ಹಾಗೂ ಮಿತವ್ಯಯಿ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. 

ಕಳೆನಾಶಕ ಸಿಂಪಡಿಸಿ ಕಳೆಗಳನ್ನು ಸಾಯಿಸಿದ ಹೊಲದಲ್ಲಿ ನಡೆದಾಡುವಾಗ ಚಕ್ಕುಲಿ ಹುಡಿಯಾದಂತೆ ಸದ್ದು ಕೇಳಿ ಬರುತ್ತದೆ. ಅದೇನು ಸದ್ದು ಎನ್ನುತ್ತೀರಾ? ಮತ್ತೇನಿಲ್ಲ ಕಳೆಗಳನ್ನು ಒಣಗುವಂತೆ ಮಾಡಿದಾಗ ಆ ಕಳೆಗಳು ನೀರಿನ ಸಂಪರ್ಕದಲ್ಲಿ ಕೊಳೆತು ಎರೆಹುಳುಗಳಿಗೆ ತಕ್ಷಣದ ಆಹಾರವಾಗುತ್ತದೆ. ಅಲ್ಲಿ ಅಸಂಖ್ಯ ಪ್ರಮಾಣದಲ್ಲಿ ಎರೆಹುಳುಗಳು ಹುಟ್ಟಿಕೊಳ್ಳುತ್ತವೆ. ಈ ವರ್ಷ ತೋಟಕ್ಕೆ ಕಳೆನಾಶಕ ಸಿಂಪಡಿಸಿದರೆ ಮುಂದಿನ ಮಳೆಗಾಲಕ್ಕೆ ಅಲ್ಲಿ ಎರೆಹುಳುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ. ಎರೆಹುಳುಗಳು ಮೆಕ್ಕಲು ಮಣ್ಣು ಮತ್ತು ಸಾವಯವ ವಸ್ತುಗಳನ್ನು ಭಕ್ಷಿಸಿ ಹಾಕಿದ ಹಿಕ್ಕೆಗಳು ಒಣಗಿ ಅಲ್ಲಲ್ಲಿ ತುಂಡಾದ ಚಕ್ಕುಲಿ ತರಹ ಬಿದ್ದಿರುತ್ತದೆ. ಅದರ ಮೇಲೆ ನಡೆದಾಡುವಾಗ ಚಕ್ಕುಲಿ ಹುಡಿಯಾದಂತೆ  ಅನುಭವವಾಗುತ್ತದೆ. ಒಂದು ಹುಲ್ಲು ಗಿಡದಲ್ಲಿ ಬೇರು ಎಷ್ಟು ಇರುತ್ತದೆ, ಅದು ಎಷ್ಟು ಆಳಕ್ಕೆ ಹೋಗುತ್ತದೆ ಎಂಬುದನ್ನು ಗಮನಿಸಿದವರಿದ್ದೀರಾ? ಬಹುಷಃ ಹೆಚ್ಚಿನವರು ಗಮನಿಸಿರಲಿಕ್ಕಿಲ್ಲ. ಹುಲ್ಲು ಕಳೆ ಸಸ್ಯ ಎಂದು ತಾತ್ಸಾರ ಮಾಡಬೇಡಿ. ಇದಕ್ಕೆ ನಾವು ಕಲ್ಪಿಸಿಯೂ ಇರದಷ್ಟು ಬೇರುಗಳು ಇರುತ್ತವೆ. ಈ ಬೇರುಗಳು ೧ ರಿಂದ ೧.೫ ಅಡಿ ಆಳದ ತನಕ ಹೋಗುತ್ತದೆ. ಅನುಕೂಲ ಇದ್ದರೆ ೨-೩ ಅಡಿ ವಿಸ್ತಾರದ ತನಕವೂ  ಹಬ್ಬುತ್ತದೆ. ಆ ಹುಲ್ಲು ಸಸ್ಯವನ್ನು ಕಳೆ ನಾಶಕ ಬಳಸಿ ನಾಶಮಾಡಿದಾಗ ಅದರ ಇಡೀ ಬೇರು ಸಮೂಹ ಸಾಯುತ್ತದೆ. ಬೇರು ಸತ್ತಲ್ಲೆಲ್ಲಾ ಮಣ್ಣಿನಲ್ಲಿ ತೂತುಗಳು  ಉಂಟಾಗುತ್ತವೆ. ಮಣ್ಣಿನಲ್ಲಿ ಎಷ್ಟು ತೂತುಗಳು ಆಗುತ್ತದೆಯೋ ಅಷ್ಟು ಅದು ಸಡಿಲವಾಗುತ್ತದೆ. ಆಮ್ಲಜನಕ ಮಣ್ಣಿನ ಒಳಗೆ ಸೇರಿಕೊಳ್ಳುತ್ತದೆ. ಇದು ಬೆಳೆಗಳ ಬೇರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕಳೆಗಳು ನೀರು, ಬೆಳಕು ಹಾಗೂ ಪೊಷಕಾಂಶಗಳನ್ನು ಮುಖ್ಯ ಬೆಳೆಗಿಂತ ವೇಗವಾಗಿ ಹೀರಿಕೊಂಡು ಮುಖ್ಯ ಬೆಳೆಗೆ ಕೊರತೆಯಾಗುವಂತೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತೋಟದೊಳಗೆ ಸಂಚರಿಸಲು ಮತ್ತು ನಿರ್ವಹಣೆ ಮಾಡಲು ಅನನುಕೂಲ ಮಾಡಿಕೊಡುತ್ತದೆ. ಮಾನವ ಶ್ರಮದಲ್ಲಿ ಕಳೆ ನಿಯಂತ್ರಣ ಈಗ ದುಸ್ತರ ಮತ್ತು ಅದು ಪ್ರಯೋಜನಕಾರಿಯೂ ಅಲ್ಲ. ಅದಕ್ಕಾಗಿ ಯಾಂತ್ರಿಕ ವ್ಯವಸ್ಥೆಗಳಿವೆಯಾದರೂ ಅದರಲ್ಲಿ ಕಳೆ ಸಾಯುವುದಿಲ್ಲ. ಕಳೆಯನ್ನು ಹೆಚ್ಚು ಸಮಯ ನಿಯಂತ್ರಿಸುವುದು ಕಳೆನಾಶಕಗಳು ಮಾತ್ರ. ಕಳೆನಾಶಕ ಸಿಂಪರಣೆ ಮಾಡಿದಾಗ ಕಳೆಗಳು ಸತ್ತು ಮಣ್ಣಿನೊಂದಿಗೆ ವಿಲೀನವಾಗಿ ಮಣ್ಣಿನ ಗಾಳಿಯಾಡುವಿಕೆ ಮತ್ತು ಬೆಳೆ ಸಸ್ಯಗಳ ಬೇರುಗಳಿಗೆ ಆಮ್ಲಜನಕದ ಪೂರೈಕೆಗೆ ಅನುಕೂಲ ಮಾಡಿಕೊಡುತ್ತದೆ. 

ಕಳೆನಾಶಕಗಳ ಬಗ್ಗೆ ನಮ್ಮಲ್ಲಿ ಇನ್ನೂ ಸಾಕಷ್ಟು ಗೊಂದಲಗಳು ಇವೆ. ಅದು ಪೂರ್ತಿ ನಿಜವಲ್ಲ. ವಾಸ್ತವವಾಗಿ  ಕಳೆನಾಶಕಗಳು ನಾವು ತಿಳಿದಷ್ಟು ಹಾನಿಕರವಲ್ಲ. ಕಳೆನಾಶಕಗಳನ್ನು ಬಳಕೆ ಮಾಡಿದಾಗ ಕಳೆಗಳು ಆ ಭೂಮಿಯಲ್ಲಿ ಮತ್ತೆ ಬೆಳೆಯದೆ ಇರುವುದಿಲ್ಲ. ಬೆಳೆಯುವ ಕಳೆಗಳು ಅಲ್ಲಿ ಫಲವತ್ತತೆ ಹೆಚ್ಚುವ ಕಾರಣ ಹಿಂದಿಗಿಂತಲೂ ಹುಲುಸಾಗಿ ಬೆಳೆಯುತ್ತವೆ. ಕಳೆಗಳು ಬೀಜಗಳ ಮೂಲಕ ಪ್ರಸಾರವಾಗುತ್ತದೆ. ಅದನ್ನು ನಿರ್ನಾಮ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ.  

ಸಾಮಾನ್ಯವಾಗಿ ಕಳೆಗಳು ಬೆಳಕು ಬೀಳುವ ಕಡೆ ಜಾಸ್ತಿ. ಗೆಲ್ಲುಗಳು ಪರಸ್ಪರ ತಾಗಿಕೊಂಡು ನೆರಳು ಆವರಿಸುವ ತನಕ ಕಳೆಗಳ ತೊಂದರೆ ಅಧಿಕ. ಈ ಸಮಯದಲ್ಲಿ ಬೆಳೆಗೆ ಕಳೆ ಸ್ಪರ್ಧೆ ಉತ್ತಮವಲ್ಲ. ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಎಳವೆಯಲ್ಲಿ ಸೊರಗಿದರೆ ನಂತರ ಜೀವಮಾನ ಪರ್ಯಂತ ಸೊರಗುತ್ತವೆ. ಆದ ಕಾರಣ ನಾಟಿ ಮಾಡಿ ಮೂರು ನಾಲ್ಕು ವರ್ಷಗಳ ತನಕ ಕಳೆಗಳ ಸ್ಪರ್ಧೆ ಇಲ್ಲದೆ ಸಸ್ಯವನ್ನು ಬೆಳೆಸುವುದು ತುಂಬಾ ಅವಶ್ಯಕ. 

ಕಳೆನಾಶಕಗಳು ಕಳೆಗಳ ಅಂಗಾಂಶಗಳನ್ನು ಕೊಲ್ಲುತ್ತದೆ. ಮೃದು ಕಳೆಗಳಿಗೆ ೧ ಲೀ ನೀರಿಗೆ ೩-೪ ಮಿಲಿ (ಹುಲ್ಲು), ಕಠಿಣ ಕಳೆಗಳಿಗೆ ೭-೮ ಮಿಲಿ. (ಮುಳ್ಳು, ಬಳ್ಳಿ, ಕಠಿಣ ಹುಲ್ಲು ಇತ್ಯಾದಿ) ಬೇಕಾಗುತ್ತದೆ. 

ಕಳೆನಾಶಕಗಳಲ್ಲಿ ಬೀಜ ಮೊಳೆಯುವ ಮುನ್ನ ಸಿಂಪರಣೆ ಮಾಡುವಂತದ್ದು ಮತ್ತು ಮೊಳೆತ ನಂತರ ಸಿಂಪರಣೆ ಮಾಡುವಂತದ್ದು ಎಂಬ ವಿಧವಿದೆ. ಇವುಗಳಲ್ಲಿ ಮತ್ತೆ ಸ್ಪರ್ಶ ಕಳೆನಾಶಕ ಮತ್ತು ಅಂತರ್‌ವ್ಯಾಪೀ ಕಳೆನಾಶಕಗಳೆಂದು ಎರಡು ವಿಭಾಗ ಮಾಡಲಾಗಿದೆ. 

ಸ್ಪರ್ಶ ಕಳೆನಾಶಕಗಳನ್ನು ಸಿಂಪಡಿಸುವಾಗ ಅದು ತಗಲಿದ ಭಾಗವು ಸತ್ತು ಹೋಗುತ್ತದೆ. ಇದು ಬೇಗ ಪರಿಣಾಮ ಕೊಡುವ ಕಳೆ ನಾಶಕಗಳಾಗಿದ್ದು ಸಿಂಪಡಿಸಿದ ಎರಡು ಮೂರು ದಿನದಲ್ಲೇ ಸತ್ತುದು ಗೊತ್ತಾಗುತ್ತದೆ. ಆದರೆ ಇದರಲ್ಲಿ ಸಸ್ಯದ ಬೇರು ಸಾಯಲಾರದು. ಮಾರುಕಟ್ಟೆಯಲ್ಲಿ  ಲಭ್ಯವಾಗುವ ಸ್ಪರ್ಶ ಕಳೆನಾಶಕಗಳಲ್ಲಿ ಮುಖ್ಯವಾಗಿ ಗ್ರಮಾಕ್ಸೋನ್ ಮುಖ್ಯವಾದುದು. 

ಅಂತರ್‌ವ್ಯಾಪೀ ಕಳೆನಾಶಕ ಸಿಂಪಡಿಸಿದಾಗ ಕಳೆ ಗಿಡಗಳು ಎರಡು ಮೂರು ದಿನಗಳ ನಂತರ ಹಳದಿಯಾಗಿ ಬಾಡುತ್ತಾ ೧-೨ ವಾರದ ತರುವಾಯ ಕಳೆ ಸಸ್ಯಗಳು ಬೇರು ಸಮೇತ ಸಾಯಲಾರಂಭಿಸುತ್ತವೆ. ಮಾರುಕಟ್ಟೆಯಲ್ಲಿ  ದೊರೆಯುವ ಅಂತರ ವ್ಯಾಪೀ ಕಳೆನಾಶಕಗಳಲ್ಲಿ ಮುಖ್ಯವಾಗಿ ಗ್ಲೆಂಫೋಸೆಟ್ ಅಂಶ ಇರುತ್ತದೆ. ಇದು ದ್ರವ ಮತ್ತು ಹುಡಿ ಅಥವಾ ಹರಳು ರೂಪದಲ್ಲಿರುತ್ತವೆ.

ಕಳೆಬೀಜ ಮೊಳೆಯದಂತೆ ಮಾಡುವ ಕಳೆನಾಶಕಗಳನ್ನು ಕಳೆಗಳು ಹುಟ್ಟುವ ಮೊದಲೇ ಸಿಂಪರಣೆ ಮಾಡಲಾಗುತ್ತದೆ. ಇದನ್ನು ಬಳಕೆ ಮಾಡಿದಲ್ಲಿ ನೆಲದಲ್ಲಿ ಬಿದ್ದಿರುವ ಬೀಜಗಳೂ ಸಹ ಮೊಳೆಯಲಾರದು. ನಂತರ ಬಿದ್ದದ್ದು ಮೊಳೆಯುತ್ತದೆ. ಬೀಜ ಮೊಳೆಯದಂತೆ ತಡೆಯುವ ಕಳೆನಾಶಕಗಳಲ್ಲಿ ಅಟ್ರಾಜಿನ್, ಡಯುರಾನ್, ಆಕ್ಸೀ ಪ್ಲೋರೋಫೆನ್ ಅಂಶ ಇರುತ್ತದೆ. ಕ್ಲಾಸ್ ಮುಂತಾದ ಕಳೆ ನಾಶಕಗಳು ಇದೇ ಗುಂಪಿಗೆ ಸೇರಿವೆ.

ಅನನಾಸಿನಂತಹ ಬೆಳೆಗಳ ಸಾಲಿನಲ್ಲಿ ಬರುವ ಕಳೆಗಳ ನಿಯಂತ್ರಣಕ್ಕೆ ಡಯುರಾನ್ ಅಂಶದ ಕಳೆನಾಶಕ ಒಳ್ಳೆಯದಾಗುತ್ತದೆ. ೪-೬ ಗ್ರಾಂ/೧ ಲೀ ನೀರಿನ ಸಾಂದ್ರತೆಯಲ್ಲಿ ಬೆಳೆಯೂ ಸೇರಿದಂತೆ ಸಿಂಪಡಿಸಿದರೆ ಪೂರ್ತಿ ಕಳೆ ಸತ್ತು ಮೂಲ ಬೆಳೆಗೆ ಏನೂ ಆಗಲಾರದು. ಎಳೆ ಪ್ರಾಯದ ಅಡಿಕೆ, ತೆಂಗು, ಕಾಫಿ, ಮಾವು, ಗೇರು ಮುಂತಾದ ಬೆಳೆಗಳಿಗೆ ಸಿಂಪರಣೆ ಮಾಡುವಾಗ ಎಲೆಗಳಿಗೆ ಬೀಳದಂತೆ ಜಾಗರೂಕತೆ ವಹಿಸಬೇಕು. ಭತ್ತ, ಜೋಳ, ಕಬ್ಬು, ಹತ್ತಿ ಧಾನ್ಯದ ಬೆಳೆಗಳಿಗೂ ಕಳೆ ನಾಶಕ ಇದ್ದು ಅದಕ್ಕೆ ಶಿಫಾರಿತವಾದುದನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಿಂಪರಣೆ ಮಾಡಬೇಕು. 

ಕಳೆ ನಾಶಕಗಳನ್ನು ಬಳಸುವ ಸಮಯ: 

ಮಣ್ಣು ತೇವವಾಗಿರುವ ಸಮಯದಲ್ಲಿ, ೪-೬ ಗಂಟೆ ಮಳೆ ಬರಲಿಕ್ಕಿಲ್ಲ ಎಂಬ ಖಾತ್ರಿ ಇದ್ದಾಗ, ಎಲೆಗಳ ಮೇಲೆ ಮಾತ್ರ ಸಿಂಪರಣೆ ಮಾಡಬೇಕು. ಪ್ರಾರಂಭದಲ್ಲಿ  ಒಂದೆರಡು ಮಳೆ ಬಂದ ತಕ್ಷಣ ಮಣ್ಣಿಗೆ ಅಟ್ರಾಜಿನ್ ಅಥವಾ ಡಯುರಾನ್ ಸಿಂಪರಣೆ ಮಾಡಬೇಕು. ನಂತರ ಬರುವ ಕಳೆಗಳಿಗೆ ಮಳೆಗಾಲ ಮಧ್ಯದಲ್ಲಿ ಸುಮಾರು ೯೦ ದಿನಗಳ ನಂತರ ಗ್ರಮೆಕ್ಸಾನ್. ಮೂರನೇ ಸಿಂಪರಣೆಯನ್ನು, ಕಳೆಗಳು ಹೂ ಬಿಡುವ ಸಮಯದಲ್ಲಿ  ಹೂವು ಬಲಿಯುವ ಮುನ್ನ ಮಾಡಬೇಕು. ಅಳಿದುಳಿದ ಕಳೆಗಳಿಗೆ ೨ ವಾರ ಬಿಟ್ಟು ಮತ್ತೆ ಸಿಂಪರಣೆ ಮಾಡಬೇಕು. ಕಳೆಗಳು ಹೆಚ್ಚು ಬೆಳೆದಷ್ಟೂ ಕಳೆನಾಶಕ ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ. 

ಸಿಂಪಡಿಸುವ ಕ್ರಮ: ಕಳೆನಾಶಕಗಳನ್ನು ಕೊಲ್ಲಬೇಕಾದ ಕಳೆಗಳ ಮೇಲೆ ಮಾತ್ರವೇ ಬೀಳುವಂತೆ ಸಿಂಪರಣೆ ಮಾಡಬೇಕು. ಅನವಶ್ಯಕ ಭಾಗಗಳಿಗೆ ಸಿಂಪರಣೆ ಮಾಡುವುದರಿಂದ ಅಲ್ಲಿ ಮಳೆ ಹನಿಗೆ ಮಣ್ಣಿನ ಸವಕಳಿ ಉಂಟಾಗುತ್ತದೆ. ಅಜಾಗರೂಕತೆ ಮಾಡಬಾರದು.ಕೆಲಸದವರ ಜೊತೆ  ನಾವೂ ಇದ್ದರೆ ಉತ್ತಮ. ಬೇಸಿಗೆಯಲ್ಲಿ ಹೊಲದ ತೇವಾಂಶ ಆವೀಕರಣ ತಡೆಯಲು ಅಲ್ಪ ಸ್ವಲ್ಪ ಕಳೆ ಹೊದಿಕೆ ಬೇಕಾಗುತ್ತದೆ. 

ಕಳೆನಾಶಕಕ್ಕೆ ಅಂಟನ್ನು  ಸೇರಿಸಬೇಕು. ಇದರಿಂದ ಕಡಿಮೆ ಸಾಂದ್ರತೆ ಸಾಕಾಗುತ್ತದೆ. ಮಿತ ಬಳಕೆ ಸಾಧ್ಯವಾಗುತ್ತದೆ. (೧ ಲೀ. ಕಳೆ ನಾಶಕಕ್ಕೆ ೧೦೦ ಮಿಲಿ) ಉತ್ತಮ ಅಂಟು ಬೆರೆಸಿ, ೨೦೦/೩೦೦ಮಿಲಿ ಬಳಸಿ ೧೦೦ ಲೀ ದ್ರಾವಣ ತಯಾರಿಸಬಹುದು. ೧೦೦ ಲೀಟರಿನ ಬ್ಯಾರಲ್‌ಗೆ ೨ ಕಿಲೋ ಯೂರಿಯಾ, ಅಥವಾ ಅಮೋನಿಯಂ ಸಲ್ಫೇಟ್ ಅನ್ನು ಸೇರಿಸಬೇಕು. ಆಗ ಕಳೆನಾಶಕದ ಪರಿಣಾಮ ಉತ್ತಮವಾಗುತ್ತದೆ. ದೊಡ್ಡ ಗಡಸು ಕಳೆಗಳಿಗೆ ೫೦೦ ಮಿಲಿ. ಕಳೆನಾಶಕಕ್ಕೆ  ೧೦೦ಲೀ. ನೀರು ಬೆರೆಸಿ ಅಂಟು ಮತ್ತು ಯೂರಿಯಾ ಹಾಕಿ ಸಿಂಪರಣೆ  ಮಾಡಿದಾಗ ಪೂರ್ತಿ ಸಾಯುತ್ತವೆ. ಅಂಟನ್ನು ಸೇರಿಸುವುದರಿಂದ ಏಕ ಪ್ರಕಾರವಾಗಿ ಕಳೆನಾಶಕ ಸಸ್ಯದ ಭಾಗಳಲ್ಲಿ ಬೀಳುತ್ತದೆ. ಮಾರುಕಟ್ಟೆಯಲ್ಲಿರುವ ಯಾವುದೇ ಕಳೆನಾಶಕಗಳೂ ಕಳೆಗಳನ್ನು ೨-೩ ತಿಂಗಳು ನಾಶ ಮಾಡಬಲ್ಲವು ಅಷ್ಟೇ. ನಂತರ ಕಳೆ ಬೆಳವಣಿಗೆ ಯಥಾ ಪ್ರಕಾರ ಇರುವುದು. ಆದ ಕಾರಣ ಕಳೆ ನಾಶಕಗಳೆಂದರೆ ಕಳೆ ನಿಯಂತ್ರಕಗಳು ಅಷ್ಟೇ. 

(ಮಾಹಿತಿ: ರಾಧಾಕೃಷ್ಣ ಹೊಳ್ಳ)