ಹೊರಗಡೆ ಎಲ್ಲೂ

ಚಳಿಗಾಳಿ ಬೀಸುತ್ತಿಲ್ಲ

ಬರಿದೆ ಕೆಂಡದಂತೆ

ಸುಡುತ್ತಿದೆ ನೆಲ

ನನ್ನ ಒಡಲಿನಂತೆ !

 

ಬಸಿರಾಗಿರುವ ನನ್ನ

ಕಣ್ಣುಗಳೂ,ಉರಿಯುತ್ತಿದೆ

ಹೊಗೆ ಬರುತ್ತಿದೆ

ಬದುಕುವ ಬಗೆ ಹೇಗೆ ?

 

ಒಡಲಲ್ಲಿ ಇರುವ ಮಗು ಕೇಳುತ್ತಿದೆ

ಕೈಯಲ್ಲಿರುವ ಮಗ ಕೇಳುತ್ತಿದ್ದಾನೆ

ತಿನ್ನಲು ಏನಾದರೂ ಕೊಡೆಂದು

ಹೇಗೆ ಕೊಡಲಿ ?

ಕಿತ್ತುಕೊಂಡವರ ನಡುವೆ

ಬದುಕುತ್ತಿದ್ದೇನೆ !

 

ಜಡ್ಡುಗಟ್ಟಿದ

ಸಮಾಜದ ನಡುವೆ

ನನ್ನ ಗಂಡ ಕಳೆದು ಹೋಗಿದ್ದಾನೆ

ರಾತ್ರಿ ಬಂದರೂ

ಹಾಸಿಗೆಯಲ್ಲೇ ಹೇಸಿಗೆ

ಮಾಡಿಕೊಂಡು ಮಲಗುತ್ತಾನೆ  !

 

ನನ್ನ ಮೈಬಣ್ಣ

ಕಪ್ಪಾದ ಹಾಗೇ

ಬದುಕೂ ಕಪ್ಪಾಗಿದೆ ನೋಡಿ

ಕೆಲವೊಂದು ಸಮಯ

ನನಗೂ ಅನಿಸಿದ್ದಿದೆ

ನಾನೂ ಬಿಳಿಯಾಗಿರಬೇಕಿತ್ತು !

ಮಹಲಲ್ಲಿ ಬದುಕುತ್ತಿದ್ದನೋ ಏನೋ ?

ನನ್ನ ಹೊಟ್ಟೆಯಲ್ಲಿ ಇರುವ ಮಗು

ಕೈಯಲ್ಲಿರುವ ಮಗನಿಗೆ

ತಿನ್ನಲು ಸಿಗುತ್ತಿತ್ತೋ ಏನೋ ?

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ