ಅದು ಡಚ್ಚ - ಕಿಚ್ಚ. ( ದರ್ಶನ್ - ಸುದೀಪ್ ) + ( ಡೆವಿಲ್ - ಮಾರ್ಕ್ ) ಅವರ ಅಭಿಮಾನಿಗಳ ಯುದ್ಧವಂತೆ..... ಸಾಮಾಜಿಕ ಜಾಲತಾಣಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದು ಬಹುದೊಡ್ಡ ಚರ್ಚೆಯಂತೆ. ಯಾಕಪ್ಪಾ, ಏನಾಗಿದೆ ಸಮಸ್ಯೆ, ಪ್ರಾಕೃತಿಕ ವಿಕೋಪ ನಿಯಂತ್ರಿಸಲು ಈ ಜಗಳವೇ ? ಆರ್ಥಿಕ ಕುಸಿತ ತಡೆಯಲು ಈ ಕುತಂತ್ರಗಳೇ ? ರಾಜ್ಯ ದೇಶದ ಘನತೆ ಕಾಪಾಡಲು ಈ ಬೈದಾಟಗಳೇ ? ಸಮಾಜದಲ್ಲಿ ಶಾಂತಿ ಸೌಹಾರ್ದತೆ ಉಂಟುಮಾಡಲು ಈ ವಿವಾದವೇ ? ಅಪಘಾತ, ಅಪರಾಧ, ಆತ್ಮಹತ್ಯೆ, ಕೊಲೆ ನಿಯಂತ್ರಿಸಲು ಈ ಅಭಿಯಾನದ ಯುದ್ಧವೇ ? ನಿರುದ್ಯೋಗ ನಿವಾರಣೆಗಾಗಿ ಈ ಕಚ್ಚಾಟವೇ ? ಭ್ರಷ್ಟಾಚಾರ, ಜಾತಿ ಪದ್ಧತಿ ಹೋಗಲಾಡಿಸಲು ಈ ಹೋರಾಟಗಳೇ ? ರೀ, ಸ್ವಾಮಿ ಈಗ ನಾವು 2026 ನೇ ಇಸವಿ ಹೊಸ್ತಿಲಲ್ಲಿ ಇದ್ದೇವೆ. ಇನ್ನೇನು ಕೆಲವೇ ವರ್ಷಗಳಲ್ಲಿ ಚಂದ್ರನಲ್ಲಿ ವಾಸ ಮಾಡುವ ದಿನಗಳು ದೂರವಿಲ್ಲ. ಇಡೀ ವಿಶ್ವ ನಮ್ಮ ಬೆರಳ ತುದಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ ವಾಸಿಸುತ್ತಿರುವ ನಮಗೆ ಚಲನಚಿತ್ರ ಒಂದು ಕಲಾ ಮಾಧ್ಯಮ - ಮನರಂಜನೆಯ ಸಮಯ - ವ್ಯಾಪಾರ ವ್ಯವಹಾರದ ಒಂದು ಉದ್ಯಮ ಎನ್ನುವ ಕನಿಷ್ಠ ಪ್ರಜ್ಞೆ ಬೇಡವೇ ?
ಗುರು, ಸಿನಿಮಾ ಒಂದು ಕೃತಕ ಸೃಷ್ಟಿ. ಅದರ ಪಾತ್ರಗಳು ಕಾಲ್ಪನಿಕ. ಅದನ್ನು ಯಾರೋ ವ್ಯಕ್ತಿಗಳು ಭಾವ ತುಂಬಿ ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ. ಅವರನ್ನು ನಟ ನಟಿಯರು ಎನ್ನುತ್ತಾರೆ. ಕೆಲವರಲ್ಲಿ ಒಂದಷ್ಟು ಅಭಿನಯ ಸಾಮರ್ಥ್ಯ ಚೆನ್ನಾಗಿರಬಹುದು. ಕೆಲವರು ಆ ಬಣ್ಣ, ವೇಷ, ಸನ್ನಿವೇಶ ಮತ್ತು ಇತರ ಪೂರಕ ಪಾತ್ರಗಳ ಬೆಂಬಲದಿಂದ ನೋಡಲು ಮೇಲ್ನೋಟಕ್ಕೆ ಕಣ್ಣಿಗೆ ಚೆನ್ನಾಗಿ ಕಾಣಬಹುದು. ಹೊಡೆದಾಟ, ಬಡಿದಾಟ, ದುಃಖ, ಪ್ರೀತಿ, ಹಾಸ್ಯ ದೃಶ್ಯಗಳಲ್ಲಿ ವಾಸ್ತವಕ್ಕಿಂತ ನಮ್ಮ ಮನೋ ಕಲ್ಪನೆಯಲ್ಲಿ ಮೂಡುವ ಆದರೆ ನಮ್ಮಿಂದ ನಿಜ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದ ಸನ್ನಿವೇಶಗಳು ನಮಗೆ ಮಜಾ ಅಥವಾ ಸ್ಪೂರ್ತಿ ಕೊಡಬಹುದು.
ಅಷ್ಟು ಬಿಟ್ಟರೆ ಸಾಮಾನ್ಯ ಪರಿಕಲ್ಪನೆಯಲ್ಲಿ ಅವರು ಯಾವ ಅತಿಮಾನುಷ ಅಥವಾ ವಿಶೇಷ ಅಧಿಕಾರ ಅಥವಾ ಶಕ್ತಿ ಹೊಂದಿಲ್ಲ. ಅಂತಹವರಿಗೆ ಮೆಚ್ಚುಗೆ, ಪ್ರಶಂಸೆ, ಒಂದಷ್ಟು ಗೌರವ ಹೊರತುಪಡಿಸಿ ಇದೇನ್ರಿ ಹುಚ್ಚು ಅಭಿಮಾನಿಗಳಂತೆ. ಹಾಲಿನ ಅಭಿಷೇಕ, ಹೂವಿನ ಸುರಿಮಳೆ, ಹಣ್ಣಿನ ತುಲಾಭಾರ, ಎತ್ತರೆತ್ತರದ ಕಟೌಟುಗಳು. ಪೋಲೀಸರ ಲಾಠಿ ಏಟು ತಿಂದು ಅವರನ್ನು ನೋಡಲು ಪ್ರಯತ್ನಿಸುವುದು, ಎಷ್ಟು ಸರಿ ಒಮ್ಮೆ ಯೋಚಿಸಿ ನೋಡಿ.
ಹೌದು, ಸ್ವಲ್ಪ ಹಿಂದೆ ನಾಟಕ, ಸಿನಿಮಾ ಹೊರತುಪಡಿಸಿ ಬೇರೆ ಮನರಂಜನೆಗಳೇ ಇಲ್ಲದಿದ್ದಾಗ, ಬಡತನ, ಅಜ್ಞಾನ ತುಂಬಿ ತುಳುಕುತ್ತಿದ್ದಾಗ ಸಿನಿಮಾ ಸಾಹಿತ್ಯ ಮತ್ತು ಅದರ ಪಾತ್ರಗಳು, ವರ್ತನೆಗಳು ಅಂದಿನ ಯುವ ಜನಾಂಗದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರಿರುವುದು ನಿಜ. ಅಲ್ಲದೆ ಅಂದಿನ ಸಾಮಾಜಿಕ ಮೌಲ್ಯಗಳನ್ನು ಜನರಿಗೆ ನೆನಪಿಸುವ ಮಾಧ್ಯಮವೂ ಇದಾಗಿತ್ತು ಅದನ್ನು ಅಲ್ಲಗಳೆಯುವಂತಿಲ್ಲ.
ಆದರೆ ಈಗ ಎಲ್ಲವೂ ಬದಲಾಗಿದೆ. ಅರಿವಿನ ಮಟ್ಟ, ತಂತ್ರಜ್ಞಾನ, ಸಂಪರ್ಕ ಎಲ್ಲವೂ ಹೆಚ್ಚಾಗಿದೆ. ನಟನಟಿಯರಿಗಿಂತ ಮಹತ್ವದ ವೃತ್ತಿಗಳು ಈ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ ಮತ್ತು ಉತ್ತಮ ಬೆಳವಣಿಗೆ ಹೊಂದಿದೆ. ಹೀಗಿರುವಾಗ ಈ ತಿಕ್ಕಲುತನ ಬೇಕೆ? ಅಭಿಮಾನಿಗಳೇ ಬೇಜಾರಾಯ್ತ ಶಿವ, ನಿಮ್ಮ ಸಿನಿಮಾ ಹಿರೋಗೆ ಈ ರೀತಿ ಹೇಳಿದ್ದಕ್ಕೆ. ಸಾರಿ ಬ್ರದರ್, ನಮಗೂ ಮೈ ಉರಿಯುತ್ತೆ.
ಹಾಲು, ಹಣ್ಣು, ತರಕಾರಿಗಳನ್ನು ರೈತರು ಎಷ್ಟು ಕಷ್ಟ ಪಟ್ಟು ಬೆಳೆಯುತ್ತಾರೆ. ಅದನ್ನು ಆಹಾರವಾಗಿ ತಿನ್ನಲು ಉಪಯೋಗಿಸದೆ, ಎಷ್ಟೋ ಬಡವರು ಪೌಷ್ಟಿಕಾಂಶದ ಕೊರತೆಯಿಂದಾಗಿ ನರಳುತ್ತಿರುವಾಗ ಕೃತಕ ಪಾತ್ರ ಮಾಡುವ ನಟನ ಪ್ರತಿಮೆಗೆ ಇದನ್ನು ಸುರಿಯುವುದನ್ನು ನೋಡಿದಾಗ.....
ಯಾರೋ ಒಬ್ಬ ಹುಚ್ಚ ಮತ್ತಿನಲ್ಲಿ ಏನೋ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ, ಇನ್ನಷ್ಟು ಹುಚ್ಚುರು ಅದಕ್ಕೆ ಹುಚ್ಚುಚ್ಚಾಗಿ ಪ್ರತಿಕ್ರಯಿಸಿದಾಗ ಅದನ್ನು ಈ ಹುಚ್ಚು ಮಾಧ್ಯಮಗಳು ಒಂದು ಯುದ್ಧ ಎಂದು ಕರೆದು ಅತಿಯಾದ ಪ್ರಾಮುಖ್ಯತೆ ನೀಡಿದಾಗ.....
ನಟರಾದವರು ಸಾಮಾಜಿಕ ಜವಾಬ್ದಾರಿಯಿಂದ ಈ ರೀತಿಯ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿ ಹೇಗೆ ಜನರು ತಮ್ಮ ಸ್ವಾಭಿಮಾನ ಮತ್ತು ಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸದೆ ಅಭಿಮಾನಿಗಳು ಎಂಬುವವರನ್ನು ಹೊಗಳಿ ಭ್ರಮೆಯಲ್ಲಿಟ್ಟು ತಾವು ನಿಜ ಜೀವನದ ಹಿರೋಗಳಂತೆ ಬಿಲ್ಡಪ್ ಕೊಡುವುದನ್ನು ನೋಡಿದಾಗ....
ಪೈಲ್ವಾನ್ - ಚಕ್ರವರ್ತಿ - ರಾಕಿಬಾಯ್ - ಡಿ ಬಾಸ್ ಇವೆಲ್ಲವೂ ಜನರನ್ನು ಆಕರ್ಷಿಸಲು ಪಾತ್ರಗಳಿಗೆ ಇಡುವ ಹೆಸರುಗಳೇ ಹೊರತು ಅದು ನಿಜ ಜೀವನದ ಅವರ ವ್ಯಕ್ತಿತ್ವಗಳಲ್ಲ ಎಂದು ಗೊತ್ತಿದ್ದರೂ, ಇಂದಿನ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕ ನಟನ ಹಿರೋಗಿರಿ ಸಾಧ್ಯವಿಲ್ಲ ಎಂದು ಅರ್ಥವಾಗಿದ್ದರೂ ಅವರಲ್ಲಿ ಅತಿಮಾನುಷ ಶಕ್ತಿ ಇದೆ ಎಂಬಂತೆ ಆರಾಧಿಸುವುದನ್ನು ನೋಡಿದಾಗ… ಈ ಸಮಾಜದ ಮಾನಸಿಕ ಸ್ಥಿತಿಯ ಬಗ್ಗೆ ಮರುಕ ಉಂಟಾಗುತ್ತದೆ.
ಕ್ಷಮಿಸಿ...ಕಲೆಯನ್ನು, ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸಿ, ಸ್ಪೂರ್ತಿ ತುಂಬಿ ಎಲ್ಲರಂತೆ. ಆದರೆ, ಮಾರಿಕೊಳ್ಳಬೇಡಿ ಸ್ವಾಭಿಮಾನ ಬಪೂನ್ ಗಳಂತೆ. ವಾಸ್ತವ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಲಿ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!