ಒಡಿಶಾ ರಾಜ್ಯದ ಕಂಧಮಾಲ್ ಮತ್ತು ಗಂಜಾಮ್ ಜಿಲ್ಲೆಗಳ ಗಡಿಭಾಗದಲ್ಲಿರುವ ‘ರಂಪಾ ಅರಣ್ಯ’ ಪ್ರದೇಶದಲ್ಲಿ ನಡೆಸಲಾದ ದೀರ್ಘಾವಧಿಯ ನಕ್ಸಲ್ ಕಾರ್ಯಾಚರಣೆ ಫಲ ಕೊಟ್ಟಿದೆ. ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೋಲೀಸ್ ಪಡೆ ಮತ್ತು ಒಡಿಶಾ ಪೋಲೀಸ್ ಇಲಾಖೆಯ ವಿಶೇಷ ತಂಡ ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಛತ್ತೀಸಘಡ್ ಮೂಲದ ಇಬ್ಬರು ನಕ್ಸಲರು ಸೇರಿದಂತೆ ಐವರು ಮಾವೋವಾದಿಗಳು ಹತರಾಗಿದ್ದಾರೆ. ಇವರ ತಲೆಗೆ ಭಾರೀ ಇನಾಮು ಘೋಷಿಸಲಾಗಿತ್ತು. ಈ ಕಾರ್ಯಾಚರಣೆಯ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘೨೦೨೬ರ ಮಾರ್ಚ್ ವೇಳೆಗೆ ಭಾರತವು ನಕ್ಸಲ್ ಮುಕ್ತವಾಗಲಿದೆ’ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿರುವುದು ಗಮನಾರ್ಹ.
ಮುಖ್ಯವಾಹಿನಿಯಲ್ಲಿ ಬೆರೆಯದೆ, ತಮ್ಮ ಬೇಡಿಕೆ ಅಥವಾ ಆಗ್ರಹಗಳ ಈಡೇರಿಕೆಗೆ ಯಥೋಚಿತ ಮಾರ್ಗವನ್ನು ನೆಚ್ಚದೆ, ಆಳುಗ ವ್ಯವಸ್ಥೆಯೊಂದಿಗೆ ಕೈಕೈ ಮಿಲಾಯಿಸಲು ಮುಂದಾತ್ತಿದ್ದ ನಕ್ಸಲರ ಅಸ್ತಿತ್ವವು ಕಾಲಕ್ರಮೇಣ ಬಲವನ್ನು ಕಳೆದುಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ. ಹೀಗಾಗಿ ‘ನಕ್ಸಲ್’ ವಾದದ ದಮನಕ್ಕೆ ಅರೆದ ಮದ್ದನ್ನೇ ಉಗ್ರವಾದ ನಿಗ್ರಹಕ್ಕೂ ಅರೆಯಬೇಕು ಎಂಬುದು ದೇಶದ ಬಹುತೇಕ ಸಹೃದಯಿಗಳ ಆಶಯ ಮತ್ತು ನಿರೀಕ್ಷೆ. ಇದು ಜಾಗತಿಕ ಸಮುದಾಯದ ಬಯಕೆಯೂ ಹೌದು ಎಂದರೆ ಅತಿಶಯೋಕ್ಯಿ ಆಗಲಾರದು. ಏಕೆಂದರೆ, ಪೆಹಲ್ಗಾಮ್ ಹತ್ಯಾಕಾಂಡ, ಇಸ್ರೇಲ್ ‘ನೋವಾ’ ಸಂಗೀತೋತ್ಸವದ ವೇಳೆ ಘಟಿಸಿದ ಉಗ್ರದಾಳಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಭಯೋತ್ಪಾದಕರ ಹೇಷಾರವ ಇವೆಲ್ಲವೂ ಜಾಗತಿಕ ಸಮುದಾಯದ ಮನವನ್ನು ಇನ್ನಿಲ್ಲದಂತೆ ಕಲಕಿರುವ ಘೋರ ಘಟನೆಗಳೇ. ಪ್ರಸ್ತುತ ಜಗತ್ತಿಗೆ ಬೇಕಿರುವುದು ಬುಲೆಟ್ಟು - ಬಾಬುಗಳ ಅಬ್ಬರವಲ್ಲ. ಹಸಿರಕ್ತದ ವಾಸನೆಯೂ ಅಲ್ಲ, ಬದಲಿಗೆ ಅರೆಪಾವಿನಷ್ಟು ಶಾಂತಿ-ನೆಮ್ಮದಿಗಳು. ಈ ಎರಡಕ್ಕೆ ಸಂಚಕಾರ ತರುವ ಕುತ್ಸಿಕ ಶಕ್ತಿಗಳನ್ನು ಮಟ್ಟಹಾಕುವುದು ಎಲ್ಲರ ಸಂಕಲ್ಪವಾಗಬೇಕು. ಧ್ಯೇಯವಾಕ್ಯವಾಗಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೭-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!