ಲೇಖಕ, ವಿಮರ್ಶಕ ಕ.ವೆಂ. ರಾಜಗೋಪಾಲ ಅವರು ಹಾಸನ ಜಿಲ್ಲೆಯ,ಅರಕಲಗೂಡು ತಾಲ್ಲೂಕಿನ ಕಾಂತಾಪುರದಲ್ಲಿ ೧೯೨೪ ನವೆಂಬರ್ ೧೦ರಂದು ಜನಿಸಿದರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ರಾಜಗೋಪಾಲರು ಮೈಸೂರು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೃತ್ಯ ಹಾಗೂ ನಾಟಕ ವಿಭಾಗದ ನಿರ್ದೇಶಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದ ಇವರು ಎಂಇಎಸ್ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
ಅನಾಥ ಮೇಸ್ಟರ ಸ್ವಗತ ಸಂಪ್ರದಾಯ, ಎಣಿಸಿದ ಹಣ, ರಾಗ-ಜಯಂತಿ, ಅರ್ಧ ತೆರೆದ ಬಾಗಿಲು (ಕಥಾಸಂಕಲನಗಳು), ಅಂಜೂರ, ನದಿಯ ಮೇಲಿನ ಗಾಳಿ, ಕನ್ನಡ ರಂಗಭೂಮಿಯಲ್ಲಿ, ದಶವಾರ್ಷಿಕ ಸಣ್ಣಕತೆಗಳು, ಮೇ ತಿಂಗಳ ಒಂದು ಅಬ್ಬರ (ಕವನ ಸಂಕಲನ), ಜಾನಪದ ನಾಟಕಗಳ ವಿಮರ್ಶೆ, ಹಿಮಗಿರಿಯ ಕರೆ, ಕೋರಿಯಾಲೆನಸ್ (ಅನುವಾದ), ತುಳುವರ ಆಚರಣೆಗಳಲ್ಲಿ ಕಲಾವಂತಿಕೆ (ಸಂಪಾದನೆ). ಇತ್ಯಾದಿ ಇವರ ಪ್ರಮುಖ ಕೃತಿಗಳು.
ಇವರು ವಿವಿಧ ರೇಡಿಯೋ ನಾಟಕಗಳನ್ನೂ ರಚಿಸಿರುವ ಇವರು ೨೦೧೪ ಅಕ್ಟೋಬರ್ ೨೦ರಂದು ನಿಧನರಾದರು.
***
ಪರಿಸರದಲ್ಲಿ
ಈ ಶತಮಾನದ ಕೊನೆಗೆ ಬಾಗಿದ ತಲೆ
ಕಾಲಮಾನದ ಮುಗಿಲ ಕೊಂಬೆ-
ಕಡೆದಂತೆ ನಿಂತ ಸುಸಮಯದ ಗೊಂಬೆ
ಮೈಯೆಲ್ಲ ಕಾಲದ ಬಿರುಕುಗಳರಳಿ
ಪರಿಸರದಲ್ಲಿ ಗಳಿತವಾಗಿದೆ ಯುಗದ ಸಮಯ
ಹುಟ್ಟಿದ ಹೊಸತನದಲ್ಲಿ ಬಂತ ತಂಗಾಳಿ
ಬೀಸಭಿಗೆಯಿಕ್ಕಿ ಬಳುಕಿದೆ ವೇಳೆ
ಹಣ್ಣೆಲೆಗಳೆಲ್ಲಾ ಉದುರುದಿರಿದ
ತಳದಲ್ಲಿ ಕಾಳು ಚೆಲ್ಲಿದ ಹಾಗೆ ರೀತಿ ನೀತಿ
ಸಂಜೆಯಾಗಿದೆ ಬಾಗಿದೆ ಬಣ್ಣ ಬಣ್ಣದ ಮುಗಿಲು
ಮನೆಯ ದಿಕ್ಕಿಗೆ ಸಾರಿ ಬಂದ ಹಕ್ಕಿ - ಜೀವಕ್ಕೆ
ನೆಮ್ಮದಿಯ ನೆರೆಹೊರಗೆ ತಾನೆ ತಿರುಗಿ
ಗರಿ ಮುದುರಿ ನೇಸರಳಿದದ್ದಕ್ಕೆ ನಮಿಸಿ ಕೂಗಿ
ಮಾಮೂಲಿನತಿಥಿ ತಂಗಾಳಿ ತೂಗಿದ
ಕಾಲುಗಳ ಬಿಗಿಯಲ್ಲಿ ಕುಂಡೆಯೂರಿದ ತಾಗಿ
ಯಾವ ಕೈಂಕರ್ಯಕ್ಕೆಂದು ಹುಟ್ಟಿತೀ ಹಳೆಯ ಗಿಡ
ಮರವಾಗಿ ನೂರಾರು ಗೂಡುಗಳ ತೌರಾಗಿ
ನೆಲೆಯೂರಿದ ಸಂತಾನಗೀತೆ ಹರಿಯುತ್ತಲೇ ಸಾಗಿ
ಮುಗಿಲ ಹಾದಿಯಲ್ಲೇರಿದ್ದರೂ ನೆಲವೆ ಗತಿ
ಮತಿ ನಿರಾಳ ಛಾಯೆಯಲ್ಲರಳಿಸುವಹಳೆಯ
ಬದುಕು
(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!