ಅವಧಾನಿ ಜಿ.ಎಸ್. ಅವರು ಮೂಲತಃ ಹೊನ್ನಾವರದವರು. ಲೇಖಕರ ಮೂಲ ಹೆಸರು ಗಣಪತಿ. ೧೯೪೮ ಆಗಸ್ಟ್ ೧೧ ರಂದು ಜನನ. ಎಂ.ಎ. ಪದವೀಧರ. ಉಪನ್ಯಾಸಕ, ವಿಮರ್ಶಕರಾಗಿದ್ದರು. ಅವರು ೨೦೦೦ ಆಗಸ್ಟ್ ೨೦ರಂದು ಮರಣ.
ಕೃತಿಗಳು : ಎಲ್ಲ ಕವಿತೆಗಳು(ಕವನ ಸಂಕಲನ), ಕಣಗಿಲೆ(ಕಾದಂಬರಿ), ಕಾವ್ಯ ಸೃಷ್ಟಿಯ ಸ್ವರೂಪ(ಸಂಪಾದಿತ ವಿಮರ್ಶಾ ಸಂಕಲನ), ಕ್ವಾಸಾರ( ಕಿರು ಕಾದಂಬರಿ), ಗಂಗೋತ್ರಿಯ ಹಕ್ಕಿಗಳು(ಕವನ ಸಂಕಲನ) ಪರಸ್ಪರ (ವಿಮರ್ಶಾ ಲೇಖನ ಸಂಗ್ರಹ), ಬೆಂಕಿ ಬಳ್ಳಿ(ಕವನ ಸಂಕಲನ), ಸಾಹಿತ್ಯ ವಿಮರ್ಶೆ೧೯೯೧ (ಸಂಪಾದಿತ), ಹೊಕ್ಕಳು(ಮಿನಿ ಪೋಯೆಮ್ಸ್), ಹೊತ್ತು ಮುಳುಗವ ಮುನ್ನ (ಕವನ ಸಂಕಲನ).
***
ಗಂಗೋತ್ರಿಯ ಹಕ್ಕಿಗಳು
ದಿಕ್ಕು ದಿಕ್ಕಿಗೆ ಹಾರಿ ವಲಸೆ ಬಂದಲ್ಲಲ್ಲಿ
ಗರಿ ಹರಡಿ ನೆರಳಲ್ಲಿ ಮೈಯ್ಯ ಚೆಲ್ಲಿ
ಬೆಳಕೊಡೆದು ಬಯಲಾಗಿ ಬೆಟ್ಟದೆತ್ತರ ದೃಷ್ಟಿ
ಚಿಲಿಮಿಲಿಯ ಚಿಲುವೆಗಳು ಚೆಲುವ ಸೃಷ್ಟಿ
ಟೀವಂಕ್ಕಿ ಚಿಟಗುಬ್ಬಿ ಕಾಜಾಣ ಡೇಗೆ
ಬೆಳ್ಳಕ್ಕಿ ಪಿಕಳಾರ ಮರ್ಕುಟಕ ಗೂಗೆ
ಮುಂಜಾನೆಯೆಳೆ ಬಿಸಿಲ ತೊಗಲಲ್ಲಿ ಕಂವುಚಿ
ಒಂದರೊಳಗಿನ್ನೊಂದು ಒತ್ತೊತ್ತಿ ಗಿಂವಚಿ
ಗೆಲ್ಲು ಗೆಲ್ಲುಗಳಲ್ಲಿ ಗುಲ್ ಮೊಹರ ಗಲ್ಲ
ಕಣ್ಣಾಲಿಯಲಿ ಬೆರಗು ಜೇನು ರಸಗುಲ್ಲ
ಚಿಟ್ಟೆಗೆರೆ ಪಟ್ಟೆಗೆರೆ ಗರಿ ಗರಿಯ ಡೌಲು
ಮರ ಮರದ ಮರ್ಮರಕೆ ಕಿಂಚಿತ್ತು ಅಮಲು
ಲೈಬ್ರೆರಿ ಕೆಂಟೀನು ಬಸ್ ಸ್ಟಾಪಿನಲ್ಲೂ
ಸ್ವಚ್ಛಂದ ಚಕ್ಕಂದ ಉರಿ ಬಿಸಿಲಿನಲ್ಲೂ
ಹೊತ್ತು ಕಂತುವ ಮೊದಲೆ ಕಾಳುಕಡಿ ಹುಡುಕಿ
ಎಲ್ಲಿಂದಲೋ ಬಂದು ಗಿಡ ಗಿಡದ ತಡಕಿ
ಮುಂಗಾರು ಹನಿಗಳು ಹಾಯಾಗಿ ಮಿಂದು
ಗೂಡನರಸುವ ಬಾರ, ಜತೆಗಾರ ಎಂದು
ಸ್ವಾತಿ ಹನಿ ಮುತ್ತಾಗಿ ಚಿಪ್ಪೊಡೆವಗಳಿಗೆ
ನೆಲ ಜಲದ ಪುಲಕ ಕರೆ, ಗಂಗೋತ್ರಿ ಬಳಿಗೆ
(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!