ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ೧೯೩೪ ಮೇ ೨ರಂದು ವಿಜಯಪುರ ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. 

ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ, ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು. 

***

ಗಾಳಿಪಟ

ವಸಂತ ಉದಯರು ಕೂಡಿದರು

ಗಾಳಿಯ ಪಟವನು ಮಾಡಿದರು

ಬಿದಿರಿನ ಕಡ್ಡಿಯನು ತಂದಿಹರು

ದಾರದ ಉಂಡಿಯ ಕೊಂಡಿಹರು

 

ಬಣ್ಣದ ಕಾಗದ ಕತ್ತರಿಸಿ

ಅಂಟನು ಕಂಬಿಗೆ ಮೆತ್ತಿರಿಸಿ

ಸೂತ್ರದ ದಾರವ ಸರಿಪಡಿಸಿ

ಬಾಲಂಗೋಸಿಯ ವಿಸ್ತರಿಸಿ

 

ಊರಿನ ದಿಬ್ಬದ ಮೇಲುಗಡೆ

ನಿಲ್ಲುತ ಬಿಟ್ಟರು ಮುಗಿಲಿನೆಡೆ

ಮೇಲೆಕೆ ಹಾರಿತು ಬಾನಮಟ

ಮುತ್ತಿತು ಸರ್ರನೆ ಗಾಳಿಪಟ

 

ನೀಲಾಕಾಶದ ಹಾಳೆಯಲಿ

ಬಿಡಿಸಿದ ಚಿಕ್ಕೆ ತೆರದಲ್ಲಿ

ಹಾರಿತು ನೋಡದು ಪಟಾಪಟ

ಅರಳಿತು ಮಕ್ಕಳ ಹೃದಯ ಪಟ

 

ತಿಂಗಳ ಲೋಕದ ಅಂಗಳಕೆ

ಮಕ್ಕಳ ಮನಸಿನ ಮಂಗಳಕೆ

ಹರುಷವ ನೀಡಿತು ಗಾಳಿಪಟ

ಏರಿತು ಹಾರಿತು ಗಾಳಿಪಟ

 

ಕುಣಿಯಿತು ತನನನ ನಭದಲ್ಲಿ

ಹಾಡಿತು ಆಡಿತು ರಭಸದಲಿ

ಮಕಳ ಲೋಕದ ಚಿಕ್ಕೆಯನು

ನೋಡಿರಿ ಕಾಗದ ಹಕ್ಕಿಯನು

(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)