ಅದೊಂದು ದಿನ ಸಂಜೆ ನನ್ನ ತಂದೆ ದಿವಂಗತ ಅಡ್ಡೂರು ಶಿವಶಂಕರ ರಾಯರು  ಅಡ್ಡೂರಿನ ನಮ್ಮ ತೋಟದ ಮನೆಯಿಂದ ಮಂಗಳೂರಿನಲ್ಲಿದ್ದ ನನಗೆ ಫೋನ್ ಮಾಡಿ ಹೇಳಿದರು: “ಇವತ್ತು ಇಲ್ಲಿಗೆ ಒಬ್ಬ ಪೊಲೀಸ್ ಕಾನ್-ಸ್ಟೇಬಲ್ ಬಂದಿದ್ದ.”

“ಯಾಕೆ ಬಂದಿದ್ದ?” ಎಂದು ನಾನು ಕೇಳಿದಾಗ ತಂದೆಯವರು ಹೇಳಿದ್ದು: “ನನ್ನ ಬದುಕಿನ ಹಿನ್ನೋಟಗಳ ಪುಸ್ತಕ ಉಂಟಲ್ಲಾ... ಅದನ್ನು ಅವನು ಓದಿದ್ದಾನಂತೆ. ಓದಿದ ನಂತರ ನನ್ನನ್ನು ಕಾಣಲೇ ಬೇಕು ಎಂದು ನಿರ್ಧಾರ ಮಾಡಿದನಂತೆ. ಹಾಸನದಲ್ಲಿ ಪೊಲೀಸ್ ಆಗಿರುವ ಅವನಿಗೆ ಮಂಗಳೂರಿನಲ್ಲಿ ಯಾರಿಗೋ ಒಂದು ವಾರಂಟ್ ಕೊಡುವ ಡ್ಯೂಟಿಗೆ ಹಾಕಿದರಂತೆ. ಹಾಗೆ ಇವತ್ತು ಮಂಗಳೂರಿಗೆ ಬಂದವನು, ಆ ಡ್ಯೂಟಿ ಮುಗಿಸಿ, ನೇರವಾಗಿ ಅಡ್ಡೂರಿಗೆ ಬಂದ. ಇಲ್ಲಿ ಅವರಿವರ ಹತ್ತಿರ ಕೇಳಿಕೊಂಡು ನಮ್ಮ ಮನೆಗೆ ಬಂದಿದ್ದ. ಆ ಪುಸ್ತಕದ ವಿಷಯ ಅರ್ಧ ಗಂಟೆ ಮಾತಾಡಿ ಹೊರಟ. ಹೋಗುವ ಮುಂಚೆ ನನ್ನ ಕಾಲಿಗೆರಗಿ, ನಿಮ್ಮ ಆಶೀರ್ವಾದ ಬೇಕು ಅಂತ ಕೇಳಿಕೊಂಡ.” 

ಆ ಪುಸ್ತಕದ ಶೀರ್ಷಿಕೆ: “ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟಗಳು”

ನಾನು ನಿರೂಪಿಸಿ, ನಾ. ಕಾರಂತ ಪೆರಾಜೆ ಸಂಪಾದಿಸಿದ ಪುಸ್ತಕ. ಜನವರಿ 2004ರಲ್ಲಿ ಆ ಪುಸ್ತಕ ಪ್ರಕಟವಾದಾಗ ನನ್ನ ತಂದೆಯವರಿಗೆ ವಯಸ್ಸು 82 ವರುಷಕ್ಕೆ ಹತ್ತಿರ (ಜನನ: 13 ಏಪ್ರಿಲ್ 1922). ಅನಂತರ ಸುಮಾರು ಒಂಭತ್ತು ವರುಷ ನಮ್ಮೊಂದಿಗಿದ್ದ ಅವರು ವಯಸ್ಸು 91 ವರುಷ ತುಂಬಲಿದೆ ಅನ್ನುವಾಗ 19 ಫೆಬ್ರವರಿ 2013ರಂದು ನಮ್ಮನ್ನು ಅಗಲಿದರು.

ಆ ಸಂದರ್ಭದಲ್ಲಿ, ಹಲವು ಪತ್ರಿಕೆಗಳಲ್ಲಿ ಅವರಿಗೆ “ನುಡಿ ನಮನ”ಗಳು ಪ್ರಕಟವಾದವು. ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ ಅವರು ಬರೆದ ‘ಮರೆಯಲ್ಲಿಯೇ ಇದ್ದು ಮರೆಯಾದರು ಅಡ್ಡೂರು ಶಿವಶಂಕರರಾಯರು” ಎಂಬ ವ್ಯಕ್ತಿ ಕಥನ ಪ್ರಕಟವಾದದ್ದು “ಉದಯವಾಣಿ” ದಿನಪತ್ರಿಕೆಯಲ್ಲಿ 23 ಜೂನ್ 2013ರಂದು. 

ತಂದೆಯವರಿಗೆ ನನ್ನ ನುಡಿ ನಮನ “ಕೃಷಿಯಿಂದ ಖುಷಿಯ ಹೆಜ್ಜೆಗಳು”. ಇದು “ಉದಯವಾಣಿ”ಯ (ಬೆಂಗಳೂರು ಆವೃತ್ತಿ) ಬಹುಧಾನ್ಯ ಅಂಕಣದಲ್ಲಿ 4 ಮಾರ್ಚ್ 2013ರಂದು ಬೆಳಕು ಕಂಡಿತು. “ಕೃಷಿಯನ್ನೇ ನಂಬಿ ನೆಮ್ಮದಿಯಿಂದ ಬದುಕಬಹುದೆಂದು ತೋರಿಸಿಕೊಟ್ಟವರು ಅಡ್ಡೂರು ಶಿವಶಂಕರ ರಾಯರು. ಆ ನೆಮ್ಮದಿಗೆ ಕಾರಣ ಅವರ ಸರಳ ಜೀವನ. ನಾನು ಕಂಡಾಗಿನಿಂದಲೂ ಅವರ ಉಡುಪು ಖಾದಿಯ ಅರೆತೋಳಿನ ಷರಟು ಮತ್ತು ಬಿಳಿ ಮುಂಡು. ಯಾವಾಗಲೂ ಹೆಗಲಿಗೊಂದು ಚೀಲ, ಕೈಯಲ್ಲೊಂದು ಕೊಡೆ. ಇದಕ್ಕಿಂತ ಹೆಚ್ಚಾಗಿ ಏನನ್ನೂ ಬಯಸಿದವರಲ್ಲ. ತನಗೊಂದು ರೇಡಿಯೋ ಸಾಕು, ಟಿವಿ ಬೇಡ ಎಂದವರು. ಇದ್ದದ್ದರಲ್ಲೇ ತೃಪ್ತಿ ಪಟ್ಟವರು” ಎಂದು ಅದರಲ್ಲಿ ಬರೆದಿದ್ದೆ. “ಒಂದಿಂಚು ಜಾಗಕ್ಕಾಗಿ ಇಂದು ರಕ್ತಪಾತ ನಡೆಯುವುದನ್ನು ನಾವು ಕಾಣುತ್ತಿದ್ದೇವೆ. ಹಾಗಿರುವಾಗ, ಊರಿನ ರಸ್ತೆಗಾಗಿ ಅಡ್ಡೂರಿನ ತನ್ನ ತೆಂಗಿನ ತೋಟದ ಎರಡೂ ಪಕ್ಕಗಳಲ್ಲಿ ಒಂದು ಎಕರೆ ಜಾಗ ದಾನ ಮಾಡಿದ ಮಹಾನುಭಾವರು ಅವರು” ಎಂಬುದನ್ನೂ ದಾಖಲಿಸಿದ್ದೆ. 

ಇಂತಹ ಮಹಾನುಭಾವರಾದ ನನ್ನ ತಂದೆಯವರು ತಮ್ಮ ಎಂಬತ್ತು ವರುಷಗಳ ಬದುಕನ್ನು ಹಿಂತಿರುಗಿ ನೋಡಿದಾಗ ಕಂಡ ನೋಟಗಳನ್ನು (ಆ ಅಪರೂಪದ ಪುಸ್ತಕದ ಬರಹಗಳನ್ನು) ಓದುಗರೊಂದಿಗೆ ಹಂಚಿಕೊಳ್ಳಲಿದ್ದೇನೆ. ಯಾಕೆಂದರೆ, ಅವುಗಳಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ಬದುಕಿನ ಪಾಠಗಳಿವೆ. 

ನನ್ನ ತಂದೆಯವರು ನಿಧನರಾಗಿ ಹದಿಮೂರು ವರುಷಗಳು ದಾಟುತ್ತಿವೆ. ಈ ಕಾಲಘಟ್ಟದಲ್ಲಿಯೂ ಅವರ ಬದುಕಿನ ಪಾಠಗಳು ಯಾಕೆ ಮುಖ್ಯವಾಗುತ್ತವೆ? 

ಯಾಕೆಂದರೆ, ಇಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ “ಇವರಂತೆ ಜೀವನ ನಡೆಸು” ಎಂದು ಯಾರನ್ನು ತೋರಿಸೋಣ? ಎಷ್ಟು ತಂದೆ-ತಾಯಂದಿರು ತಮ್ಮ ಮಕ್ಕಳಿಗೆ “ನಮ್ಮಂತೆ ಬದುಕು ನಡೆಸು” ಎಂದು ದಾರಿ ತೋರಿಸಲು ಸಾಧ್ಯವಿದೆ? ನನ್ನ ಬದುಕಿನುದ್ದಕ್ಕೂ ಉದಾತ್ತ ಮಾನವನಾಗಿ ಹೇಗೆ ಬಾಳಬೇಕೆಂದು ನನ್ನ ತಂದೆ ಮತ್ತು ತಾಯಿ ಬಿ. ಸುಶೀಲ ಇಬ್ಬರೂ ನನಗೆ ತೋರಿಸಿಕೊಟ್ಟಿದ್ದಾರೆ. ಅವರು ನುಡಿದಂತೆ ನಡೆದು ಬದುಕಿದ ರೀತಿ ಇತರರಿಗೂ ದಾರಿದೀಪವಾಗಲಿದೆ ಎಂದು ನಂಬಿದ್ದೇನೆ.  

ಆ ನಂಬಿಕೆಯಿಂದ “ಎಂಬತ್ತರ ಕೊಯ್ಲಿನ ಕಾಳುಗಳು” ಸರಣಿ ಬರಹಗಳ ಪ್ರಕಟಣೆಯನ್ನು “ಸಂಪದ”ದಲ್ಲಿ ಶುರು ಮಾಡುತ್ತಿದ್ದೇನೆ. ಇವನ್ನು ಓದುತ್ತಾ ಓದುತ್ತಾ, ಆ ಕಾಳುಗಳ ಸತ್ವ ಎದೆಗಿಳಿಸಿಕೊಂಡವರ ಬದುಕಿನಲ್ಲಿ ಅವು ಮೊಳಕೆಯೊಡೆದು ಅವರ ಬದುಕು ಉದಾತ್ತವಾಗಲು ಪ್ರೇರೇಪಿಸುವ ವಿಸ್ಮಯದ ಬೀಜಗಳಾಗಲಿ ಎಂದು ಹಾರೈಸುತ್ತೇನೆ.