ಬದುಕಿದ್ದಾಗಲೇ ದಂತಕತೆಯಾದ ಡಾ. ಸುಬ್ಬರಾವ್
ಸರಕಾರದ ಮಂತ್ರಿಯಾಗಿದ್ದರೂ ಸ್ವಂತ ಮನೆಯನ್ನಾಗಲೀ, ಸ್ವಂತಕಾರನ್ನಾಗಲೀ ಖರೀದಿಸದವರು ಇರಬಹುದೇ? ಎಂ.ಪಿ. ಮತ್ತು ಎಂ.ಎಲ್.ಎ. ಆಗಿದ್ದರೂ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ವಾಸ ಮಾಡಿದವರು ಇದ್ದಾರೆಯೇ? ಡಾಕ್ಟರ್ ಆಗಿದ್ದರೂ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಮಾಡಿಕೊಳ್ಳದವರು (ಅಂದರೆ ಬಾಡಿಗೆ ಕ್ಲಿನಿಕ್ನಲ್ಲಿಯೇ ವೃತ್ತಿ ನಡೆಸಿದವರು) ಇರಬಹುದೇ?
ಅಂಥವರೊಬ್ಬರು ಇದ್ದರು – ಅವರೇ ಡಾಕ್ಟರ್ ಅಡ್ಡೂರು ಸುಬ್ಬರಾವ್. ಕೇರಳದ ಉತ್ತರ ತುದಿಯ ಮಂಜೇಶ್ವರ – ಕಾಸರಗೋಡು ಪ್ರದೇಶದಲ್ಲಿ ಅವರ ಹೆಸರು ಕೇಳದವರಿಲ್ಲ. ತಮ್ಮ ಕರ್ಮಭೂಮಿ ಮಂಜೇಶ್ವರದಲ್ಲಿ ಆರು ದಶಕಗಳ ಕಾಲ ಮಾಡಿದ ಜನಸೇವೆಯಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಡಾಕ್ಟರ್ ಸುಬ್ಬರಾವ್. ಇಂದಿಗೂ ಅಲ್ಲಿನ ಜನರಿಗೆ ‘ಡಾಕ್ಟರ್’ ಅಂದರೆ ‘ಡಾಕ್ಟರ್ ಸುಬ್ಬರಾವ್’ ಒಬ್ಬರೇ. ಇಂತಹ ಡಾಕ್ಟರ್ ಸುಬ್ಬರಾವ್ ಅವರ ಬಾಲ್ಯ ಹೇಗಿತ್ತು? ಅವರ ಯೌವನದ ದಿನಗಳು ಹೇಗಿದ್ದವು?
ಬಾಲ್ಯ – ಯೌವನ
ಡಾ. ಸುಬ್ಬರಾಯರ ಬಾಲ್ಯದ ಹಾಗೂ ಯೌವನದ ದಿನಗಳನ್ನು (ಅವರ ತಮ್ಮ) ಅಡ್ಡೂರು ಶಿವಶಂಕರ ರಾವ್ ನೆನಪು ಮಾಡಿಕೊಳ್ಳುವುದು ಹೀಗೆ: ನನ್ನ ಸಣ್ಣಣ್ಣ ಡಾ|| ಸುಬ್ಬರಾವ್ ಅಕ್ಟೋಬರ್ ೧೬, ೧೯೧೯ರಲ್ಲಿ ವಿಶಾಖಪಟ್ಟಣ ದಲ್ಲಿ ಜನಿಸಿದ್ದ. ಆಗ ನಮ್ಮ ತಂದೆಯವರು ಅಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾಗಿದ್ದರು. ನಾನು ಸಹ ಅಲ್ಲೇ (೧೯೨೨) ಜನಿಸಿದೆ. ನನಗೂ ಅವನಿಗೂ ಸುಮಾರು ಎರಡೂವರೆ ವರುಷಗಳ ಅಂತರ. ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಹತ್ತಿರದ ಅಡ್ಡೂರು ನನ್ನ ಕುಟುಂಬದ ನೆಲೆ. ಸರಕಾರಿ ವೈದ್ಯರ ವೃತ್ತಿಯಲ್ಲಿದ್ದ ನನ್ನ ತಂದೆಗೆ ಆಗಾಗ ವರ್ಗಾವಣೆ. ಆವರೆಗೆ ಆಂಧ್ರ, ಕೇರಳದ ವಿವಿಧ ಊರುಗಳಿಗೆ ಅವರಿಗೆ ವರ್ಗವಾಗಿತ್ತು. ಆಗೆಲ್ಲ ಅವರ ಜೊತೆ ಹೋದ ನಮ್ಮ ವಿದ್ಯಾಭ್ಯಾಸಕ್ಕೆ ತೊದರೆಯಾದದ್ದನ್ನು ಅವರು ಕಂಡಿದ್ದರು. ಈ ತೊಂದರೆ ಪರಿಹರಿಸಲಿಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಅಧ್ಯಾಪಕ ವೃತ್ತಿಯನ್ನು ಅವರು ಆರಿಸಿಕೊಂಡರು. ಇದರಿಂದಾಗಿ ತಂಜಾವೂರಿನ ಮೆಡಿಕಲ್ ಸ್ಕೂಲಿಗೆ ಅವರ ನೇಮಕ ವಾಯಿತು. ಅನಂತರ ಒಂದೇ ಊರಿನಲ್ಲಿ ನೆಲೆಸಿ, ಒಂದೇ ಭಾಷೆ ಕಲಿತು ವಿದ್ಯಾಭ್ಯಾಸ ಮಾಡುವ ಅವಕಾಶ ನಮಗೆ ಒದಗಿತು. ತಂಜಾವೂರಿನಲ್ಲಿ ಏಳೂವರೆ ವರುಷ ಅಂದರೆ ೧೯೨೬ರಿಂದ ೧೯೩೩ರ ವರೆಗೆ, ನಂತರ ೧೯೩೩ರಿಂದ ೧೯೩೯ರ ವರೆಗೆ ಮದರಾಸಿನಲ್ಲಿ ಇದ್ದುದರಿಂದ ತಮಿಳು ಭಾಷೆಯಲ್ಲಿ ಕಲಿಯುವ ಅವಕಾಶವೂ ನಮಗೆ ಒದಗಿತು.
ಬಾಲ್ಯದ ದಿನಗಳು
ತಂಜಾವೂರಿನ ನಮ್ಮ ಜೀವನದ ಸ್ವಾರಸ್ಯದ ಘಟನೆಗಳನ್ನು ಮರೆಯಲಾಗದು. ಅಲ್ಲಿ ಒಂದು ವರುಷ ಖಾಸಗಿ ಶಾಲೆಯಲ್ಲಿ ಓದಿ ನಾನು ಮತ್ತು ನನ್ನ ಅಣ್ಣಂದಿರು ಬೇರೆ ಶಾಲೆ ಸೇರಿದೆವು. ನನ್ನ ದೊಡ್ಡಣ್ಣ ಕಲ್ಯಾಣ ಸುಂದರಂ ಪ್ರೌಢಶಾಲೆಗೂ, ನಾನು ಮತ್ತು ಸುಬ್ಬರಾವ್ ಸೈಂಟ್ ಜಾರ್ಜ್ ಸ್ಪೋರ್ಟ್ಸ್ ಸ್ಕೂಲಿಗೂ ಸೇರಿದೆವು. ಮೂರನೇ ತರಗತಿಯ ಅಧ್ಯಾಪಕರೊಬ್ಬರು ಬಹಳ ಕ್ರೂರಿ. ಯಾರಿಗೂ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಮಕ್ಕಳ ಮೇಲೆ ಬೆತ್ತ ಪ್ರಯೋಗಿಸುವುದರಲ್ಲಿ ಅವರು ನಿಸ್ಸೀಮರು. ಆ ಕೆಲಸ ಅವ್ಯಾಹತವಾಗಿ ನಡೆಯುತ್ತಿತ್ತು. ಆದರೂ ಯಾರೂ ಅವರ ಮೇಲೆ ದೂರು ಹೇಳುತ್ತಿರಲಿಲ್ಲ. ಒಮ್ಮೆ ಕೆಲವು ಹುಡುಗರು ತಂಟೆ ಮಾಡಿದರೆಂಬುದಕ್ಕಾಗಿ ಎಲ್ಲರಿಗೂ ಜೋರಾಗಿ ಏಟು ಬಾರಿಸಿದರು. ಏನೂ ಚೇಷ್ಟೆ ಮಾಡದಿದ್ದರೂ ನನ್ನ ಅಣ್ಣನಿಗೂ ಜೋರಾಗಿ ಪೆಟ್ಟು ಬಿತ್ತು. ಬಾಸುಂಡೆ ಬಂದು ಅನಂತರ ಜ್ವರದಲ್ಲಿ ನರಳುವಂತಾಯಿತು. ನನ್ನ ತಂದೆಯವರು ಶಾಲೆಯ ಮುಖ್ಯಸ್ಥರಿಗೆ ದೂರು ನೀಡಿದರು. ದೂರು ತನಿಖೆಯಾಗಿ ಆ ಅಧ್ಯಾಪಕರು ಕೆಲಸ ಕಳೆದುಕೊಳ್ಳಬೇಕಾಯಿತು. ಅವನು ಜ್ವರದಲ್ಲಿ ಮಲಗಿದ್ದಾಗ ಪ್ರತಿದಿನವೂ ಶಾಲೆಯಿಂದ ಅನೇಕ ಮಕ್ಕಳು ಅವನನ್ನು ನೋಡಲು ಬರುತ್ತಿದ್ದರು.
ನಾಟಕದ ಗೀಳು
ನನ್ನ ಅಣ್ಣನಿಗೆ ಬಾಲ್ಯದಿಂದಲೇ ನಾಟಕದ ಗೀಳು. ನಮ್ಮ ತಂದೆಯವರ ಸಹೋದ್ಯೋಗಿ ಡಾ ರಾಘವಾಚಾರಿ ಅವರು ಸತ್ಯ ಹರಿಶ್ಚಂದ್ರನ ಬಗ್ಗೆ ನಾಟಕವೊಂದನ್ನು ಸಂಯೋಜಿಸಿದ್ದರು. ಅಣ್ಣನಿಗೂ ಒಂದು ಪಾತ್ರವಿತ್ತು.ಅದೇ ನಾಟಕವನ್ನು ನಮ್ಮ ಬೀದಿಯಲ್ಲಿದ್ದ ಶ್ಯಾಮಾ ಮತ್ತು ಸುಂದರಂ ಅವರ ಮನೆಯಲ್ಲಿ ಪುನಃ ಆಡಲಾಯಿತು. ಮಾಳಿಗೆಯು ನಾಟಕದ ವೇದಿಕೆಯಾಗಿತ್ತು. ಸುತ್ತಮುತ್ತಲಿನ ಹಲವಾರು ಜನರು ಬಂದಿದ್ದರು. ಅಲ್ಲಿ ನಾಟಕದಲ್ಲಿ ಅಣ್ಣನದು ಹರಿಶ್ಚಂದ್ರನ ಪಾತ್ರ. ಹರಿಶ್ಚಂದ್ರನ ಮನೆಗೆ ಋಷಿಗಳು ಬಂದಾಗ ಅಲ್ಲಿ ಗಂಡು ಮಕ್ಕಳಿಲ್ಲ ಎಂಬ ಕಾರಣ ಅವನ ಮನೆಯಲ್ಲಿ ಊಟ ಮಾಡಲು ನಿರಾಕರಿಸುತ್ತಾರೆ. ಆಗ ಹರಿಶ್ಚಂದ್ರ ‘ಹಾಯ್’ ಎಂದು ದೊಪ್ಪನೆ ಬೀಳಬೇಕು. ಅಣ್ಣನ ಪಾತ್ರ ಎಷ್ಟು ಅಮೋಘವಾಗಿತ್ತೆಂದರೆ ಸಭಿಕರಿಂದ ‘Once more’ ಕೇಳಿಬಂತು. ಹಾಗಾಗಿ ಆ ದೃಶ್ಯವನ್ನು ಪುನಃ ಅಭಿನಯಿಸಲಾಯಿತು.ಆ ನಾಟಕದಲ್ಲಿ ನನಗೂ ಒಂದು ಪಾತ್ರ ಇತ್ತು. ಲೋಹಿತಾಶ್ವನ ಪಾಠಶಾಲೆಯಲ್ಲಿ ನನ್ನದು ಅಧ್ಯಾಪಕನ ಪಾತ್ರ. ನಾನು ಕೈಯಲ್ಲಿ ಬೆತ್ತ ಹಿಡಿದಿದ್ದೆ. ಲೋಹಿತಾಶ್ವ ಒಳ್ಳೆಯ ಹುಡುಗ ಎಂಬುದನ್ನು ನಾಟಕದಲ್ಲಿ ತೋರಿಸಬೇಕಾಗಿತ್ತು. ಇತರ ಮಕ್ಕಳು ಚೇಷ್ಟೆ ಮಾಡುವುದನ್ನು ಅಭಿನಯಿಸಿದಾಗ ನಾನು ಬಲವಾಗಿ ಬೆತ್ತವನ್ನು ಪ್ರಯೋಗಿಸಿದೆ. ನನ್ನ ಬೆತ್ತದ ಏಟು ಜೋರಾಗಿ ಬಿತ್ತು. ಏಟು ತಿಂದ ಮಕ್ಕಳು ನನ್ನ ಕೈಯಿಂದ ಬೆತ್ತ ಎಳೆದು ನನ್ನ ಮೇಲೆ ಮುಗಿಬಿದ್ದರು. ಲೋಹಿತಾಶ್ವ ಅದೇ ಬೆತ್ತದಲ್ಲಿ ನನಗೆ ಬಾರಿಸಿದ! ನನಗೆ ಅಳು ಬಂದು ಕೂಡಲೇ ವೇದಿಕೆಯಿಂದ ಕಾಲ್ಕಿತ್ತೆ.
ಇದೇ ನಾಟಕವನ್ನು ತನ್ನ ಮನೆಯಲ್ಲೂ ಆಡಿಸಬೇಕೆಂದು ಇನ್ನೊಬ್ಬ ಹುಡುಗ ಲಕ್ಷ್ಮಿನಾರಾಯಣನ್ ಆಹ್ವಾನಿಸಿದ. ನಾವು ಅವನಲ್ಲಿಗೆ ಹೋದೆವು. ಸಭಿಕರು ತುಂಬಿದ್ದರು. ನಾಟಕ ಶುರುವಾಯಿತು. ಆಗ ಕೆಲಸಕ್ಕೆ ಹೋಗಿದ್ದ ಆ ಮನೆಯ ಯಜಮಾನ ಮರಳಿ ಬಂದರೆಂದು ಯಾರೋ ಬೊಬ್ಬೆ ಹಾಕಿದ್ರು. ನಮ್ಮ ಉಡುಪು ಸರಂಜಾಮುಗಳೆಲ್ಲವನ್ನೂ ಬಿಟ್ಟು ಓಟ ಕಿತ್ತೆವು. ನಾಟಕ ಅರ್ಧದಲ್ಲೇ ನಿಂತಿತು. ನಮ್ಮಲ್ಲಿ ಒಂದು ಹೆಚ್.ಎಂ.ವಿ. ಗ್ರಾಮಾಫೋನ್ ಇತ್ತು. ಹಲವು ಹಾಡಿನ ಪ್ಲೇಟ್ಗಳಿದ್ದವು. ಪರವೂರಿನಿಂದ ನಮ್ಮಲ್ಲಿಗೆ ಬಂದ ಅತಿಥಿಗಳಿಗೆ ಪ್ಲೇಟ್ಗಳನ್ನು ಹಾಕಿ ಹಾಡು ಕೇಳಿಸುತ್ತಿದ್ದೆವು. ಹಾಡಿನ ಸಂಗ್ರಹದಲ್ಲಿ ಒಂದು ಹೆಂಡ ಕುಡುಕರ ಹಾಡು ಇತ್ತು. ಅದನ್ನು ಹಾಕಿ ಅಣ್ಣ ಹೆಂಡಕುಡುಕರ ಹಾಗೆ ನರ್ತಿಸಿ ತೋರಿಸುತ್ತಿದ್ದ. ಆಗ ಎಲ್ಲರೂ ನಗುತ್ತಿದ್ದರು.
ಮದ್ರಾಸಿನ ದಿನಗಳು
೧೯೩೩ರಲ್ಲಿ ತಂಜಾವೂರಿನ ವೈದ್ಯಕೀಯ ಶಾಲೆ ಮುಚ್ಚಲ್ಪಟ್ಟಿತು. ನನ್ನ ತಂದೆಯವರನ್ನು ಮದರಾಸಿಗೆ ವರ್ಗ ಮಾಡಿದರು. ಹಾಗಾಗಿ ಬಾಲ್ಯದ ದಿನಗಳನ್ನು ಕಳೆದ ತಂಜಾವೂರನ್ನು ಬಿಡಬೇಕಾಯಿತು. ಮದರಾಸಿನಲ್ಲಿ ಮುಂದಿನ ಆರೂವರೆ ವರುಷಗಳನ್ನು ಕಳೆದೆವು. ಮೈಲಾಪುರದಲ್ಲಿ ನಮ್ಮ ವಸತಿ. ಪಿ.ಎಸ್. ಹೈಸ್ಕೂಲ್ ಎಂಬ ಪ್ರಸಿದ್ಧ ಶಾಲೆಗೆ ಸೇರಿದೆವು. ಅಣ್ಣ ಐದನೇ ಫಾರ್ಮ್ (ಹತ್ತನೇ ತರಗತಿ) ಮತ್ತು ನಾನು ಮೂರನೇ ಫಾರ್ಮ್ (ಎಂಟನೇ ತರಗತಿ). ನಾನು ಹತ್ತರೊಟ್ಟಿಗೆ ಹನ್ನೊಂದು ಎಂಬ ಬಾಲಕನಾಗಿದ್ದರೂ ಸಣ್ಣಣ್ಣ ಅವನ ಒಳ್ಳೆಯ ಗುಣಗಳಿಂದಾಗಿ ತರಗತಿಯ ಮಕ್ಕಳಲ್ಲಿ ಪ್ರಮುಖನಾಗಿ ಕಾಣಿಸಿಕೊಳ್ಳುತ್ತಿದ್ದ. ಒಮ್ಮೆ ನಾನು ಮಕ್ಕಳ ಗುಂಪಿನೊಂದಿಗೆ ನಡೆಯುತ್ತ ಕೆಲವರನ್ನು ಹಿಂದಕ್ಕೆ ಹಾಕಿ ಮುಂದೆ ನಡೆಯಲು ಪ್ರಯತ್ನಿಸಿದಾಗ ಒಬ್ಬ ಹುಡುಗ ‘ಡಬ್ಬಾ’ ಎಂದು ಹೇಳುವುದು ಕೇಳಿಸಿತು. ಡಬ್ಬಾ ಎಂದರೆ ಕೆಟ್ಟ ಶಬ್ದ. ಅದರ ಅರ್ಥ ನನಗೆ ಆಗ ಗೊತ್ತಿರಲಿಲ್ಲ. ಕೆಟ್ಟ ಶಬ್ದ ಎಂದಷ್ಟೇ ಗೊತ್ತು. ಅವನು ನನ್ನನ್ನೇ ಉದ್ದೇಶಿಸಿ ಹಾಗೆ ಹೇಳಿದ್ದೆಂದು ಭಾವಿಸಿ ನಾನು ಕೋಪಗೊಂಡೆ. ಸಣ್ಣಣ್ಣ ನನ್ನ ಹಿಂದಿನಿಂದ ಬರುತ್ತಿದ್ದ. ಅವನೊಂದಿಗೆ ದೂರು ಹೇಳಿದೆ. ಸಣ್ಣಣ್ಣ ನೇರವಾಗಿ ಆ ಹುಡುಗನ ಹತ್ತಿರ ಹೋಗಿ ‘ನೀನು ಏನು ಹೇಳಿದ್ದು ಇವನಿಗೆ’ ಎಂದು ವಿಚಾರಿಸಿದ. ಅವನಿಗೆ ಹೇಗೆ ಉತ್ತರಿಸುವುದೆಂದು ಗೊತ್ತಾಗಲಿಲ್ಲ. ತಾನು ಏನು ಹೇಳಿದ್ದೆಂದು ಅವನಿಗೂ ನೆನಪಿಲ್ಲ. ಆದರೆ ‘ಹಾಗೆ ಹೇಳಿದರೆ ನೀನೇನು ಮಾಡುವೆ?’ ಎಂದು ಆತ ಎದುರಾಡಿದ. ಅಲ್ಲೇ ಮಾರ್ಗದ ಮಧ್ಯೆ ಅವರಿಬ್ಬರಿಗೂ ಹೊಕೈಯಾಯಿತು. ಆಗ ಬೇರೆಯವರು ಬಂದು ಬಿಡಿಸಿದರು. ಕೆಲವು ದಿನಗಳ ಬಳಿಕ ಅವರಿಬ್ಬರೂ ಸ್ನೇಹಿತರಾದರು. ಇಬ್ಬರಲ್ಲೂ ದ್ವೇಷ ಉಳಿಯಲಿಲ್ಲ.
ಹೈಸ್ಕೂಲ್ ಮುಗಿಸಿ ನನ್ನ ಅಣ್ಣ ಸುಬ್ಬರಾವ್ ಪಚ್ಚಪ್ಪಾಸ್ ಕಾಲೇಜಿಗೆ ಸೇರಿ ಅಲ್ಲಿ ಎರಡು ವರುಷ ಕಲಿತ. ಮುಂದೆ ಕೀಲ್ಪಾರ್ಕ್ ವೈದ್ಯಕೀಯ ಸ್ಕೂಲಿಗೆ ಸೇರಿದ. ದೊಡ್ಡಣ್ಣ ತಿಮ್ಮಪ್ಪಯ್ಯ ಗಳಿಸಿದಷ್ಟು ಉತ್ತಮ ಅಂಕ ಇವನು ಗಳಿಸಲಿಲ್ಲ. ಆದ್ದರಿಂದ ಇವನಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಹಾಗಾಗಿ ಎಲ್.ಐ.ಎಂ. ಕಲಿಯಲು ಮುಂದಾದ. ಆ ಸಮಯದಲ್ಲಿ ಆತ ತಾಯಿಗೆ ಮನೆ ಕೆಲಸದಲ್ಲಿ ಸಹಕರಿಸುತ್ತಿದ್ದ. ತರಕಾರಿ ತರುವುದು, ಜೀನಸು ತರುವುದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು… ಇತ್ಯಾದಿ. ನಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬೇರೆ ಜನರಿದ್ದರು. ಹಾಗಾಗಿ ಮನೆಯಲ್ಲಿ ಹೆಚ್ಚು ಕೆಲಸವಿರುತ್ತಿರಲಿಲ್ಲ. ಆದರೆ ನಾನು ಯಾವ ಕೆಲಸಕ್ಕೂ ಸಿಕ್ಕುತ್ತಿರಲಿಲ್ಲ. ‘ಉಪಕಾರಗೇಡಿ’ ಎಂಬ ಬಿರುದು ಗಳಿಸಿದ್ದೆ! ನಾವು ವರ್ಷಂಪ್ರತಿ ಊರಿಗೆ ಬೇಸಿಗೆ ರಜೆಯಲ್ಲಿ ಹೋಗಿ ಬರುತ್ತಿದ್ದೆವು. ಬರುವಾಗ ಸೆಂಟ್ರಲ್ ಸ್ಟೇಷನ್ನಲ್ಲಿ ಬೆಳಿಗ್ಗೆ ರೈಲಿನಿಂದಿಳಿದು ಕಾರಿನಲ್ಲಿ ಮನೆಗೆ ಬಂದು ಉಪಾಹಾರ ಮಾಡುತ್ತಿದ್ದೆವು. ಆದರೆ ಸಣ್ಣಣ್ಣನಿಗೆ ಮಾತ್ರ ಸಾಮಾನನ್ನೆಲ್ಲ ಎತ್ತಿನ ಗಾಡಿಯಲ್ಲಿ ತುಂಬಿ ಗಾಡಿಯಲ್ಲೇ ಕುಳಿತು ಮೈಲಾಪುರಕ್ಕೆ ಬರುವ ಕೆಲಸ. ಹಾಗಾಗಿ ಅವನು ಮನೆಗೆ ಬಂದು ಉಪಾಹಾರ ಮಾಡುವಾಗ ಸುಮಾರು ಮಧ್ಯಾಹ್ನ ಗಂಟೆ ಹನ್ನೆರಡಾಗುತ್ತಿತ್ತು.
ಹೀಗಿರುವಾಗ ಒಮ್ಮೆ ತಾಯಿ ನನಗೆ ‘ದೇವಸ್ಥಾನಕ್ಕೆ ಹಣ್ಣುಕಾಯಿ ಮಾಡಲು ನೀನು ಹೋಗಬಾರದೇ? ಅವನು ಎಷ್ಟು ಸಲ ಹೋಗುತ್ತಾನೆ?’ ಎಂದರು. ನಾನು ಇದನ್ನು ಸಣ್ಣಣ್ಣನಿಗೆ ಹೇಳಿದಾಗ, ‘ಭಕ್ತಿಯಿಂದ ಯಾರು ಅಲ್ಲಿಗೆ ಹೋಗುತ್ತಾರೆ? ನಾನು ಅಲ್ಲಿಗೆ ಬರುವವರನ್ನು ನೋಡಲು ಹೋಗುವುದು’ ಎಂದ. ತಂದೆಯವರು ತಾನು ಶಾಲೆಗೆ ಹೋಗಲು ಬಳಸುತ್ತಿದ್ದ ಸೈಕಲನ್ನು ಸಣ್ಣಣ್ಣನಿಗೆ ಕೊಟ್ಟಿದ್ದರು. ಪ್ರತೀದಿನ ಸಂಜೆ ನಾನು ಫುಟ್ಬಾಲ್ ಮತ್ತು ಅವನು ಕ್ರಿಕೆಟ್ ಆಡುತ್ತಿದ್ದೆವು. ಮದರಾಸಿನಲ್ಲಿ ನನಗೂ ಅವನಿಗೂ ಓದಲು ಒಂದೇ ಕೋಣೆ. ಕೆಲವು ಸಲ ಜಗಳವಾಗಿ ನಮ್ಮೊಳಗೆ ಜಟಾಪಟಿ ಆಗುತ್ತಿತ್ತು. ನನಗೆ ಕೆಲವೊಮ್ಮೆ ಹಿಂದಿನಿಂದ ತಿವಿಯುವುದು, ಗುದ್ದುವುದು.. ಇಂತಹ ತಂಟೆಗಳನ್ನು ನನ್ನ ತಂಗಿಯರು ಮಾಡುತ್ತಿದ್ದರು. ನನ್ನ ಸಹಾಯಕ್ಕೆ ಯಾರೂ ಬರುತ್ತಿರಲಿಲ್ಲ. ಎಲ್ಲರೂ ಅವನ ಸಹಾಯಕರೇ. ಇದು ಸಾಲದೆಂಬಂತೆ ಸಂಜೆ ತಂದೆಯವರು ಬಂದಾಗ ಅವರಿಗೆ ದೂರು ಹೇಳಿ ನನಗೆ ಬೆಲ್ಟಿನಿಂದ ಏಟು ಸಿಗುವಂತೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ತಂದೆಯವರ ಕೈಯಿಂದ ಬೆಲ್ಟಿನಿಂದ ಏಟು ತಿಂದವನು ನಾನೊಬ್ಬನೇ.
ತಂದೆಯವರ ನಿಧನಾನಂತರ
ಮದರಾಸಿನಲ್ಲಿದ್ದಾಗ ತಂದೆಯವರು (೧೯೩೯ ನವೆಂಬರ್ ೬ರಂದು) ತೀರಿಕೊಂಡರು. ತಾಯಿ ನಮಗೆ ಬಿಡಾರ ಮಾಡಿಕೊಟ್ಟು ಊರಿಗೆ ಮರಳಿದರು. ತಂದೆಯ ಕೆಲವು ಆಪ್ತರು ಹೋಗುವುದು ಬೇಡ, ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದರೂ ಕೇಳದೆ ಅಮ್ಮ ಅಡ್ಡೂರಿಗೆ ಹೊರಟುಹೋದಳು. ಆಗ ದೊಡ್ಡಣ್ಣ ಎಂಬಿಬಿಎಸ್ ಕೊನೆಯ ವರುಷದಲ್ಲಿ ಕಲಿಯುತ್ತಿದ್ದ. ಇನ್ನು ಒಂದು ವರುಷ ಓದಿ ಹೌಸ್ ಸರ್ಜನ್ ಮುಗಿಸಿದರೆ ಆತನ ವಿದ್ಯಾಭ್ಯಾಸ ಮುಗಿಯಲಿತ್ತು. ನಾನು ಎಫ್.ಎ.ಯಲ್ಲಿ ಓದುತ್ತಿದ್ದೆ. ಸಣ್ಣಣ್ಣ ಎಲ್.ಐ.ಎಂ. ಓದುತ್ತಿದ್ದ. ನಾನು ಮತ್ತು ದೊಡ್ಡಣ್ಣ ಒಂದು ರೂಂ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದೆವು. ಸಣ್ಣಣ್ಣ ಅವನ ಕಾಲೇಜಿನ ಸಹಪಾಠಿಗಳೊಂದಿಗೆ ಇರುತ್ತಿದ್ದ. ನಮಗೆ ಖರ್ಚಿಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತಿತ್ತು. ಸಣ್ಣಣ್ಣ ಕಾಲೇಜು ದಿನಗಳಲ್ಲಿ ದುಂದುವೆಚ್ಚ ಮಾಡದೆ ಮಿತವ್ಯಯದಲ್ಲಿ ಜೀವನ ನಡೆಸುತ್ತಿದ್ದ. ೧೯೪೦ರ ಮಾರ್ಚ್ನಲ್ಲಿ ನಾನು ಮಂಗಳೂರಿಗೆ ಬಂದೆ. ನನ್ನ ತಮ್ಮ ಊರಿಗೆ ಬಂದು ಮಂಗಳೂರಿನಲ್ಲಿ ಕಲಿಯಲು ಶುರು ಮಾಡಿದ. ದೊಡ್ಡಣ್ಣನ ವಿದ್ಯಾಭ್ಯಾಸ ಮುಗಿದಿತ್ತು. ಇನ್ನು ಕ್ಲಿನಿಕ್ ತೆರೆಯಲು ತಾನು ತಂದೆಯವರ ಉಳಿತಾಯದ ಹಣ ಖರ್ಚು ಮಾಡಿದರೆ ಸೋದರ ಸೋದರಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾದೀತೆಂದು ಆತ ಸೈನ್ಯಕ್ಕೆ ಸೇರಿದ. ತಂದೆಯವರ ನಿವೃತ್ತಿ ವೇತನ ಮತ್ತು ಇತರ ಅಲ್ಪಸ್ವಲ್ಪ ಉಳಿತಾಯದ ಹಣವನ್ನು ಅಮ್ಮ ಬ್ಯಾಂಕಿಗೆ ಹಾಕುತ್ತಿರಲಿಲ್ಲ. ಅವರು ಅದರಿಂದ ಕೃಷಿಭೂಮಿ ಖರೀದಿಸಿ ಗೇಣಿ ವಸೂಲಿ ಮಾಡಿ ಬದುಕಬೇಕೆಂದು ನಿಶ್ಚಯಿಸಿದ್ದರು. ಇದಕ್ಕೆ ಸಣ್ಣಣ್ಣನ ಬೆಂಬಲವಿತ್ತು. ಇದರಿಂದಾಗಿ ನಮ್ಮ ಒಟ್ಟು ಉತ್ಪತ್ತಿ ಸುಮಾರು ೪೫೦ ಮುಡಿ ಅಕ್ಕಿ ಗೇಣಿ ಬರುವಷ್ಟಾಯಿತು. ಹಿಂದೆ ಅದು ೧೫೦ ಅಕ್ಕಿ ಮುಡಿಗಳಾಗಿತ್ತು. ಈ ಹಣದಿಂದ ನನ್ನ ತಾಯಿ ಮನೆ ಖರ್ಚನ್ನು, ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಲು ಸಾಧ್ಯವಾಯಿತು. ಮದರಾಸಿನಲ್ಲಿ ಅವನಿಗೆ ರಾಜಕೀಯದ ಗಂಧಗಾಳಿ ಇರಲಿಲ್ಲ. ಆಗ ಎರಡನೇ ಮಹಾಯುದ್ಧ ಶುರುವಾಗಿತ್ತು. ಚಳುವಳಿ ಜೋರಾಗಿತ್ತು. ಆದರೆ ಅವನು ಅದೆಲ್ಲದರಿಂದ ದೂರವಾಗಿದ್ದ. (ಭಾಗ 2ರಲ್ಲಿ ಮುಂದುವರಿಯುತ್ತದೆ.)
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!