“ಆಗಿನ ಕಾಲ ಒಳ್ಳೆಯದಿತ್ತು. ಈಗಿನ ಹಾಗೆ ಅಲ್ಲ” ಎಂಬಂತಹ ಮಾತುಗಳನ್ನು ಹಲವರಿಂದ ನಾವು ಆಗಾಗ ಕೇಳುತ್ತೇವೆ. ಆಗಿನ ಕಾಲವೆಂದರೆ ಯಾವುದು? ರಾಮಾಯಣ ಕಾಲವೋ, ಮಹಾಭಾರತ ಕಾಲವೋ, ಅಕ್ಬರ್ನ ಕಾಲವೋ, ಬ್ರಿಟಿಷರ ಕಾಲವೋ? ಈ ಬಗ್ಗೆ ಖಚಿತವಾಗಿ ಯಾರೂ ಹೇಳುವುದಿಲ್ಲ. ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯಪೂರ್ವದ ಕಾಲವನ್ನು ಸಹ ‘ಆಗಿನ ಕಾಲ’ ಎಂದೇ ಹೇಳುತ್ತಾರೆ.
ಆಗ ಶೇ.80 ಜನರ ವಾಸ ಹಳ್ಳಿಗಳಲ್ಲಿ. ಮೂಲಭೂತ ಸೌಕರ್ಯಗಳಿಲ್ಲದೆ ಹಳ್ಳಿಗರು ಅನುಭವಿಸುತ್ತಿದ್ದ ತೊಂದರೆಗಳ ಕುರಿತು ಇವರಿಗೆ ಗೊತ್ತಾಗುವುದೇ ಇಲ್ಲ. ಆ ಕಾಲ ಒಳ್ಳೆಯದಿತ್ತು ಎನ್ನುತ್ತಾ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಸಂತೋಷಪಡುತ್ತಾರೆ!
ಆಗ ಅನನುಕೂಲಗಳೇ ಹೆಚ್ಚು. ಆರೋಗ್ಯ, ವಿದ್ಯಾಭ್ಯಾಸ, ಆಹಾರಗಳಿಂದ ವಂಚಿತರಾದವರೇ ಅಧಿಕ. ಹಳ್ಳಿಗಳಲ್ಲಿ ಶಾಲೆಗಳೇ ಇರುತ್ತಿರಲಿಲ್ಲ. ಮೈಲುಗಟ್ಟಲೆ ನಡೆದು ದೂರದ ಶಾಲೆಯಲ್ಲಿ ಕಲಿಯಬೇಕಾದ ಸ್ಥಿತಿ. ಗ್ರಾಮಗಳಲ್ಲಿ ಮನೆಗಳು ದೂರ ದೂರವಿರುವಾಗ, ಅಲ್ಲಿರುವ ಪ್ರಾಥಮಿಕ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತರಿಂದ ಹನ್ನೆರಡು ಮಾತ್ರ. ಆದ ಕಾರಣ ಉಪಾಧ್ಯಾಯರ ಮನೆಯ ಜಗಲಿಯಲ್ಲಿ ಪಾಠ ನಡೆಯುತ್ತಿತ್ತು. ಹಳ್ಳಿಗಳಲ್ಲಿ ಬಡತನ ಬೇರೆ. ಶಾಲೆಗೆ ಹೋದರೆ ಉಣ್ಣಲು ಗತಿಯಿಲ್ಲ. ಹೊಟ್ಟೆಪಾಡಿಗಾಗಿ ದುಡಿಯಬೇಕಾದ ಸ್ಥಿತಿ. ಹೀಗಿರುವಾಗ ವಿದ್ಯಾಭ್ಯಾಸ ಹೇಗೆ ಸಾಧ್ಯ? ಅದರಿಂದಾಗಿ ಹಳ್ಳಿವಾಸಿಗಳಾದ ಸಾವಿರಾರು ಜನ ಹೆಬ್ಬೆಟ್ಟಿನ ಗುರುತಿನ ಮಹನೀಯರೇ ಆಗಿ ಉಳಿಯಬೇಕಾಯಿತು.
ಹಳ್ಳಿಗಳಲ್ಲಿ ವಿವಿಧ ವರ್ಗದ ಜನರಿದ್ದರು. ಭೂಮಾಲೀಕರು, ಸಣ್ಣ ಹಿಡುವಳಿದಾರರು, ಗೇಣಿದಾರರು, ಕೃಷಿಕಾರ್ಮಿಕರು ಮತ್ತು ಇತರರು. ಇವರಲ್ಲಿ ನೂರಿನ್ನೂರು ಮುಡಿ ಅಕ್ಕಿಯನ್ನು ಗೇಣಿಯಾಗಿ ಪಡೆಯುವವರ ಜೀವನ ಕ್ರಮ ಒಂದು ಬಗೆ. 50ರಿ೦ದ 80 ಮುಡಿ ಅಕ್ಕಿ ಗೇಣಿ ಪಡೆಯುವ ಸಣ್ಣ ಹಿಡುವಳಿದಾರರದು ಮತ್ತೊಂ ದು ಬಗೆ. ತಾವು ದುಡಿದು ಬೇಸಾಯ ಮಾಡಿ ಲಭಿಸಿದ ಉತ್ಪತ್ತಿಯಲ್ಲಿ ಗೇಣಿ ಕಳೆದು ಉಳಿದುದರಲ್ಲಿ ಗೇಣಿದಾರರು ಜೀವನ ಮಾಡಬೇಕು. ಮಳೆಗಾಲದಲ್ಲಿ ಆಹಾರಕ್ಕೂ ತತ್ವಾರ. ಆಗ ಕೃಷಿ ಕಾರ್ಮಿಕರಿಗೆ ಉದ್ಯೋಗವಿಲ್ಲ. ಹೆಚ್ಚಿನವರು ಭೂಮಾಲೀಕರ ಮುಂದೆ ಕೈಒಡ್ಡಿ ಜೀವಿಸಬೇಕಾಗುತ್ತಿತ್ತು.
ವೈದ್ಯಕೀಯ ಸಮಸ್ಯೆ ದೊಡ್ಡ ಸಮಸ್ಯೆ. ಏನಾದರೂ ಅಸೌಖ್ಯವಾದರೆ ಹಳ್ಳಿ ಮದ್ದನ್ನೇ ಅವಲ೦ಬಿಸಬೇಕು. ಈಗಿನ ಹಾಗೆ ಡಾಕ್ಟರರು ಇಲ್ಲ. ಅನುಭವಿ ಆಯುರ್ವೇದ ಹಳ್ಳಿ ಪಂಡಿತರು ಕೆಲವರು ಇರುತ್ತಿದ್ದರಾದರೂ, ಅಂಥವರ ಸಂಖ್ಯೆ ವಿರಳ. ಮಲೇರಿಯ ರೋಗ ಬಂದರೆ ಕ್ವಿನೀನ್ ಮಾತ್ರೆ ತಿನ್ನಬೇಕು ಎಂದು ಸರಕಾರ ಹೇಳುತ್ತಿತ್ತು. ಅದರಿಂದ ಗುಣವಾಗದಿದ್ದರೆ ಜ್ವರಗಡ್ಡೆ ಬಂದು (ಲಿವರ್ ಹಾಳಾಗಿ) ಸಾಯುವುದೊ೦ದೇ ದಾರಿ. ಟೈಫಾಯಿಡ್ ಬಂದರೆ ‘ಬದುಕಿದರೆ ಬದುಕಿದ, ಸತ್ತರೆ ಸತ್ತ’. ಆಗ ಕೆಲವು ಮಂತ್ರವಾದಿಗಳಿಗೆ ಸುಗ್ಗಿ. ಬರಿಗಾಲಿನಲ್ಲಿ ನಡೆಯುವ ಅನೇಕರು ಹೊಟ್ಟೆಹುಳದ ಬಾಧೆಯಿಂದ ನರಳುತ್ತಿದ್ದರು. ಕೆಲವರು ಅತಿಸಾರಕ್ಕೆ ಒಳಗಾಗುತ್ತಿದ್ದರು. ಇವುಗಳಿಗೆಲ್ಲಾ ಪರಿಣಾಮಕಾರಿ ಔಷಧಿಯಿಲ್ಲ. ‘ದೇವರೇ ಗತಿ, ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ’ ಎಂದು ರೋಗಪೀಡಿತರಾದವರನ್ನು ಕೈಬಿಡುವ ಪರಿಸ್ಥಿತಿ ಇತ್ತು.
ಅವತ್ತಿನ ಕಾಲಕ್ಕೆ ಕೃಷಿಯ ಹೊರತು ಬೇರೆ ಉದ್ಯೋಗವೇ ಇರಲಿಲ್ಲ. ಎಲ್ಲೋ ಕೆಲವರು ಮೇಲಿನ ವರ್ಗದವರು ಉದ್ಯೋಗ ಸಂಪಾದಿಸಿಕೊಂಡಿದ್ದರು. ಕೆಲವೇ ಕೆಲವರು ಪ್ರಾಥಮಿಕ ಶಾಲೆಯ ಮಾಸ್ತರರಾಗಿದ್ದರು. ಕೆಳವರ್ಗದ ಹುಡುಗರಿಗೆ ದನ ಮೇಯಿಸುವ ಕೆಲಸ. ಅವರಿಗೆ ವರ್ಷಕ್ಕೊಂದು ಬಾರಿ ಸಂಭಾವನೆ. ಕೆಲವರು ಅಲ್ಲಲ್ಲಿ ಸಣ್ಣ ಸಣ್ಣ ವ್ಯಾಪಾರ ಮಾಡಿಕೊಂಡಿದ್ದರು. ಇನ್ನು ಕೆಲವರಿಗೆ ಮಳೆಗಾಲದಲ್ಲಿ ಸಾಲಕ್ಕೆ ಅಕ್ಕಿ ಕೊಟ್ಟು ಬಡ್ಡಿ ಸಮೇತ ಪುನ: ವಸೂಲಿ ಮಾಡುವ ವೃತ್ತಿ. ಗೇಣಿದಾರರ, ಕೃಷಿ ಕಾರ್ಮಿಕರ ಹೆಣ್ಮಕ್ಕಳಿಗೆ ಈಗಿನ ಹಾಗೆ ಕೆಲಸವೇ ಇರಲಿಲ್ಲ. ಎಲ್ಲರದ್ದೂ ಕೃಶ ದೇಹ, ಸೊರಗಿದ ಬದುಕು.
ಆಗಿನ ಕೃಷಿ ಪದ್ದತಿ ಈಗಿನದ್ದಕ್ಕಿಂತ ಉತ್ತಮವಿತ್ತು ಅನ್ನುವಂತಿಲ್ಲ. ಯಾಕೆಂದರೆ ರಾಸಾಯನಿಕದ ಅತಿ ಬಳಕೆ ಇರಲಿಲ್ಲ ಎಂಬುದು ನಿಜವಾದರೂ ಈಗಿನ ಯಾವ ಕೃಷಿ ಸೌಲಭ್ಯಗಳೂ ಆಗ ಇರಲಿಲ್ಲ. ಇಂತಹ ಕಠಿಣ ಸ್ಥಿತಿ ಇದ್ದ ಆಗಿನ ಕಾಲ ಒಳ್ಳೆಯದಿತ್ತು ಎನ್ನುವುದಾದರೂ ಹೇಗೆ? ಆಗಿನ ಕಾಲಕ್ಕೆ ಆಗಿನದ್ದು ಸರಿ, ಈಗಿನ ಕಾಲಕ್ಕೆ ಈಗಿನದ್ದು ಸರಿ.
ಬದಲಾದ ಪರಿಸ್ಥಿತಿ
ಕಾಲ ಬದಲಾದಂತೆ ಕೃಷಿ ಪದ್ದತಿ ಹಾಗೂ ಅನುಸರಣೆಗಳು ಬದಲಾಗಿವೆ. 1950ರ ದಶಕದಲ್ಲಿ ಬಹುಪಾಲು ಕೃಷಿಕರು ಬೆಳೆಯುತ್ತಿದ್ದುದು ಭತ್ತ ಮಾತ್ರ. ಗೇಣಿ ಪದ್ಧತಿ ಚಾಲ್ತಿಯಲ್ಲಿತ್ತು. ಗೇಣಿ ಕೊಟ್ಟ ಬಳಿಕ ಮಳೆಗಾಲದ ಊಟಕ್ಕಾಗುವಷ್ಟು ಅಕ್ಕಿ ಉಳಿದರೆ ಅದು ವಿಶೇಷ. ಆಗ ತೆಂಗಿನ ತೋಟ ಕಡಿಮೆ. ಹಳ್ಳಿಯವರ ಮನೆಪಕ್ಕದಲ್ಲಿ ಮಾತ್ರ ಹತ್ತಿಪ್ಪತ್ತು ತೆಂಗಿನ ಮರಗಳು. ಎಲ್ಲಾ ಕೃಷಿಕರೂ ಹಿತ್ತಲಿನಲ್ಲಿ ತರಕಾರಿ ಬೆಳೆಯುತ್ತಿದ್ದರು. ಹಾಗಾಗಿ ಮನೆ ಖರ್ಚಿಗೆ ಅವರವರದೇ ತೆಂಗಿನಕಾಯಿ, ತರಕಾರಿ. ಇವನ್ನೆಲ್ಲಾ ದುಡ್ಡುಕೊಟ್ಟು ತರಬೇಕಾಗಿರಲಿಲ್ಲ. ಬಹುಪಾಲು ಕೃಷಿಕರು ದನ ಸಾಕುತ್ತಿದ್ದರು. ಮನೆಗೆ ದನದ ಹಾಲು, ಗದ್ದೆಗೆ ದನದ ಸೆಗಣಿ, ಗೊಬ್ಬರ.
ಕಳೆದ ಐವತ್ತು ವರುಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಭತ್ತ ಬೆಳೆಯುವ ಪ್ರದೇಶ ಕುಗ್ಗುತ್ತಿದೆ. ಆದ್ದರಿಂದ ಊಟಕ್ಕೆ ಅಕ್ಕಿ ಮತ್ತು ಆಡುಗೆಗೆ ಬೇಕಾದ ತರಕಾರಿ ಬೇರೆ ಜಿಲ್ಲೆಗಳಿಂದ ಬರಬೇಕಾಗಿದೆ. ಕೃಷಿಕರು ಬೆಳೆಸುವ ಭತ್ತ, ತೆಂಗು, ಅಡಿಕೆ, ಬಾಳೆ ಎಲ್ಲದಕ್ಕೂ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ದುಡ್ಡುಕೊಟ್ಟು ಸುರಿಯಬೇಕಾಗಿದೆ.
ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಏನಾದೀತು?
ಸಾಂದರ್ಭಿಕ ಫೋಟೋ: ದಶಕಗಳ ಹಿಂದೆ ಗುಡಿಸಲಿನ ಮುಂದೆ ಒಂದು ಗ್ರಾಮೀಣ ಕುಟುಂಬ … ಕೃಪೆ: ಡ್ರೀಮ್ಸ್ ಟೈಮ್ ವೆಬ್-ಸೈಟ್
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!