ಮನೆಯಲ್ಲಿ ಒಂದು ಮಗು ಹುಟ್ಟಿದೆ ಅಂದ್ರೆ ಎಲ್ಲರಿಗೂ ಖುಷಿಯೋ ಖುಷಿ. ಮೊದಲಾದರೆ ಮಗು ಗಂಡಾದ್ರೆ ಡಬಲ್ ಖುಷಿ, ಹೆಣ್ಣಾದ್ರೆ ಸ್ವಲ್ಪ ಖುಷಿ, ಕೆಲವರಿಗೆ ದುಃಖ. ಆದರೆ ಈಗ ಮಕ್ಕಳೆಲ್ಲಾ ಸಮಾನರು ಎನ್ನುವ ಅರಿವು ನಿಧಾನವಾಗಿಯಾದರೂ ಬಹುತೇಕರಲ್ಲಿ ಹುಟ್ಟಿಕೊಳ್ಳುತ್ತಿದೆ. ನಮ್ಮಲ್ಲಿ ಮಗು ಹುಟ್ಟಿದ್ರೆ ನಾವು ಏನು ಮಾಡುತ್ತೇವೆ? ಈ ಖುಷಿಯ ಸಂಗತಿಯನ್ನು ಸಿಹಿ ತಿಂಡಿ ವಿತರಿಸುವುದರಲ್ಲೋ, ಮಗುವಿಗೆ ಯಾವ ಹೆಸರಿಡುವುದು ಎಂದೋ? ಎಂತಹ ಬಟ್ಟೆ ಮಗುವಿಗೆ ಸರಿ ಹೊಂದುತ್ತದೆಯೆಂದೋ ನೂರಾರು ಚರ್ಚೆಗಳು ಮನೆಗಳಲ್ಲಿ ಆಗುತ್ತವೆ.
ಆದರೆ ಈ ಒಂದು ದೇಶದಲ್ಲಿ ಮಗು ಹುಟ್ಟಿದ್ರೆ ಕನಿಷ್ಟ ಹತ್ತು ಸಸಿಗಳನ್ನಾದ್ರೂ ನೆಡಬೇಕು ಅನ್ನೋ ನಿಯಮವಿದೆಯಂತೆ. ಈ ನಿಯಮವಿನ್ನೂ ಕಡ್ದಾಯವಾಗಿ ಜಾರಿಗೆ ಬಂದಿಲ್ಲವಾದರೂ ಅಲ್ಲಿಯ ರಾಜಮನೆತನದಲ್ಲಿ ಮಗು ಹುಟ್ಟಿದರೆ ಮಾತ್ರ ಕಡ್ಡಾಯವಾಗಿ ಗಿಡಗಳನ್ನು ನೆಡುತ್ತಾರೆ. ಈ ದೇಶ ಯಾವುದು ಅಂತೀರಾ? ಅದುವೇ ಅಚ್ಚರಿಗಳ ವಿಚಿತ್ರ ದೇಶವಾದ ಭೂತಾನ್. ಅಲ್ಲಿಯ ಆಚರಣೆಗಳೇ ಚಿತ್ರ ವಿಚಿತ್ರ. ಆದರೆ ಈ ಮಕ್ಕಳಾದರೆ ಸಸಿ ನೆಡುವ ನಿಯಮ ಮಾತ್ರ ಬಹಳ ಉತ್ತಮ. ಇದನ್ನು ಭಾರತದಲ್ಲೂ ಜಾರಿಗೆ ತಂದರೆ ಬಹಳ ಉತ್ತಮ. ಇಲ್ಲಿ ಕನಿಷ್ಟ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು ಎಂಬ ನಿಯಮ ಮಾಡಬೇಕು. ಪ್ರತೀ ವರ್ಷ ಆ ಮಗುವಿನ ಜನ್ಮ ದಿನದಂದು ಆ ಗಿಡದ ಬಳಿ ಹೋಗಿ ಫೋಟೋ ತೆಗೆದು ಸರಕಾರಕ್ಕೆ ಕಳಿಸಿದರೆ ಆ ಮಗುವಿಗೆ ೧೮ ವರ್ಷ ತುಂಬುವಾಗ ಒಂದು ಗೌರವ ಧನವನ್ನು ಸರಕಾರ ನೀಡುವಂತಾಗಬೇಕು. ಅಲ್ಲವೇ?
ಭೂತಾನ್ ದೇಶದ ಜನರು ಅಪ್ಪಟ ಪರಿಸರ ಪ್ರೇಮಿಗಳು. ಅಲ್ಲಿಯ ರಾಜ ಜೆಗ್ಮೆ ಖೇಸರ್ ನಮ್ಗ್ಯಾಲ್ ವಾಂಗ್ಚುಕ್ ಮತ್ತು ರಾಣಿ ಜೆಟ್ಸುನ್ ಪೆಮಾ ಅವರಿಗೆ ೨೦೧೬ರಲ್ಲಿ ಮೊದಲ ಮಗು ಜನಿಸಿದಾಗ ದೇಶಾದ್ಯಂತ ಸುಮಾರು ಒಂದು ಲಕ್ಷ ಎಂಟು ಸಾವಿರ ಗಿಡಗಳನ್ನು ನೆಡಲಾಗಿತ್ತಂತೆ. ಇಂತಹ ಒಂದು ಆಚರಣೆಯನ್ನು ಮಾಡಲು ನಾವೂ ಮನಸ್ಸು ಮಾಡಬೇಕು. ಕನಿಷ್ಟ ಒಂದು ಗಿಡವನ್ನಾದರೂ ಮನೆಯಲ್ಲಿ ಮಗು ಹುಟ್ಟಿದ ಖುಷಿಗೆ ನೆಡೋಣವೇ?
ಚಿತ್ರದಲ್ಲಿ : ರಾಜನಿಗೆ ಮಗು ಹುಟ್ಟಿದ ಖುಷಿಗೆ ಸಸಿ ನೆಡುತ್ತಿರುವ ಜನತೆ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!