ನೋ ಎಕ್ಸ್ಯೂಸ್ ಪ್ಲೀಸ್ - ಗೆಲುವಿಗೆ ವಯಸ್ಸಿನ ಹಂಗಿಲ್ಲ

ಕೆಲವು ಅಪರೂಪದ ವ್ಯಕ್ತಿಗಳ ಪ್ರೇರಣಾದಾಯಕ ಬದುಕಿನ ಸಾಧನೆಗಳನ್ನು ಚಿತ್ರಿಸಿರುವ ಪುಸ್ತಕ ಇದು. ಮೂವತ್ತೈದು ವರುಷ ವಯಸ್ಸಿನ ನಂತರ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿ ಮಾಡಿಕೊಂಡವರು, ತಮ್ಮ ಉದ್ಯೋಗದ ಜೊತೆಜೊತೆಯಲ್ಲೇ ಬೇರೊಂದು ಚಟುವಟಿಕೆ ಶುರು ಮಾಡಿದವರು, ಜೀವನದಲ್ಲಿ ಒಂದೇ ಗುರಿಯ ಬೆನ್ನು ಹತ್ತಿ ದಶಕಗಳ ಕಾಲ ದುಡಿದವರು - ಇಂತಹ ಸಾಧಕರ ಸಾಧನೆಯ ಚಿತ್ರಣ ಈ ಪುಸ್ತಕದಲ್ಲಿದೆ. 

ಇದರ ಉದ್ದೇಶದ ಬಗ್ಗೆ ಲೇಖಕಿ ದೀಪಾ ಹಿರೇಗುತ್ತಿ ಬರೆದಿರುವ ಮಾತುಗಳು: “ಈ ಪ್ರಸಿದ್ಧರ ಬದುಕನ್ನು ನಿಮ್ಮೆದುರು ಇಟ್ಟಿರುವ ಉದ್ದೇಶ, ಇವರೆಲ್ಲ ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿದ್ದಾರೆಂದರೆ ನಾವು ನಮ್ಮದೇ ಬದುಕನ್ನು ನಮ್ಮದೇ ಆದ ರೀತಿಯಲ್ಲಿ ಯಾವ ವಯಸ್ಸಿನಲ್ಲಾದರೂ ಚುರುಚೂರೇ ಒಗ್ಗೂಡಿಸಿಕೊಂಡು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು ಸಾಧ್ಯ, ದಿನನಿತ್ಯದ ಜಂಜಾಟದಲ್ಲಿ ಮರೆತಿರುವ ನಮ್ಮೊಳಗಿನ ಸಂತೋಷವನ್ನು ಮತ್ತೆ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಈ ಪುಸ್ತಕ ಓದುತ್ತಿರುವ ಪ್ರತಿಯೊಬ್ಬರಿಗೂ ನೀಡುವುದೇ ಆಗಿದೆ.” 

ಪುಸ್ತಕದ ಉದ್ದೇಶವನ್ನು ಲೇಖಕಿ ಇನ್ನಷ್ಟು ವಿವರಿಸಿದ್ದು ಹೀಗೆ: “… ಈ ಪುಸ್ತಕ ತಡವಾಗಿ ತಮ್ಮ ಬದುಕು ಬದಲಿಸಿಕೊಂಡವರ ವ್ಯಕ್ತಿಚಿತ್ರ ಮಾತ್ರವೇ? ಖಂಡಿತ ಅಲ್ಲ. ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೇಗೆ ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಹೋಗಬಹುದು ಎಂಬುದಕ್ಕೆ ಸ್ಫೂರ್ತಿಯುತ ಉದಾಹರಣೆಗಳು ಈ ಪುಸ್ತಕದಲ್ಲಿವೆ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬು ಪುಟ್ಟ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಿದು. 

ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡಿರುವವರಂತೂ ಈ ಕಥೆಗಳನ್ನು ಓದಲೇ ಬೇಕು. ಕಾಲೇಜು ವಿದ್ಯಾರ್ಥಿಯಾಗಲೀ, ಮಧ್ಯವಯಸ್ಕರೇ ಆಗಲೀ, ಇಳಿವಯಸ್ಸಿನವರೇ ಆಗಲಿ ಯಾರು ಬೇಕಾದರೂ ಓದಬಹುದಾದ ಮತ್ತು ಸ್ಫೂರ್ತಿ ಪಡೆಯಬಹುದಾದ ಅಪರೂಪದ ಸಾಧಕರ ಬದುಕಿನ ಕತೆಗಳು ಇಲ್ಲಿವೆ.”

ಭಾರತದ ಪ್ಯಾಡ್-ಮ್ಯಾನ್ ಎಂದು ಕರೆಸಿಕೊಳ್ಳುವ ಅರುಣಾಚಲಂ ಮುರುಗನಾಥನ್ ಅವರ ಬದುಕಿನ ಕತೆಯ ಶೀರ್ಷಿಕೆ: “ಹೈಸ್ಕೂಲು ದಾಟದ ಹುಡುಗ ಹಾರ್ವರ್ಡಿನಲ್ಲಿ ಪಾಠ ಮಾಡಿದ!” ಅವರ ಜನನ 1961ರಲ್ಲಿ. ಬಡತನದ ಬಾಲ್ಯ ಅವರದು. ತಂದೆ ಅಪಘಾತದಲ್ಲಿ ತೀರಿಕೊಂಡ ಕಾರಣ ಅವರ ತಾಯಿ ಒಬ್ಬರೇ ದುಡಿದು ಕುಟುಂಬವನ್ನು ಸಾಕಿದರು. ಬಡತನದಿಂದ ಶಾಲೆ ತೊರೆದ ಮುರುಗನಾಥನ್ ಕಾರ್ಖಾನೆಗಳಲ್ಲಿ ಯಂತ್ರಗಳನ್ನು ರಿಪೇರಿ ಮಾಡುವುದು, ಗೆಣಸು ಮಾರುವುದು ಇಂತಹ ಕೆಲಸಗಳನ್ನು ಮಾಡುತ್ತಾ ಕುಟುಂಬಕ್ಕೆ ಆಸರೆಯಾದರು. 1990ರ ದಶಕದ ಕೊನೆಯಲ್ಲಿ ಅವರ ಮದುವೆ ಆಯಿತು ಶಾಂತಿ ಎಂಬಾಕೆಯ ಜೊತೆ. ಪತ್ನಿಯ ಮುಟ್ಟಿನ ಸಮಯದಲ್ಲಿ ಆಕೆಯ ಪಡಿಪಾಟಲು ನೋಡಿ ಮುರುಗನಾಥನ್ ನೊಂದುಕೊಂಡರು. ಆ ಸಮಯದಲ್ಲಿ ಶಾಂತಿ ಕೊಳಕು ಬಟ್ಟೆ ತುಂಡನ್ನು ಬಳಸುವುದಕ್ಕೆ ಅವರು ಆಕ್ಷೇಪಿಸಿದಾಗ ಅವಳ ಪ್ರತಿಕ್ರಿಯೆ: “ನನಗೂ ಗೊತ್ತಿದೆ, ಆದರೆ ನಾನು ಪ್ಯಾಡ್ ಉಪಯೋಗಿಸಿದರೆ ಹಾಲಿಗೆ ದುಡ್ಡು ಸಾಕಾಗುವುದಿಲ್ಲ.”

ಇದರಿಂದ ಬೆಚ್ಚಿಬಿದ್ದ ಮುರುಗನಾಥನ್ ಶುಚಿಯಾದ ಪ್ಯಾಡುಗಳು ಎಲ್ಲರಿಗೂ ಸಿಗವಂತಾಗಲು ಏನಾದರೂ ಮಾಡಬೇಕೆಂದು ಸಂಕಲ್ಪ ಮಾಡಿದರು. ಎಲ್ಲ ಹಿನ್ನಡೆಗಳನ್ನೂ ಅವಮಾನಗಳನ್ನೂ ಸಹಿಸಿಕೊಂಡು ಛಲ ಬಿಡದೆ ಪ್ರಯತ್ನಿಸಿ, ಪ್ಯಾಡ್ ತಯಾರಿಕೆಗೆ ಅಗತ್ಯವಾದ ವಸ್ತು ಯಾವುದೆಂದು ಪತ್ತೆ ಮಾಡಿದರು. ಅಂತೂ ಐದು ವರುಷಗಳ ಸತತ ಶ್ರಮದಿಂದ ಪ್ಯಾಡ್ ತಯಾರಿಸುವ ಯಂತ್ರ ರೂಪಿಸಿದರು. ಜಯಶ್ರೀ ಇಂಡಸ್ಟ್ರೀಸ್ ಸ್ಥಾಪಿಸಿ ಈ ಯಂತ್ರಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಿದರು. ಇದಕ್ಕೆ ಪೇಟೆಂಟ್ ಪಡೆದು ಮುರುಗನಾಥನ್ ಕೋಟೆಗಟ್ಟಲೆ ರೂಪಾಯಿ ಗಳಿಸಬಹುದಾಗಿತ್ತು. ಆದರೆ ಉದಾತ್ತ ಮನಸ್ಸಿನ ಅವರು ಇವನ್ನು ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಮಾತ್ರ ಮಾರಾಟ ಮಾಡಿದರು. ಈಗ ದೇಶದಲ್ಲಿ 2,000ಕ್ಕಿಂತ ಅಧಿಕ ಪ್ಯಾಡ್ ತಯಾರಿಕಾ ಘಟಕಗಳಲ್ಲಿ 20,000ಕ್ಕಿಂತ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಅದಲ್ಲದೆ, ಈ ಯಂತ್ರ ತಯಾರಿಕೆಯ ಎಲ್ಲ ವಿವರಗಳನ್ನು ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗುವಂತೆ ಪ್ರಕಟಿಸಿದ್ದಾರೆ. ಇದರಿಂದಾಗಿ ಈಗ ನೂರಕ್ಕೂ ಅಧಿಕ ದೇಶಗಳಲ್ಲಿ ಈ ಯಂತ್ರ ಬಡ ಮಹಿಳೆಯರ ಬದುಕಿನ ದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಿದೆ. ಅಷ್ಟೇ ಅಲ್ಲ, ಜಗತ್ ಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯ ಅವರನ್ನು ಈ ಬಗ್ಗೆ ಉಪನ್ಯಾಸ ನೀಡಲು ಆಮಂತ್ರಿಸಿತು! 

ಹರಭಜನ್ ಕೌರ್ ಅವರ ಬಗ್ಗೆ “ಸ್ವಂತ ಹಣದ ಕನಸು ನನಸಾಗಿಸಿಕೊಂಡ ತೊಂಬತ್ತರ ಅಜ್ಜಿ!” ಎಂಬುದು ಇನ್ನೊಂದು ಕಣ್ಣು ತೆರೆಸುವ ಕತೆ. ಪತಿಯ ನಿಧನದ ನಂತರ ಅಮೃತಸರ ತೊರೆದು, ಮಗಳ ಜೊತೆ ಚಂಡಿಘಡದಲ್ಲಿ ನೆಲೆಸಿದ್ದರು ಅವರು. ಅದೊಂದು ದಿನ ಅವರ ಮಗಳು 94 ವರುಷ ವಯಸ್ಸಿನ ಅಮ್ಮನ ಬಳಿ ಕೇಳಿದಳು,”ನಿಮಗೇನಾದರೂ ಕೊನೆಯ ಆಸೆ ಇದೆಯೇ?” ಅಮ್ಮನ ಉತ್ತರ “ಜೀವನಪೂರ್ತಿ ಕೆಲಸ ಮಾಡಿದ್ದೇನೆ, ಆದರೆ ಅದರಿಂದ ಒಂದೇ ಒಂದು ರೂಪಾಯಿ ಗಳಿಸಲಿಲ್ಲವಲ್ಲ.” ದುಡಿದು ತನ್ನದೇ ಹಣ ಗಳಿಸುವ ಅಮ್ಮನ ಆಸೆ ಪೂರೈಸಲು ಮಗಳು ಪಣ ತೊಟ್ಟಳು. ಕಡಲೆಹಿಟ್ಟಿನ ಬರ್ಫಿ ಅವರು ತಯಾರಿಸುವ ವಿಶೇಷ ಸಿಹಿ ತಿನಿಸು. ಅದನ್ನೇ ಮಾಡಿ ಮಾರಾಟ ಮಾಡಲು ನಿರ್ಧರಿಸಿದರು. ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಅನಂತರ ಹರಭಜನ್ ಕೌರ್ ಹಿಂತಿರುಗಿ ನೋಡಲಿಲ್ಲ. ಈಗ ಅವರ “ಹರಭಜನ್ಸ್ ಹೋಮ್-ಮೇಡ್” ಪಂಜಾಬಿನ ಪ್ರಸಿದ್ಧ ತಿನಿಸುಗಳ ಬ್ರ್ಯಾಂಡ್! 

“ಪರ್ವತಗಳನ್ನು ಮಣಿಸಿದ ಮಹಿಳೆ” ಎಂಬುದು ಅನ್ಷು ಜಮ್ ಸೆನ್ಪಾ ಎಂಬ ಧೀರ ಮಹಿಳೆಯ ಕಥನ. 2017ರಲ್ಲಿ ಅರುಣಾಚಲ ಪ್ರದೇಶದ 37 ವರುಷ ವಯಸ್ಸಿನ ಈಕೆ ಜಗತ್ತಿನಲ್ಲೇ ಸುದ್ದಿಯಾದಳು - ಕೇವಲ ಐದು ದಿನಗಳಲ್ಲಿ ಅತ್ಯಂತ ಎತ್ತರದ ಎರರೆಸ್ಟ್ ಶಿಖರವನ್ನು ಎರಡು ಸಲ ಹತ್ತಿದ ದಾಖಲೆ ಮಾಡಿದ ಜಗತ್ತಿನ ಮೊದಲ ಮಹಿಳೆ ಎಂಬ ಕಾರಣಕ್ಕಾಗಿ. ಅರ್ಜುನ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳನ್ನು ತಮ್ಮ ಅಮೋಘ ಸಾಧನೆಗಾಗಿ ಗಳಿಸಿದ್ದಾರೆ ಅವರು. ಸೈಕಲ್ ಓಡಿಸಲಿಕ್ಕೂ ಹಿಂಜರಿಯುವ ಸಾವಿರಾರು ಹೆಣ್ಣು ಮಕ್ಕಳು ಅನ್ಷು ಅವರಿಂದ ಕಲಿಯಬೇಕಾದ್ದು ಬಹಳವಿದೆ. 

ಸುಪ್ರಸಿದ್ಧ ಚಲನಚಿತ್ರ ನಟ ಬೋಮನ್ ಇರಾನಿ ಅವರ ಕತೆ “ಅಪ್ಪಟ ಪ್ರತಿಭೆಯ ಅದ್ಭುತ ಪಯಣ!” 1959ರಲ್ಲಿ ಹುಟ್ಟಿದ ಬೋಮನ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಡಿಸ್-ಲೆಕ್ಸಿಯಾ ಸಮಸ್ಯೆಯಿಂದಾಗಿ ಇವರ ಆತ್ಮವಿಶ್ವಾಸಕ್ಕೆ ಬಾಲ್ಯದಲ್ಲಿಯೇ ಘಾಸಿಯಾಗಿತ್ತು. ಹಾಗಾಗಿ ಅವರು 7ನೇ ತರಗತಿಯ ವರೆಗೆ ಮಾತನಾಡುತ್ತಿರಲಿಲ್ಲ. ಯಾಕೆಂದರೆ, ಇವರು ಮಾತನಾಡಿದರೆ ಸುತ್ತಲಿನವರು ಲೇವಡಿ ಮಾಡುತ್ತಿದ್ದರು. ತಾಜ್ ಹೋಟೆಲಿನಲ್ಲಿ ಪರಿಚಾರಕನಾಗಿ ಕೆಲಸ ಮಾಡುತ್ತಿದ್ದ ಬೋಮನ್ ಅವರಿಗೆ ನಾಟಕಗಳಲ್ಲಿ ಆಸಕ್ತಿ ಮೂಡಿ ಅಭಿನಯಿಸಲು ಶುರು ಮಾಡಿದರು. ಅದುವೇ ತಮ್ಮ ಪ್ಯಾಷನ್ ಎಂಬುದು ಅವರಿಗೆ ಸ್ಪಷ್ಟವಾಗಿ ಅರಿವಾಯಿತು. ಅಭಿನಯಕ್ಕೆ ತನ್ನನ್ನು ಸಮರ್ಪಿಸಿಕೊಂಡರು. “ಮುನ್ನಾಭಾಯಿ ಎಂಬಿಬಿಎಸ್” ಮತ್ತು “ತ್ರೀ ಈಡಿಯಟ್ಸ್” ಚಲನಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಭಾರತದಲ್ಲಿ ಮನೆಮಾತಾದರು. 

ಈ ಪುಸ್ತಕದ ಕೊನೆಯ ಕಥನ “ಆಕಾಶಕ್ಕೇ ಏಣಿ ಹಾಕಿದ ಹಳ್ಳಿ ಹುಡುಗ” - ಕ್ಯಾಪ್ಟನ್ ಗೋಪಿನಾಥ್ ಜೀವನಗಾಥೆ. ಅವರು ಕನಸು ಕಂಡದ್ದು ಮಾತ್ರವಲ್ಲ, ವಿಮಾನದಲ್ಲಿ ಹಾರಬೇಕೆಂಬ ಲಕ್ಷಗಟ್ಟಲೆ ಜನರ ಕನಸುಗಳನ್ನು “ ಏರ್ ಡೆಕ್ಕನ್” ವಿಮಾನ ಕಂಪೆನಿ ಮೂಲಕ ನನಸಾಗಿಸಿದ ಸಾಹಸಿ. 1951ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದ ಗೋಪಿನಾಥ್ ಅವರ ಆತ್ಮಕಥೆ “ಸಿಂಪ್ಲೀ ಫ್ಲೈ: ಎ ಡೆಕ್ಕನ್ ಒಡೆಸ್ಸೀ”. ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಗೋಪಿನಾಥ್. 

ಈ ಪುಸ್ತಕದ 20 ಕಥನಗಳಲ್ಲಿ ಉಳಿದ 15 ವಿದೇಶಗಳ ಸಾಧಕರ ಕಥನಗಳು. ಅವರೆಲ್ಲರೂ ವಯಸ್ಸಿನ ಹಂಗಿಲ್ಲದೆ, ಬದುಕಿನ ಏಳುಬೀಳುಗಳ ಹಾದಿಯಲ್ಲಿ ಸಾಗುತ್ತಾ ಕೊನೆಗೆ ಸಾಧನೆಯ ಶಿಖರ ಏರಿದವರು. ನಕಾರಾತ್ಮಕ ಯೋಚನೆಗಳಿಂದ, ಇತರರ ಟೀಕೆಗಳಿಂದ ಬದುಕಿನಲ್ಲಿ ಹತಾಶೆಯಿಂದ ನಲುಗುವವರು, ಇಲ್ಲಿನ ಕಥನಗಳಲ್ಲಿ ಕೆಲವನ್ನಾದರೂ ಮನನ ಮಾಡಿದರೆ, ಅವರ ಬಾಳಿನಲ್ಲಿ ಖಂಡಿತವಾಗಿ ಹೊಸ ಬದುಕಿನ ಮಿಂಚು ಬೆಳಗಲಿದೆ.