ವಾಮಾಚಾರ

ಮೂರು ದಿನಗಳ ಕಚೇರಿ ಟೂರ್ ಮುಗಿಸಿ ಮನೆಗೆ ಬಂದಾಗ ಮನೆಯೊಳಗಿನಿಂದ ಜೋರು ಮಾತು ನಗು ಕೇಳಿಬಂತು. ಅದೇ ವೇಳೆಗೆ ಮನೆಗೆಲಸದ ಪಾರ್ವತಿ ಆಚೆ ಬಂದಳು. 'ಏನದು ಅಷ್ಟೊಂದು ಗದ್ದಲ?' ಎಂದು ವಿಚಾರಿಸಿದಾಗ, ಆಕೆ. ವಾಮಾಚಾರ ಸಾರ್' ಎಂದಷ್ಟೇ ಹೇಳಿ ಹೋದಳು. ಗಾಬರಿ ಹಾಗೂ ಆಶ್ಚರ್ಯದಿಂದ ಲಗುಬಗೆಯಿಂದ ಒಳಗೆ ಹೋಗಿ ನೋಡಿದಾಗ ಭಾಮೈದ ವಾಮನಾಚಾರಿ ಮನೆಗೆ ಬಂದಿದ್ದ. ಅವನದು ಮುಂದಿದ್ದವರನ್ನು ನಗಿಸುವ ಸ್ವಭಾವ ಅದರಲ್ಲೂ ಅವನ ಅಕ್ಕ ಹಾಗೂ ತಾಯಿಗೆ ಅವನ ಮಾತುಗಳೆಂದರೆ ಬಹಳೇ ಅಚ್ಚುಮೆಚ್ಚು ಮೂರೂ ಜನ ಮಾತಾಡಿ ನಗುತ್ತಿದ್ದರಷ್ಟೇ

-ಅರವಿಂದ ಜಿ. ಜೋಷಿ

***

ಹರಿಯಾಣಾ ಆಪರೇಷನ್

ಬೆಳಿಗ್ಗೆ ನಾನು ಕಚೇರಿಗೆ ಹೋಗುವಾಗ ಕಮಲಮ್ಮನ ಭೇಟಿಯಾಯ್ತು. ಓದು ಬರಹ ಬಾರದ ಕಮಲಮ್ಮ ನಮ್ಮ ಬೀದಿಯ ಮನೆಯೊಂದರಲ್ಲಿ ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದಾರೆ. ಹಲ ದಿನಗಳ ಹಿಂದೆ ಹರಿಯಾಣಾದಲ್ಲಿ ಉದ್ಯೋಗದಲ್ಲಿರುವ ಅವರ ಮೊಮ್ಮಗನ ಬಳಿ ಹೋಗಿ, ಒಂದು ವಾರ ಇದ್ದು ಬಂದಿದ್ದರು. ಅಂದು ದಾರಿಯಲ್ಲಿ ಭೇಟಿಯಾದಾಗ, ತಾನು ಕೆಲಸ ಮಾಡುವ ಮನೆಯ ಯಜಮಾನರಾದ ಶ್ರೀರಂಗ ಅವರಿಗೆ ಹರಿಯಾಣಾ ಅಪರೇಷನ್ ಇದೆ ಎಂದಳು. ನಮ್ಮಲ್ಲಿಯೇ ಬೇಕಾದಂಥ ಆಸ್ಪತ್ರೆಗಳಿರುವಾಗ ಅವರೇಕೆ ಅಪರೇಶನ್‌ ಗೆ ಹರಿಯಾಣಕ್ಕೆ ಹೊರಟರು ಎಂದು ನನಗೆ ಅಚ್ಚರಿಯಾಯಿತು. ಅವರ ಪತ್ನಿಗೆ ಫೋನ್ ಮಾಡಿ, 'ಆಪರೇಷನ್‌ಗೆ ಯಾಕೆ ಅಷ್ಟು ದೂರ ಹೋಗ್ತಾ ಇದ್ದಾರೆ?' ಎಂದೆ. 'ಇಲ್ಲವಲ್ಲ' ಎಂದು ಆಶ್ಚರ್ಯಪಟ್ಟರು. ಕಮಲಮ್ಮ ಹೇಳಿದ್ದನ್ನು ಅವರಿಗೆ ತಿಳಿಸಿದೆ. ಅವರು ಅವರು, 'ಅದು ಹರಿಯಾಣಾ ಅಲ್ಲ. ಹರ್ನಿಯಾ ಅಪರೇಷನ್' ಎಂದು ವಿವರಿಸಿದರು. ಕಮಲಮ್ಮನ ಬಾಯಿಯಲ್ಲಿ ಹರ್ನಿಯಾ ಹೋಗಿ ಹರಿಯಾಣಾ ಆಗಿದ್ದನ್ನು ನೆನೆದು ಇಬ್ಬರೂ ನಕ್ಕೆವು.

-ಪೂರ್ಣಿಮಾ ಎಚ್‌.ಎನ್‌.

***

ಅಪಾರ್ಟ್‌ಮೆಂಟ್..

ಒಮ್ಮೆ ನಮ್ಮ ಸಂಬಂಧಿ ಅಜ್ಜಿಯೊಬ್ಬಳಿಗೆ ದಂತಕ್ಷಯ ಉಂಟಾಗಿ ಆಸ್ಪತ್ರೆಗೆ ಹೋಗುವ ಸುದರ್ಭ ಬಂತು. ಕರೆದುಕೊಂಡು ಹೋದೆ. ವೈದ್ಯರು ಹಲ್ಲುಗಳನ್ನೆಲ್ಲ ಪರೀಕ್ಷಿಸಿ ಶನಿವಾರ ‘ಅಪಾಯಿಂಟ್ ಮೆಂಟ್ ತಕೊಂಡು ಬನ್ನಿ’ ಎಂದು ಸಲಹೆ ಕೊಟ್ಟರು. ಅಜ್ಜಿ ಒಮ್ಮೆಲೆ ತಲೆ ಬಿಸಿ ಮಾಡಿಕೊಂಡವಳಂತೆ 'ಅಯ್ಯ ಶಿವನೆ! ನಮ್ಮಂಥವರಿಗೆ ಅಪಾರ್ಟ್‌ ಮೆಂಟ್ ತಗೊಳ್ಳುದು ಕಷ್ಟ ಸಾಮಿ, ನಿಮ್ ದವಾಖಾನಿಗೆ ಬರುವುದಕ್ಕೂ ಅಪಾರ್ಟ್‌ ಮೆಂಟ್ ತಗೊಬೇಕಾ? ಆ ಶಕ್ತಿ ನಮಗೆಲ್ಲಿ ಬರಬೇಕು? ಬ್ಯಾಡ ಬುಡ sss ಎಪ್ಪ' ಎಂದು ಹೊರ ನಡೆದಳು. ವೈದ್ಯರು ಅವಳ ಮಾತಿಗೆ ಬಿದ್ದು ಬಿದ್ದು ನಗತೊಡಗಿದರು. ನಾನು 'ಅಪಾಯಿಂಟ್‌ಮೆಂಟ್' ಅರ್ಥ ಅವಳಿಗೆ ತಿಳಿ ಹೇಳಿದ ಮ್ಯಾಲೆ ಅವಳ ತಲೆಬಿಸಿ ಇಳಿಯಿತು.

-ಶಿ.ಕಾ. ಬಡಿಗೇರ

***

ಮೊದಲ ಮಗು

ಸಾಂಪ್ರ ಗಡಿಬಿಡಿಯಲ್ಲಿ ಆಸ್ಪತ್ರೆಗೆ ಫೋನ್ ಮಾಡಿದ ಮೂರ್ನಾಲ್ಕು ಸಲ ರಿಂಗ್ ಆದರೂ ಯಾರೂ ಫೋನ್ ತೆಗೆಯಲಿಲ್ಲ. ಗಾಬರಿಯಾದ ಸಂಪ್ರ ಮತ್ತೆ ಪ್ರಯತ್ನಿಸಿದ. ಕಡೆಗೆ ಒಬ್ಬರು ಫೋನ್ ಎತ್ತಿದರು. 'ಡಾಕ್ಷೇ, ನನ್ನ ಹೆಂಡ್ತಿಗೆ ಹೆರಿಗೆ ಬೇನೆ ಜೋರಾಗಿದೆ... ಸ್ವಲ್ಪ ಬೇಗ ಏನಾದ್ರೂ ವ್ಯವಸ್ಥೆ ಮಾಡಿ' ಎಂದ. ಆಸ್ಪತ್ರೆಯ ಸಿಬ್ಬಂದಿ, 'ಆಯ್ತು, ನಿಮ್ಮ ಮನೆ ಎಲ್ಲಿ ಬರುತ್ತೆ?' ಎಂದು ಕೇಳಿದರು. ಆತ ಹೇಳಿದ, 'ಇದು ಅವಳ ಮೊದಲ ಮಗುವಾ?' ಎಂದರು. ಸಾಂಪ್ರ, 'ಇಲ್ಲ ಡಾಕ್ಟೇ, ನಾನು ಅವಳ ಗಂಡ ಮಾತಾಡ್ತಾ ಇರೋದು' ಎಂದ.

-ಮಂಡ್ಯ ಮ.ನಾ. ಉಡುಪ

ಕಲೆ: ಗಣೇಶ ಆಚಾರ್ಯ

***

(‘ಮಯೂರ’ ಮೇ ೨೦೨೪ರಿಂದ ಸಂಗ್ರಹಿತ)