ಕೊಡುವುದೇ ಪ್ರೀತಿ
ಮೇಷ್ಟ್ರು ದಾನಶೂರ ಕರ್ಣನ ಕಥೆ ಹೇಳಿ. 'ಮಕ್ಕಳೇ, ನಿಮಗೂ ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚು ಇಷ್ಟವಾಗಬೇಕಲ್ಲವೆ?' ಎಂದು ಕೇಳಿದರು. ಹನುಮಂತ ಎದ್ದು ನಿಂತು, 'ಹೌದು ಸರ್. ನನ್ನ ತಂದೆ ಯಾವಾಗಲೂ ಈ ಮಾತನ್ನು ಹೇಳುತ್ತಲೂ, ಅದನ್ನೇ ಅನುಸರಿಸುತ್ತಲೂ ಇರುತ್ತಾರೆ' ಎಂದ. 'ಶಹಭಾಶ್, ನಿನ್ನ ತಂದೆ ತುಂಬ ವಿವೇಕಶಾಲಿ ಅನಿಸುತ್ತೆ. ಅವರು ಏನು ಕೆಲಸ ಮಾಡುತ್ತಾರೆ?' ಎಂದು ಮೇಷ್ಟ್ರು ಕೇಳಿದರು. ‘ಅವರು ಬಾಕ್ಸಿಂಗ್ ಆಡುತ್ತಾರೆ ಸರ್’ ಎಂದ ಹನುಮಂತ. ಮೇಷ್ಟು ತಬ್ಬಿಬ್ಬು.
-ಪ.ರಾಮಕೃಷ್ಣ ಶಾಸ್ತ್ರಿ
***
ವಜಾ
ಗುಮಾಸ್ತ ಕುಮಾರನಿಗೆ ಅವನ ಬಾಸ್ ತುಂಬಾನೇ ಕಿರಿಕಿರಿ ಮಾಡ್ತಿದ್ದ. ಹೇಗೆ ಕೆಲಸ ಮಾಡಿದರೂ ಬಾಸ್ಗೆ ಸಮಾಧಾನ ಎನ್ನುವುದೇ ಇರಲಿಲ್ಲ. ಒಂದಿನ ಆರಾಮಾಗಿ ಕುಳಿತಿದ್ದ ಬಾಸ್, ಕುಮಾರನನ್ನು ಕರೆದು ಕೇಳಿದ, 'ಕುಮಾರ, ನಾನು ನಿನ್ನನ್ನು ಒಂದು ಪ್ರಶ್ನೆ ಕೇಳಲೇ?' ಎಂದು. "ಕೇಳಿ ಸಾರ್' ಎಂದ ವಿನೀತನಾಗಿ 'ಒಂದು ವೇಳೆ ನಾನೇ ಗುಮಾಸ್ತನಾಗಿ, ನೀನೇ ಬಾಸ್ ಆಗಿದ್ರೆ ನೀನು ಏನು ಮಾಡ್ತಿದ್ದೆ?' ಎಂದ. 'ಮೊದಲು ನಿಮ್ಮನ್ನ ಕೆಲಸದಿಂದ ತೆಗೆದು ಬಿಸಾಕಿ, ಬೇರೆಯವನನ್ನ ನೇಮಿಸಿಕೊಳ್ತಾ ಇದ್ದೆ ಸಾರ್' ಅಷ್ಟೇ ಗಂಭೀರನಾಗಿ ಹೇಳಿದ ಕುಮಾರ.
-ಶಂಕರೇಗೌಡ ತುಂಬಕೆರೆ
***
ಕಹೀ ಕಹೀ
ಪರಮೇಠಿ ಹೆಂಡತಿ ವನಜಾಕ್ಷಿಗೆ ಒಂದು ಪೆಗ್ ವಿಸ್ಕಿ ಹಾಕಿಕೊಟ್ಟ. ಅವಳು ಅದನ್ನು ಕುಡಿದು ನೋಡಿ, 'ಥೂ ಥೂ... ಎಷ್ಟು ಒಗರು ಒಗರಾಗಿದೆಯಲ್ಲಾ… ಇದಕ್ಕಿಂತ ನಾವು ಕುಡಿಯುವ ಹಣ್ಣಿನ ಜ್ಯೂಸೇ ಎಷ್ಟು ರುಚಿಯಾಗಿರುತ್ತೆ ಗೊತ್ತಾ?' ಎಂದಳು. 'ಹೌದು ಕಣೆ, ನಿನಗೂ ಇದು ಅರ್ಥ ಆಗಲಿ ಅಂತನೇ ಹಾಕಿಕೊಟ್ಟಿದ್ದು. ನೋಡು, ನಾನು ದಿನಾ ಹೀಗೆ ಕಷ್ಟಪಟ್ಟು, ಇಷ್ಟು ಕಹಿ ಕಹಿಯಾಗಿರೋದನ್ನ ಕುಡಿದು ಬರ್ತೀನಿ, ಮತ್ತೆ ನೀ ಬೇರೆ ಬೈಯ್ತಿಯಾ. ನೀನು ಅಷ್ಟು ರುಚಿರುಚಿಯಾಗಿರೊ ಹಣ್ಣಿನ ಜ್ಯೂಸ್ ಕುಡಿದು ಆರಾಮಾಗಿರ್ತೀಯ' ಎಂದ. ವನಜಾಕ್ಷಿಗೆ ಪರಮೇಶಿಯ ಬಗ್ಗೆ ಕನಿಕರ ಬಂತು, 'ಇನ್ನೇಲೆ ಬೈಯಲ್ಲ ರೀ' ಎಂದಳು.
-ಅನುಪಮಾ ವಿ.ಎಸ್
***
ಜುಬ್ಬಾ ಸಾಹಿತಿ!
ಅಂಕೋಲಾದಲ್ಲಿ ಇತ್ತೀಚೆಗೆ ಒಂದು ಸಾಹಿತ್ಯಕ ಕಾರ್ಯಕ್ರಮ ಹಾಗೂ ಪುಸ್ತಕ ಮಾರಾಟಮೇಳ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾನು ಪುಸ್ತಕ ಮಳಿಗೆ ತೆರೆದಿದ್ದೆ. ಎಂದಿನಂತೆ ಅಂದೂ ಜುಬ್ಬಾ ಧರಿಸಿದ್ದೆ. ವಿದ್ಯಾರ್ಥಿಗಳ ದಂಡೊಂದು ನನ್ನತ್ತ ಬಂದು ಆಟೋಗ್ರಾಫ್ ನೀಡುವಂತೆ ಕೇಳತೊಡಗಿತು. ಪ್ರಸಿದ್ಧ ಸಾಹಿತಿಗಳಿಂದ ಜನ ಆಟೋಗ್ರಾಫ್ ಪಡೆಯುವುದು ಸಹಜ. ಆದರೆ ಸಮುದ್ರ ತೀರದ ಅಂಕೋಲಾದವರೆಗೂ ನನ್ನ ಖ್ಯಾತಿ ಹಬ್ಬಿರುವುದೆಂದು ನನಗೆ ತಿಳಿದಿರಲಿಲ್ಲ. ಒಳಗೊಳಗೆ ಖುಷಿಪಡುತ್ತ ಆಟೋಗ್ರಾಫ್ ನೀಡುತ್ತ, 'ನಾನು ಸಾಹಿತಿ ಎಂದು ನಿಮಗೆ ಹೇಗೆ ತಿಳಿಯಿತು?' ಎಂದು ಪ್ರಶ್ನಿಸಿದೆ. ಅವರು, 'ನಮ್ಮ ಮೇಷ್ಟ್ರು ಹೇಳಿದಾರೆ ಸಾರ್. ಜುಬ್ಬಾ ಹಾಕ್ಕಂಡವರೇ ಸಾಹಿತಿಗಳು ಅಂತ' ಎಂದರು.
-ಸರ್ಜಾಶಂಕರ್ ಹರಳಿಮಠ
ಕಲೆ: ಗಣೇಶ ಆಚಾರ್ಯ
(ಜೂನ್ ೨೦೨೪ರ ‘ಮಯೂರ’ ಸಂಚಿಕೆಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!