ನೀವು ಅನಾದಿ ಕಾಲದಿಂದ ಈ ಕ್ಷಣದವರೆಗೆ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ,  ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರೆಗೆ, ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ ಎಲ್ಲವೂ ಸೃಷ್ಟಿಯ ಪ್ರಾರಂಭದಲ್ಲೇ ಆಗದೆ ಮನುಷ್ಯನ ಅಗಾಧ ಅನುಭವದಿಂದ ಹಂತ ಹಂತವಾಗಿ ಬೆಳವಣಿಗೆ ಹೊಂದಿದೆ. ದೇವರ ಸೃಷ್ಟಿಯೇ ಆಗಿದ್ದರೆ ಎಲ್ಲವನ್ನೂ ಸ್ಮಾರ್ಟ್ ಆಗಿ ಮೊದಲೇ ಪ್ಲಾನ್ ಮಾಡಬೇಕಿತ್ತು. ಅನಾದಿ ಕಾಲದಲ್ಲಿ ಒಬ್ಬರಿಗೊಬ್ಬರು ಕೊಂದು ಬಲಿಷ್ಠರು ಮಾತ್ರ ಬದುಕುವ ವ್ಯವಸ್ಥೆಯಿಂದ ಅನೇಕ ಯುದ್ಧಗಳನ್ನು ಮಾಡಿ ಕೋಟಿ ಕೋಟಿ ಜನರ ಹತ್ಯೆಗಳು ನಡೆದು ಈಗ ಒಂದಷ್ಟು ರಕ್ಷಣೆಯ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇಲ್ಲಿಯೂ ದೇವರ ಪಾತ್ರ ಕಾಣುವುದಿಲ್ಲ.

ದೇವರ ಶಕ್ತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಚಲಿಸುವುದಿಲ್ಲ ಎಂದು ಭಕ್ತರು ಹೇಳಿದರೆ, ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಕದಲಿಸುವ ಶಕ್ತಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಏಕೆಂದರೆ ದೇವರೇ ಇಲ್ಲ. ಜ್ಞಾನದಿಂದ ಕುತೂಹಲಕ್ಕಾಗಿ ಹುಡುಕಾಟ ನಡೆಸಿದಾಗ ಬೇರೆ ಬೇರೆ ರೂಪದ ಶಕ್ತಿಗಳು ಸಿಗುತ್ತವೆಯೇ ಹೊರತು ಸಾಮಾನ್ಯ ಜನ ನಂಬಿರುವ ಕೇಂದ್ರೀಕೃತ ಮತ್ತು ಸಮಸ್ತ ಸೃಷ್ಟಿಯ ಮೇಲೆ ನಿಯಂತ್ರಣ ಇರುವ ಶಕ್ತಿ ಗೋಚರಿಸುವುದಿಲ್ಲ.

ಕುರಾನ್, ಬೈಬಲ್, ವೇದ ಉಪನಿಷತ್ತುಗಳು ಮತ್ತು ಇತರ ಧರ್ಮ ಗ್ರಂಥಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ. ಆದರೆ ‌ಆ ಯಾವ ಉತ್ತರವೂ ಸರಳವಾಗಿ, ಸಹಜವಾಗಿ, ನೇರವಾಗಿ ಸಾಮಾನ್ಯ ತಿಳುವಳಿಕೆಗೆ ನಿಲುಕದೆ ಬಹುತೇಕ ಕಾಲ್ಪನಿಕ ಪಲಾಯನವಾದವೇ ಆಗಿರುತ್ತದೆ. ದೇವರನ್ನು ತೋರಿಸುವ ಪ್ರಯತ್ನ ಮಾತ್ರ ಸಫಲವಾಗಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲೆ ಎನ್ನುವ ಗ್ರಂಥಗಳು, ಅದರ ರಚನಾಕಾರರು ಮತ್ತು ಅದನ್ನು ಇಂದಿಗೂ ಪ್ರತಿಪಾದಿಸುತ್ತಿರುವ ಧಾರ್ಮಿಕ ಪ್ರತಿನಿಧಿಗಳು ಖಂಡಿತ ಭ್ರಮಾಧೀನರಾಗಿರುತ್ತಾರೆ.

ಅವರಿಗೆ ಕೇಳಿ, ಅಪಘಾತ, ಅನಾರೋಗ್ಯ, ಕುಟುಂಬ ಕಲಹ, ಅಧಿಕಾರ, ಬಡತನ, ದೌರ್ಭಾಗ್ಯ, ಮದುವೆ, ನಿರುದ್ಯೋಗ ಎಲ್ಲಕ್ಕೂ ಕಾರಣಗಳನ್ನು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವುದೇ ಇಲ್ಲ. ಹಾಗಾದರೆ ಇದು ಸಾಧ್ಯವೇ. ಇದು ಸಾಧ್ಯವಾಗಿದ್ದಿದ್ದರೆ ಇಡೀ ವಿಶ್ವವೇ ಸ್ವರ್ಗವಾಗುತ್ತಿತ್ತು. ಇದನ್ನು ಮರೆಮಾಚಲು ವಿಧಿ ಲಿಖಿತ - ಹಣೆ ಬರಹ ಎಂಬ ಮತ್ತೊಂದು ಪಲಾಯನವಾದದ ಸೂತ್ರ ಮುಂದಿಡುತ್ತಾರೆ.  ಹುಟ್ಟುವ ಪ್ರತಿ ಜೀವಿಗೂ ಹಣೆ ಬರಹ ಬರೆಯುತ್ತಾ ಇರಲು ದೇವರಿಗೆ ಸಾಧ್ಯವೇ ? ವಿಶ್ವದ ಪ್ರತಿ ನಾಗರಿಕತೆಯು ಒಂದೊಂದು ದೇವರನ್ನು ‌ಸೃಷ್ಟಿಸಿರುವುದು ಮನುಷ್ಯನೇ ದೇವರ ಸೃಷ್ಟಿಕರ್ತ ಎಂಬುದನ್ನು ಸೂಚಿಸುತ್ತದೆಯಲ್ಲವೇ.

ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯುವ ಪ್ರವಾಹ ಎಂಬ ಸೂಕ್ಷ್ಮ ತಿಳಿವಳಿಕೆ ಅವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಿಕೊಂಡರೆ ಅವರ ಅಸ್ತಿತ್ವವೇ ಕುಸಿಯುತ್ತದೆ. ಸಾವಿನ ಭಯ, ಹಣ ಅಧಿಕಾರ ಸಿಗುವ ದುರಾಸೆ, ದಾರಿದ್ರ್ಯ ಸ್ಥಿತಿಗೆ ತಲುಪುವ ಆತಂಕ, ಸಂಕೀರ್ಣ ಜೀವನ ಶೈಲಿ, ಯಶಸ್ಸನ್ನು ತಪ್ಪಾಗಿ ಅರ್ಥೈಸಿರುವುದು, ಪ್ರಬುದ್ದತೆಯ ಮಟ್ಟ ಕುಸಿದು ಸ್ವತಂತ್ರ ಕ್ರಿಯಾತ್ಮಕ ಚಿಂತನೆಯ ಕೊರತೆ ದೇವರ ಬಗ್ಗೆ ನಾವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗತ್ತಿಲ್ಲ. ಇದನ್ನೆಲ್ಲಾ ಮೀರಿ ಯೋಚಿಸಿದರೆ ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ