ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು

ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು

 

ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವು ಬೇರೆಯೇ ಬೇಕೇನು

ನಾಯಕ ಎನಿಸಿದವನ ಹುಚ್ಚಾಟಕ್ಕೆ ಬಲಿಯಾಗಿರುವ ಕುಂಚಗಳ ನೋಡು

 

ಒಳಗೊಳಗೆ ಏನನ್ನೂ ಹೇಳಿಕೊಳ್ಳದಿದ್ದರೂ ಮೆತ್ತಿಕೊಂಡಿದೆ ಹೇಸಿಗೆಯು

ಸೆಣೆಸಾಟದ ಎಳೆದಾಟಕ್ಕಿಂದು ಜೊತೆಯಾಗುತ್ತಿರುವ ಸಂಚುಗಳ ನೋಡು

 

ಸುರುಟಿರುವಂತಹ ಹೇಳಿಕೆಗಳಿಂದು ಕತ್ತಲೆಯಲ್ಲಿಯೇ ನರಳುತ್ತಲಿದೆಯೋ

ಸಾಧನೆಯಿಲ್ಲದ ಕೇರಿಗಳಿಂದ ಮಂಕಾಗುತ್ತಿರುವ ಮಿಂಚುಗಳ ನೋಡು

 

ಕಾಯಕವೇ ಕೈಲಾಸವೆನ್ನುವುದು ಈ ನೆಲದಲಿ ಸೊರಗುತ್ತಲಿದೆ ಈಶ

ಜೀವಂತಿಕೆಯ ನಡುವೆಯೇ ಹೀಗೆ ಕಳಚುತ್ತಿರುವ ಪಂಚೆಗಳ ನೋಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ರಘುಪತಿ ಶೃಂಗೇರಿ