ಭಗವಂತ ಕಣ್ಣು ತೆರೆದ. ಎರಡು ಪುಟ್ಟ ಹಕ್ಕಿಗಳು ಆತನ ಮುಂದೆ ನಿಂತು ಪ್ರಾರ್ಥಿಸುತ್ತಿದ್ದವು. ದೇವರೇ ನಮಗೊಂದು ಬದುಕುವುದಕ್ಕೆ ಸೂಕ್ತ ಸ್ಥಳವನ್ನು ಕೊಟ್ಟುಬಿಡಿ. ನಾವು ಗೂಡು ಕಟ್ಟಿದ ಸ್ಥಳದಲ್ಲೆಲ್ಲ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗ್ತಾ ಇಲ್ಲ, ಕೆಲವು ದಿನಗಳಲ್ಲಿ ಜೋರು ಗಾಳಿಗೆ ನಮ್ಮ ಗೂಡುಗಳು ಹಾರಿ ಹೋಗುತ್ತಿವೆ ಗೂಡು ಕಟ್ಟುವುದರಲ್ಲಿ ಜೀವನ ಮುಗಿದುಬಿಟ್ಟರೆ ಹೇಗೆ? ಆಹಾರ ಸಂಗ್ರಹಣೆಯನ್ನ, ಬದುಕನ್ನ ರೂಪಿಸಿಕೊಳ್ಳುವುದು ಹೇಗೆ? ಭಗವಂತ ನಕ್ಕು ಕೆಲವು ದಿನ ನಿಮ್ಮ ಬದುಕಿಗೊಂದು ದಾರಿ ಖಂಡಿತ ಸಿಗುತ್ತದೆ ಅಂತಂದು ಬಿಟ್ಟ. ಹಕ್ಕಿಗಳಿಗೆ ಬೇಸರವಾಯಿತು. ಭಗವಂತ ನಮಗೊಂದು ಗೂಡನ್ನು ಕಟ್ಟಿಕೊಟ್ಟಿದ್ದರೆ ನಾವು ನೆಮ್ಮದಿಯಾಗಿರುತ್ತಾ ಇದ್ದೆವು ಅಂತ ಯೋಚಿಸಿಕೊಂಡು ಅಲ್ಲಿಂದ ಹೊರಟುಬಿಟ್ಟವು. ಭಗವಂತನ ಮಡದಿಯೂ ಕೂಡ ಆ ಹಕ್ಕಿ ಮರಿಗಳಿಗೆ ಗೂಡೊಂದನ್ನ ನೀಡಬಹುದಿತ್ತಲ್ಲ ಅಂತ ಅಂದಾಗ ಭಗವಂತ ನಕ್ಕುಬಿಟ್ಟ. ಭೂಮಿಯಲ್ಲಿ ಬದುಕುತ್ತಿರುವ ಒಂದು ಕುಟುಂಬಕ್ಕೆ ಅವರ ಆಫೀಸ್ ನಲ್ಲಿವಿಪರೀತ ಕೆಲಸಗಳು ಬರುವಂತೆ ನೋಡಿಕೊಂಡ. ಪ್ರತಿದಿನವೂ ಹೊಸ ಹೊಸ ಚಿಂತೆಗಳು ಹೆಚ್ಚಾದ ಹಾಗೆ ಅದನ್ನು ಮರೆಯುವುದಕ್ಕೆ ಮನೆಯ ಮುಂದೆ ಗಿಡಗಳನ್ನ ಬೆಳೆಸುವ ನಿರ್ಧಾರ ಮಾಡಿದರು ಅವರು .ಹಲವು ಗಿಡಗಳನ್ನ ಬೆಳೆಸಿ ಪುಟ್ಟ ಪುಟ್ಟ ಹೂ ಕುಂಡಗಳನ್ನ ಮನೆಯ ಮುಂದೆ ಇಟ್ಟು ಹಸಿರಿನ ಬಲೆಯನ್ನ ಹಾಕಿ ಮನೆಯನ್ನು ಒಂದಿಷ್ಟು ತಂಪು ಮಾಡುವ ಕೆಲಸಕ್ಕೆ ಶುರು ಹಚ್ಚಿಕೊಂಡರು. ಮನಸ್ಸು ಶಾಂತವಾಗಿತ್ತು ದಂಪತಿಗಳದ್ದು. ಹಾರಿ ಬಂದ ಹಕ್ಕಿಗಳಿಗೆ ನೆರಳು ಗಿಡ ಮರ ತಂಪು ಸುರಕ್ಷತೆ ಎಲ್ಲವೂ ಒಂದೇ ಕಡೆ ಸಿಕ್ಕಿತು. ಹಕ್ಕಿಗಳ ಬದುಕು ಜೊತೆಗೆ ಅವರ ಬದುಕು ನೆಮ್ಮದಿಯಾಗಿತ್ತು. ಭಗವಂತ ಯಾವುದೋ ಒಂದು ರೂಪದಲ್ಲಿ ಜೊತೆಗೆ ನಿಂತಾನೆ ಅನ್ನೋದು ಅವತ್ತು ಸಾಬೀತಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!