ಡಾ. ಹೆಚ್ ಎಸ್. ಲಕ್ಷ್ಮೀನಾರಾಯಣ ಭಟ್ಟರು ೧೯೪೬ರ ಏಪ್ರಿಲ್ ೧೨ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಆದರ್ಶ ಶಿಕ್ಷಕರೆನಿಸಿದ್ದ ಹೊಸಕೆರೆ ಶೇಷಭಟ್ಟರು. ತಾಯಿ ಚಿನ್ನಮ್ಮ. ಲಕ್ಷ್ಮೀನಾರಾಯಣ ಭಟ್ಟರ ಪ್ರೌಢ ಶಾಲೆ ಹಾಗೂ ಪಿಯುಸಿವರೆಗಿನ ವಿದ್ಯಾಭ್ಯಾಸ ಚಿಕ್ಕಮಗಳೂರು ಜಿಲ್ಲೆಯಲ್ಲಿ, ವಿಜ್ಞಾನ ಪದವಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ೧೯೬೬ರಲ್ಲಿ ನೆರವೇರಿತು.

ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಬೆಂಗಳೂರಿನ ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ  ಸೇವೆಯನ್ನು ಸಲ್ಲಿಸಿ ನಿವೃತ್ತರಾದರು.  ಇದೇ ಅವಧಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮದ ಸಂಯೋಜಕರಾಗಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಭೌತಶಾಸ್ತ್ರದಲ್ಲಿ ಉತ್ತಮ ಉಪನ್ಯಾಸಕರೆಂಬ ಕೀರ್ತಿಯ ಜೊತೆ ಜೊತೆಯಲ್ಲಿಯೇ, ಸಾಂಸ್ಕೃತಿಕ ಚಟುವಟಿಕೆಗಳ 'ಪ್ರೇರಕ ಶಕ್ತಿ’ಯಾಗಿಯೂ ನಾಡಿನ ಜನತೆಗೆ ಆಪ್ತರಾದರು.

ಲಕ್ಷ್ಮೀನಾರಾಯಣ ಭಟ್ಟರು ಜಿ.ಪಿ.ರಾಜರತ್ನಂ ಅವರು ತೋರಿದ ಆದರ್ಶದಂತೆ, ಕನ್ನಡ ಸಾಹಿತಿಗಳ ಶ್ರೇಷ್ಠ ಕೃತಿಗಳ ಬಗ್ಗೆ ಅನೇಕ ಉಪನ್ಯಾಸಗಳನ್ನೂ  ಪರಿಚಾರಿಕೆಯ ಕೆಲಸವನ್ನೂ ಮಾಡುತ್ತಾ ಬಂದರು. 'ಮಂಕುತಿಮ್ಮನ ಕಗ್ಗ’ದ ಬಗ್ಗೆ ವಿಶೇಷವಾಗಿ ಒಲವುಳ್ಳ ಭಟ್ಟರು ಕಳೆದ ನಾಲ್ಕು ದಶಕಗಳಲ್ಲಿ ಈ ಕುರಿತು ಸಹಸ್ರಾರು ಉಪನ್ಯಾಸಗಳನ್ನು ನೀಡಿ  ’ಕಗ್ಗದ ಭಟ್ಟರು’ ಎಂದೇ ಕನ್ನಡಪ್ರಿಯರ ಮನೆಮಾತಾಗಿದ್ದಾರೆ. ಈ ಸುಂದರ ಉಪನ್ಯಾಸಗಳ ಸ್ವಾದ ಧ್ವನಿ ಮಾಧ್ಯಮಗಳಲ್ಲೂ ಮೂಡಿವೆ. ಭಟ್ಟರು 'ಘಮಘಮಿಸುವ ವನಸುಮ ಡಿವಿಜಿ' ಎಂಬ ಕೃತಿ ರಚನೆ ಮಾಡಿದ್ದು  ೨೦೦೨ರಲ್ಲಿ  ಪ್ರಕಟಣೆಗೊಂಡಿದೆ. ೨೦೦೭ರಲ್ಲಿ 'ತಿಮ್ಮಗುರುವಿನ ದರ್ಶನ - ಗುಂಡೋಪನಿಷತ್' ಎಂಬ ಕೃತಿ ಪ್ರಕಟಗೊಂಡಿದೆ.

***

ತೂಗಿ ತೂಗಿ ಮರಗಳೇ

ತೂಗಿ ತೂಗಿ ಮರಗಳೇ

ಇಳೆಗೆ ಇಳಿದ ವರಗಳೇ

ನೆಲದ ಮಧುರ ಗಾನದಲ್ಲಿ

ಕೂಡಿಬಂದ ಸ್ವರಗಳೇ

 

ಮಾತಾಡದೇ ದುಡಿಯುವ ಪ್ರೀತಿ ಪಡೆದ ಮರಗಳೇ 

ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ

ಸಾಲು ಹಸಿರ ಮಾಲೆಯೇ ಜೀವ ರಸದ ನಾಲೆಯೇ

ಪ್ರೀತಿಯೆಂಬ ನೀತಿ ತುಂಬಿ ಪ್ರಕೃತಿ ಬರೆದ ಓಲೆಯೇ.

 

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ

ಮೈ ತುಂಬ ಚಿಗುರಿನ ರೋಮಾಂಚವ ತಳೆವಿರಿ

ಒಮ್ಮೆ ದಾಟಿ ತಡೆವಿರಿ ನೆರಳ ಕೊಡೆಯ ಹಿಡಿವಿರಿ

ಔದಾರ್ಯದ ಒಡಲಾಳಲಿ ಹೂವು ಹಣ್ಣು ಸುರಿವಿರಿ

 

ಆಕಾಶಕೆ ಹಾಯುವ ಮಣ್ಣಿನಾಳದ ಕನಸೇ

ನೀಡಲೆಂದೇ ತಣಿಸುವ ಕೃಷಿಯ ಹೋಲುವ ಮನಸೇ

ತಡೆದರೂನೂ ಹರಸಿ ಕರುಣೆ ತೋರಿ ಕ್ಷಮಿಸಿ

ಸತ್ಯ ತ್ಯಾಗ ಪ್ರೀತಿ ಮೆರೆವ ನಿತ್ಯ ಎನಿಸುವ ನನಸೇ

(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)