ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜೂನ್ ೨೩, ೧೯೪೪ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯೭೩ರಲ್ಲಿ ನೇಮಕಗೊಂಡರು. ೨೦೦೦ ರಲ್ಲಿ ನಿವೃತ್ತರಾದ ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಇವು ಎಚ್.ಎಸ್.ವಿ. ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಲು ಕಾರಣವಾದವು. ಹಾಗಾಗಿ ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕತೆಯು ಪರಂಪರೆಯೊಂದಿಗೆ ನಡೆಸಿದ ನಿರಂತರ ಹೊಕ್ಕಾಟ ಮತ್ತು ಸಂಘರ್ಷದ ಫಲವಾಗಿ ನಿಷ್ಪನ್ನವಾದಂಥದ್ದು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ವೆಂಕಟೇಶಮೂರ್ತಿ, ಮಕ್ಕಳಿಗಾಗಿ ಕವಿತೆ ನಾಟಕ ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಲಿದಾಸನ ಋತುಸಂಹಾರ ಕಾವ್ಯಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ಪಡೆದಿದೆ.
ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದೀತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು-ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಮೊದಲಾದುವು ಮುಖ್ಯ ನಾಟಕಗಳು, ಅಳಿಲು ರಾಮಾಯಣ, ಹಕ್ಕಿಸಾಲು, ಚಿನ್ನಾರಿಮುತ್ತ, ಅಜ್ಜಿ ಕತೆ ಹೇಳು-ಮುಖ್ಯ ಮಕ್ಕಳ ಕೃತಿಗಳು. 'ಈ ಮುಖೇನ ಇವರ ವೈಚಾರಿಕ ಪ್ರಬಂಧಗಳ ಸಂಪುಟ, ಅನಾತ್ಮಕಥನ, ಅಕ್ಕಚ್ಚುವಿನ ಅರಣ್ಯಪರ್ವ, ಆತ್ಮಕಥನಾತ್ಮಕ ಪ್ರಬಂಧಗಳು, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ-ಇವರು ಪಡೆದ ಕೆಲವು ಮುಖ್ಯ ಗೌರವ ಪುರಸ್ಕಾರಗಳು. ವೆಂಕಟೇಶಮೂರ್ತಿಯವರು ತಮ್ಮ ೮೦ ನೇ ವಯಸ್ಸಿನಲ್ಲಿ ಮೇ ೩೦, ೨೦೨೫ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.
***
ಎಲೆಗಳು ನೂರಾರು
ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ ಭಾಷೆ ಪಂಥ ಹಲವು
ಅವುಗಳ ಹಿಂದೆ ಮಾತ್ರ ಒಂದೇ ಒಲವು
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ
ನೀಗೋಣ ಭಿನ್ನತೆ ನೀಗೋಣ
ಸಾವಿರ ಹೆಜ್ಜೆ ಒಂದೇ ಗುರಿಗಾಗಿ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ ಚಂದ್ರ ಲಾಂದ್ರ ಹಣತೆ
ಅವುಗಳ ಹಿಂದೆ ಮಾತ್ರ ಒಂದಿದೆ ಘನತೆ
ತೆರೆಯೋಣ ಹೃದಯ ತೆರೆಯೋಣ
ನಾವು ನೀವು ಸೇರಿ ಒಂದಾಗಿ
ಮರೆಯೋಣ ಭೇದ ಮರೆಯೋಣ
ನದಿಗಳು ಕೂಡಿದ ಪ್ರೀತಿಯ ಕಡಲಾಗಿ
ಪದಗಳು ನೂರಾರು ಬದುಕಿನ ಹದಗಳು ನೂರಾರು
ಪದಗಳ ಹಿಂದೆ ಒಂದೇ ಉಸಿರು
ಅಕ್ಕರೆಯಿಂದ ಒಟ್ಟಿಗೆ ಬಾಳೋಣ
ಭಾರತ ಮಾತೆಗೆ ನಮ್ಮ ಪ್ರೀತಿ ತೋರೋಣ
ಕಟ್ಟೋಣ ನಾಡನು ಕಟ್ಟೋಣ
ನಾವು ನೀವು ಸೇರಿ ಒಂದಾಗಿ
ಮುಟ್ಟೋಣ ಮಾಡನು ಮುಟ್ಟೋಣ
ತಾರೆಗಳೆ ಈ ನಾಡಿನ ಸೂರಾಗಿ
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!