ಸಿಯಾವೊ ಕುಟುಂಬದ ದಿ ಓಲ್ಡ್ ಹೌಸ್ (The Old House of Siiao Family ಅಥವಾ Hsiao Family's Old House) ತೈವಾನ್‌ನ ಪಿಂಗ್‌ಟುಂಗ್ ಕೌಂಟಿಯ ಜಿಯಾಡಾಂಗ್ ಟೌನ್‌ಶಿಪ್‌ನಲ್ಲಿ (Jiadong Township) ಇರುವ ಐತಿಹಾಸಿಕ ಮನೆಯಾಗಿದೆ. ಇದು ತೈವಾನ್‌ನಲ್ಲಿ ಏಕೈಕ ಹಕ್ಕಾ ಶೈಲಿಯ ಐದು ಹಾಲ್‌ಗಳ ಮಹಲ್ (five-hall mansion) ಆಗಿದ್ದು, ಇದು ದೇಶದ ಇತಿಹಾಸ, ಸಂಸ್ಕೃತಿ ಮತ್ತು ಕುಟುಂಬದ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ.

ಮೂಲ ಮತ್ತು ನಿರ್ಮಾಣ ಇತಿಹಾಸ : ಸಿಯಾವೊ (Siao ಅಥವಾ Hsiao) ಕುಟುಂಬದ ಪೂರ್ವಜರು ಚೀನಾದ ಗುವಾಂಗ್‌ ಡಾಂಗ್ ಪ್ರಾಂತ್ಯದ ಮೈಶಿಯನ್ ಜಿಲ್ಲೆಯಿಂದ (Meixian District) ೧೯ನೇ ಶತಮಾನದಲ್ಲಿ ತೈವಾನ್‌ ಗೆ ಬಂದರು. ಅವರು ಮೊದಲು ತೈನಾನ್‌ನಲ್ಲಿ ನೆಲೆ ನಿಲ್ಲಲು ಪ್ರಯತ್ನಿಸಿದರು. ನಂತರ ಜಿಯಾಡಾಂಗ್‌ ಗೆ ಸ್ಥಳಾಂತರಗೊಂಡರು. ಉದ್ಯಮಿಗಳಾಗಿ (ವ್ಯಾಪಾರಿಗಳಾಗಿ) ಬಂದ ಅವರು ತಮ್ಮ ಯಶಸ್ಸಿನಿಂದ ಸಂಪತ್ತು ಸಂಪಾದಿಸಿದರು. ಅವರು ವೈನ್ ತಯಾರಿಕೆ, ಬಟ್ಟೆ ಬಣ್ಣ ಹಾಕುವುದು, ಅಕ್ಕಿ ಮತ್ತು ಬೆಳೆಗಳ ವ್ಯಾಪಾರದ ಮೂಲಕ ತಮ್ಮ ಬದುಕನ್ನು ಕಂಡುಕೊಂಡರು.

ವ್ಯಾಪಾರ ಒಂದು ಹಂತಕ್ಕೆ ತಮ್ಮ ಕೈ ಹಿಡಿಯಿತು ಎಂದು ಅನಿಸಿದಾಗ ತಮ್ಮ ಕುಟುಂಬಕ್ಕೆ ಸೂಕ್ತವಾದ ಮನೆಯನ್ನು ಕಟ್ಟಲು ನಿರ್ಧರಿಸಿ, ಗುವಾಂಗ್‌ ಡಾಂಗ್‌ ನ ತಮ್ಮ ಪೂರ್ವೀಕರ ಊರಿನ ಮನೆಯ ಮಾದರಿಯಲ್ಲಿ ನಿರ್ಮಾಣ ಮಾಡಿದರು. ನಿರ್ಮಾಣವು ೧೮೬೦ರಲ್ಲಿ ಪ್ರಾರಂಭವಾಗಿ ೧೮೮೦ರಲ್ಲಿ ಪೂರ್ಣಗೊಂಡಿತು. ಅಂದರೆ ಸರಿಸುಮಾರು ಎರಡು ದಶಕಗಳಷ್ಟು ಸಮಯ ಅವರು ಮನೆ ನಿರ್ಮಾಣ ಮಾಡಲು ತೆಗೆದುಕೊಂಡರು. ಗುವಾಂಗ್‌ ಡಾಂಗ್‌ನ ಟಾಂಗ್‌ ಶಾನ್‌ ನಿಂದ ಬಂದ ಕುಶಲಕರ್ಮಿಗಳು ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಿದರು. ಇದು ಹಕ್ಕಾ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದು, ಐದು ಹಾಲ್‌ಗಳು (five halls) ಇರುವ ವಿಶೇಷ ಕಟ್ಟಡವಾಗಿದೆ.

ಐತಿಹಾಸಿಕ ಘಟನೆಗಳು ಮತ್ತು ಗುಂಡಿನ ಗುರುತುಗಳು: ೧೮೯೫ರಲ್ಲಿ ಕ್ವಿಂಗ್ ರಾಜವಂಶವು ತೈವಾನ್ ಅನ್ನು ಜಪಾನ್‌ಗೆ ಹಸ್ತಾಂತರಿಸಿದ ನಂತರ, ಸ್ಥಳೀಯರು ಜಪಾನೀ ಸರ್ಕಾರದ ವಿರುದ್ಧ ಪ್ರತಿರೋಧಿಸಿದರು. ಇದರಿಂದ ಸ್ಥಳೀಯ ಸಂಘರ್ಷಗಳು ಉಂಟಾದವು. ಈ ಸಂದರ್ಭದಲ್ಲಿ ಸಿಯಾವೊ ಕುಟುಂಬದ ಮನೆಯು ಗುಂಡಿನ ದಾಳಿಗೆ ಒಳಗಾಯಿತು. ಇಂದಿಗೂ ಮನೆಯ ಹಲವು ಕೋಣೆಗಳ ಗೋಡೆಗಳ ಮೇಲೆ ಗುಂಡುಗಳ ರಂಧ್ರಗಳ ಅವಶೇಷಗಳು (bullet holes) ಗೋಚರಿಸುತ್ತವೆ. ಇದು ತೈವಾನ್‌ನ ಇತಿಹಾಸದ ಒಂದು ಪ್ರಮುಖ ಭಾಗವನ್ನು, ಜಪಾನೀ ಆಳ್ವಿಕೆಯ ಆರಂಭದ ಸಂಘರ್ಷಗಳನ್ನು ನೇರವಾಗಿ ತೋರಿಸುತ್ತದೆ.

ಹಲವು ವರ್ಷಗಳ ಬಳಿಕ ಈ ಮನೆಯು ಐತಿಹಾಸಿಕ ತಾಣವಾಗಿ ಮಾರ್ಪಟ್ಟಿತು. ಪಿಂಗ್‌ಟುಂಗ್ ಕೌಂಟಿಯ ಮೊದಲ ಖಾಸಗಿ ಆಡಳಿತದ ಐತಿಹಾಸಿಕ ಸ್ಥಳವಾಗಿದ್ದು, ಒಂದು ನಿರ್ವಹಣಾ ಸಮಿತಿಯಿಂದ ನಿರ್ವಹಿಸಲ್ಪಡುತ್ತದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ ಏಕೆಂದರೆ ಇಡೀ ಮನೆಯು ತೈವಾನ್‌ನ ಇತಿಹಾಸವನ್ನು ಚೀನಾದಿಂದ ವಲಸೆ, ಉದ್ಯಮಶೀಲತೆ, ಜಪಾನೀ ಆಳ್ವಿಕೆಯ ಸಂಘರ್ಷಗಳು ಮತ್ತು ಹಕ್ಕಾ ಸಂಸ್ಕೃತಿಯನ್ನು ಹೇಳುತ್ತದೆ.

ಮನೆಯ ವಿಶೇಷತೆಗಳು:

ಹಕ್ಕಾ ಶೈಲಿಯ ಐದು ಹಾಲ್‌ಗಳ ಮಹಲ್.

ಗೋಡೆಗಳಲ್ಲಿರುವ ಗುಂಡಿನ ಗುರುತುಗಳು.

ಸಾಂಪ್ರದಾಯಿಕ ಚೀನೀ ವಾಸ್ತುಶಿಲ್ಪ, ದೊಡ್ಡ ಅಂಗಳಗಳು, ಕೆತ್ತನೆಗಳು ಮತ್ತು ರಚನೆ.

ಇದು ತೈವಾನ್‌ನ ದಕ್ಷಿಣ ಭಾಗದ ಹಕ್ಕಾ ಸಂಸ್ಕೃತಿಯ ಪ್ರಮುಖ ಸ್ಮಾರಕವಾಗಿದ್ದು, ಇತಿಹಾಸ ಪ್ರೇಮಿಗಳು ಮತ್ತು ಪ್ರವಾಸಿಗಳಿಗೆ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ. ನೀವು ತೈವಾನ್‌ಗೆ ಭೇಟಿ ನೀಡಿದರೆ, ಇಲ್ಲಿ ಭೇಟಿ ನೀಡಿ ಇತಿಹಾಸದ ಪುಟಗಳ ಜೀವಂತಿಕೆಯನ್ನು ಅನುಭವಿಸಿ.

(ಆಧಾರ)

 ಚಿತ್ರ ಕೃಪೆ: ಅಂತರ್ಜಾಲ ತಾಣ