ನಿಸರ್ಗದೂರಿನ ಹಳ್ಳಿಯ ಮಣ್ಣಿನ ವಾಸನೆಯಲ್ಲೇ ಬೆಳೆದ ಇಬ್ಬರು ಮಕ್ಕಳು, ತಮ್ಮ ತಂದೆ ತಾಯಿಯ ಕೈಹಿಡಿದು ನಡೆದ ದಾರಿಯನ್ನು ಮರೆಯಲಾರಂಭಿಸಿದರು. ನಗರದ ಬೆಳಕು ಅವರಿಗೆ ಹೊಸ ಕನಸುಗಳನ್ನು ಕೊಟ್ಟಿತು. ಆದರೆ ಹಳ್ಳಿಯ ಕತ್ತಲಲ್ಲಿ ಉಳಿದ ತಂದೆ ತಾಯಿಯ ಕಣ್ಣೀರು ಮಾತನಾಡುತ್ತಿತ್ತು ಪೇಟೆಯ ಗದ್ದಲದಲ್ಲಿ ಮಕ್ಕಳಿಗೆ ಕೇಳಲಿಲ್ಲ.ತಂದೆಯ ಒದ್ದೆಯಾದ ಕೈಗಳು, ತಾಯಿಯ ಮೌನ ಪ್ರಾರ್ಥನೆಗಳು-ಇವೆಲ್ಲವೂ ಅವರ ನೆನಪಿನಲ್ಲಿ ನಿಧಾನವಾಗಿ ಅಳಿದುಹೋದವು. ಲಕ್ಷ ಲಕ್ಷ ಹಣ ಗಳಿಸಿದರೂ, ಹೃದಯದ ಬಡತನವನ್ನು ಅವರು ಅರಿಯಲಿಲ್ಲ. ಹಳೆಯ ಮನೆ ಬಾಗಿಲಲ್ಲಿ ಪ್ರತಿದಿನ ಕಾದಿದ್ದ ತಂದೆ, “ಇವತ್ತು ಬರ್ತೀರಾ?” ಎಂದು ಕೇಳುತ್ತಿದ್ದ.
ತಾಯಿ ಮೌನವಾಗಿ ಹಚ್ಚಿದ ದೀಪ ಕಣ್ಣೀರಿನಿಂದಲೇ ಬೆಳಗುತ್ತಿತ್ತು, ಒಂದು ದಿನ, ನಗರ ಜೀವನದ ಗದ್ದಲದಲ್ಲಿ ಮಕ್ಕಳು ಏಕಾಂತವನ್ನು ಕಂಡರು. ಅಲ್ಲಿ ಹಣ ಇದ್ದರೂ, ಮಮತೆ ಇರಲಿಲ್ಲ; ಸೌಕರ್ಯ ಇದ್ದರೂ, ಸಂತೋಷ ಇರಲಿಲ್ಲ. ಹಳ್ಳಿಯ ಮಣ್ಣಿನ ಮೌಲ್ಯ, ತಂದೆ ತಾಯಿಯ ಪ್ರೀತಿಯ ಅರ್ಥವಾಯಿತು. ಆದರೆ ಹಿಂದಿರುಗುವಾಗ, ಬಾಗಿಲು ತೆರೆದಿದ್ದರೂ, ಮನಗಳು ಮುಚ್ಚಿಕೊಂಡಿದ್ದವು. ಗೋಡೆಯ ಭಾವಚಿತ್ರಕ್ಕೆ ಹಾಕಿದ ಹೂವಿನ ಮಾಲೆ ಬರಿಯ ದಾರವನ್ನ ಹೊತ್ತು ಒಣಗಿ ನಿಂತಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!