ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಭಾರತೀಯೇತರ ಮತಗಳಿಗೆ ಮತಾಂತರಗೊಂಡರೆ ಆತನ ಎಸ್.ಸಿ. ಸ್ಥಾನಮಾನ ನಷ್ಟವಾಗಲಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದೂ ಹಾಗೂ ದೂರಗಾಮಿ ಪರಿಣಾಮ ಬೀರುವಂತಹುದೂ ಆಗಿದೆ. ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮಕ್ಕೆ ಸೇರಿದವರಿಗೆ ಮಾತ್ರ ಪರಿಶಿಷ್ಟ ಜಾತಿಯ ಸ್ಥಾನಮಾನ ಸಿಗುತ್ತದೆ ಎಂಬುದಾಗಿ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡ ವ್ಯಕ್ತಿಯೊಬ್ಬರು ತನಗೆ ಅಕ್ಕಲ ರಾಮಿ ರೆಡ್ಡಿ ಎಂಬ ವ್ಯಕ್ತಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿರುವುದಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಅವರು ಈ ದೂರು ದಾಖಲಿಸಿದ್ದರು. ಆದರೆ ಆಂಧ್ರ ಹೈಕೋರ್ಟ್ ಅವರ ದೂರನ್ನು ಪುರಸ್ಕರಿಸಲು ನಿರಾಕರಿಸಿತ್ತು. ಅದರ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡಾ ಆಂಧ್ರ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿದು, ಒಬ್ಬ ವ್ಯಕ್ತಿಯು ೧೯೫೦ರ ಸಾಂವಿಧಾನಿಕ ಆದೇಶದ ನಿಬಂಧನೆಯಡಿ ಉಲ್ಲೇಖಿಸಲಾದ ಧರ್ಮದ ಬದಲಾಗಿ ಬೇರೊಂದು ಶ್ರದ್ದೆ ಹೊಂದಿದ್ದಲ್ಲಿ ಆ ಧರ್ಮದ ಜತೆಗೇ, ತಾನು ಎಸ್‌ ಸಿ ಸಮುದಾಯಕ್ಕೂ ಸೇರಿದವನೆಂದು ಹೇಳಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಆಮಿಷಕ್ಕೊಡ್ಡಿ ಕ್ರೈಸ್ತ ಅಥವಾ ಇಸ್ಲಾಮ್ ಮತಕ್ಕೆ ಮತಾಂತರಗೊಳಿಸುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿರುವುದರ ಮಧ್ಯೆ ನ್ಯಾಯಾಲಯವು ನೀಡಿರುವ ತೀರ್ಪು ಮಹತ್ವದ ಸಂದೇಶರವಾನಿಸಿದೆ. ಮತಾಂತರಗೊಂಡ ನಂತರವೂ ಪರಿಶಿಷ್ಟರಿಗೆ ಸಂವಿಧಾನ ರೀತ್ಯಾ ದೊರಕುವಂತಹ ಮೀಸಲಾತಿ ಮುಂತಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ಕೆಲವರು ಯತ್ನಿಸುತ್ತಿದ್ದು, ನ್ಯಾಯಾಲಯದ ತೀರ್ಪು ಅದಕ್ಕೆ ತಡೆಯೊಡ್ಡಿದೆ. ಎಸ್ಸಿ ಸ್ಥಾನಮಾನದಲ್ಲಿ ದೊರಕುವ ಸೌಲಭ್ಯಗಳು ಮತಾಂತರವಾದ ಮೇಲೂ ಮುಂದುವರಿಯುವುದೆಂದು ಮತಾಂತರ ಮಾಡುವವರು ತಪ್ಪು ಮಾಹಿತಿ ನೀಡುವುದಿದೆ. ಕೆಲವು ರಾಜಕೀಯ ಪಕ್ಷಗಳೂ ಈ ರೀತಿ ಮತಾಂತರವಾದವರಿಗೆ ಮೀಸಲಾತಿಯಂತಹ ಸೌಲಭ್ಯ ವಿಸ್ತರಿಸಲು ಅವಕಾಶ ಕಲ್ಪಿಸುವುದಿದೆ. ಇದರಿಂದಾಗಿ ಹಿಂದೂ ಧರ್ಮದಿಂದ ಮತಾಂತರವಾಗಲು ಹೆಚ್ಚು ಕುಮ್ಮಕ್ಕು ಕೊಟ್ಟಂತಾಗುತ್ತಿದೆ. ಇದರಿಂದ ಮತಾಂತರ ಪಿಡುಗಿಗೆ ಉತ್ತೇಜನ ನೀಡಿದಂತಾಗಿದೆ.

ಇನ್ನೀಗ ಸುಪ್ರೀಂ ಕೋರ್ಟು ನೀಡಿರುವ ಶೀರ್ಷಿನ ನಂತರವಾದರೂ ಮತಾಂತರ ಪಿಡುಗಿಗೆ ಕಡಿವಾಣ ಬಿದ್ದೀತೆಂದು ಆಶಿಸಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೬-೦೩-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ