ಎಲ್ಲಾ ಸಾಧು-ಸಂತರು, ಅವತಾರ ಪುರುಷರು, ಮಹಾತ್ಮರು, ಯೋಗಿಗಳು, ದೇವದೂತರು, ದೇವಾಂಶ ಸಂಭೂತರು, ಈ ಜಗತ್ತಿಗೆ ಉಪದೇಶಿಸಿದ್ದು "ಶಾಂತಿ ಮಂತ್ರ" ವನ್ನೇ. ಸ್ವರ್ಗ-ನರಕ, ಪಾಪ- ಪುಣ್ಯದ ಬಗ್ಗೆ ವಿವರಿಸಿ ಒಳ್ಳೆಯ ಕರ್ಮ ಮಾಡಿ ಶ್ರೇಷ್ಠ ಜೀವನ ನಡೆಸಿ ಅಂತ ಕರೆ ಕೊಟ್ಟಿದ್ದರು. ನಾವೆಲ್ಲರೂ ಒಬ್ಬ ತಂದೆಯ ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು, ಹಾಗಾಗಿ ಎಲ್ಲರೂ ಅನ್ಯೋನ್ಯತೆಯಿಂದ ಶಾಂತಿಯಿಂದ ಬದುಕಿರಿ ಅಂತ ಘೋಷಿಸಿದರು.
ಆದರೆ ಈಗ ಆಗುತ್ತಿರುವುದೇನು ? ಇಷ್ಟರಲ್ಲೇ ಎರಡು ವಿಶ್ವಮಹಾಯುದ್ಧ ಕಂಡ ನಮಗೆ ಮೂರನೇ ವಿಶ್ವಯುದ್ಧ ನಡೆಯುವ ಬಗ್ಗೆ ಅನುಮಾನ ಮೂಡುತ್ತಿದೆ. ಅಷ್ಟಕ್ಕೂ ಈ ಯುದ್ಧ ಏಕಾಗಿ? ಕೆಲವೇ ಕೆಲವು ಯುದ್ಧ ದಾಹಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ, ತೈಲ, ಚಿನ್ನ ಸೇರಿದಂತೆ ಅಮೂಲ್ಯ ಖನಿಜಗಳ ಮಾರುಕಟ್ಟೆಯ ಮೇಲಿನ ನಿಯಂತ್ರಣಕ್ಕಾಗಿ, ಶಸ್ತ್ರಾಸ್ತ್ರ ಮಾರಾಟದ ಮೇಲೆ ಹಿಡಿತ ಸಾಧಿಸಲಿಕ್ಕಾಗಿ, ಜಗತ್ತಿನಲ್ಲಿ No.1 ಅಂತ ಕೊಚ್ಚಿಕೊಳ್ಳುವುದಕ್ಕಾಗಿ, ಈ ರೀತಿ ಒಬ್ಬರ ಮೇಲೊಬ್ಬರು ಬಾಂಬ್ ದಾಳಿ ಮಾಡಿ ಬಡಿದಾಡಿಕೊಳ್ಳುತ್ತಿದ್ದಾರೆ. ಕೆಲವು ದೇಶಗಳು Hidden Agenda ಇಟ್ಕೊಂಡು, ತೆರೆಮರೆಯಲ್ಲಿದ್ದು ಯಾರದ್ದೋ ಮನೆಗೆ ಬೆಂಕಿ ಬಿದ್ರೆ, ಅದ್ನ ನಂದಿಸೋ ಬದ್ಲು, "ಇದ್ರಿಂದ ನಮಗೇನ್ ಲಾಭ" ಅಂತ ಲೆಕ್ಕ ಹಾಕಿ, ಆ ಬೆಂಕಿಯಲ್ಲೇ ಬೀಡಿ ಹಚ್ಕೊಂಡ್ ಖುಷಿ ಪಟ್ರು ಎಂಬ ಗಾದೆ ಮಾತನ್ನು ನೆನಪಿಸ್ತಾ ಇದ್ದಾವೆ. "ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು" ಎಂದ ಹಾಗೆ ಇದರಲ್ಲಿ ಸಂತ್ರಸ್ಥರಾಗಿದ್ದು ಅಮಾಯಕ ನಾಗರಿಕರು. ಇವರ್ಯಾರಿಗೂ ಯುದ್ದ ಬೇಕಾಗಿಲ್ಲ. ಆದರೆ ಹೆತ್ತ ಮಕ್ಕಳನ್ನು, ಒಡಹುಟ್ಟಿದವರನ್ನು, ಜನ್ಮ ನೀಡಿದವರನ್ನು, ಹಾಗೂ ಅಪಾರ ಬಂಧು ಮಿತ್ರರನ್ನು ಕಳೆದುಕೊಂಡು ಗೋಳಾಡುತ್ತಿರೋ ದೃಶ್ಯ ಕಂಡರೆ ಕರುಳು ಚುರುಕೆನ್ನುತ್ತೆ. ಮನೆ-ಮಠ ಕಳಕೊಂಡು, ತಿನ್ನೋಕೆ ಅನ್ನ ಇಲ್ಲದೆ ಉಡೋಕ್ಕೆ ಬಟ್ಟೆ ಇಲ್ಲದೆ, ಕುಡಿಯೋಕೆ ನೀರಿಲ್ಲದೆ, ಕೈಕಾಲು,ಕಣ್ಣು ಕಳಕೊಂಡು ನರಳಾಡುತ್ತಿರುವ ಬಲಿಪಶುಗಳನ್ನು ನೋಡಿದ್ರೆ "ಇದೇ ನಿಜವಾದ ನರಕ" ಅಂತ ಅನ್ಸುತ್ತೆ.
ರಾಮಾಯಣ ಮಹಾಭಾರತ ಕಾಲದಲ್ಲೂ ಯುದ್ಧ ನಡೆದಿತ್ತು ಅಲ್ಲಿ "ಯುದ್ದ ನೀತಿ" ಅಂತ ಇತ್ತು. ಎರಡು ಪಕ್ಷದವರು "ಯುದ್ಧ ಧರ್ಮವನ್ನು" ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಆಗಿನ ನಿಯಮಗಳನ್ನು ನೋಡಿದ್ರೆ ಹೀಗೂ ಉಂಟೇ? ಅಂತ ಆಶ್ಚರ್ಯಗೊಳ್ಳಬೇಕು, ಹಾಗಿದೆ ನೋಡಿ.
1) ಯಾವುದೇ ಅಮಾಯಕ ಪ್ರಜೆಗಳು ಸಾಯಬಾರದೆಂದು, ಯುದ್ಧವನ್ನು ಊರ ಹೊರಗಿನ ರಣರಂಗದಲ್ಲೇ ಮಾಡುತ್ತಿದ್ದರು.
2) ಸೂರ್ಯೋದಯ & ಸೂರ್ಯಸ್ತದ ನಡುವೆ ಮಾತ್ರ ಯುದ್ಧ ನಡೆಯುತ್ತಿತ್ತು. ರಾತ್ರಿ ದಾಳಿ ಆಗಬಹುದೆನ್ನುವ ಚಿಂತೆ ಇಲ್ಲದೆ, ಎರಡೂ ಪಕ್ಷದವರು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರು.
3) ಎರಡೂ ಕಡೆಯವರಿಂದ ಸೈನಿಕರಿಗೆ ಊಟೋಪಚಾರ & ವೈದ್ಯಕೀಯ ಸಹಾಯದ ವ್ಯವಸ್ಥೆ ಚೆನ್ನಾಗಿರುತ್ತಿತ್ತು.
4) ಕಾಲಾಳುಗಳು, ಕುದುರೆ ಸವಾರರು, ಆನೆ ಸವಾರರು, ಇನ್ನೊಂದು ಪಕ್ಷದ ಅಂತದ್ದೇ ಸೈನಿಕರ ಜೊತೆ ಹೋರಾಡುತ್ತಿದ್ದರು. ಯಾರೂ ಕೂಡಾ ನಿಯಮ ಮೀರಿ ಬಲಹೀನರೊಂದಿಗೆ ಸೆಣಸುತ್ತಿರಲಿಲ್ಲ.
5) ಸೈನಿಕರು ಎದುರು ಬದುರಾಗಿ ಹೋರಾಡುತ್ತಿದ್ದರೇ, ವಿನಹ ಯಾರೂ ಹಿಂದಿನಿಂದ ಬಂದು ಮೋಸದಿಂದ ಚೂರಿ ಹಾಕುತ್ತಿರಲಿಲ್ಲ.
6) ನಿಶಸ್ತ್ರರಾದವರನ್ನು ಕೊಲ್ಲುತ್ತಿರಲಿಲ್ಲ. ಸೋತ ರಾಜ & ಸೈನಿಕರನ್ನು ಕೊಲ್ಲದೇ ಪ್ರಾಣಭಿಕ್ಷೆ ನೀಡಿ ಕಳಿಸುತ್ತಿದ್ದರು.
7) ಪುರುಷ ಸೈನಿಕರು ಮಹಿಳೆಯರೊಂದಿಗೆ ಹೋರಾಡುತ್ತಿರಲಿಲ್ಲ.
8) ಯಾರಿಗಾದರೂ ಯುದ್ಧ ಮಾಡಬೇಕೆಂದಿದ್ದರೆ ಯುದ್ಧ ಭೂಮಿಗೆ ಬಂದು ಹೊರಡಬೇಕೇ ವಿನಹ ಊರಿನಲ್ಲಿ ಕುಳಿತು ಬೊಬ್ಬೆ ಹೊಡೆಯುವಂತಿಲ್ಲ.
9) ಯುದ್ಧ ನಡೆಯುತ್ತಿದ್ದರೂ, ನಾಗರಿಕರೆಲ್ಲರೂ ಯಾವುದೇ ಹೆದರಿಕೆ ಇಲ್ಲದೆ ಶಾಂತಿಯಿಂದ ನೆಮ್ಮದಿಯಿಂದ ಮಾಮೂಲಿ ದಿನದಂತೆ ಆ ದಿನಾನೂ ಕಳೆಯುತ್ತಿದ್ದರು.
10) ಸ್ವತಃ ಎರಡೂ ಪಕ್ಷದ ರಾಜರೇ ರಣರಂಗದಲ್ಲಿ ಮುಖಾಮುಖಿಯಾಗಿ ಹೋರಾಡುತ್ತಿದ್ದರು. (ಈಗಿನಂತೆ ಬಂಕರ್ ನಲ್ಲಿ ಹೈ-ಸೆಕ್ಯೂರಿಟಿ ರಕ್ಷಣೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಿರಲಿಲ್ಲ )
ಈಗ ನೀವೇ ನಿರ್ಧರಿಸಿ, "ಆಗಿನ ಯುದ್ಧ ಚೆಂದವೋ? ಇಲ್ಲಾ ಈಗಿನ ಯುದ್ಧ ಚೆಂದವೋ"? ಅಂತ. ಈಗಿನ ಯುದ್ಧದಲ್ಲಿ ಯಾವುದೇ ರೀತಿ-ನೀತಿ-ನಿಯಮಗಳಿಲ್ಲ. ಒಟ್ಟಾರೆ ಗೆಲ್ಬೇಕ್, "By Hook or Crook". ಅಮಾಯಕ ನಾಗರಿಕರು ಮಾತ್ರ ಎಲ್ಲಿ ಬಾಂಬ್ ಬೀಳುತ್ತೋ ಅಂತ ಪ್ರಾಣವನ್ನು ಕೈಯಲ್ಲಿ ಹಿಡಿದು ರಾತ್ರಿ ಇಡೀ ಜಾಗರಣೆ ಮಾಡ್ತಿರ್ತಾರೆ. "ಗೆದ್ದು ಬೀಗೋದು ಯಾರೋ"? "ಬೆಂದು ಬಸವಳಿದು ಕೊರಗೋದು ಯಾರೋ" ? ಒಟ್ಟಾರೆ ಇದು "ಹಂಬಾಕಾಟ" (Fake Game) ಅಲ್ದಾ? ಇದೆಲ್ಲಾ ಬೇಕಾ? ಏನಂತೀರಿ?
-ಶಿವು ಕಾರ್ಕಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!