ಯಾರೋ ಓದಿದ ಕವಿತೆಯ ಸಾಲುಗಳಲ್ಲಿ
ಮೋಡಗಳ ಘನತೆಯಿತ್ತು
ಬೇರುಗಳ ಚುರುಕು ಇತ್ತು
ಬೇಸಿಗೆಯ ಖಾಲಿತನವಿತ್ತು
ಯಾರೋ ಓದಿದ ಕವಿತೆಯ ಸಾಲುಗಳಿಗೆ
ಬಣ್ಣಗಳ ಒಳಗಿನ ಕಣ್ಣುಗಳನ್ನು
ಬೆಟ್ಟದ ಮೇಲಿಟ್ಟ ಹೆಜ್ಜೆಗಳನ್ನು
ಗಡಿಯಾರದ ಗಡಿಯಾಚೆಯ ಘಳಿಗೆಗಳನ್ನು
ಪ್ರಶ್ನಿಸುವ ತವಕ ತುಂಬಿತ್ತು
ಯಾರೋ ಓದಿದ ಕವಿತೆಯ ಸಾಲುಗಳಲ್ಲಿ
ಕ್ರಿಯಾಪದಗಳು ಕನ್ನಡದಲ್ಲಿ
ನಾಮಪದಗಳು ಇಂಗ್ಲೀಷಿನಲ್ಲಿ
ವಿಶೇಷಣಗಳು ಮನೆಮಾತಿನಲ್ಲಿ
ಮಾತ್ರ ನೆನಪಿಗೆ ಬರುತ್ತಿದ್ದವು
ಯಾರೋ ಓದಿದ ಕವಿತೆಯ ಸಾಲುಗಳು
ಅವಳ ಮುನಿಸಿನ ಕುರುಹುಗಳಾಗಿದ್ದವು.
-ಕಮಲಾಕರ ಕಡವೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!