ಬ್ಯಾರೆ ಡಿಸೈನ್

ಗಂಡ-ಹೆಂಡತಿ ವಿಜಿ ಮತ್ತು ರಮೇಶ ಸಂಜೆಯ ಹೊತ್ತು. ಆರಾಮಾಗಿ ಟೀವಿ ನೋಡುತ್ತ, ಕಾಫಿ ಕುಡಿಯುತ್ತ ಕೂತಿದ್ದರು. ವಿಜಿ ಕೇಳಿದಳು. 'ರೀ, ನೀವು ನನ್ನ ನೋಡೋಕೆ ಬಂದಾಗ ನಮ್ಮ ತಂದೆ ಹತ್ತಿರ ತುಂಬಾ ಹೊತ್ತು ಮಾತನಾಡ್ತಾ ಇದ್ರಿ ಅಲ್ಲಾ, ಏನದು?' ಅಂತ. ರಮೇಶ ಹೇಳಿದ, 'ಅದೇ ಕಣೆ, ನೀವು ಸೀರೆ ಅಂಗಡಿಗೆ ಹೋದಾಗೆಲ್ಲಾ ಅಂಗಡಿಯವನ ಹತ್ತಿರ ಅಷ್ಟು ಹೊತ್ತು ಏನು ಮಾತಾಡ್ತಾ ಇರ್ತೀರಿ?' ಎಂದಾಗ ವಿಜಿಗೆ ಅರ್ಧವಾಗಲಿಲ್ಲ. 'ಬಿಡಿಸಿ ಹೇಳಿ?' ಎಂದಳು. 'ಏನಿಲ್ಲಾ, ಸೇಮ್ ಕಲರದಾಗ ಬ್ಯಾರೆ ಡಿಸೈನ್ ಇದ್ರೆ ತೋರಿಸಿ' ಅಂತ ಹೇಳತಾ ಇದ್ದೆ

-ಮಹಾಂತೇಶ ಬಾಗೇವಾಡಿ

***

ಮೂವಿಗೆ ಹೋಗ್ತಿರ್ತೀನಿ!

ಮುಂಬೈ ನಿವಾಸಿಯಾದ ಹನುಮೇಶ, ಮುಂಬೈ ಹಳ್ಳಿಯಲ್ಲಿ ಜಮೀನ್ದಾರನಾಗಿದ್ದ ತನ್ನ ಬಾಲ್ಯದ ಗೆಳೆಯ ಕಿಟ್ಟುವಿನ ಮನೆಗೆ ಸಂಸಾರ ಸಮೇತ ಬಂದಿದ್ದ. ಅವರಿಗೆ ರಾಜಾತಿಥ್ಯ ನಡೆಯುತ್ತಿತ್ತು. ಹನುಮೇಶ ಒಂದೆರಡು ಸಲ, ಮೂವಿಗೆ ಹೋಗಿ ಬರ್ತೀನಿ ಅಂತ ಹೇಳಿ, ಮೂರ್ನಾಲ್ಕು ನಿಮಿಷಗಳ ನಂತರ ಬರುತ್ತಿದ್ದ. ಇದನ್ನು ಕಂಡು ಚಕಿತನಾದ ಕಿಟ್ಟುವಿನ ಮಗ, 'ಅದೇನು ಅಂಕಲ್, ನೀವು ಮಾತ್ರ ಎರಡೂರು ನಿಮಿಷದ ಶಾರ್ಟ್ ಫಿಲ್ಮ್ ಗೆ ಹೋಗಿ ಬರ್ತಿದೀರಾ? ನಮಗೆಲ್ಲಾ ತೋರಿಸಲ್ವಾ?' ಎಂದು ಕೇಳಿದಾಗ, 'ಅಯ್ಯೋ ರಾಮ, ಅದು ನೋಡೋದಲ್ಲಾ, ಅವರವರೇ ಮಾಡೋದು' ಎಂದ ಹನುಮೇಶ, 'ಏನಯ್ಯಾ ಹಾಗಂದರೆ?' ಎಂದು ಗೆಳೆಯ ಕೇಳಿದ್ದಕ್ಕೆ. 'ಮೂವಿ ಅಂದ್ರೆ, ಮೂತ್ರ ವಿಸರ್ಜನೆ!' ಎಂದ.:

-ವಿ. ವಿಜಯೇಂದ್ರ ರಾವ್

***

ಗಮನ

ಪರಮೇಶಿ ಮಗನ ಶಾಲೆಯ ಪೋಷಕರ ಸಭೆಗೆ ಹೋಗಿದ್ದ. ಅಲ್ಲಿ ಪರಮೇಶಿ ಮಗ ನಾಗೇಶನ ಬಗ್ಗೆ ದೂರುಗಳ ಸುರಿಮಳೆಯೇ ಕೇಳಿ ಬಂತು; ಅದರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ಪರಮೇಶಿ ಶೀಲಾ ಮೇಡಂ ಅವರನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದ. ಸಭೆ ಮುಗಿದ ಮೇಲೆ ಮುಖ್ಯ ಶಿಕ್ಷಕರು ಪರಮೇಶಿಯನ್ನು ತಮ್ಮ ಕೊಠಡಿಗೆ ಕರೆಸಿ ಹೇಳಿದರು, 'ನೋಡಿ ಪರಮೇಶಿ, ತಾವು ಶೀಲಾ ಮೇಡಂ ಕಡೆ ಗಮನ ಹರಿಸಿದಂತೆ. ತಮ್ಮ ಮಗನ ಕಡೆ ಗಮನ ಹರಿಸಿದ್ದರೆ ಆತ ಖಂಡಿತ ಫೇಲ್ ಆಗುತ್ತಿರಲಿಲ್ಲ' ಎಂದು ತಾನು ನೋಡಿದ್ದು ಇವರಿಗೂ ಗೊತ್ತಾಗಿದೆ ಎಂದು ಅರಿತ ಪರಮೇಶಿ ಇಂಗು ತಿಂದ ಮಂಗನಂತಾದ!

-ಶಂಕರೇಗೌಡ ತುಂಬಕೆರೆ

***

ಯಾವ್ ಕಾರ್...

ತಿಪ್ಪೇಸಿ ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಾ ಆರಾಮಾಗಿ ಕುತಿದ್ದ. ಮೊಬೈಲ್ ರಿಂಗಾಯ್ತು. ಇರುಸುಮುರುಸಿನಿಂದ 'ಹಲೋ, ಕಾರ್ ಡೈವಿಂಗ್ ಮಾಡ್ತಿದ್ದೇನೆ. ಅಮೇಲೆ ಮಾಡ್ರಿ' ಎನ್ನುತ್ತಲೇ ಕಟ್ ಮಾಡಿದ. ಕೆಲ ನಿಮಿಷದ ನಂತರ ಮತ್ತೆ ಮೊಬೈಲ್ ರಿಂಗ್ ಆಯಿತು. ಡ್ರೈವಿಂಗ್ ನಲ್ಲಿದ್ದೇನೆ, ಆ ಮೇಲೆ ಕಾಲ್ ಮಾಡಿ ಅಂತ ಹೇಳಿಲ್ಲವಾ?’ ಎನ್ನುತ್ತಾ ಮತ್ತೆ ಕಟ್ ಮಾಡಿದ. ಒಂದೇ ನಿಮಿಷದಲ್ಲಿ ಲ್ಯಾಂಡ್ ಲೈನ್ ಫೋನ್ ರಿಂಗಾಯಿತು. ತಿಪ್ಪೇಸಿ ಅನಾಮಿಕ ಕರೆಗೆ 'ಡೈವಿಂಗ್‌ನಲ್ಲಿದ್ದೇನೆ ಆಮೇಲೆ ಮಾಡ್ರಿ' ಎನ್ನುತ್ತಾ ಫೋನ್ ಇಡಲು ಅನುವಾದ. ಅತ್ತ ಕಡೆಯಿಂದ, 'ನಾನ್ರಿ, ಗೊತ್ತಾಗಿಲ್ಲವ್ವಾ! ನಿಮ್ಮ ಬಾಸು... ಲ್ಯಾಂಡ್‌ಲೈನ್ ಫೋನ್ ಎತ್ತಿ ಡೈವಿಂಗ್ ಮಾಡ್ತಿದ್ದೀನಿ ಅಂತೀರಲ್ಲ... ಅದು ಯಾವ ಕಾರು?' ಎನ್ನುತ್ತಿದ್ದಂತೆ ತಿಪ್ಪೇಸಿ ಬೆವರಲು ಪ್ರಾರಂಭಿಸಿದ.

-ರಾಮಕೃಷ್ಣ ಗೋಖಲೆ

ಕಲೆ: ಗಣೇಶ ಆಚಾರ್ಯ

(‘ಮಯೂರ’ ಸೆಪ್ಟೆಂಬರ್ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)