ಸ್ವಂತ!
ಯಾವಾಗಲೂ ಯಾರಾದರೂ ಸಂಬಂಧಿಕರು ಪರಸ್ಪರ ಸಿಕ್ಕಾಗ, 'ಇವರು ಅವರ ಸ್ವಂತ ಅಕ್ಕ'. 'ಅವರು ಇವರ ಸ್ವಂತ ಅಣ್ಣ' ಅಂತೆಲ್ಲಾ ಪರಿಚಯಿಸುವುದನ್ನು ಗಮನವಿಟ್ಟು ನೋಡುತ್ತಿದ್ದ ಪುಟಾಣಿ ಒಂದಿನ ಅಮ್ಮ-ಅಪ್ಪನ ಜೊತೆ ವಾಕಿಂಗ್ ಹೋಗ್ತಿದ್ದಳು. ದಾರಿಯಲ್ಲಿ ತನ್ನ ಅಪ್ಪನ ಜೊತೆ ಕೆಲಸ ಮಾಡುವ ಸಹೋದ್ಯೋಗಿಯೊಬ್ಬರು ಎದುರಾದರು. ಅಪ್ಪ ಅವರನ್ನು ಪತ್ನಿಗೆ ಪರಿಚಯ ಮಾಡಿ ಕೊಡ್ತ. 'ಇವರು ನಮ್ ಕೊಲೀಗ್ ಸುರೇಶನ ಹೆಂಡ್ತಿ' ಅಂದ ತಕ್ಷಣ. ಪುಟಾಣಿ, 'ಸ್ವಂತನಾ?' ಅಂತ ಕೇಳಿ ಬಿಟ್ಟು. ಆ ಹೆಣ್ಮಕ್ಕಿಬ್ರೂ ಪರಿಚಯ ಮಾಡಿಕೊಳ್ಳೋದೂ ಬಿಟ್ಟು ಅವಾಕ್ಕಾಗಿ ನಿಂತು ಬಿಟ್ಟು.
-ಜ್ಯೋತಿ ರಾಜೇಶ್
***
ಸಮಾನಾರ್ಥ ಪದಗಳು
ಬೇಸಿಗೆ ರಜೆಗೆ ಮೊಮ್ಮಕ್ಕಳು ಮನೆಗೆ ಬಂದಿದ್ದರು. ಒಂದು ಸಂಜೆ ಅವರಿಗಾಗಿ ಕೊಬ್ಬರಿ ಮಿಠಾಯಿ ಮಾಡುತ್ತಿದ್ದೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದವಾಯಿತು. ಎಂಟು ವರ್ಷದ ಮೊಮ್ಮಗಳಿಗೆ. 'ಯಾರು ಬಂದರು ನೋಡು ಬಾಗಿಲು ತೆಗಿ' ಎಂದೆ. ಬಾಗಿಲು ತೆಗೆದು ಬಂದವಳೇ, 'ಅಜ್ಜೀ, ಹಾಸತ್ತೆ ಬಂದಿದ್ದಾರೆ. ಒಳಗೆ ಕೂರಿಸಿದ್ದೀನಿ' ಎಂದಳು. ನಾನು ಆಶ್ಚರ್ಯದಿಂದ ಇದ್ಯಾರು... ನನಗೆ ಗೊತ್ತಿಲ್ಲದ ಹಾಸತ್ತೆ ಯಾರಿರಬಹುದು ಎಂದುಕೊಂಡು ಗಾಬರಿಯಿಂದ ಸ್ಟೌ ಆಫ್ ಮಾಡಿ ಬಂದು ನೋಡಿದೆ. ನನ್ನ ಗೆಳತಿ ವಿನೋದ ಕುಳಿತಿದ್ದಳು. ಆಶ್ಚರ್ಯದಿಂದ 'ಏನ್ರಿ... ವಿನೋದ ನಿಮ್ಮ ಜೊತೆ ಯಾರು ಬಂದರು? ಅದ್ಯಾರೋ ಹಾಸತ್ತೆ ಅಂತ ನನ್ನ ಮೊಮ್ಮಗಳು ಹೇಳಿದಳು?' ಅಂದಾಗ ಅಲ್ಲಿಯೇ ಇದ್ದ ನನ್ನ ಮೊಮ್ಮಗಳು, 'ಇವರಿಗೇ ಅಜ್ಜಿ ನಾನು ಹೇಳಿದ್ದು... ನಾನು ಕನ್ನಡ ವ್ಯಾಕರಣದ ಸಮಾನಾರ್ಥ ಪದಗಳನ್ನು ಓದುತ್ತಿದ್ದೆ. ವಿನೋದ ಅಂದರೆ ಹಾಸ್ಯ
ಅಲ್ಲವಾ ಅದಕ್ಕೆ ವಿನೋದ ಅತ್ತೆಗೆ ಹಾಸ್ಯತ್ತೆ (ಹಾಸತ್ತೆ) ಅಂತ ಹೇಳಿದೆ' ಅಂದಾಗ ಈ ಅಂಗ್ಲ ಮಾಧ್ಯಮದ ಮಕ್ಕಳ ಕನ್ನಡದ ಅರೆಬರೆ ಜ್ಞಾನ ನೋಡಿ ನಗುವಂತಾಯಿತು.
-ಜಯಮಾಲಾ ಪೈ
***
ಬಾಯಾರಿಕೆ
ಮಹಾನ್ ಜಿವುಣಾಗ್ರೇಸಿ ಶೀನಿ ಅಂದು ತನಗೆ ಬಿಡುವಾದಾಗ, ತನ್ನ ಪತ್ನಿ ಪಮ್ಮಿಯನ್ನು ಕರೆದುಕೊಂಡು ಹೋಗಿದ್ದ. ಇಬ್ಬರೂ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಪಮ್ಮಿ. 'ರೀ. ನನಗೆ ತುಂಬಾ ಬಾಯಾರಿಕೆ ಆಗ್ತಿದೆ ಒಂದು ಬಾಟಲ್ ನೀರು ತಂದು ಕೊಡ್ತೀರಾ? ಎಂದು ಕೇಳಿದಳು. ಆಗ ಶೀನಿ, 'ಇಲ್ಲೇ ಹತ್ತಿರದಲ್ಲಿ ಒಳ್ಳೆ ದಹಿ ಕಚೋರಿ ಸಿಗುತ್ತೆ ತಿಂತೀಯಾ?' ಎಂದು ಕೇಳಿದ. ಆಕೆ. 'ರೀ ನಿಮ್ಮ ದಮ್ಮಯ್ಯ ಅದನ್ನು ಮಾತ್ರ ನೆನಪಿಸಬೇಡಿ. ಅದನ್ನು ನೆನಪಿಸಿಕೊಂಡ್ರೆ ಸಾಕು, ನನ್ನ ಬಾಯಿ ತುಂಬಾ ನೀರು ಬರುತ್ತೆ' ಎಂದಳು. ಶೀನಿ, 'ಹಾಗಿದ್ರೆ ಅದನ್ನೇ ಕುಡಿ ಮತ್ಯಾಕೆ ನೀರಿನ ಬಾಟಲ್ ? ದುಡ್ಡು ಬೇರೆ ದಂಡ ಎಂದ.
-ಅರವಿಂದ ಜಿ. ಜೋಷಿ
***
ತಾಸಿನೊಳಗೆ ಮೂರು ರೇಟು...
ಸುಮಾರು ಐವತ್ತು ವರುಷಗಳ ಹಿಂದಿನ ಮಾತು. ಒಂದು ದಿನ ನಮ್ಮಜ್ಜಿ ನೀರು ತರಲು ಹೋಗಿದ್ದಾಗ ದಾರಿಯಲ್ಲಿದ್ದ ಕುಂಬಾರನ ಮನೆ ಮುಂದೆ ಮಡಕೆ ಮಾರುತ್ತಿದ್ದುದನ್ನು ಕಂಡು, ಅದರ ಬೆಲೆ ಕೇಳಿದ್ದಾರೆ. ಅದಕ್ಕವನು ಹನ್ನೆರಡಾಣೆಗೆ ಒಂದು ಎಂದು ಹೇಳಿದ್ದಾನೆ. ಅಜ್ಜಿ ಮನೆಗೆ ಹೋಗಿ ಹಣ ತೆಗೆದುಕೊಂಡು ಬಂದಾಗ, ಅಲ್ಲಿದ್ದ ಇನ್ನೊಬ್ಬರು ಮಡಕೆ ಬೆಲೆ ಕೇಳಿದ್ದಾರೆ. ಅದಕ್ಕವನು ಮುಕ್ಕಾಲು ರೂಪಾಯಿ ಎಂದಿದ್ದಾನೆ. ಮತ್ತೊಬ್ಬರು ಕೇಳಿದಾಗ ಮೂರು ಪಾವಲಿ ಎಂದು ಹೇಳಿದ್ದಾನೆ: ಎಲ್ಲವನ್ನೂ ಕೇಳಿಸಿಕೊಂಡ ನಮ್ಮಜ್ಜಿ ಕೋಪಗೊಂಡು, 'ಅಲ್ಲಪ್ಪಾ, ಆಗಲೇ ನಾನು ಕೇಳಿಕೊಂಡು ಹೋದಾಗ ಹನ್ನೆರಡಾಣೆ ಎಂದು ಹೇಳಿದೆ. ಇನ್ನೊಬ್ಬರಿಗೆ ಮುಕ್ಕಾಲು ರೂಪಾಯಿಯಂತೆ ಕೊಟ್ಟೆ. ಮತ್ತೊಬ್ಬರಿಗೆ ಮೂರು ಪಾವಲಿ ಎಂದು ಹೇಳಿದ್ದೀಯಾ. ಒಂದು ತಾಸಿನೊಳಗೆ ಮೂರು ಬೆಲೆ ಹೇಳಿದ್ದೀಯಾ?' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕವನು, 'ಹನ್ನೆರಡಾಣೆ ಅಂದ್ರೂ, ಮುಕ್ಕಾಲು ರೂಪಾಯಿ ಅಂದ್ರೂ. ಮೂರು ಪಾವಲಿ ಅಂದ್ರೂ ಎಲ್ಲಾ ಒಂದೇ ಕಣಮ್ಮಾ' ಎಂದು ತಿಳಿಹೇಳುವಷ್ಟರಲ್ಲಿ ಸುಸ್ತು.
-ಎಲ್ ಆರ್. ಚಂದ್ರಶೇಖರ್
ಚಿತ್ರ: ಗಣೇಶ ಆಚಾರ್ಯ
(‘ಮಯೂರ’ ಸೆಪ್ಟೆಂಬರ್ ೨೦೨೪ರಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!