ಊರಿನ ಮಧ್ಯದಲ್ಲಿ ನಿಂತಿದ್ದ ಆ ಬೋಳು ಮರ. ಒಮ್ಮೆ ಹಸಿರು ನೆರಳಿನ ರಾಜನಾಗಿತ್ತು. ಇಂದು ಅದರ ಕೊಂಬೆಗಳು ಖಾಲಿ. ಎಲೆಗಳು ನೆಲದ ಮೇಲೆ ಬಿದ್ದ ನೆನಪುಗಳಷ್ಟೇ.ಆ ಮರಕ್ಕೆ ಎಲ್ಲವೂ ಗೊತ್ತು. ಒಮ್ಮೆ ಈ ಊರು ಕೃಷಿಯ ನಂಬಿಕೆಯಲ್ಲಿ ಜೀವಿಸುತ್ತಿತ್ತು. ಗದ್ದೆಗಳಲ್ಲಿ ಹಸಿರಿನ‌ ಉಸಿರು ಓಡಾಡುತ್ತಿದ್ವು. ಬಾವಿಯಲ್ಲಿ ನೀರು ತುಳುಕುತ್ತಿತ್ತು. ಮಕ್ಕಳ ನಗು ಗಾಳಿಯಲ್ಲಿ ತೇಲುತ್ತಿತ್ತು. ಆದರೆ ಒಂದು ದಿನ ನಗರೀಕರಣದ ಹೆಜ್ಜೆ ಊರಿಗೆ ಬಂತು.

ಹಸಿರು ಗದ್ದೆಗಳು ಕೆಂಪು ಮಣ್ಣಿಗೆ ಮಾರಾಟವಾದವು. ಕೃಷಿಯ ಕೈ ಬಿಟ್ಟ ಜನ ದೊಡ್ಡ ಕೆಲಸದ ಕನಸು ಹಿಡಿದು ಊರನ್ನು ಬಿಟ್ಟರು. ಹೋದವರು ಉಪವಾಸ, ನಿರಾಸೆ ಮೌನಕ್ಕೆ ಆಳುಗಳಾದರು..ಊರಿನಲ್ಲಿ ಉಳಿದವರು ನಿಧಾನವಾಗಿ ನಿಶ್ಯಬ್ದರಾದರು. ಒಂದೊಂದು ಮನೆ ಬಾಗಿಲು ಮುಚ್ಚಿತು, ಒಂದೊಂದು ಬದುಕು ಅನಾಥವಾಯಿತು. ಆ ಮರ ಎಲ್ಲವನ್ನೂ ನೋಡುತ್ತಿತ್ತು.ಅದರ ಎಲೆಗಳು ಒಂದು ಒಂದು ನೆನಪಾಗಿ ಉದುರಿದವು. ಇಂದು ಅದು ಬೋಳಾಗಿದೆ. ಚಿಗುರುವ ಆಸೆಯೇ ಇಲ್ಲದಂತೆ ನಿಂತಿದೆ. ಗಾಳಿ ಬಂದು ಕೇಳಿತು, ಇನ್ನೂ ಬದುಕಬೇಕೆನಿಸುತ್ತಿದೆಯಾ? ಮರ ಮೌನವಾಗಿ ನಿಂತಿತು. ಆ ಮೌನವೇ ಉತ್ತರವಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ