ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇತಿಹಾಸದಲ್ಲೇ ದಾಖಲೆಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಸಲ ಒಟ್ಟಾರೆ ಶೇ.೮೧.೫೮ ಫಲಿತಾಂಶ ದಾಖಲಾಗಿದ್ದರೆ, ಇದೇ ಮೊದಲ ಬಾರಿ ಪಿಯುಸಿ ಪರೀಕ್ಷೆಗೆ ಹಾಜರಾದ ಶೇ.೮೬.೪೮ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪರೀಕ್ಷೆಯನ್ನೇ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿತ್ತು. ಅದು ಬಿಟ್ಟರೆ ಈಗ ಬಂದಿರುವ ಫಲಿತಾಂಶ ಗರಿಷ್ಠವಾದುದು. ಈ ಪರೀಕ್ಷೆಯಲ್ಲಿ ಹಲವು ಕಷ್ಟ, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ವಿದ್ಯಾರ್ಥಿಗಳು ಮಾಡಿರುವ ಸಾಧನೆಯನ್ನು ನೋಡುತ್ತಿದ್ದರೆ, ಹೆಮ್ಮೆಯಾಗುತ್ತದೆ. ಗಮನಾರ್ಹ ಎಂದರೆ, ಈ ಬಾರಿಯೂ ಫಲಿತಾಂಶದಲ್ಲಿ ಹೆಣ್ಣುಮಕ್ಕಳೇ ಮುಂದಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಟ್ಯೂಷನ್, ಆನ್‌ಲೈನ್ ಶಿಕ್ಷಣದಂತಹ ಹಲವು ಸವಲತ್ತುಗಳನ್ನು ಹೊಂದಿರುವ ನಗರ ಪ್ರದೇಶದ ಮಕ್ಕಳನ್ನೇ ಹಿಂದಿಕ್ಕಿದ್ದಾರೆ. ಪಾಸ್ ಅಂಕವನ್ನು ಶೇ.೩೩ಕ್ಕೆ ಇಳಿಕೆ ಮಾಡಿರುವುದರಿಂದ ಈ ಬಾರಿ ಫಲಿತಾಂಶ ಉತ್ತಮವಾಗಿಯೇ ಬರುವ ನಿರೀಕ್ಷೆ ಇತ್ತು. ಆದರೆ ಆ ಅವಕಾಶದಿಂದ ೫೫೭೭ ವಿದ್ಯಾರ್ಥಿಗಳು ಮಾತ್ರವೇ ತೇರ್ಗಡೆ ಹೊಂದಿದ್ದಾರೆ ಎಂಬುದನ್ನು ಬಿಟ್ಟರೆ, ಈ ಬಾರಿ ಫಲಿತಾಂಶ ಉತ್ತಮವಾಗಿದ್ದರ ಹಿಂದೆ ಬೋಧಕ ವರ್ಗದ ಶ್ರಮವನ್ನು ಮರೆಯುವಂತಿಲ್ಲ. ಫಲಿತಾಂಶ ಕಡಿಮೆ ಬಂದಾಗ ದೂಷಣೆಗೆ ಒಳಗಾಗುವ ಉಪನ್ಯಾಸಕರಿಗೆ ಫಲಿತಾಂಶ ಹೆಚ್ಚಳವಾದಾಗ ಅಭಿನಂದನೆ ಸಲ್ಲಲೇಬೇಕು. ಈ ಬಾರಿ ಫಲಿತಾಂಶ ಏರಿಕೆ ಕಾಣಲು ಶಿಕ್ಷಣ, ವ್ಯಾಸಂಗವೇ ಪ್ರಧಾನ ಪ್ರಭಾವ ಬೀರಿರುವುದು ಸ್ಪಷ್ಟ. 

ಬಹುತೇಕ ಸಲ ಪ್ರಥಮ ಸ್ಥಾನದಲ್ಲೇ ಇರುವ ಉಡುಪಿ ಈ ಬಾರಿಯೂ ನಂ.೧ ಪಟ್ಟದಲ್ಲೇ ಇದೆ. ಗಮನಿಸಬೇಕಾದ ಅಂಶವೆಂದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದ್ದರೂ ಅದರ ಸಾಧನೆ ಕಳಪೆಯಾಗಿಯೇನೂ ಇಲ್ಲ. ೨೦೨೫ರಲ್ಲಿ ಶೇ.೨೮ರಷ್ಟು ಫಲಿತಾಂಶ ಪಡೆದಿದ್ದ ಯಾದಗಿರಿಯಲ್ಲಿ ಈ ಬಾರಿ ಶೇ.೭೧ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದಾರೆ ಎಂದರೆ, ಫಲಿತಾಂಶದಲ್ಲಿ ಭಾರಿ ಸುಧಾರಣೆಯಾಗಿದೆ ಎಂದೇ ಅರ್ಥ. ಈ ಸಲದ ಪಿಯುಸಿ ಫಲಿತಾಂಶದಲ್ಲಿ ಅವಾಂತರಗಳು ಆಗಲಿಲ್ಲ, ನಕಲು ಮಾಡುವ ಬೆಳವಣಿಗೆಗಳೂ ಇರಲಿಲ್ಲ. ಪರೀಕ್ಷಾ ಕೊಠಡಿಗಳಿಗೆ ವೆಬ್ ಕಾಸ್ಟಿಂಗ್ ಕಣ್ಣಾವಲು ಇಟ್ಟ ಪರಿಣಾಮವದು. ಫಲಿತಾಂಶ ಉತ್ತಮವಾಗಿದ್ದರ ಹಿಂದೆ ಬೋಧಕ ವರ್ಗದ ಶ್ರಮವನ್ನು ಮರೆಯುವಂತಿಲ್ಲ. ಫಲಿತಾಂಶ ಕಡಿಮೆ ಬಂದಾಗ ದೂಷಣೆಗೆ ಒಳಗಾಗುವ ಉಪನ್ಯಾಸಕರಿಗೆ ಫಲಿತಾಂಶ ಹೆಚ್ಚಳವಾದಾಗ ಅಭಿನಂದನೆ ಸಲ್ಲಲೇಬೇಕು. ಹೀಗಾಗಿ ಶಿಕ್ಷಕ ವರ್ಗಕ್ಕೆ ಅಭಿನಂದನೆಗಳು. ಪರೀಕ್ಷೆಯನ್ನು ಗೊಂದಲರಹಿತವಾಗಿ ನಡೆಸಿದ ಶಿಕ್ಷಣ ಇಲಾಖೆಯೂ ಪ್ರಶಂಸೆಗೆ ಅರ್ಹ. ಪರೀಕ್ಷೆ ಪಾಸ್ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಲಹೆ ಪಡೆದು ಒಳ್ಳೆಯ ಕೋರ್ಸ್ ಆರಿಸಿಕೊಂಡು ಮತ್ತಷ್ಟು ಸಾಧನೆ ಮಾಡುವಂತಾಗಲಿ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೦೪-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ