ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಮತದಾನಕ್ಕಷ್ಟೇ ಸೀಮಿತವಾಗದೇ, ಶಾಸನ ರೂಪಿಸುವ ನಿರ್ಣಾಯಕ ಸ್ಥಾನಗಳಲ್ಲಿಯೂ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರಬೇಕು ಎಂಬುದು ದಶಕಗಳ ಅಶಯ. ಇದೀಗ ಮಹಿಳಾ ಮೀಸಲು ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಈ ನಿಟ್ಟಿನಲ್ಲಿ ಒಂದು ಆಶಾದಾಯಕ ಬೆಳವಣಿಗೆ. ಮೂರು ದಿನಗಳ ಕಾಲ ನಡೆಯಲಿರುವ ಈ ಅಧಿವೇಶನ ಕೇವಲ ರಾಜಕೀಯ ಪೈಪೋಟಿಗೆ ವೇದಿಕೆಯಾಗದೆ, ರಾಷ್ಟ್ರದ ಜನಸಂಖ್ಯೆಯ ಅರ್ಧದಷ್ಟಿರುವ ನ್ಯಾಯಸಮ್ಮತ ಹಕ್ಕಿನ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.
ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರವೇಶಿಸಿದರೆ ಆಡಳಿತದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಆ ಶಕ್ತಿಯನ್ನು ಮಹಿಳೆಯರು ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದ ನಂತರ ತಳಮಟ್ಟದ ಆಡಳಿತದಲ್ಲಿ ಉಂಟಾದ ಬದಲಾವಣೆಗಳೇ ಇದಕ್ಕೆ ಸಾಕ್ಷಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರು ಭಾಗಿಯಾದಾಗ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುರಕ್ಷತೆಯಂತಹ ವಿಷಯಗಳು ಹೆಚ್ಚಿನ ಆದ್ಯತೆ ಪಡೆಯುತ್ತವೆ ಎಂಬುದು ಸಾಬೀತಾಗಿದೆ. ಹೀಗಿರುವಾಗ, ಸಂಸತ್ತಿನಲ್ಲಿ ಮತ್ತು ರಾಜ್ಯ ಮಟ್ಟದ ಶಾಸನಸಭೆಗಳಲ್ಲಿ ಅವರಿಗೆ ಶೇ. ೩೩ರಷ್ಟು ಸ್ಥಾನ ಕಲ್ಪಿಸುವುದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.
ಆದರೆ, ಈ ಮಸೂದೆಯ ಹಾದಿ ಅಷ್ಟು ಸುಲಭವಾಗಿಲ್ಲ. ದಶಕಗಳಿಂದಲೂ ಈ ಮಸೂದೆ ಯಾವುದೋ ಒಂದು ಕಾರಣಕ್ಕೆ ನೆನೆಗುದಿಗೆ ಬೀಳುತ್ತಲೇ ಬಂದಿದೆ. ಕೆಲವು ಪಕ್ಷಗಳು ಒಳಮೀಸಲಾತಿಯ ಬೇಡಿಕೆ ಇಟ್ಟರೆ, ಇನ್ನು ಕೆಲವು ಪಕ್ಷಗಳು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ. ಈಗಿನ ವಿಶೇಷ ಅಧಿವೇಶನದಲ್ಲೂ ಅಂತಹುದೇ 'ರಾಜಕೀಯ ಕೆಸರೆರಚಾಟ' ಮುಂದುವರಿದರೆ ಅದು ಮಹಿಳಾ ಸಮುದಾಯಕ್ಕೆ ಮಾಡುವ ದ್ರೋಹವಾಗುತ್ತದೆ. ಈ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಸಿದ್ಧಾಂತ ಅಥವಾ ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು, ರಾಷ್ಟ್ರದ ಹಿತದೃಷ್ಟಿಯಿಂದ ಒಮ್ಮತಕ್ಕೆ ಬರಬೇಕಿದೆ.
ಮಹಿಳಾ ಮೀಸಲು ಮಸೂದೆ ಜಾರಿಯ ನಿಟ್ಟಿನಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ. ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿಯಂತಹ ತಾಂತ್ರಿಕ ಪ್ರಕ್ರಿಯೆಗಳ ನೆಪದಲ್ಲಿ ಮಸೂದೆಯ ಅನುಷ್ಠಾನ ಮತ್ತೆ ವಿಳಂಬವಾಗಬಾರದು. ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಮೀಸಲಾತಿ ಕೇವಲ 'ಅಲಂಕಾರಿಕ ಪ್ರಾತಿನಿಧ್ಯವಾಗದೆ. ನೈಜವಾಗಿ ಮಹಿಳೆಯರನ್ನು ಸಬಲೀಕರಿಸುವಂತಿರಬೇಕು. ಮಹಿಳೆಯರ ಹೆಸರಿನಲ್ಲಿ ಪುರುಷರು ಅಧಿಕಾರ ಚಲಾಯಿಸುವ ಸ್ಥಿತಿ ನಿರ್ಮಾಣವಾಗದಂತೆ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳಿರಬೇಕು.
ಮಹಿಳಾ ಮೀಸಲು ಕೇವಲ ಮಹಿಳೆಯರಿಗೆ ಸಂಬಂಧಿಸಿದ ವಿಷಯವು, ಇದು ಭಾರತದ ಪ್ರಜಾಪ್ರಭುತ್ವದ ಪರಿಪಕ್ಷತೆಯನ್ನು ಅಳೆಯುವ ಮಾಪನ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಈ ಐತಿಹಾಸಿಕ ಮಸೂದೆಗೆ ಜೀವ ತುಂಬಬೇಕು. ಸಂಸತ್ತಿನಲ್ಲಿ ನಡೆಯುವ ಚರ್ಚೆಯು ಗಂಭೀರತೆಯಿಂದ ಕೂಡಿರಲಿ ಮತ್ತು ಅದು ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವಂತಿರಲಿ, ರಾಜಕೀಯ ಲಾಭಕ್ಕಾಗಿ ಈ ಸದುದ್ದೇಶದ ಮಸೂದೆಯನ್ನು ಬಲಿ ಕೊಡಬಾರದು. ಈ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಲಿಂಗ ಸಮಾನತೆಯ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲಿ,
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೪-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!