ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ (ಎಪ್ರಿಲ್ ೧೫) ಆಚರಿಸುತ್ತಿದ್ದೇವೆ. ಜಗಕೆಲ್ಲ ಬೆಳಕನ್ನು, ಶಾಖವನ್ನು ನೀಡುವ ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ ಪ್ರವೇಶ ಆಗುವ ಸಮಯದಿಂದ ಸೌರಮಾನ ಯುಗಾದಿ ಆರಂಭ ಅಥವಾ ಆಚರಣೆ. ಅದೃಷ್ಟ ಹಾಗೂ ಸುಖ ಸಮೃದ್ಧಿ, ಶಾಂತಿಯ ಸಂಕೇತವೇ 'ಈ ವಿಷು' ಎಂದು ಹೇಳುತ್ತಾರೆ. ಸಂಸ್ಕೃತಿ ಸಂಪ್ರದಾಯ, ಆಚರಣೆ ಎಲ್ಲಾ ಒಂದು ಬೆಸುಗೆಯಂತೆ. ಹಬ್ಬಗಳ ಮಹತ್ವ ನಮ್ಮ ಮಕ್ಕಳಿಗೂ ಅರಿವಾಗಬೇಕಲ್ಲವೇ?
ಕರಾವಳಿ ಭಾಗದ ಜನರಿಗೆ ಅತ್ಯಂತ ವಿಶೇಷ ಹಬ್ಬ. ತುಳುನಾಡಿನ 'ಬಿಸುಪರ್ಬ'. ಹಾಗೆಯೇ ಕೇರಳ, ತಮಿಳುನಾಡು, ಪ.ಬಂಗಾಳ ಮುಂತಾದೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಸೂರ್ಯನ ಶಾಖ, ಬೆಳಕು, ಉಷ್ಣತೆ, ಬುವಿಯ ಜೀವಿಗಳಿಗೆ ಬೇಕೇ ಬೇಕು. ಧನಾತ್ಮಕ ಫಲವನ್ನು ನೀಡುವಂಥ ಸೂರ್ಯನ ಪ್ರಭಾವ ಭೂಮಿಗೆ ಸಾಕಷ್ಟಿದೆ. ವಿಷು ಕಣಿಯ ಮುನ್ನಾದಿನ ದೇವರ ಮನೆಯನ್ನು ಸ್ವಚ್ಛ ಮಾಡಿ, ಕಣಿ ಇಡಲು ಬೇಕಾದ ಎಲ್ಲಾ ವಸ್ತು, ತರಕಾರಿ, ಪಟ್ಟೆ ಬಿಳಿಯ ಬಣ್ಣದ ಶಾಲು (ಉತ್ತರೀಯ) ರೂಢಿಗೆ ಮಾಡಿ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವರ ಕೋಣೆಯನ್ನು ಸಿಂಗರಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಕನ್ನಡಿ ಇಡುವ ಸಂಪ್ರದಾಯ ಇದೆ. ದೀಪ ಉರಿಸಿ, ಬಿಳಿಯ ಬಟ್ಟೆ ದೇವರೆದುರು ಹಾಸಿ ಕ್ರಮವಾಗಿ ಒಂದೊಂದೇ ವಸ್ತುಗಳನ್ನಿಡುತ್ತಾರೆ.
ನಾಣ್ಯಗಳು, ನೋಟುಗಳು, ಬಂಗಾರ ಬೆಳ್ಳಿಯ ಆಭರಣ, ನಾಣ್ಯಗಳು, ಅಕ್ಕಿ, ತೆಂಗಿನಕಾಯಿ, ಲಭ್ಯವಿರುವ ತರಕಾರಿ, ಹಣ್ಣುಗಳು, ಕುಂಕುಮ, ಗಂಧ, ವಿವಿಧ ಹೂಗಳನ್ನು ಎಲ್ಲಾ ಜೋಡಿಸುತ್ತಾರೆ.ಕಕ್ಕೆ (ಕೊನ್ನೆ) ಹೂವು ಬಹಳ ವಿಶೇಷವಂತೆ. ಚೀನಿಕಾಯಿ, ಸೌತೆ, ಗೇರುಹಣ್ಣು, ಹಲಸಿನಕಾಯಿ ಸಹ ಇಡುವರು. ಕುಟುಂಬದ ಯಜಮಾನ ಮೊದಲು ಇದನ್ನೆಲ್ಲ, ಮನೆಯವರ ಸಹಕಾರದಿಂದ ಮಾಡುವನು. ದೇವರಿಗೆ ನೈವೇದ್ಯಕ್ಕೆ ಕೆಲವು ಕಡೆ ಕೆಲವು ರೀತಿಯ ಖಾದ್ಯಗಳನ್ನು ಮಾಡುತ್ತಾರೆ. ಬಾಳೆಹಣ್ಣು, ಬೆಲ್ಲ ,ಹಾಲು ವಿಶೇಷ. ಹಸಿ ಗೇರು ಬೀಜ (ಗೋಡಂಬಿ) ಹೆಸರು ಬೇಳೆ ಪಾಯಸ ವಿಶೇಷ.
ಸಿಹಿ ಅಪ್ಪ, ಕಜ್ಜಾಯ ಸಹ ಮಾಡುವರು. ಕೊಟ್ಟೆ ಕಡುಬು, ರಸಾಯನ ಸಹ ಮಾಡುವುದಿದೆ.ಮನೆಯವರೆಲ್ಲ ಒಟ್ಟಾಗಿ ಕಣಿ ನಮಸ್ಕಾರ ಮಾಡಿ, ಮನೆಯ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಹೊಸಬಟ್ಟೆ ಉಡುಗೊರೆ ನೀಡುವ ಸಂಪ್ರದಾಯವಿದೆ. ಬಹುಶಃ ಕೇರಳ ಪ್ರಾಂತ್ಯದಲ್ಲಿ ಉರುಳಿ ಎನ್ನುವ ಅಗಲವಾದ ಪಾತ್ರೆಯಲ್ಲಿ ಈ ಕಣಿ ವಸ್ತುಗಳನ್ನು (ಕನ್ನಡಿ,ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ) ಇಡುವ ಸಂಪ್ರದಾಯವೂ ಇದೆಯಂತೆ. ಪಟಾಕಿ ಸಿಡಿಸಿ ಸಂತಸಪಡುತ್ತಾರೆ. ಗಂಡಸರೆಲ್ಲ ಸಾಂಪ್ರದಾಯಿಕ ಉಡುಪು, ಹೆಂಗಸರು ಸೀರೆ, ಚಿನ್ನಾಭರಣ ಧರಿಸುವರು. ವಸಂತ ಋತುವೆಂದರೆ ಹಸಿರು ಚಿಗುರು, ಸಮೃದ್ಧಿಯ ಸಂಕೇತವೇ ಆಗಿದೆ. ದೇವಾಲಯಗಳಿಗೂ ಹೋಗುವರು. ದೇಶಕ್ಕೆ ,ಜೀವ ಜಗತ್ತಿಗೆ ಆವರಿಸಿರುವ ಕಷ್ಟ-ನಷ್ಟಗಳು, ರೋಗರುಜಿನಗಳು ತೊಲಗಿ ಸುಕ್ಷೇಮ ಉಂಟಾಗಲೆಂದು ಹಾರೈಸೋಣ. ಮನೆಯ ಸದಸ್ಯರು, ವಿವಾಹವಾದ ಹೆಣ್ಣು ಮಗಳ ಸಂಸಾರ ತವರಿಗೆ ಬಂದು ಜೊತೆಯಾಗಿ ಕುಳಿತು ಮಾತು,ನಗು,ಊಟ ಮಾಡಿ ಸಂತಸಪಡುತ್ತಾರೆ.
ಈ ಶುಭದಿನದಂದು ಮನೆಯ ಹೆಣ್ಣು ಮಗಳಿಗೆ ಮೂಗು ಚುಚ್ಚಿಸುವ ಸಂಪ್ರದಾಯವೂ ಇದೆ. ಈ ಸಮಯದಲ್ಲಿ ದೇವಸ್ಥಾನದ ಜಾತ್ರಗಳು,ದೈವ ಕೋಲಗಳು ಇರುವುದಿದೆ. ಮನೆಯ ಸದಸ್ಯರು,ಬಂಧುಗಳೊಂದಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸೋಣ. ಈ ವರ್ಷದ ವಾತಾವರಣದಲ್ಲಿ ಹೊರಗಿನ ಬಿಸಿಲ ಝಳ ವಿಪರೀತವಿದೆ. ಬಿಸಿಯನ್ನು ತಗ್ಗಿಸುವ ಮಳೆರಾಯ ಬೇಗ ಬಂದು ಇಳೆಯನ್ನು ತಂಪುಗೊಳಿಸಲಿ. ಪ್ರಕೃತಿ ಮಾತೆ ನಳನಳಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ, ಸುಖ-ಶಾಂತಿ ನೆಲೆಸಲಿ. ಸೌಹಾರ್ದತೆಯಿರಲಿ. ಕಾಲಕಾಲಕ್ಕೆ ಮಳೆ-ಬೆಳೆಯಾಗಲಿ ರೈತಾಪಿ ವರ್ಗದವರ ಕನಸು ನನಸಾಗಲೆಂದು, ಈ ಸಂದರ್ಭದಲ್ಲಿ, ಗುರುಹಿರಿಯರಲ್ಲಿ, ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳೋಣ.
(ಸಂಗ್ರಹ) ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!