ಜಪಾನ್ ಪುಟ್ಟ ದೇಶವಾದರೂ ಅಲ್ಲಿಯ ಜನರ ಆಚಾರ ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಆಹಾರ, ಪ್ರವಾಸಿ ಸ್ಥಳಗಳು ಎಲ್ಲವೂ ಭಿನ್ನ ಭಿನ್ನ. ಪ್ರಪಂಚ ಎಷ್ಟೇ ಮುಂದುವರೆದರೂ ಜಪಾನೀಯರು ತಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಮರೆತಿಲ್ಲ. ಹಿಂದಿನ ಕಾಲದ ಸಂಸ್ಕೃತಿಯೊಂದಿಗೇ ಇಂದಿನ ಕಾಲದ ತಂತ್ರಜ್ಞಾನವನ್ನೂ ಮೇಳೈಸಿ ಅದ್ಭುತ ಜೀವನವನ್ನು ಸಾಗಿಸುತ್ತಿದ್ದಾರೆ. 

ನಿಮಗೊಂದು ಅಪರೂಪದ ಸಂಗತಿ ಗೊತ್ತಾ? ಜಪಾನ್ ದೇಶದಲ್ಲಿ ಹೆಚ್ಚಿನವರು ಯಾರೂ ಸಹಿ ಮಾಡೋದೇ ಇಲ್ಲ. ಅವರೆಲ್ಲಾ ಅನಕ್ಷರಸ್ಥರಾ ಎಂದು ಕೇಳಲು ಹೋಗಬೇಡಿ. ಅವರಿಗೆ ಸಹಿ ಮಾಡಲು ನಮ್ಮಂತೆ ಪೆನ್ ಅಗತ್ಯ ಇಲ್ಲ. ಅವರ ಬಳಿ ‘ಹ್ಯಾಂಕೊ’ (Hanko) ಮುದ್ರೆ ಇದೆ. ಜಪಾನ್ ದೇಶದಲ್ಲಿ ಬಹುತೇಕರು ತಮ್ಮದೇ ಆದ ‘ಹ್ಯಾಂಕೊ’ ಮುದ್ರೆಯನ್ನು ಹೊಂದಿರುತ್ತಾರೆ. ಜಪಾನಿಗರ ಹೆಸರನ್ನು ಕಾಂಜಿ ಎಂಬ ಅಕ್ಷರಗಳಿಗೆ ಅನುವಾದಿಸಿ ಈ ರೀತಿಯ ಮುದ್ರೆಗಳನ್ನು ತಯಾರಿಸಲಾಗುತ್ತದೆ. ರೇಷ್ಮೆ ಅಥವಾ ಇನ್ನಿತರ ಗಿಡಗಳ ಅಂಟಿನಿಂದ ಅಥವಾ ಪೇಸ್ಟ್ ನಿಂದ ಈ ಮುದ್ರೆಗಳನ್ನು ತಯಾರಿಸಲಾಗುತ್ತದೆ. 

ಜಪಾನಿಗರು ಸಾಮಾನ್ಯವಾಗಿ ಮೂರು ಬಗೆಯ ಹ್ಯಾಂಕೊಗಳನ್ನು ಹೊಂದಿರುತ್ತಾರೆ. ಒಂದು ಪತ್ರಗಳಿಗೆ ಸಹಿ ಮಾಡಲು, ಎರಡನೆಯದ್ದು ವೈಯಕ್ತಿಕ ವಿಷಯಗಳಿಗೆ ಸಹಿ ಮಾಡಲು ಮತ್ತು ಮೂರನೆಯದ್ದು ಬ್ಯಾಂಕ್ ಅಥವಾ ಗುರುತಿನ ಪತ್ರಗಳಿಗೆ ಸಹಿ ಮಾಡಲು ವಯಸ್ಕರು ಈ ಮೂರು ಮುದ್ರೆಗಳನ್ನು ಬಳಸುತ್ತಾರೆ. ಜಪಾನ್ ದೇಶಕ್ಕೆ ಪ್ರವಾಸ ಹೋದವರಿಗೆ ಹ್ಯಾಂಕೊ ಮುದ್ರೆಯ ಅಗತ್ಯವಿಲ್ಲ. ಅವರು ಪೆನ್ ನಲ್ಲೇ ಸಹಿ ಮಾಡಬಹುದಾಗಿದೆ. ಹಾಗಾದರೆ ಜಪಾನ್ ದೇಶದಲ್ಲಿ ಯಾರೂ ಸಹಿ ಮಾಡುವುದೇ ಇಲ್ಲವೇ? ಮಾಡುತ್ತಾರೆ. ಪುಟ್ಟ ಪುಟ್ಟ ಅಂಗಡಿಗಳನ್ನು ನಡೆಸುವವರು, ಜಪಾನ್ ನಲ್ಲಿ ನೆಲೆ ನಿಂತ ವಿದೇಶಿಯರು ಪೆನ್ ಬಳಸಿ ಸಹಿ ಮಾಡುತ್ತಾರೆ. 

ನಮ್ಮ ದೇಶದಲ್ಲೂ ಮುದ್ರೆಯನ್ನು ಅಧಿಕೃತವಾಗಿ ಸಹಿ ಎಂದು ಘೋಷಿಸಿದರೆ ನಮ್ಮೆಲ್ಲರ ಬಳಿಯೂ ಎರಡು ಮೂರು ಹ್ಯಾಂಕೊ ರೀತಿಯ ಮುದ್ರೆಗಳು ಇರುತ್ತಿದ್ದವೋ ಏನೋ? ಸಿಕ್ಕ ಸಿಕ್ಕಲ್ಲಿ ಮುದ್ರೆಯೊತ್ತುತ್ತಾ ಇರಬಹುದಿತ್ತು ಅಲ್ಲವೇ? ಈಗಂತೂ ಡಿಜಿಟಲ್ ದುನಿಯಾ ಆದಬಳಿಕ ಡಿಜಿಟಲ್ ಸಹಿಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಇನ್ನು ಭವಿಷ್ಯದಲ್ಲಿ ಏನೆಲ್ಲಾ ಬರುತ್ತದೆಯೋ? ಭಗವಂತನಿಗೇ ಗೊತ್ತು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ