ಬದುಕು ಸುಂದರ ಎನಿಸಬೇಕಾದರೆ ಪ್ರತಿ ವ್ಯಕ್ತಿಗೂ ತಮ್ಮದೇ ಆದ ಒಂದು ಗುರಿ ಇರಬೇಕೆಂದು ನನ್ನ ಅಭಿಪ್ರಾಯ. ಅವರವರು ಇಷ್ಟ ಪಡುವ ಕೆಲಸ ಮಾಡುವ ಅವಕಾಶ ಪ್ರತಿ ವ್ಯಕ್ತಿಗೂ ದೊರೆತರೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಒಂದು ದೊಡ್ಡ ಹೆಜ್ಜೆ ಇಟ್ಟಂತೆ ಆಗುತ್ತದೆ. ಆದರೆ ಸಾಮಾನ್ಯ ಮನುಷ್ಯರು ಮಾಡುವಂತಹ ಕೆಲಸಗಳನ್ನೆಲ್ಲ ಒಂದು ಯಂತ್ರ ಮಾಡುವಾಗ ಸಾಮಾನ್ಯ ಮನುಷ್ಯ ತನ್ನ ಸಮಯವನ್ನು ಹೇಗೆ ಕಳೆಯಬೇಕು? ಸಂಪಾದನೆಗೆ ದಾರಿಯನ್ನು ಹೇಗೆ ಹುಡುಕಿಕೊಳ್ಳಬೇಕು? ಪೇಟೆಯಲ್ಲಿರುವ ಜನರ ಕೊಳ್ಳುವ ಶಕ್ತಿಯು ಕೂಡ ಅವರ ಉದ್ಯೋಗವನ್ನೇ ಅವಲಂಬಿಸಿರಬೇಕಾದರೆ ಆರ್ಥಿಕ ವ್ಯವಸ್ಥೆ ಕೂಡ ಹದಗೆಡಬಹುದಲ್ಲವೇ. ನಮ್ಮ ಮಕ್ಕಳಿಗೆ ಏನನ್ನು ಓದಲು ಹೇಳಬೇಕು? ಯಾವುದನ್ನು ಓದಬೇಕಾದರೂ ಲಕ್ಷಾಂತರ ಹಣ ವೆಚ್ಚವಾಗುತ್ತದೆ. ಆದರೆ ಎಲ್ಲಾ ಮಕ್ಕಳಿಗೂ ಹೋಗಲಿ ಪ್ರತಿಭಾವಂತ ತಕ್ಕ ಕೌಶಲ್ಯ ಹೊಂದಿದ ಮಕ್ಕಳಿಗೆ ಉದ್ಯೋಗವಾದರೂ ಸಿಗುವ ಖಾತ್ರಿ ಇದೆಯೇ ಇಲ್ಲ. ಹತ್ತಾರು ವರ್ಷಗಳ ಕಾಲ ಸಂಗೀತ ಕಲಿತು ಅದನ್ನು ತಪಸ್ಸಿನಂತೆ ಸ್ವೀಕರಿಸಿದ ಯುವ ಜನತೆಯ ಹಾಡುವ ಅಥವಾ ವಾದ್ಯ ಸಂಗೀತ ನುಡಿಸುವ ವಿಡಿಯೋ ಗಳನ್ನು ಕೇಳಿ ಆನಂದಿಸುವ ಬದಲು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಸಂಗೀತವೇ ತಿಳಿಯದ ಮನುಷ್ಯರು ತಯಾರಿಸಿದ ವಿಡಿಯೋಗಳಿಗೆ ಲಕ್ಷಾಂತರ ವೀಕ್ಷಣೆ ಆಗುವಾಗ ನನಗೆ ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾಗುತ್ತದೆ. ಕ್ಲಿಷ್ಟಕರವಾದ, ಮನುಷ್ಯರಿಂದ ಅಸಾಧ್ಯವಾದ ಕೆಲಸಗಳನ್ನು ಮಾಡಲು ಮಾತ್ರ ಕೃತಕ ಬುದ್ಧಿಮತ್ತೆ ಯನ್ನು ಉಪಯೋಗಿಸಿ ಉಳಿದ ಕೆಲಸಗಳನ್ನು ಮನುಷ್ಯರೇ ಮಾಡಲು ಅವಕಾಶ ದೊರೆತರೆ ಎಷ್ಟು ಚಂದ ಎನಿಸುವುದು ನನ್ನ ತಪ್ಪೇ?