"The Company" ಎಂಬ ಈ ಪುಸ್ತಕವು ಸಣ್ಣದಾದರೂ ಪ್ರಬುದ್ಧವಾದ ಓದು. ಇದು "ಕಂಪನಿ" ಎಂಬ ಕಲ್ಪನೆಯು ಹೇಗೆ ಹುಟ್ಟಿತು, ಹೇಗೆ ಬೆಳೆಯಿತು, ಹಾಗೂ ಹೇಗೆ ಜಗತ್ತನ್ನೇ ಬದಲಾಯಿಸಿತು ಎಂಬುದನ್ನು ಸರಳವಾಗಿ ಹೇಳುತ್ತದೆ. ಲೇಖಕರು "The Economist" ಪತ್ರಿಕೆಯ ಸಂಪಾದಕರಾಗಿದ್ದವರು. ಕೇವಲ ೧೯೨ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಲೇಖಕರು ಬರೋಬ್ಬರಿ ೩,೦೦0 ವರ್ಷಗಳ ಕಾರ್ಪೊರೇಟ್ ಇತಿಹಾಸವನ್ನು ಕಥೆಯಂತೆ ಬಿಚ್ಚಿಟ್ಟಿದ್ದಾರೆ.
ಆಧುನಿಕ ಜಂಟಿ ಪಾಲುದಾರಿಕೆಯ (joint-stock) ಕಂಪನಿ ಎಂಬುದು ಮಾನವನ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ‘ಕಂಪೆನಿ’ಗಳಿಲ್ಲದೆ ಆಧುನಿಕ ಜಗತ್ತನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗದು. ಲೇಖಕರು ಮುನ್ನುಡಿಯಲ್ಲೇ ಒಂದು ವಿಷಯ ಹೇಳುತ್ತಾರೆ — ‘ಕಂಪೆನಿ’ಯ ಕಥೆಯೇ ಆರಂಭವಾಗುವುದು ೧೧ ಅಕ್ಟೋಬರ್ ೧೬೦೧ರ ದಿನದಿಂದ — ಅಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೊದಲ ಹಡಗುಗಳು ಸುಮಾತ್ರಾ ತಲುಪಿದ ದಿನ.
ಪುಸ್ತಕದಲ್ಲಿ ಒಟ್ಟು ೮ ಅಧ್ಯಾಯಗಳಿವೆ:
Merchants and Monopolists, 3000 B.C.–A.D. 1500 — ಪ್ರಾಚೀನ ವ್ಯಾಪಾರಿ ಗುಂಪುಗಳು
Imperialists and Speculators, 1500–1750 — ಚಾರ್ಟರ್ಡ್ ಕಂಪನಿಗಳ ಯುಗ
A Prolonged and Painful Birth, 1750–1862 — ಆಧುನಿಕ ಕಂಪನಿಯ ಜನನ
The Rise of Big Business in America, 1862–1913
The Rise of Big Business in Britain, Germany, and Japan, 1850–1950
The Triumph of Managerial Capitalism, 1913–1975
The Corporate Paradox, 1975–2002
Agents of Influence: Multinationals
ಭಾರತೀಯ ಓದುಗನಿಗೆ ಅತಿ ಮುಖ್ಯವಾದದ್ದು ೨ ಮತ್ತು ೩ನೇ ಅಧ್ಯಾಯಗಳು — ಏಕೆಂದರೆ ಈ ಎರಡು ಅಧ್ಯಾಯಗಳಲ್ಲೇ ಈಸ್ಟ್ ಇಂಡಿಯಾ ಕಂಪನಿಯ ಸಂಪೂರ್ಣ ಕಥೆ ಬರುತ್ತದೆ. ತಮಾಷೆಯೆಂದರೆ, ಈಸ್ಟ್ ಇಂಡಿಯಾ ಕಂಪೆನಿಗೆ "The Honourable Company" ಎಂಬ ಹೆಸರು ಕೊಟ್ಟದ್ದು!
ಲೇಖಕರು ಈಸ್ಟ್ ಇಂಡಿಯಾ ಕಂಪನಿಯನ್ನು "ಪ್ರಪಂಚದ ಮೊದಲ ನಿಜವಾದ ಬಹುರಾಷ್ಟ್ರೀಯ ಕಂಪನಿ" ಎಂದು ಪರಿಗಣಿಸುತ್ತಾರೆ. ಜೊತೆಗೆ ಡಚ್ ಈಸ್ಟ್ ಇಂಡಿಯಾ ಕಂಪನಿ (VOC) — ಇದು ಬ್ರಿಟಿಷ್ ಕಂಪನಿಗಿಂತ ಎರಡು ವರ್ಷ ತಡವಾಗಿ ಆರಂಭವಾದರೂ ಮೊದಲ ೧೦೦ ವರ್ಷ ಬಹಳ ದೊಡ್ಡದಾಗಿತ್ತು — ಇದರ ಬಗ್ಗೆಯೂ ವಿವರವಾಗಿ ಬರೆಯುತ್ತಾರೆ.
ಆರಂಭ ಮತ್ತು ಹೂಡಿಕೆ: ರಾಣಿ ಒಂದನೇ ಎಲಿಜಬೆತ್ನಿಂದ ಚಾರ್ಟರ್ ಪಡೆದು, ಲಂಡನ್ನ ೨೧೮ ವ್ಯಾಪಾರಿಗಳು ಹಣ ಒಟ್ಟುಗೂಡಿಸುತ್ತಾರೆ; ಜೊತೆಗೂಡಿ ಹಣದ ಹೂಡಿಕೆ ಮಾಡುತ್ತಾರೆ. ಲೇಖಕರು ಹೇಳುವಂತೆ, ಮೊದಲಿಗೆ ಸಂಬಾರ ಪದಾರ್ಥಗಳು — ಮೆಣಸು, ಲವಂಗ, ದಾಲ್ಚಿನ್ನಿ — ಇವುಗಳಿಗೆ ಮೀಸಲಾಗಿ ಇದನ್ನು ಶುರು ಮಾಡಲಾಗಿತ್ತು. ಇಂದು ಪೆಟ್ರೋಲಿಯಂ ಎಷ್ಟು ಮುಖ್ಯವೋ, ಅಂದಿನ ದಿನದಲ್ಲಿ ಸಂಬಾರ ಪದಾರ್ಥಗಳು ಅಷ್ಟೇ ಮುಖ್ಯವಾಗಿದ್ದವು ಎಂದು ಲೇಖಕರು ಬರೆಯುತ್ತಾರೆ. ನಂತರ ಇವರು ಬಟ್ಟೆ, ರೇಷ್ಮೆ, ಚಹಾ ಮುಂತಾದವುಗಳಿಗೆ ಡೈವರ್ಸಿಫೈ ಮಾಡಿಕೊಂಡರು.
ಜಂಟಿ ಪಾಲುದಾರಿಕೆಯ (Joint-Stock) ಕಲ್ಪನೆ: ಲೇಖಕರ ಪ್ರಕಾರ ಇಲ್ಲಿಯೇ ಆಧುನಿಕ ಕಂಪನಿ ಎನ್ನುವ ಕಾನ್ಸೆಪ್ಟ್ ಹುಟ್ಟಿದ್ದು. ಒಬ್ಬ ವ್ಯಾಪಾರಿಯ ಒಂದು ಹಡಗು ಮುಳುಗಿದರೆ ಆತನಿಗೆ ಸಂಪೂರ್ಣ ನಷ್ಟ. ಆದರೆ ೨೧೮ ಜನ ಸೇರಿ ಹೂಡಿದ ಹಣದಲ್ಲಿ ಒಂದು ಹಡಗು ಮುಳುಗಿದರೆ ಒಬ್ಬರ ಮೇಲೆ ಅಷ್ಟೊಂದು ನಷ್ಟ ಬೀಳುವುದಿಲ್ಲ. ಎಲ್ಲರೂ ಸಣ್ಣ ಪ್ರಮಾಣದ ರಿಸ್ಕ್ ತೆಗೆದುಕೊಂಡಂತೆ; ಲಾಭ ಬಂದರೆ ಮಾತ್ರ ಎಲ್ಲರಿಗೂ ಪಾಲು. ಆಗ ಹುಟ್ಟಿದ ಒಂದು ಸಣ್ಣ ಕಲ್ಪನೆಯಿಂದ ಇಡೀ ಜಗತ್ತೇ ಬದಲಾಯಿತು ಎನ್ನುವುದು ಲೇಖಕರ ಅಂಬೋಣ.
ವ್ಯಾಪಾರಿಯಿಂದ ಆಡಳಿತಗಾರನಾಗಿ: ವ್ಯಾಪಾರಕ್ಕಾಗಿ ಬಂದ ಕಂಪನಿಯೊಂದು ಇಡೀ ಉಪಖಂಡವನ್ನು ಆಳಿದ್ದು ಜಗತ್ತಿನ ಇತಿಹಾಸದಲ್ಲಿ ಬೇರೆ ಎಲ್ಲಿಯೂ ದಾಖಲಾಗಿಲ್ಲ ಅಥವಾ ತಿಳಿದುಬಂದಿಲ್ಲ. ೧೭೫೭ರ ಬ್ಯಾಟಲ್ ಆಫ್ ಪ್ಲಾಸಿ — ನಿಜವಾಗಿ ಅದು 'ಬ್ಯಾಟಲ್ ಆಫ್ ಪಲಾಶಿ', ಪಲಾಶ ಮರಗಳ ಕಾಡೊಂದಿದ್ದ ಆ ಜಾಗ ಪಲಾಶಿ ಎಂದು ಕರೆಸಿಕೊಳ್ಳುತ್ತಿತ್ತು, ಅದು ಬ್ರಿಟಿಷರ ಬಾಯಿಮಾತಿನಲ್ಲಿ 'ಪ್ಲಾಸಿ' ಎಂದಾಯಿತು — ಅಲ್ಲಿ ನಡೆದ ಯುದ್ಧದ ನಂತರ ರಾಬರ್ಟ್ ಕ್ಲೈವ್ ಬಂಗಾಳದ ಮೇಲೆ ನಿಯಂತ್ರಣ ಸಾಧಿಸಿಬಿಟ್ಟ. ಜಗತ್ತಿನ ಅತ್ಯಂತ ಫಲವತ್ತಾದ ಜಾಗಗಳಲ್ಲಿ ಒಂದಾದ ಈ ಪ್ರಾಂತ್ಯ ಒಂದು ಕಂಪನಿಯ ಕೈಸೇರಿಬಿಟ್ಟಿತು.
ಸ್ವಂತ ಸರ್ಕಾರ: ಅವರು ತಮ್ಮದೇ ಆದ ಒಂದು ಸರ್ಕಾರದಂತೆ ರಚಿಸಿಕೊಂಡು ಬಿಟ್ಟರು. ತಮ್ಮದೇ ಆದ ಸೈನ್ಯ, ತಮ್ಮದೇ ಆದ ನಾಣ್ಯಗಳು, ತಮ್ಮದೇ ಆದ ನ್ಯಾಯಾಲಯಗಳು — ಇವೆಲ್ಲವನ್ನೂ ಕಟ್ಟಿಕೊಂಡರು. ಒಂದು ಕಾಲದಲ್ಲಿ ಈ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವು ಬ್ರಿಟಿಷ್ ಸರ್ಕಾರದ ಸೈನ್ಯಕ್ಕಿಂತ ದೊಡ್ಡದಾಗಿತ್ತಂತೆ!
ಭ್ರಷ್ಟಾಚಾರ ಮತ್ತು "ನಬಾಬ್ಸ್": ಇದೊಂದು ಆಸಕ್ತಿದಾಯಕ ವಿವರ ನೋಡಿ — ಕಂಪನಿಯ ಅಧಿಕಾರಿಗಳಿಗೆ ಸಂಬಳ ಬಹಳ ಕಡಿಮೆ ಇತ್ತು, ಆದರೆ ಖಾಸಗಿ ವ್ಯಾಪಾರ ಮಾಡಲು ಅನುಮತಿ ಇತ್ತಂತೆ. ಇದರಿಂದಾಗಿ ಎಳೆಯ ಬ್ರಿಟಿಷರು ಭಾರತಕ್ಕೆ ಬಂದು ಕೆಲವೇ ವರ್ಷಗಳಲ್ಲಿ ದಿಡೀರ್ ಶ್ರೀಮಂತರಾಗಿ ಲಂಡನ್ಗೆ ಮರಳುತ್ತಿದ್ದರಂತೆ. ಇವರನ್ನು 'ನಬಾಬ್ಸ್' (Nabobs) ಎಂದು ಕರೆಯುತ್ತಿದ್ದರು. ರಾಬರ್ಟ್ ಕ್ಲೈವ್ ಬ್ರಿಟನ್ಗೆ ಹಿಂದಿರುಗಿದಾಗ ಅಲ್ಲಿದ್ದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನಂತೆ. ಬಂಗಾಳದಲ್ಲಿ ಭೀಕರ ಬರಗಾಲವಿದ್ದರೂ (೧೭೭೦) ಕಂಪನಿ ಮಾತ್ರ ತೆರಿಗೆ ಸಂಗ್ರಹಿಸುತ್ತಲೇ ಇತ್ತಂತೆ; ಆಗ ಬಂಗಾಳದಲ್ಲಿ ಸತ್ತ ಜನರ ಸಂಖ್ಯೆ ಸಾವಿರಾರು!
ಸೌತ್ ಸೀ ಬಬಲ್: ಇನ್ನು ೧೭೨೦ರ "ಸೌತ್ ಸೀ ಬಬಲ್" ಬಗ್ಗೆಯೂ ಲೇಖಕರು ಬರೆದಿದ್ದಾರೆ. ಜಗತ್ತಿನ ಮೊದಲ ದೊಡ್ಡ ಷೇರು ಮಾರುಕಟ್ಟೆ ಕುಸಿತದ ಬಗ್ಗೆ ಅವರು ಬರೆಯುತ್ತಾರೆ. ಕಂಪನಿ ಎಂಬ ಈ ಪರಿಕಲ್ಪನೆ ನೂರು ವರ್ಷಗಳ ಕಾಲ ಹೇಗೆ ಜನರ ಅವಗಣನೆಗೆ ಗುರಿಯಾಯಿತು ಮತ್ತು ಜನರು ಕಂಪನಿಗಳನ್ನು ಮೋಸಗಾರಿಕೆಗಾಗಿ ಬಳಸುತ್ತಿರುವ ಸಾಧನವೆಂದು ಹೇಗೆ ನೋಡಲಾರಂಭಿಸಿದರು ಎನ್ನುವುದರ ಬಗ್ಗೆಯೂ ಇಲ್ಲಿ ಉಲ್ಲೇಖವಿದೆ.
ಇನ್ನು, ಈಸ್ಟ್ ಇಂಡಿಯಾ ಕಂಪನಿ ಪತನವಾಗಿದ್ದು ಹೇಗೆ? ೧೮೫೭ರ ಸಿಪಾಯಿ ದಂಗೆ ಬ್ರಿಟಿಷ್ ಸಂಸತ್ತು ಹಾಗೂ ಬ್ರಿಟಿಷ್ ರಾಜಮನೆತನವನ್ನೇ ಹೆದರಿಸಿಬಿಟ್ಟಿತ್ತು. ಹೀಗಾಗಿ ಅವರು ಕಂಪನಿಯ ಆಡಳಿತವನ್ನು ಅಂತ್ಯಗೊಳಿಸಿದರು. ಭಾರತದ ಆಡಳಿತವನ್ನು ರಾಣಿ ವಿಕ್ಟೋರಿಯಾ ನೇರವಾಗಿ ತನ್ನ ಕೈಗೆ ವರ್ಗಾವಣೆ ಮಾಡಿಕೊಂಡಳು. ೧೮೭೪ರಲ್ಲಿ ಕಂಪನಿ ಪೂರ್ಣವಾಗಿ ರದ್ದಾಯಿತು. ವಿಕ್ಟೋರಿಯಾಳ ಈ ಹೆಜ್ಜೆಯ ಬಗ್ಗೆ ಲೇಖಕರು ಒಂದು ಮಾರ್ಮಿಕ ಮಾತು ಬರೆಯುತ್ತಾರೆ — "ಒಂದು ಕಂಪನಿ ಸಾಮ್ರಾಜ್ಯ ಕಟ್ಟಿತು, ಮತ್ತು ಆ ಸಾಮ್ರಾಜ್ಯ ಆ ಕಂಪನಿಯನ್ನೇ ತಿಂದು ಹಾಕಿತು."
ಆಧುನಿಕ ಕಾರ್ಪೊರೇಟ್ ಆಡಳಿತದಲ್ಲೂ ಸಾಕಷ್ಟು ವಿಷಯಗಳು ಈಸ್ಟ್ ಇಂಡಿಯಾ ಕಂಪನಿಯನ್ನು ಹೋಲುತ್ತವೆ ಎಂದು ಲೇಖಕರು ಬರೆಯುತ್ತಾರೆ:
ಮಾಲೀಕ-ಮ್ಯಾನೇಜರ್ ಅಂತರ (Principal-Agent Problem): ನಿರ್ದಿಷ್ಟವಾಗಿ ಮಾಲೀಕ ಹಾಗೂ ಮ್ಯಾನೇಜರ್ ಇವರುಗಳ ನಡುವೆ ಇರುವ ಅಂತರ. ಮಾಲೀಕರಿಗೆ ನಿಜವಾಗಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುವುದು ಬೇಕಿಲ್ಲ; ಮ್ಯಾನೇಜರ್ಗಳು ಕಂಪನಿಯನ್ನು ತಮ್ಮ ಉದ್ದೇಶ ಸಾಧನೆಗೆ ತಕ್ಕಂತೆ ನಡೆಸಿಕೊಂಡು ಹೋದರೆ ಸಾಕು ಎನ್ನುವಂತಾಗುವುದು. ಲಂಡನ್ನಲ್ಲಿ ಮಾಲೀಕರಿದ್ದರೆ, ಭಾರತದಲ್ಲಿ ಮ್ಯಾನೇಜರ್ಗಳಿದ್ದರು.
ಸರ್ಕಾರದ ಸಹಾಯ: ಈಗಲೂ ಎಷ್ಟೋ ಕಂಪನಿಗಳು ಸರ್ಕಾರದ ಬ್ಯಾಕಿಂಗ್ ಇದ್ದರೆ, "Too Big to Fail" (ಮುಳುಗಲು ಸಾಧ್ಯವೇ ಇಲ್ಲದಷ್ಟು ದೊಡ್ಡದು) ಎನ್ನುವಂತೆ ತೋರಿಸಿಕೊಳ್ಳುವುದು ಸಹಜ. ಈಸ್ಟ್ ಇಂಡಿಯಾ ಕಂಪನಿ ಕೂಡ ಹಾಗೇ ಇತ್ತು. ಲೇಖಕರು ಈ ಸಮಸ್ಯೆಯ ಮೊದಲ ಉದಾಹರಣೆ ಇದೇ ಎನ್ನುತ್ತಾರೆ.
ಲಾಭ-ನೈತಿಕತೆಯ ಸಂಘರ್ಷ: ಈಗಲೂ ಕಂಪನಿಗಳಿಗೆ 'ಲಾಭ ಮೊದಲೋ ಅಥವಾ ನೈತಿಕತೆ ಮೊದಲೋ' ಎಂಬುದು ಪರಿಹರಿಸಲಾಗದ ದ್ವಂದ್ವ. ಲಾಭಕ್ಕಾಗಿ ಯಾವುದೇ ಕಂಪನಿ ಎಷ್ಟು ದೂರ ಹೋಗಬಲ್ಲದು ಎಂಬುದನ್ನು ಇದು ತೋರಿಸುತ್ತದೆ.
ಪುಸ್ತಕದ ಕೆಲವು ಒಳ್ಳೆಯ ಅಂಶಗಳು:
ಸರಾಗ ಓದು: ಭಾಷೆ ಸರಳವಾಗಿದೆ ಮತ್ತು ಪುಸ್ತಕ ಚಿಕ್ಕದಾಗಿದೆ. ಒಂದು ವಾರಾಂತ್ಯದಲ್ಲಿ ಓದಿ ಮುಗಿಸಬಹುದಾದಷ್ಟಿದ್ದರೂ ಇದರ ಓದು ಪ್ರಬುದ್ಧವಾಗಿದೆ.
ವಿಶಾಲ ದೃಷ್ಟಿ: ಪ್ರಾಚೀನ ಮೆಸೊಪಟೋಮಿಯಾದಿಂದ ಇಂದಿನ ಮೈಕ್ರೋಸಾಫ್ಟ್ವರೆಗೆ ಎಲ್ಲವನ್ನೂ ಜೋಡಿಸಿ ತೋರಿಸುತ್ತಾರೆ ಲೇಖಕರು.
ಸಮತೋಲನ: ಕಂಪನಿಯ ಒಳಿತು ಹಾಗೂ ಕೆಡುಕುಗಳು — ಇವೆರಡನ್ನೂ ಒಪ್ಪಿಕೊಳ್ಳುತ್ತಾ ಸಮತೋಲನ ಹೇಗೆ ತರಬೇಕೆಂಬುದರ ಬಗ್ಗೆ ಲೇಖಕರು ಗಮನಹರಿಸಿದ್ದಾರೆ.
ಗಮನಿಸಬಹುದಾದ ಮತ್ತಷ್ಟು ವಿಷಯಗಳು:
ಪುಸ್ತಕ ಚಿಕ್ಕದಾದ್ದರಿಂದ ಕೆಲವು ಮುಖ್ಯ ಭಾಗಗಳು ಬಹಳ ಸಂಕ್ಷಿಪ್ತವೆನಿಸಬಹುದು.
ಸಂಪೂರ್ಣ ಪುಸ್ತಕವನ್ನು ಪಾಶ್ಚಾತ್ಯ ದೃಷ್ಟಿಯಿಂದಲೇ ಬರೆಯಲಾಗಿದ್ದು, ಇಲ್ಲಿ ಭಾರತೀಯ, ಚೀನಿ ಅಥವಾ ಆಫ್ರಿಕನ್ ದೃಷ್ಟಿಕೋನ ನಿಮಗೆ ಕಾಣಸಿಗದು.
ವಸಾಹತುಶಾಹಿಯಿಂದ ಸಮಾಜಕ್ಕೆ ಆಗಬಹುದಾದ ಹಾನಿಯ ಬಗ್ಗೆ ಲೇಖಕರು ಸ್ವಲ್ಪ ಉದಾರವಾಗಿಯೇ ಬರೆದಿದ್ದಾರೆ.
ಪುಸ್ತಕ ೨೦೦೩ರಲ್ಲಿ ಪ್ರಕಟವಾದದ್ದರಿಂದ, ಕಳೆದ ೨೦ ವರ್ಷಗಳ ತಂತ್ರಜ್ಞಾನ ಕಂಪನಿಗಳ ಯುಗ — ಅಂದರೆ ಗೂಗಲ್, ಫೇಸ್ಬುಕ್, ಅಮೆಜಾನ್ ಮುಂತಾದವುಗಳ ಗವರ್ನೆನ್ಸ್ ಕುರಿತಾಗಿ ಮಾಹಿತಿ ಇದರಲ್ಲಿಲ್ಲ.
ಭಾರತೀಯರಾಗಿ ನಾವು ಇಂದು ರಿಲಯನ್ಸ್, ಟಾಟಾ, ಇನ್ಫೋಸಿಸ್, ಅಮೆಜಾನ್, ಗೂಗಲ್ ಮುಂತಾದ ದೊಡ್ಡ ಕಂಪನಿಗಳನ್ನು ನೋಡುತ್ತೇವೆ. ನಮ್ಮ ದೇಶ ಸುಮಾರು ೧೦೦ ವರ್ಷ ಒಂದು ಕಂಪನಿಯ ನೇರ ಆಡಳಿತದಲ್ಲಿತ್ತು ಎಂಬುದನ್ನು ಶಾಲೆಯ ಪಠ್ಯದಲ್ಲಿ ಓದಿರುತ್ತೇವೆ. ಆದರೆ ಇವುಗಳ ಅಸಲಿ ಬೇರು ೪೦೦ ವರ್ಷಗಳ ಹಿಂದೆ ಲಂಡನ್ನ ಲೀಡನ್ಹಾಲ್ ಸ್ಟ್ರೀಟ್ನಲ್ಲಿ ಆರಂಭವಾದ ಒಂದು ಕಂಪನಿಯಲ್ಲಿದೆ ಎಂಬುದು ಈ ಪುಸ್ತಕ ಓದುವಾಗ ನಮಗೆ ಮನವರಿಕೆಯಾಗುತ್ತದೆ.
ಭಾರತದ ಇತಿಹಾಸವನ್ನು ಆರ್ಥಿಕ ದೃಷ್ಟಿಯಿಂದ ನೋಡುವುದನ್ನು ಪ್ರಾರಂಭಿಸಲು ಇದೊಂದು ಒಳ್ಳೆಯ ಪುಸ್ತಕ.
ಈ ಪುಸ್ತಕದ ನಂತರ ಓದಬಹುದಾದ ಇನ್ನು ಕೆಲವು ಪುಸ್ತಕಗಳು:
"The Anarchy" — William Dalrymple (ಈಸ್ಟ್ ಇಂಡಿಯಾ ಕಂಪನಿಯ ಆಳವಾದ ಅಧ್ಯಯನ)
"The Honourable Company" — John Keay (ಪೂರ್ಣ ಇತಿಹಾಸ)
ಪುಸ್ತಕದ ಮಾಹಿತಿ:
ಲೇಖಕರು: John Micklethwait ಮತ್ತು Adrian Wooldridge
ಪ್ರಕಾಶನ: Modern Library Chronicles (Random House)
ಪುಟಗಳು: ಸುಮಾರು ೨೩೪
ಪ್ರಕಾರ: ವ್ಯಾಪಾರ ಇತಿಹಾಸ, ಆರ್ಥಿಕ ಚಿಂತನೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!