"ಸರಿ ಹಾಗಾದರೆ," ಮಿಸ್ಟರ್ ಸಮ್ಮರ್ಸ್ ಗಂಭೀರವಾಗಿ ಹೇಳಿದರು, "ನಾವು ಆರಂಭಿಸುವುದು ಒಳಿತು. ಇದನ್ನು ಬೇಗ ಮುಗಿಸಿದರೆ ನಮ್ಮ ಕೆಲಸಗಳಿಗೆ ಮರಳಬಹುದು. ಯಾರಾದರೂ ಬಾರದೇ ಇದ್ದಾರೆಯೇ?"

"ಡನ್‌ಬಾರ್," ಎಂದು ಹಲವರು ಕೂಗಿದರು. "ಡನ್‌ಬಾರ್. ಡನ್‌ಬಾರ್."

ಮಿಸ್ಟರ್ ಸಮ್ಮರ್ಸ್ ತಮ್ಮ ಪಟ್ಟಿಯನ್ನು ಪರಿಶೀಲಿಸಿದರು. "ಕ್ಲೈಡ್ ಡನ್‌ಬಾರ್. ಹೌದು, ಅವನ ಕಾಲು ಮುರಿದಿದೆ ಅಲ್ಲವೇ? ಅವನ ಪರವಾಗಿ ಯಾರು ಚೀಟಿ ಎತ್ತುತ್ತಿದ್ದಾರೆ?"

"ನಾನೇ ಎತ್ತುತ್ತೇನೆ," ಎಂದು ಒಬ್ಬ ಮಹಿಳೆ ಹೇಳಿದಾಗ ಮಿಸ್ಟರ್ ಸಮ್ಮರ್ಸ್ ಅವಳ ಕಡೆ ತಿರುಗಿ ನೋಡಿದರು. "ಹೆಂಡತಿ ಗಂಡನ ಪರವಾಗಿ ಎತ್ತುತ್ತಿದ್ದಾಳೆ," ಎಂದ ಮಿಸ್ಟರ್ ಸಮ್ಮರ್ಸ್, "ನಿಮ್ಮ ಪರವಾಗಿ ಎತ್ತಲು ನಿಮಗೊಬ್ಬ ದೊಡ್ಡ ಮಗನಿಲ್ಲವೇ ಜೇನಿ?" ಮಿಸ್ಟರ್ ಸಮ್ಮರ್ಸ್ ಹಾಗೂ ಹಳ್ಳಿಯ ಪ್ರತಿಯೊಬ್ಬರಿಗೂ ಇದರ ಉತ್ತರ ಚೆನ್ನಾಗಿ ಗೊತ್ತಿತ್ತಾದರೂ, ಲಾಟರಿಯ ಅಧಿಕೃತ ನಿರ್ವಾಹಕನಾಗಿ ಇಂತಹ ಪ್ರಶ್ನೆಗಳನ್ನು ಔಪಚಾರಿಕವಾಗಿ ಕೇಳುವುದು ಅವರ ಕರ್ತವ್ಯವಾಗಿತ್ತು. ಮಿಸೆಸ್ ಡನ್‌ಬಾರ್ ಉತ್ತರಿಸುವವರೆಗೆ ಅವರು ಸೌಜನ್ಯದಿಂದ ಆಸಕ್ತಿ ತೋರಿಸುತ್ತಿರುವಂತೆ ಕಾಯ್ದರು.

"ಹೊರೇಸ್‌ಗೆ ಇನ್ನೂ ಹದಿನಾರರ ಹರೆಯವಷ್ಟೇ," ಮಿಸೆಸ್ ಡನ್‌ಬಾರ್ ವಿಷಾದದಿಂದ ಹೇಳಿದಳು. "ಈ ವರ್ಷ ನನ್ನ ಮುದುಕನ ಪರವಾಗಿ ನಾನೇ ನಿಲ್ಲಬೇಕಾಗಿ ಬಂದಿದೆ."

"ಸರಿ," ಮಿಸ್ಟರ್ ಸಮ್ಮರ್ಸ್ ಹೇಳುತ್ತಾ ತಮ್ಮ ಪಟ್ಟಿಯಲ್ಲಿ ಗುರುತು ಮಾಡಿಕೊಂಡರು. ನಂತರ ಅವರು, "ವ್ಯಾಟ್ಸನ್ ಹುಡುಗ ಈ ವರ್ಷ ಚೀಟಿ ಎತ್ತುತ್ತಿದ್ದಾನೆಯೇ?" ಎಂದು ಕೇಳಿದರು.

ಗುಂಪಿನಲ್ಲಿದ್ದ ಒಬ್ಬ ಎತ್ತರದ ಹುಡುಗ ಕೈ ಎತ್ತಿ, "ಇಲ್ಲಿಯೇ ಇದ್ದೇನೆ," ಎಂದ. "ನನ್ನ ತಾಯಿ ಮತ್ತು ನನ್ನ ಪರವಾಗಿ ನಾನೇ ಎತ್ತುತ್ತಿದ್ದೇನೆ." ಅವನು ಉದ್ವೇಗದಿಂದ ಕಣ್ಣು ಮಿಟುಕಿಸಿ ತಲೆ ತಗ್ಗಿಸಿದಾಗ, ಗುಂಪಿನಿಂದ "ಒಳ್ಳೆಯ ಹುಡುಗ, ಶಾಭಾಶ್" ಮತ್ತು "ನಿಮ್ಮ ತಾಯಿಗೆ ಸಹಾಯ ಮಾಡಲು ಒಬ್ಬ ಗಂಡಸು ಸಿಕ್ಕಿದ್ದು ಸಂತೋಷ" ಎಂಬ ಧ್ವನಿಗಳು ಕೇಳಿಬಂದವು.

"ಸರಿ, ಹಾಗಾದರೆ ಎಲ್ಲರೂ ಬಂದಂತಾಯಿತು. ಓಲ್ಡ್ ಮ್ಯಾನ್ ವಾರ್ನರ್ ಬಂದಿದ್ದಾರೆಯೇ?" ಎಂದು ಮಿಸ್ಟರ್ ಸಮ್ಮರ್ಸ್ ಕೇಳಿದರು.

"ಇದ್ದೇನೆ," ಎಂಬ ಧ್ವನಿ ಕೇಳಿಬಂದಾಗ ಮಿಸ್ಟರ್ ಸಮ್ಮರ್ಸ್ ತಲೆಯಾಡಿಸಿದರು.

ಮಿಸ್ಟರ್ ಸಮ್ಮರ್ಸ್ ಗಂಟಲು ಸರಿಪಡಿಸಿಕೊಂಡು ಪಟ್ಟಿಯ ಕಡೆಗೆ ನೋಡುತ್ತಿದ್ದಂತೆ ಇಡೀ ಗುಂಪಿನಲ್ಲಿ ಇದ್ದಕ್ಕಿದ್ದಂತೆ ನಿಶ್ಯಬ್ದ ಆವರಿಸಿತು. "ಎಲ್ಲರೂ ಸಿದ್ಧರಿದ್ದೀರಾ?" ಅವರು ಕೂಗಿದರು. "ಈಗ ನಾನು ಹೆಸರುಗಳನ್ನು ಓದುತ್ತೇನೆ—ಮೊದಲು ಕುಟುಂಬದ ಯಜಮಾನರು ಬರಬೇಕು—ಮತ್ತು ಪುರುಷರು ಮುಂದೆ ಬಂದು ಪೆಟ್ಟಿಗೆಯಿಂದ ಒಂದು ಕಾಗದವನ್ನು ತೆಗೆದುಕೊಳ್ಳಬೇಕು. ಎಲ್ಲರ ಸರದಿ ಮುಗಿಯುವವರೆಗೆ ಆ ಕಾಗದವನ್ನು ಯಾರೂ ಬಿಚ್ಚಿ ನೋಡದೆ ಕೈಯಲ್ಲೇ ಮಡಚಿ ಹಿಡಿದಿರಬೇಕು. ಎಲ್ಲರಿಗೂ ನಾನು ಹೇಳಿದ್ದು ಸ್ಪಷ್ಟವಾಗಿದೆ ತಾನೆ?"

ಜನರು ಇದನ್ನು ಎಷ್ಟೋ ಬಾರಿ ಮಾಡಿದ್ದರಿಂದ ಅವರು ಈ ಸೂಚನೆಗಳನ್ನು ಅರ್ಧ ಮನಸ್ಸಿನಿಂದಷ್ಟೇ ಕೇಳುತ್ತಿದ್ದರು; ಅವರಲ್ಲಿ ಹೆಚ್ಚಿನವರು ಏನೂ ಮಾತನಾಡದೆ, ತುಟಿಗಳನ್ನು ಒದ್ದೆ ಮಾಡಿಕೊಳ್ಳುತ್ತಾ, ಆಕಡೆ ಈಕಡೆ ನೋಡದೆ ಸುಮ್ಮನೆ ನಿಂತಿದ್ದರು. ನಂತರ ಮಿಸ್ಟರ್ ಸಮ್ಮರ್ಸ್ ತಮ್ಮ ಒಂದು ಕೈಯನ್ನು ಎತ್ತಿ, "ಆಡಮ್ಸ್," ಎಂದರು. ಒಬ್ಬ ವ್ಯಕ್ತಿ ಗುಂಪಿನಿಂದ ಹೊರಬಂದು ಮುಂದೆ ಬಂದನು. "ಹಲೋ ಸ್ಟೀವ್," ಎಂದು ಮಿಸ್ಟರ್ ಸಮ್ಮರ್ಸ್ ಹೇಳಿದರು, ಮತ್ತು ಮಿಸ್ಟರ್ ಆಡಮ್ಸ್ "ಹಲೋ ಜೋ," ಎಂದರು. ಅವರಿಬ್ಬರೂ ಯಾವುದೇ ನಗುವಿಲ್ಲದೆ, ಉದ್ವೇಗದಿಂದ ಪರಸ್ಪರ ಮುಖ ನೋಡಿಕೊಂಡರು. ನಂತರ ಮಿಸ್ಟರ್ ಆಡಮ್ಸ್ ಕಪ್ಪು ಪೆಟ್ಟಿಗೆಯೊಳಗೆ ಕೈಹಾಕಿ ಒಂದು ಮಡಚಿದ ಕಾಗದವನ್ನು ತೆಗೆದರು. ಅದನ್ನು ಒಂದು ಮೂಲೆಯಲ್ಲಿ ಭದ್ರವಾಗಿ ಹಿಡಿದುಕೊಂಡು, ಅವರು ತಕ್ಷಣವೇ ಗುಂಪಿನಲ್ಲಿ ತಮ್ಮ ಜಾಗಕ್ಕೆ ಮರಳಿದರು. ಅವರು ತಮ್ಮ ಕುಟುಂಬದಿಂದ ಸ್ವಲ್ಪ ದೂರದಲ್ಲಿ ನಿಂತುಕೊಂಡರಲ್ಲದೆ, ತಮ್ಮ ಕೈಯಲ್ಲಿದ್ದ ಕಾಗದದ ಕಡೆಗೆ ನೋಡಲೂ ಇಲ್ಲ.

"ಅಲ್ಲೆನ್," ಮಿಸ್ಟರ್ ಸಮ್ಮರ್ಸ್ ಮುಂದಿನ ಹೆಸರು ಕರೆದರು. "ಆಂಡರ್ಸನ್.... ಬೆಂಥಮ್."

"ಒಂದು ಲಾಟರಿ ಮುಗಿದು ಇನ್ನೊಂದಕ್ಕೆ ಸಮಯವೇ ಸಿಗುತ್ತಿಲ್ಲ ಅನ್ನಿಸುತ್ತದೆ," ಎಂದು ಹಿಂಬದಿಯ ಸಾಲಿನಲ್ಲಿದ್ದ ಮಿಸೆಸ್ ಡೆಲಕ್ರಾಯ್ ಮಿಸೆಸ್ ಗ್ರೇವ್ಸ್ ಬಳಿ ಹೇಳಿದಳು.

"ಕಳೆದ ವಾರವಷ್ಟೇ ಇನ್ನೊಂದು ಮುಗಿಸಿದ ಹಾಗೆ ಭಾಸವಾಗುತ್ತಿದೆ."

"ಸಮಯ ನಿಜಕ್ಕೂ ವೇಗವಾಗಿ ಓಡುತ್ತದೆ," ಎಂದಳು ಮಿಸೆಸ್ ಗ್ರೇವ್ಸ್.

"ಕ್ಲಾರ್ಕ್.... ಡೆಲಕ್ರಾಯ್."

"ಅಗೋ ನನ್ನ ಮುದುಕ ಹೊರಟ," ಎಂದಳು ಮಿಸೆಸ್ ಡೆಲಕ್ರಾಯ್. ತನ್ನ ಗಂಡ ಮುಂದೆ ಹೋಗುವಾಗ ಅವಳು ತನ್ನ ಉಸಿರನ್ನೇ ಬಿಗಿಹಿಡಿದು ನೋಡುತ್ತಿದ್ದಳು.

"ಡನ್‌ಬಾರ್," ಮಿಸ್ಟರ್ ಸಮ್ಮರ್ಸ್ ಕರೆದಾಗ ಮಿಸೆಸ್ ಡನ್‌ಬಾರ್ ಸ್ಥಿರ ಹೆಜ್ಜೆಯನ್ನಿಡುತ್ತಾ ಪೆಟ್ಟಿಗೆಯ ಕಡೆಗೆ ನಡೆದಳು. ಗುಂಪಿನಲ್ಲಿದ್ದ ಮಹಿಳೆಯೊಬ್ಬಳು "ಹೋಗು ಜೇನಿ," ಎಂದಳು, ಮತ್ತೊಬ್ಬಳು “ಆಗೋ ಹೊರಟಳು ನೋಡು," ಎಂದಳು.

"ಮುಂದಿನ ಸರದಿ ನಮ್ಮದೇ," ಎಂದಳು ಮಿಸೆಸ್ ಗ್ರೇವ್ಸ್. ಮಿಸ್ಟರ್ ಗ್ರೇವ್ಸ್ ಪೆಟ್ಟಿಗೆಯ ಪಕ್ಕದಿಂದ ಬಂದು, ಮಿಸ್ಟರ್ ಸಮ್ಮರ್ಸ್ ಅವರಿಗೆ ಗಂಭೀರವಾಗಿ ವಂದಿಸಿ, ಪೆಟ್ಟಿಗೆಯಿಂದ ಕಾಗದದ ಚೂರನ್ನು ಆರಿಸಿಕೊಳ್ಳುವುದನ್ನು ಅವಳು ಗಮನಿಸಿದಳು. ಈಗ ಇಡೀ ಗುಂಪಿನಲ್ಲಿದ್ದ ಪುರುಷರು ತಮ್ಮ ದೊಡ್ಡ ಕೈಗಳಲ್ಲಿ ಸಣ್ಣ ಮಡಚಿದ ಕಾಗದಗಳನ್ನು ಹಿಡಿದುಕೊಂಡು ಉದ್ವೇಗದಿಂದ ತಿರುಗಿಸಿ ನೋಡುತ್ತಿದ್ದರು. ಮಿಸೆಸ್ ಡನ್‌ಬಾರ್ ಮತ್ತು ಅವಳ ಇಬ್ಬರು ಗಂಡು ಮಕ್ಕಳು ಒಟ್ಟಿಗೆ ನಿಂತಿದ್ದರು, ಮಿಸೆಸ್ ಡನ್‌ಬಾರ್ ಕೈಯಲ್ಲಿ ಕಾಗದದ ಚೂರಿತ್ತು.