ಮಹಾಭಾರತದ ಪ್ರತಿಯೊಂದು ಮುಖ್ಯ ಪಾತ್ರವೂ ನಮಗೆ ಒಂದೊಂದು ಆಶ್ಚರ್ಯಕರ ಸಂಗತಿಯನ್ನು ತಿಳಿಸುತ್ತದೆ. ಪಾಂಡವರ ಮಾತೆಯಾದ ಕುಂತಿಯ ಪಾತ್ರವೂ ಅಂತಹುದೇ. ಆಕೆಯು ಪುತ್ರಸಂತಾನವನ್ನು ಪಡೆದ ಪ್ರಸಂಗಗಳು ನಂಬಲು ಕಷ್ಟವಾಗುವಂತಹ ಸಂಗತಿಗಳು. ಅವಳು ನಾಲ್ಕು ದೇವತೆಗಳ ಮೂಲಕ ನಾಲ್ಕು ದಿವ್ಯ ಪುತ್ರರನ್ನು ಗರ್ಭ ಧರಿಸದೆಯೇ ಪಡೆಯುತ್ತಾಳೆ ಎನ್ನುವುದು ವೇದವ್ಯಾಸರು ನಮಗೆ ತಿಳಿಸಿರುವ ವಿಷಯ. ಅದನ್ನು ತಿಳಿದಾಗ ಹೀಗೂ ಉಂಟೆ? ಇದು ಸಾಧ್ಯವೇ? ಎಂದು ಯಾರಿಗಾದರೂ ಅನ್ನಿಸದಿರುವುದಿಲ್ಲ. ಪಾಂಡುರಾಜನ ಪತ್ನಿಯಾಗಿ, ಪಾಂಡವರ ತಾಯಿಯಾಗಿಯೂ ಆಕೆಯು ಅನೇಕ ಸಂಕಷ್ಟಗಳಿಗೆ, ಮನೋವೇದನೆಗಳಿಗೆ ಗುರಿಯಾದವಳು. ಆಕೆಯು ಅನೇಕ ಬಾರಿ ದೇವರೇ ನನಗೆ ಕಷ್ಟಗಳನ್ನು ಕೊಡು ಎಂದು ಬೇಡಿದ್ದುಂಟು. ಏಕೆಂದರೆ ಕಷ್ಟ ಬಂದಾಗಲೇ ಅಲ್ಲವೇ ನಾವು ದೇವರನ್ನು ನೆನೆಸುವುದು? ಆದರೆ ತನ್ನ ಕಷ್ಟಗಳನ್ನೂ, ವೇದನೆಗಳನ್ನೂ ಯಾರೊಂದಿಗೂ ಹಂಚಿಕೊಳ್ಳದೇ ತನ್ನದೇ ಆದ ಲೋಕದಲ್ಲಿ ಇರುತ್ತಿದ್ದಳು ಈ ಧೈರ್ಯಶಾಲಿ ಹೆಣ್ಣು. ಅವಳ ಜೀವನದಲ್ಲಿ ಎಂತಹ ಕಷ್ಟಗಳು ಎದುರಾದರೂ ಧೈರ್ಯಗುಂದದೇ ಎದುರಿಸಿ ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಿಸಿ ಬೆಳೆಸಿದವಳು. ಅವಳ ಜೀವನದ ಒಳಹೊಕ್ಕಾಗ ಆಕೆ ಅರಮನೆಯ ವಾಸಕ್ಕಿಂತ ವನವಾಸ ಮತ್ತು ಅರಗಿನ ಮನೆಯ ವಾಸಗಳಲ್ಲೇ ಹೆಚ್ಚು ಸಂತೋಷವಾಗಿದ್ದಳೇನೋ ಎನ್ನುವ ಭಾವನೆ ಮೂಡುತ್ತದೆ.

       ಕುಂತಿಯು ಕೃಷ್ಣನ ತಂದೆಯಾದ ವಸುದೇವನ ಸಹೋದರಿ. ತಂದೆಯಾದ ಶೂರಸೇನನು ಅವಳಿಗೆ ಪೃಥಾ ಎಂದು ನಾಮಕರಣವನ್ನು ಮಾಡುತ್ತಾನೆ. ತನ್ನ ಸೋದರ ಸಂಬಂಧಿಯಾದ, ರಾಜನಾದ ಕುಂತಿಭೋಜನಿಗೆ ಮಕ್ಕಳಿಲ್ಲದ ಕಾರಣ ತನ್ನ ಮಗಳನ್ನು ಸಾಕಿಕೊಳ್ಳುವಂತೆ ಅವನಿಗೆ ನೀಡಿದನು. ಅಂದಿನಿಂದ ಆಕೆ ಕುಂತಿ ಎನ್ನಿಸಿಕೊಂಡಳು. ಕುಂತಿಭೋಜನ ಲಾಲನೆ ಪಾಲನೆಯಲ್ಲಿ ಬೆಳದ ಕುಂತಿಯು ಪ್ರಾಪ್ತವಯಸ್ಕಳಾದಳು. ಬಹುಶಃ ಅವಳ ಸುಖಜೀವನ ಇಲ್ಲಿಗೇ ಮುಗಿದು ಆಕೆಯ ಸಂಕಷ್ಟದ ಪರಂಪರೆ ಪ್ರಾರಂಭವಾಯಿತು ಎನ್ನಬಹುದು.

       ಒಮ್ಮೆ ಕುಂತಿಭೋಜನ ರಾಜ್ಯಕ್ಕೆ ಮಹರ್ಷಿ ದೂರ್ವಾಸರು ಆಗಮಿಸಿ, ಕೆಲವು ಕಾಲ ಅಲ್ಲಿಯೇ ಇದ್ದರು. ದೂರ್ವಾಸರ ಕೋಪದ ಬಗ್ಗೆ ಅರಿವಿದ್ದ ರಾಜನು ಅವರಿಗೆ ಯಾವ ಲೋಪವೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮಗಳಾದ ಕುಂತಿಗೆ ನೀಡಿದನು. ಕುಂತಿಯು ಪೂರ್ಣ ಶ್ರದ್ಧೆಯಿಂದ ತನುಮನಗಳನ್ನು ತೊಡಗಿಸಿಕೊಂಡು ಅವರ ಸೇವೆಯನ್ನು ಮಾಡಿ ಅವರಿಗೆ ಯಾವ ಲೋಪವೂ ಆಗದಂತೆ ನೋಡಿಕೊಂಡಳು. ಇದರಿಂದ ಪ್ರಸನ್ನಗೊಂಡ ದೂರ್ವಾಸರು ಅವರು ಹೊರಡುವ ದಿನ ಕುಂತಿಯನ್ನು ಕರೆದು “ಮಗಳೇ, ನಿನ್ನ ಸಮರ್ಪಿತ ಸೇವೆಯಿಂದ ನನಗೆ ಬಹಳ ಸಂತಸವಾಗಿದೆ. ಅದಕ್ಕೆ ಪ್ರತಿಯಾಗಿ ನಿನಗೆ ಒಂದು ವರವನ್ನು ನೀಡುತ್ತೇನೆ. ಅದೇನೆಂದರೆ ನಿನಗೆ ದೇವತಾ ಪುರುಷರಿಂದ ಸಂತಾನ ಪಡೆಯುವಂತಹ ಮಂತ್ರಗಳನ್ನು ಉಪದೇಶಿಸುತ್ತೇನೆ. ಆ ಮಂತ್ರಗಳಲ್ಲೊಂದನ್ನು ಪಠಿಸಿದೊಡನೆ ನೀನು ಕೋರಿದ ದೇವತೆಯು ಪ್ರಕಟವಾಗಿ ನಿನಗೆ ದಿವ್ಯ ಪುತ್ರನನ್ನು ಅನುಗ್ರಹಿಸುತ್ತಾನೆ” ಎಂದು ತಿಳಿಸಿ ಮಂತ್ರೋಪದೇಶವನ್ನು ಮಾಡಿದರು. ಒಬ್ಬ ಕನ್ಯೆಗೆ ಇಂತಹ ಮಂತ್ರವನ್ನು ಉಪದೇಶಿಸುವ ಪ್ರಮೇಯವೇನು ಎನ್ನುವುದು ಯೋಚಿಸಬೇಕಾದ ವಿಷಯ. ಅವಳು ಮುಂದೆ ಮದುವೆಯಾಗಿ ತನ್ನ ಪತಿಯಿಂದ ಸಂತಾನವನ್ನು ಪಡೆಯಬಹುದಿತ್ತು. ಇದಕ್ಕೆ ಯಾವ ಅಡ್ಡಿ ಆತಂಕಗಳೂ ಆ ಸಮಯದಲ್ಲಿ ಕಾಣಿಸಿರಲಿಲ್ಲ. ಆದರೂ ಅವಳಿಗೆ ಅಂತಹ ವರವನ್ನು ಏಕೆ ನೀಡಿದರು ಎನ್ನುವ ಪ್ರಶ್ನೆ ಮೂಡುವುದು ಸಹಜ. ಮುಂದೆ ಪತಿಯಿಂದ ಸಂತಾನವನ್ನು ಪಡೆಯುವ ಭಾಗ್ಯವು ಆಕೆಗೆ ಬರುವುದಿಲ್ಲ ಎಂದು ಅವರು ತಮ್ಮ ದಿವ್ಯಜ್ಞಾನದಿಂದ ಅರಿತಿರಬಹುದು. ಆದ್ದರಿಂದ ಈ ಅನುಗ್ರಹದ ಮೂಲಕ ಅವಳು ಸಂತಾನವನ್ನು ಪಡೆಯಲಿ ಎಂದು ಯೋಚಿಸಿರಬಹುದು. 

ಪೂಜ್ಯರಿಂದ ವರಗಳನ್ನು ಪಡೆದರೂ ಕುಂತಿಗೆ ಇಂತಹ ವರವು ತನಗೇಕೆ ಎಂದು ಅರ್ಥವಾಗುವುದಿಲ್ಲ. ಈ ವರವು ನಿಜಕ್ಕೂ ಫಲಿಸುತ್ತದೆ ಎಂದು ನಂಬಲೂ ಅವಳು ತಯಾರಿರುವುದಿಲ್ಲ. ಈ ವರವು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಪರೀಕ್ಷಿಸಿಯೇ ನೋಡಬೇಕು ಎಂದು ಯೋಚಿಸಿದಳು. ಆದರೆ ಆ ವರವನ್ನು ಪರೀಕ್ಷಿಸಿ ಅದು ನಿಜವಾದರೆ ಎಂತಹ ಪರಿಣಾಮವಾಗಬಹುದು ಎನ್ನುವುದು ಆ ಸಮಯದಲ್ಲಿ ಆಕೆಯ ಮನಸ್ಸಿಗೆ ಬರಲಿಲ್ಲ. ಹಾಗಾಗಿ ಒಮ್ಮೆ ಅರಮನೆಯ ಬಳಿಯಿದ್ದ ನದಿಯ ತಟದಲ್ಲಿದ್ದಾಗ ಆ ಮಂತ್ರವನ್ನು ಪರೀಕ್ಷಿಸೋಣ ಎನ್ನುವ ಆಲೋಚನೆ ಬರುತ್ತದೆ. ಯಾವ ದೇವರನ್ನು ಆಹ್ವಾನಿಸಬೇಕು ಎಂದು ಯೋಚಿಸಿದಾಗ ಆಕಾಶದಲ್ಲಿ ಹೊಳೆಯುತ್ತಿರುವ ಸೂರ್ಯನ ಕಡೆಗೆ ಗಮನವು ಹೋಯಿತು. ಸೂರ್ಯದೇವನನ್ನು ಮನಸ್ಸಿನಲ್ಲಿಟ್ಟುಕೊಂಡು ದೂರ್ವಾಸರು ಬೋಧಿಸಿದ ಒಂದು ಮಂತ್ರವನ್ನು ಪಠಿಸಿದಳು. ಕ್ಷಣದಲ್ಲಿ ಸೂರ್ಯದೇವನು ಅವಳೆದುರು ಸಾಕಾರಗೊಂಡು “ಬಾಲೆ, ನೀನು ದಿವ್ಯಮಂತ್ರವನ್ನು ಪಠಿಸಿ ನನ್ನನ್ನು ಆಹ್ವಾನಿಸಿದ್ದೀಯ. ಈ ಮಂತ್ರದ ಫಲವಾಗಿ ನಾನು ನಿನಗೆ ಒಬ್ಬ ಪುತ್ರನನ್ನು ನೀಡುತ್ತೇನೆ. ಇದರಿಂದ ನಿನ್ನ ಕನ್ಯತ್ವಕ್ಕೆ ಭಂಗವಿಲ್ಲ” ಎಂದನು. ಇಲ್ಲಿ ಏನಾಗುತ್ತಿದೆ ಎಂದು ಕುಂತಿಗೆ ಅರಿವಾಗುವಷ್ಟರಲ್ಲಿ ಆಕೆಯ ಕೈಗಳಲ್ಲಿ ಕರ್ಣಕುಂಡಲ, ಕವಚಧಾರಿಯಾದ ಒಂದು ದಿವ್ಯವಾದ ಹಸುಗೂಸು ಇತ್ತು! ತಾನು ಬಂದ ಕೆಲಸವು ಮುಗಿಯಿತು ಎಂದು ಸೂರ್ಯದೇವನು ಅಂತರ್ಧಾನನಾದನು. ಕುಂತಿಯು ಆ ಮಗುವನ್ನು ನೋಡುತ್ತ ದಿಗ್ಭ್ರಮೆಗೆ ಒಳಗಾದಳು. ಕನ್ಯೆಯಾದ ತಾನು ಈಗ ಒಂದು ಮಗುವಿನ ತಾಯಿಯಾಗಿದ್ದೇನೆ ಎನ್ನುವ ವಿಷಯವನ್ನು ಅರಗಿಸಿಕೊಳ್ಳಲು ಅವಳಿಗೆ ಕಷ್ಟವಾಯಿತು. ಅವಳ ತಲೆಯಲ್ಲಿ ನೂರಾರು ಆಲೋಚನೆಗಳು ಓಡತೊಡಗಿದವು. ಇದು ಬೇರೆಯವರಿಗೆ ಗೊತ್ತಾದರೆ ತನ್ನ ಜೀವನವೇ ಹಾಳಾಗುತ್ತದಲ್ಲ ಎನ್ನುವ ಯೋಚನೆಯು ಬಂದಿತು. ಇತರರಿಗೆ ಗೊತ್ತಾಗದಂತೆ ಕೂಡಲೇ ಆ ಮಗುವನ್ನು ತ್ಯಜಿಸುವ ಬಗೆ ಹೇಗೆ ಎಂದು ಯೋಚಿಸತೊಡಗಿದಳು. ಆಗ ಆಕೆಗೆ ಅದು ತನ್ನ ಮಗು, ತಾನು ಅದರ ತಾಯಿ ಎನ್ನುವ ಯೋಚನೆಗಿಂತ, ಈ ವಿಷಯವು ಯಾರಿಗಾದರೂ ತಿಳಿದರೆ ಗತಿಯೇನು ಎನ್ನುವ ಭಯವೇ ಹೆಚ್ಚಾಗಿತ್ತು. ಲೋಕಾಪವಾದದ ಭೀತಿಯು ಆಕೆಯ ಮನಸ್ಸನ್ನು ಆಕ್ರಮಿಸಿತು. ಕೂಡಲೇ ಒಂದು ಸೂಕ್ತವಾದ, ನೀರಿನಲ್ಲಿ ತೇಲುವಂತಹ ಒಂದು ಪೆಟ್ಟಿಗೆಯಲ್ಲಿ ಮಗುವನ್ನು ಮಲಗಿಸಿ ಹರಿಯುತ್ತಿದ್ದ ನದಿಯಲ್ಲಿ ತೇಲಿಬಿಟ್ಟಳು. ತೇಲುತ್ತಾ ಹೋಗುತ್ತಿದ್ದ ಪೆಟ್ಟಿಗೆಯನ್ನು ನೋಡುತ್ತಿದ್ದ ಅವಳ ಮನಸ್ಸಿನಲ್ಲಿ ಮಾತೃತ್ವವು ಜಾಗೃತವಾಯಿತು. ಅಯ್ಯೋ ನನ್ನ ಮಗುವನ್ನು ಹೀಗೆ ನದಿಯಲ್ಲಿ ತೇಲಿಬಿಟ್ಟೆನಲ್ಲ, ಎಂತಹ ತಾಯಿ ನಾನು ಅನ್ನಿಸುತ್ತದೆ. ಆದರೆ ಅಷ್ಟರಲ್ಲಿ ಕಾಲವು ಮಿಂಚಿರುತ್ತದೆ. ಆ ಪೆಟ್ಟಿಗೆಯು ಕೈಗೆ ಸಿಗಲಾರದಷ್ಟು ದೂರ ಹೋಗಿರುತ್ತದೆ. ಭಾರವಾದ ಮನಸ್ಸಿನಿಂದ ಅರಮನೆಗೆ ಹಿಂತಿರುಗಿದಳು ತಾಯಿ ಕುಂತಿ. ಈ ಮಗುವೇ ಸೂರ್ಯಪುತ್ರ ಕರ್ಣ. ನದಿಯಲ್ಲಿ ಸ್ನಾನಮಾಡುತ್ತಿದ್ದ ಸೂತಕುಲದ ದಂಪತಿಗಳಿಗೆ ಈ ಪೆಟ್ಟಿಗೆಯು ಸಿಕ್ಕಿತು. ಒಳಗಿದ್ದ ದಿವ್ಯಶಿಶುವನ್ನು ನೋಡಿದ ಅವರು ಸಂತಾನಹೀನರಾದ ತಮಗೆ ದೇವರೇ ಈ ರೀತಿಯಾಗಿ ಸಂತಾನವನ್ನು ಕರುಣಿಸಿದ್ದಾನೆ ಎಂದು ಯೋಚಿಸಿ ಆ ಮಗುವನ್ನು ಅತ್ಯಂತ ಪ್ರೀತಿಯಿಂದ ಸಾಕತೊಡಗುತ್ತಾರೆ. ಕರ್ಣನು ಸೂತಪುತ್ರನಾಗಿ, ರಾಧೆಯ ಮಗ ರಾಧೇಯನಾಗಿ ಬೆಳೆಯತೊಡಗುತ್ತಾನೆ. ಕುಂತಿಯು ಅಗಲಿದ ತನ್ನ ಪುತ್ರನನ್ನು ನೆನೆಸಿಕೊಂಡು ಮನದಲ್ಲಿಯೇ ಕೊರಗುತ್ತಿರುತ್ತಾಳೆ. ಆ ಮಗುವು ಹೊಳೆಯಲ್ಲಿ ತೇಲಿಬಂದ ಅನಾಥ ಶಿಶು, ನಾನೇ ಅದನ್ನು ಸಾಕುತ್ತೇನೆ ಎಂದು ಎಲ್ಲರನ್ನು ನಂಬಿಸಿ ಅರಮನೆಯಲ್ಲೇ ತನ್ನ ಮಗುವನ್ನು ಸಾಕಬಹುದಿತ್ತು. ಆದರೆ ದಿಗ್ಭ್ರಮೆಗೊಂಡ ಆಕೆಯ ಮನಸ್ಸಿಗೆ ಈ ಉಪಾಯವು ಹೊಳೆಯಲೇ ಇಲ್ಲ!

ಕಾಲಕ್ರಮೇಣ ಕುಂತಿಯು ಪಾಂಡುರಾಜನನ್ನು ವಿವಾಹವಾಗಿ ಹಸ್ತಿನಾಪುರದ ರಾಣಿಯಾದಳು. ಸ್ವಲ್ಪ ಕಾಲದಲ್ಲಿಯೇ ಕುಂತಿಗೆ ಮಾದ್ರಿಯು ಸವತಿಯ ರೂಪದಲ್ಲಿ ಬಂದಳು. ಅವಳೇ ಮದ್ರದೇಶದ ರಾಜನಾದ ಋತಾಯನನ ಮಗಳು ಮತ್ತು ಶಲ್ಯನ ತಂಗಿ. ಬಹುಪತ್ನಿತ್ವ ಆ ಕಾಲದಲ್ಲಿ ಸಾಮಾನ್ಯವಾದ ವಿಷಯ. ಕುಂತಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ. ಹೀಗಿರುವಾಗ ಪಾಂಡುರಾಜನು ಒಮ್ಮೆ ಬೇಟೆಗಾಗಿ ಹೋದನು. ಕಾಡಿನಲ್ಲಿ ಜಿಂಕೆಗಳೆರಡು ಪ್ರಣಯದಲ್ಲಿ ತೊಡಗಿರುವುದನ್ನು ಕಂಡು ಒಂದೇ ಬಾಣದಿಂದ ಆ ಎರಡೂ ಜಿಂಕೆಗಳನ್ನು ಹೊಡೆದುರುಳಿಸಿದನು. ನೋಡನೋಡುತ್ತಿದ್ದಂತೆ ಆ ಜಿಂಕೆಗಳು ಮನುಷ್ಯರ ರೂಪ ಪಡೆದುಕೊಂಡು, ಅವರು ನೋವಿನಿಂದ ಚೀತ್ಕಾರ ಮಾಡಿದರು. ಪಾಂಡುವು ಇದನ್ನು ನೋಡಿ ಗಾಬರಿಯಾಗಿ ಆ ದಂಪತಿಗಳ ಬಳಿಗೆ ಹೋದನು. ಅವರು ಮುನಿ ದಂಪತಿಗಳು. ತಮ್ಮ ತಪಃಶಕ್ತಿಯಿಂದ ವಿನೋದಕ್ಕಾಗಿ ಜಿಂಕೆಗಳ ರೂಪ ಪಡೆದು ವಿಹರಿಸುತ್ತಿದ್ದರು. ಪಾಂಡುವನ್ನು ನೋಡಿ ಕ್ರೋಧದಿಂದ ಆ ಮುನಿಯು “ರಾಜನೇ ನಾನು ನನ್ನ ಪತ್ನಿಯ ಜೊತೆಯಲ್ಲಿ ಪ್ರಣಯದಲ್ಲಿ ಮಗ್ನನಾಗಿರುವಾಗ ನನಗೆ ಮರಣ ಸನ್ನಿಹಿತವಾಗುವಂತೆ ಮಾಡಿರುವೆ. ಆದ್ದರಿಂದ ನೀನು ಯಾವುದೇ ಹೆಣ್ಣಿನ ಲೈಂಗಿಕ ಸಂಪರ್ಕ ಮಾಡಿದರೆ ನಿನ್ನ ಸಾವಾಗಲಿ” ಎಂದು ಶಾಪಕೊಟ್ಟನು. ಆ ಮುನಿದಂಪತಿಗಳು ಇಹಲೋಕವನ್ನು ತ್ಯಜಿಸಿದರು. ಪಾಂಡು ರಾಜನು ಭಾರವಾದ ಮನಸ್ಸಿನಿಂದ ಅರಮನೆಗೆ ಹಿಂದಿರುಗಿದನು. ಅವನಿಗೆ ಹಿಂದಿನಂತೆ ರಾಜ್ಯಭಾರದಲ್ಲಿ ಆಸಕ್ತಿ ತೋರಿಸಲು ಆಗುವುದಿಲ್ಲ. ಅರಮನೆಯ ಭೋಗದಲ್ಲಿ ಸನ್ಯಾಸಿಯಂತೆ ಬದುಕಲು ಬಹಳ ಕಷ್ಟವಾಗುತ್ತದೆ. ಕೊನೆಗೆ ಈ ಅರಮನೆಯೇ ಬೇಡ ಎಂದು ತನ್ನ ಕುರುಡ ಅಣ್ಣನಾದ ಧೃತರಾಷ್ಟ್ರನಿಗೆ ರಾಜ್ಯವನ್ನು ಒಪ್ಪಿಸಿ ತನ್ನ ಇಬ್ಬರು ಪತ್ನಿಯರನ್ನು ಕರೆದುಕೊಂಡು ವನವಾಸಕ್ಕೆ ಹೊರಟು ಕಾಡಿನಲ್ಲಿ ವಾಸಿಸತೊಡಗುತ್ತಾನೆ. ಕುಂತಿಗೆ ಸನ್ಯಾಸದ ವನವಾಸ ಪ್ರಾಪ್ತವಾಗುತ್ತದೆ. ಆದರೂ ಗಂಡನ ನೆರಳಿನಂತೆ ಆಕೆಯು ಅವನನ್ನು ಹಿಂಬಾಲಿಸಿ ಸಹಧರ್ಮಿಣಿಯಾಗಿ ನಡೆದುಕೊಳ್ಳುತ್ತಾಳೆ.

ಕಾಲಕಳೆದಂತೆ ಪಾಂಡುವಿಗೆ ತನಗೆ ಸಂತಾನವಿಲ್ಲ, ಮುಂದೆ ಸಂತಾನ ಆಗುವ ಸಾಧ್ಯತೆಯೂ ಇಲ್ಲ, ತಾನೊಬ್ಬ ಸಂತಾನಹೀನನಾಗಿ ಮರಣಿಸುತ್ತೇನೆ ಎನ್ನುವ ಚಿಂತೆಯು ಕಾಡತೊಡಗುತ್ತದೆ. ಇದಕ್ಕೆ ಪರಿಹಾರವೇನು ಎಂದು ಯೋಚಿಸುತ್ತಾನೆ. ಆಗ ಅವನಿಗೊಂದು ಉಪಾಯವು ಹೊಳೆಯುತ್ತದೆ. ಕುಂತಿಯನ್ನು ಕರೆದು “ಕುಂತಿ, ನಾನು ಹೀಗೆ ಸಂತಾನಹೀನನಾಗಿ ಸಾಯಲು ಇಷ್ಟವಿಲ್ಲ. ನೀನು ಒಬ್ಬ ಒಳ್ಳೆಯ ಬ್ರಾಹ್ಮಣನ ಮೂಲಕ ನಿಯೋಗ ಪದ್ಧತಿಯಲ್ಲಿ ಮಗುವನ್ನು ಪಡೆದು ನನ್ನನ್ನು ತಂದೆಯನ್ನಾಗಿ ಮಾಡು. ಇದು ತಪ್ಪಲ್ಲ, ನಾನು ಕೂಡ ಅದೇ ರೀತಿ ಹುಟ್ಟಿದವನಲ್ಲವೇ?” ಎನ್ನುತ್ತಾನೆ. ಆಗ ಕುಂತಿಗೆ ತನಗಿರುವ ದಿವ್ಯ ವರಗಳ ನೆನಪಾಯಿತು. ತನ್ನ ಗಂಡನಿಗೆ ದೂರ್ವಾಸರಿಂದ ಪಡೆದ ಮಂತ್ರಗಳ ಬಗ್ಗೆ ತಿಳಿಸಿದಳು. ಆದರೆ ಅವಳಿಗೊಂದು ಸಂದೇಹ ಮೂಡಿ ಅದನ್ನು ತನ್ನ ಪತಿಗೆ ತಿಳಿಸುತ್ತಾಳೆ. “ಸಾಮಾನ್ಯವಾಗಿ ಗಂಡನಿಲ್ಲದ ಮಹಿಳೆಯರು ತಮ್ಮ ವಂಶದ ಅಭಿವೃದ್ಧಿಗಾಗಿ ಹಿರಿಯರ ಒಪ್ಪಿಗೆಯಿಂದ ನಿಯೋಗ ಪದ್ಧತಿಯ ಮೂಲಕ ಸಂತಾನವನ್ನು ಪಡೆಯುತ್ತಾರೆ. ಆದರೆ, ನಾನು ಗಂಡನು ಬದುಕಿರುವಾಗಲೇ ಇಂತಹ ಪದ್ಧತಿಗೆ ಶರಣಾಗುವುದು ಧರ್ಮವೇ?” ಎಂದು ಕೇಳಿದಳು. ಪಾಂಡುವಿಗೂ ಆಕೆಯ ಮಾತಿನಲ್ಲಿ ಸತ್ವವಿದೆ ಎನ್ನಿಸತು. ಇದು ತನಗೆ ಮೀರಿದ ಧರ್ಮಕರ್ಮದ ಪ್ರಶ್ನೆ. ತಿಳಿದವರಿಂದಲೇ ಉತ್ತರವನ್ನು ಪಡೆಯಬೇಕು ಎಂದು ಯೋಚಿಸಿದನು. ಯಮಧರ್ಮನಿಗಿಂತ ಹೆಚ್ಚಾಗಿ ಧರ್ಮದ ಬಗ್ಗೆ ತಿಳಿದವರು ಯಾರೂ ಇಲ್ಲ ಎನ್ನುವುದು ನೆನಪಿಗೆ ಬಂದಿತು. ಆಗ ಅವನು “ನೀನು ಯಮಧರ್ಮನನ್ನು ಆಹ್ವಾನಿಸಿ ಪುತ್ರನನ್ನು ಬೇಡು. ಅದು ಅಧರ್ಮವಾದರೆ ಅವನು ಅದಕ್ಕೆ ಒಪ್ಪುವುದಿಲ್ಲ. ಧರ್ಮಪರವಾಗಿದ್ದರೆ ನಮಗೆ ಸಂತಾನಭಾಗ್ಯವು ಲಭಿಸುತ್ತದೆ” ಎಂದನು. ಇದೇ ಸರಿಯಾದ ಮಾರ್ಗ ಎಂದು ಭಾವಿಸಿದ ಕುಂತಿಯು ಯಮಧರ್ಮನನ್ನು ಕುರಿತು ಪ್ರಾರ್ಥಿಸಿ ದೂರ್ವಾಸರು ನೀಡಿದ ಮಂತ್ರಪ್ರಯೋಗವನ್ನು ಮಾಡಿದಳು. ಯಮಧರ್ಮನು ಪ್ರಕಟವಾಗಿ ಆಕೆಗೆ ಒಂದು ಮುದ್ದಾದ ಮಗುವನ್ನು ನೀಡಿದನು. ಪಾಂಡುವಿಗೆ ಬಹಳ ಸಂತೋಷವಾಗಿ ಆ ಮಗುವಿಗೆ ಧರ್ಮರಾಯ ಎಂದು ನಾಮಕರಣವನ್ನು ಮಾಡಿ, ಈ ನನ್ನ ಮಗನು ಎಂದೂ ಸತ್ಯ, ಧರ್ಮದ ಹಾದಿಯಲ್ಲಿ ನಡೆಯುವವನು ಎಂದು ಬೀಗಿದನು. ಸ್ವಲ್ಪ ಕಾಲದಲ್ಲಿ ಆತನಿಗೆ ಇನ್ನೊಂದು ಯೋಚನೆ ಬಂದಿತು. ನಾನೊಬ್ಬ ರಾಜನು, ನನಗೆ ಧರ್ಮಮಾರ್ಗದಲ್ಲಿ ನಡೆಯುವ ಮಗನಿಗಿಂತಲೂ ಒಬ್ಬ ಬಲಶಾಲಿಯಾದ ಮಗನಿರುವುದು ಮುಖ್ಯ ಎನ್ನಿಸಿತು. ಮತ್ತೆ ಕುಂತಿಯನ್ನು ಕರೆದು ಈ ಸಲ ವಾಯುವನ್ನು ಆಹ್ವಾನಿಸಿ ಒಬ್ಬ ಬಲಶಾಲಿಯಾದ ಪುತ್ರನನ್ನು ಪಡೆಯೋಣ ಎಂದನು. ಕುಂತಿಯು ಒಪ್ಪಿ ವಾಯುವನ್ನು ಆಹ್ವಾನಿಸಿ ಭೀಮನ ರೂಪದಲ್ಲಿ ಒಬ್ಬ ಬಲಶಾಲಿ ಪುತ್ರನನ್ನು ಪಡೆದಳು. ಇದಾದ ಮೇಲೂ ಪಾಂಡುವಿಗೆ ತೃಪ್ತಿಯಾಗುವುದಿಲ್ಲ. ತನಗೆ ಇನ್ನೊಬ್ಬ ವೀರಪುತ್ರನಿದ್ದರೆ ಚೆನ್ನ ಎಂದು ಮತ್ತೆ ಕುಂತಿಯ ಬಳಿ ವಿಷಯವನ್ನು ಪ್ರಸ್ತಾಪಿಸಿ ಈ ಸಲ ಪರಾಕ್ರಮಶಾಲಿಯಾದ ದೇವೇಂದ್ರನಿಂದ ಪುತ್ರನನ್ನು ಪಡೆಯೋಣ ಎಂದನು. ಇದರ ಫಲವಾಗಿ ಅರ್ಜುನನ ಜನನವಾಯಿತು. ಪಾಂಡುವು ಮತ್ತೆ ಇನ್ನೊಬ್ಬ ಪುತ್ರನನ್ನು ಬಯಸಿದಾಗ ಕುಂತಿಯು ಮೂವರು ಮಕ್ಕಳಿಗಿಂತ ಹೆಚ್ಚಿರುವುದು ಆಪದ್ಧರ್ಮವಲ್ಲ ಎಂದು ಗಂಡನ ಕೋರಿಕೆಯನ್ನು ನಿರಾಕರಿಸಿದಳು. ದಂಪತಿಗಳು ಈ ವಿಶೇಷವಾದ ಮಕ್ಕಳ ಜೊತೆ ಸಮಯ ಕಳೆಯುತ್ತ ಸಂತೋಷದಿಂದ ಇದ್ದರು. ಇದನ್ನೆಲ್ಲ ನೋಡುತ್ತಿದ್ದ ಮಾದ್ರಿಗೆ ತನಗೂ ಮಕ್ಕಳಿರಬೇಕು ಎನ್ನುವ ಆಸೆಯು ಅಂಕುರವಾಯಿತು. ಗಂಡನ ಬಳಿ ತನ್ನ ಆಸೆಯನ್ನು ಹಂಚಿಕೊಂಡು ಸಹಾಯ ಮಾಡುವಂತೆ ಕೋರಿದಳು. ಅವಳ ಆಸೆ ನ್ಯಾಯವಾದದ್ದು ಎನ್ನಿಸಿ ಅವನು ಕುಂತಿಯ ಸಹಾಯವನ್ನು ಕೇಳಿದನು. ಕುಂತಿಗೆ ಅಷ್ಟು ಆಸಕ್ತಿ ಇಲ್ಲದಿದ್ದರೂ ಗಂಡನ ಕೋರಿಕೆಗೆ ಇಲ್ಲವೆನ್ನಲಾಗದೆ ಮಾದ್ರಿಗೆ ಒಂದು ಮಂತ್ರವನ್ನು ಬೋಧಿಸಿ ಮಗುವನ್ನು ಪಡೆಯುವಂತೆ ಹೇಳಿದಳು. ಸಂತೋಷದಿಂದ ಮಾದ್ರಿಯು ಅಶ್ವಿನಿ ದೇವತೆಗಳನ್ನು ಆಹ್ವಾನಿಸಿ ಇಬ್ಬರು ಪುತ್ರರನ್ನು ಪಡೆದಳು, ಅವರೇ ನಕುಲ ಮತ್ತು ಸಹದೇವ. ಇಬ್ಬರು ಮಕ್ಕಳನ್ನು ಪಡೆದ ಮಾದ್ರಿಯನ್ನು ನೋಡಿ ಕುಂತಿಗೆ ಸಿಟ್ಟು ಬಂದಿತು. ಒಂದು ಮಗುವನ್ನು ಪಡೆಯಲಿ ಎಂದು ಸಹಾಯ ಮಾಡಿದರೆ ಇಬ್ಬರನ್ನು ಪಡೆದಿದ್ದಾಳೆ, ಜಾಣೆ ಇವಳು. ಇವಳಿಗೆ ಇನ್ನೊಂದು ಅವಕಾಶವನ್ನು ಕೊಟ್ಟರೆ ನನಗಿಂತ ಹೆಚ್ಚಿನ ಮಕ್ಕಳನ್ನು ಹೊಂದುತ್ತಾಳೆ ಎನ್ನಿಸಿದಾಗ ಅವಳ ಸವತಿ ಮತ್ಸರವು ಹೊಗೆಯಾಡತೊಡಗುತ್ತದೆ. ಅವಳು ಎಣಿಸಿದಂತೆ ಪಾಂಡುವು ಮಾದ್ರಿಗೆ ಇನ್ನೊಂದು ಮಂತ್ರವನ್ನು ಉಪದೇಶಿಸಲು ಕೋರಿದನು. ಆಗ ಕುಂತಿಯು ಅದನ್ನು ನಿರಾಕರಿಸಿದಳು. ಎಷ್ಟಾದರೂ ಹೆಣ್ಣಿಗೆ ಸವತಿಮಾತ್ಸರ್ಯವು  ಇದ್ದೇ ಇರುತ್ತದೆ ಅಲ್ಲವೇ? ಕುಂತಿಯೂ ಇದಕ್ಕೆ ಹೊರತಾಗಿರಲಿಲ್ಲ.

ಸುಖ ಸಂಸಾರದಲ್ಲಿ ಮಿಂದೇಳುತ್ತಿದ್ದ ಪಾಂಡುವಿಗೆ ಒಂದು ಕೊರತೆಯು ಮಾತ್ರ ಸದಾ ಕಾಡುತ್ತಿತ್ತು. ಹೆಣ್ಣಿನ ದೈಹಿಕ ಸಂಪರ್ಕವಿಲ್ಲದೆ ದೈಹಿಕ ಬಾಧೆ ಅವನನ್ನು ಹುಚ್ಚನನ್ನಾಗಿಸಿತ್ತು. ಒಂದು ದಿನ ಮಾದ್ರಿಯ ಜೊತೆ ಏಕಾಂತವಾಗಿ ಅಡವಿಯಲ್ಲಿದ್ದಾಗ ಮೊದಲೇ ಸೌಂದರ್ಯವತಿಯಾದ ಮಾದ್ರಿಯು ಆತನಿಗೆ ದೇವಾಂಗನೆಯಂತೆ ಕಾಣಿಸಿದಳು. ಅವನ ಕಾಮದ ಬಯಕೆ ಉದ್ದೀಪನಗೊಂಡಿತು. ಮಾದ್ರಿಯು ಬೇಡವೆಂದು ಗೋಗರೆಯುತ್ತಿದ್ದರೂ ಬಲವಂತವಾಗಿ ಅವಳನ್ನು ಕಾಮಿಸಿದನು, ಕೂಡಲೇ ಮುನಿಯ ಶಾಪದಂತೆ ಅವನು ಮರಣಿಸಿದನು. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎನ್ನುತ್ತಾರೆ. ಇಲ್ಲಿ ಪ್ರಾಣಭಯವನ್ನೂ ಮೀರಿತ್ತು ಅವನ ಕಾಮದಾತುರ! ತಾನು ಮುಂದುವರೆದರೆ ಖಂಡಿತ ಸಾಯುವೆನೆಂದು ತಿಳಿದಿದ್ದರೂ ಆ ಕ್ಷಣದಲ್ಲಿ ಕಾಮವೇ ಮೇಲುಗೈ ಸಾಧಿಸಿತ್ತು! ಕಾಮದ ತೀವ್ರತೆಗೆ ಬಲಿಯಾಗದಿರುವವರು ಅಪರೂಪವೇ ಸರಿ! ಮಾದ್ರಿಯು ತನ್ನ ಕಾರಣದಿಂದಲೇ ಪತಿಯ ಮೃತ್ಯುವಾಗಿದೆ ಎಂದು ಭಾವಿಸಿ ತನ್ನ ಮಕ್ಕಳನ್ನು ಕುಂತಿಯ ಮಡಿಲಿಗೆ ಹಾಕಿ ಪತಿಯೊಡನೆ ಸಹಗಮನವನ್ನು ಮಾಡಿದಳು.

ಗಂಡನ ಅನಿರೀಕ್ಷಿತ ಸಾವಿನಿಂದ ಕುಂತಿಯ ಬದುಕು ಹೊಸ ತಿರುವನ್ನು ಪಡೆಯಿತು. ಪತಿಗೋಸ್ಕರವೇ ತಾನು ವನವಾಸದಲ್ಲಿ ಇದ್ದದ್ದು. ಈಗ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿದರೆ ಹಸ್ತಿನಾಪುರಕ್ಕೆ ಹಿಂತಿರುಗುವುದೇ ಸರಿ ಎನ್ನುವ ನಿರ್ಧಾರಕ್ಕೆ ಬಂದು ಮಕ್ಕಳೊಡನೆ ಹಸ್ತಿನಾಪುರಕ್ಕೆ ಬರುತ್ತಾಳೆ. ಇಲ್ಲೇನೂ ಅವಳಿಗೆ ಸುಖದ ಸುಪ್ಪತ್ತಿಗೆ ದೊರೆಯಲಿಲ್ಲ. ಧೃತರಾಷ್ಟ್ರನಿಗೆ ಕುಂತಿಯ ಆಗಮನವು ಇಷ್ಟವಿರಲಿಲ್ಲ. ಧರ್ಮರಾಯನು ದುರ್ಯೋಧನನಿಗಿಂತ ದೊಡ್ಡವನು, ಮುಂದೆ ರಾಜ್ಯಕ್ಕೆ ಅವನೇ ಉತ್ತರಾಧಿಕಾರಿ ಎನ್ನವುದು ನ್ಯಾಯಬಲ್ಲವರ ಕೂಗಾಗುತ್ತದೆ ಎನ್ನುವುದನ್ನು ಅವನು ಅರಿತಿದ್ದನು. ಇವರು ಬಂದದ್ದರಿಂದ ತನ್ನ ಮಗನು ಸಿಂಹಾಸನವಂಚಿತನಾಗುತ್ತಾನೆ ಎನ್ನುವ ಚಿಂತೆಯು ಅವನಿಗಿತ್ತು. ಅವನಿಗೆ ಪಾಂಡುವಿನ ಮಕ್ಕಳನ್ನು ಕೌರವರು ಎಂದು ಒಪ್ಪಿಕೊಳ್ಳುವ ಮನಸ್ಸಿರಲಿಲ್ಲ. ಏಕೆಂದರೆ ಅವರು ಪಾಂಡುವಿನ ಸ್ವಂತ ಮಕ್ಕಳಲ್ಲ. ಹಾಗಾಗಿ ತನ್ನ ಮಕ್ಕಳು ನಿಜವಾದ ಕೌರವರು, ಪಾಂಡುವಿನ ಮಕ್ಕಳು ಪಾಂಡವರು ಎನ್ನುವ ಭೇದವನ್ನು ಹುಟ್ಟುಹಾಕಿದನು. ಅವನ ಮಗ ದುರ್ಯೋಧನನಿಗೂ ತನಗೆ ಪ್ರತಿಸ್ಪರ್ಧಿಗಳಾಗಿ ಪಾಂಡವರು ಬಂದದ್ದು ನುಂಗಲಾರದ ತುತ್ತಾಗಿತ್ತು. ಹೇಗಾದರೂ ಮಾಡಿ ಅವರನ್ನು ಹೊಸಕಿಹಾಕಬೇಕು ಎನ್ನುವ ಭಾವನೆಯು ಅವನಿಗೆ ಕೀಶೋರನಿದ್ದಾಗಲೇ ಜಾಗೃತವಾಯಿತು. ಇದರಿಂದ ಆಗಾಗ ಕೌರವರ ಮತ್ತು ಪಾಂಡವರ ನಡುವೆ ಘರ್ಷಣೆಗಳಾಗುತ್ತಿದ್ದವು. ಇಷ್ಟೆಲ್ಲ ಆಗುತ್ತಿರುವಾಗ ಕುಂತಿಯು ತನ್ನ ಮಕ್ಕಳ ಭವಿಷ್ಯವನ್ನು ತನ್ನ ಭಾವನವರಿಗೆ ಬಿಟ್ಟು, ತಾನು ತಟಸ್ತಳಾಗಿ ಬದುಕತೊಡಗಿದಳು. ಬಹುಶಃ ತನ್ನ ಮಕ್ಕಳ ಭವಿಷ್ಯಕ್ಕಾಗಿ ಆಕೆಯು ಹೆಚ್ಚಿನ ಆಸಕ್ತಿ ತೆಗೆದುಕೊಳ್ಳಬೇಕಿತ್ತು ಎನ್ನಿಸದಿರಲಾರದು. ಭೀಷ್ಮನು ಎಲ್ಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗುರು ದ್ರೋಣರನ್ನು ನಿಯುಕ್ತಿ ಮಾಡಿದನು.

ವಿದ್ಯಾಭ್ಯಾಸವು ಮುಗಿದನಂತರ ತನ್ನ ಶಿಷ್ಯರ ಪ್ರತಿಭೆಯನ್ನು ಎಲ್ಲರಿಗೂ ಪರಿಚಯಿಸಲು ಗುರುಗಳು ಒಂದು ಸ್ಪರ್ಧಾಕೂಟವನ್ನು ಆಯೋಜಿಸಿದರು. ಅಲ್ಲಿಯವರೆಗೂ ರಾಧೇಯನಾಗಿ ತನ್ನ ಸಾಹಸ ಪೌರುಷಗಳಿಗೆ, ಪ್ರತಿಭೆಗೆ ಒಂದು ವೇದಿಕೆ ಸಿಗದೆ, ತಂದೆಯ ಪ್ರೋತ್ಸಾಹ ಸಿಗದೆ ಅವಕಾಶಕ್ಕಾಗಿ ಕಾಯುತ್ತಿದ ರಾಧೇಯನಿಗೆ ತನ್ನ ಪ್ರತಿಭೆ, ಪರಾಕ್ರಮಗಳನ್ನು ಪ್ರದರ್ಶಿಸಲು ಇದು ಸೂಕ್ತವಾದ ವೇದಿಕೆ ಎಂದು ಪರಿಗಣಿಸಿ ಅಲ್ಲಿಗೆ ಹೊರಟುಬಂದನು. ಬಂದವನೇ, ನಾನು ಅರ್ಜುನನೊಂದಿಗೆ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಘೋಷಿಸಿದನು. ರಾಜಪರಿವಾರದ ಜೊತೆ ಸ್ಪರ್ಧೆಯ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದ ಕುಂತಿಯ ಕಣ್ಣಿಗೆ ಕರ್ಣನು ಬಿದ್ದನು. ಕುಂತಿಗೆ ಅವನ ಹಾವಭಾವ, ಅವನ ಕರ್ಣಕುಂಡಲಗಳನ್ನು ನೋಡಿ ಇವನೇ ತಾನು ಹೊಳೆಯಲ್ಲಿ ತೇಲಿಬಿಟ್ಟ ತನ್ನ ಹಿರಿಯ ಮಗ ಎಂದು ಅರ್ಥವಾಯಿತು. ಇಷ್ಟು ವರ್ಷಗಳ ಕಾಲ ತನ್ನ ಹಿರಿಯಪುತ್ರನಿಗಾಗಿ ಹಂಬಲಿಸುತ್ತಿದ್ದ ಆಕೆಗೆ ಈಗ ಅವನೇ ತನ್ನ ಮಗ ಎಂದು ತಿಳಿದರೂ ಎಲ್ಲರೆದುರು ಗುರುತಿಸಲು ಧೈರ್ಯವು ಸಾಲದೇ ಹೋಯಿತು. ಆಕೆ ಧೈರ್ಯವಾಗಿ ಗುರುತಿಸಿದ್ದರೂ ಆಕೆಗೆ ಯಾವ ಅಪವಾದವೂ ಬರುತ್ತಿರಲಿಲ್ಲ. ಏಕೆಂದರೆ ಆಕೆಯು ಮಂತ್ರದ ಸಹಾಯದಿಂದ ಮೂವರು ಪುತ್ರರನ್ನು ಪಡೆದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಹಾಗಾಗಿ ಅದೇ ರೀತಿ ವಿವಾಹಕ್ಕೆ ಮೊದಲೇ ಒಬ್ಬ ಮಗನನ್ನು ಪಡೆದಿದ್ದೆ ಎಂದು ತಿಳಿಸಿದ್ದರೆ ಯಾವ ಅನರ್ಥವೂ ಆಗುತ್ತಿರಲಿಲ್ಲ. ಆದರೆ ಅವಳು ಏಕೆ ಧೈರ್ಯ ಮಾಡಲಿಲ್ಲ ಎನ್ನುವುದು ಅರ್ಥವಾಗದ ವಿಷಯ. ಅವಳ ಮನಸ್ಸಿನ ತುಮುಲವೇನಿದ್ದಿರಬಹುದು? ಹಸ್ತಿನಾಪುರದ ಸಿಂಹಾಸನಕ್ಕೆ ಮತ್ತೊಬ್ಬನು ಸ್ಪರ್ಧಿಯಾಗಬಹುದು ಎಂಬ ಅಳುಕಿತ್ತೇ? ಇದರಿಂದ ಧರ್ಮರಾಯನಿಗೆ ಪಟ್ಟ ತಪ್ಪುವುದೆಂಬ ಭಯವಿತ್ತೇ? ಹುಟ್ಟಿದಾಗಲೇ ತನ್ನನ್ನು ತ್ಯಜಿಸಿದ ತಾಯಿಯಾದ ತನಗೆ ಕರ್ಣನಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದು ಎನ್ನುವ ಗೊಂದಲವಿತ್ತೇ? ಮುಂದೆ ಕೂಡ ಅವನು ಎಲ್ಲರಿಂದ ಸೂತಪುತ್ರ ಎಂದು ಅವಮಾನಗೊಳ್ಳುತ್ತಿದ್ದರೂ ನೋಡಿಯೂ ನೋಡದಂತೆ ಸುಮ್ಮನಿದ್ದುದು ಆಕೆಯ ಅಪರಾಧವೇ ಸರಿ!

ದುರ್ಯೋಧನನು ಪಾಂಡವರನ್ನು ಮುಗಿಸಲು ಅರಗಿನ ಮನೆಯಲ್ಲಿ ಅವರನ್ನಿರಿಸಿ ಬೆಂಕಿಯನ್ನು ಹಚ್ಚುವ ಹುನ್ನಾರ ಮಾಡುತ್ತಾನೆ. ವಿಷಯವನ್ನು ತಿಳಿದಿದ್ದ ಪಾಂಡವರು ಸುರಂಗದ ಮೂಲಕ ಪರಾರಿಯಾಗುತ್ತಾರೆ. ತನ್ನ ಅಸಾಧಾರಣ ಬಲ ಪ್ರದರ್ಶನದಿಂದ ಭೀಮನು ಕುಂತಿಯನ್ನು ಹಾಗೂ ಸಹೋದರರನ್ನು ಹೊತ್ತುಕೊಂಡು ಬೆಂಕಿಯಿಂದ ಕಾಪಾಡಿದ ಬಗೆ ಭೀಮನಲ್ಲಿ ಕುಂತಿಯ ಆತ್ಮವಿಶ್ವಾಸವು ಹೆಚ್ಚಿಸುತ್ತದೆ. ಹಾಗೆ ಪಾರಾದ ಅವರು ಬ್ರಾಹ್ಮಣರಂತೆ ಏಕಚಕ್ರ ನಗರಿಯಲ್ಲಿ ವಾಸಮಾಡತೊಡಗಿದರು. ಮತ್ತೆ ಕುಂತಿಗೆ ಅರಮನೆಯ ವಾಸವು ತಪ್ಪುತ್ತದೆಯಾದರೂ ತನ್ನ ಮಕ್ಕಳ ಜೊತೆ ಬದುಕುತ್ತ ನೆಮ್ಮದಿಯನ್ನು ಪಡೆದಳು. ಬಕಾಸುರನ ಕಾಟದಿಂದ ಏಕಚಕ್ರ ನಗರದ ಜನರು ಕಂಗಾಲಾಗಿದ್ದರು. ಒಮ್ಮೆ ಪಾಂಡವರಿಗೆ ಆಶ್ರಯ ನೀಡಿರುವ ಸಜ್ಜನನೇ ಬಕಾಸುರನಿಗೆ ಬಲಿಯಾಗುವ ಸಂದರ್ಭವು ಬರುತ್ತದೆ. ಭೀಮನ ಅಸಾಧಾರಣ ಶಕ್ತಿಪ್ರದರ್ಶನವನ್ನು ಕಣ್ಣಾರೆ ಕಂಡಿದ್ದ ಕುಂತಿಯು, ತಮ್ಮ ಆಶ್ರಯದಾತನನ್ನು ಮತ್ತು ಊರಿನ ಪ್ರಜೆಗಳೆಲ್ಲರನ್ನೂ ಕಾಪಾಡಲು ಬಕಾಸುರನನ್ನು ಕೊಲ್ಲುವಂತೆ ಭೀಮನಿಗೆ ಸೂಚಿಸಿದಳು. ಅವಳು ನಿರೀಕ್ಷಿಸಿದಂತೆ ಭೀಮನು ಬಕಾಸುರನನ್ನು ಕೊಲ್ಲುವುದರಲ್ಲಿ ಸಫಲನಾದನು. ಇಲ್ಲಿ ಕುಂತಿಯ ಕೃತಜ್ಞತೆ ಮತ್ತು ಪರೋಪಕಾರದ ಗುಣಗಳು ವಿಜೃಂಭಿಸುತ್ತವೆ ಮತ್ತು ತನ್ನ ಪುತ್ರನ ಶಕ್ತಿಯ ಬಗ್ಗೆ ಆಕೆಗಿದ್ದ ನಂಬಿಕೆಯ ಬಗ್ಗೆಯೂ ತಿಳಿಯುತ್ತದೆ. ತನ್ನ ಮಕ್ಕಳಿಗೆ ಪರೋಪಕಾರದ ಮಾರ್ಗವನ್ನೂ ತೋರಿಸುತ್ತಾಳೆ ಕುಂತಿ. ಅಲ್ಲಿಂದ ಮುಂದೆ ಅವರೆಲ್ಲರೂ ಪಾಂಚಾಲ ದೇಶಕ್ಕೆ ಬಂದರು. ಇಲ್ಲಿ ಕುಂತಿಯು ತಿಳಿಯದೇ ಆಡಿದ ಮಾತು ಪಾಂಚಾಲ ರಾಜಕುಮಾರಿಯ ಮತ್ತು ಪಾಂಡವರ ಜೀವನವನ್ನು ಒಂದು ವಿಭಿನ್ನ ದಿಕ್ಕಿನಲ್ಲಿ ಕೊಂಡೊಯ್ಯಿತು. ಅರ್ಜುನನು ಸ್ವಯಂವರದಲ್ಲಿ ಪಾಂಚಾಲ ರಾಜಕುವರಿಯಾದ ದ್ರೌಪದಿಯನ್ನು ಗೆದ್ದು ತಾಯಿಯ ಬಳಿ ಬಂದು “ಅಮ್ಮಾ! ಈ ದಿನ ನಾವೇನು ತಂದಿದ್ದೇವೆ ನೋಡು” ಎಂದನು. ಅವರು ಈ ದಿನ ಭಿಕ್ಷೆಯಲ್ಲಿ ಎನೋ ವಿಶೇಷವಾದುದನ್ನು ಪಡೆದಿರಬೇಕೆಂದುಕೊಂಡ ಕುಂತಿಯು “ನೀವು ತಂದಿರುವುದನ್ನು ಅಣ್ಣತಮ್ಮಂದಿರೆಲ್ಲ ಸಮನಾಗಿ ಹಂಚಿಕೊಳ್ಳಿ” ಎಂದುಬಿಡುತ್ತಾಳೆ. ತಿಳಿಯದೇ ಆಡಿದ ಮಾತಾದರೂ, ಈ ಮಾತಿನಿಂದ ಪಾಂಚಾಲಿಯು ಪಂಚವಲ್ಲಭೆಯಾಗಬೇಕಾಗುತ್ತದೆ! “ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು” ಎನ್ನುವ ಗಾದೆಯು ಬಹುಶಃ ಈ ಮಾತಿನಿಂದಲೇ ಹುಟ್ಟಿರಬಹುದು! ಅಷ್ಟು ತೀಕ್ಷ್ಣವಾಗಿತ್ತು ಅವಳು ಆಡಿದ ಮಾತಿನ ಪರಿಣಾಮ.

ಪಾಂಡವರು ದ್ಯೂತದಲ್ಲಿ ಸೋತು ಷರತ್ತಿನ ಪ್ರಕಾರ ವನವಾಸಕ್ಕೆ ಹೊರಟುನಿಲ್ಲುತ್ತಾರೆ. ತಾನೂ ಅವರ ಜೊತೆ ಹೊರಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ ಕುಂತಿ. ಆದರೆ ಮಕ್ಕಳು ವಯಸ್ಸಾದ ತಾಯಿಯನ್ನು ಕಾಡಿಗೆ ಕರೆದೊಯ್ಯಲು ಒಪ್ಪುವುದಿಲ್ಲ. ತನ್ನ ಮಕ್ಕಳಿಗೆ ಮೋಸ ಮಾಡಿದ ದುರ್ಯೋಧನನ ಹಂಗಿನಲ್ಲಿ, ಅವನ ಅರಮನೆಯಲ್ಲಿ ವಾಸವಿರಲು ಕುಂತಿಯು ನಿರಾಕರಿಸಿದಳು. ಈ ಕಾರಣದಿಂದ ಕುಂತಿಯು ವಿದುರನ ಮನೆಯಲ್ಲಿ ವಾಸಮಾಡತೊಡಗಿದಳು. ವನವಾಸ ಮತ್ತು ಅಜ್ಞಾತವಾಸಗಳು ಮುಗಿದಮೇಲೆ ಶ್ರೀಕೃಷ್ಣನು ಪಾಂಡವರಿಗೆ ಕುರುರಾಜ್ಯದಲ್ಲಿ ಪಾಲನ್ನು ಕೇಳಲು ಸಂಧಾನಕ್ಕೆ ಬಂದನು. ಆದರೆ ಸಂಧಾನವು ವಿಫಲವಾಗುತ್ತದೆ. ಆಗ ವೀರ ನಾರಿಯಾದ ಕುಂತಿಯು ತನ್ನ ಮಕ್ಕಳು ಯುದ್ಧಮಾಡಿ ತಮ್ಮ ಹಕ್ಕನ್ನು ಪಡೆಯಬೇಕು ಎನ್ನುವ ಸಂದೇಶವನ್ನು ಸೋದರಳಿಯನಾದ ಕೃಷ್ಣನ ಮೂಲಕ ತನ್ನ ಮಕ್ಕಳಿಗೆ ಕಳಿಸಿದಳು. ಇಲ್ಲಿ ಒಬ್ಬ ರಾಜಮಾತೆಗೆ ತಕ್ಕ ವರ್ತನೆಯನ್ನು ತೋರಿದ್ದಾಳೆ ಕುಂತಿ.

ಯುದ್ಧವಾಗುವುದು ಖಚಿತವಾದಮೇಲೆ ಅವಳಿಗೆ ಚಿಂತೆಯೊಂದು ಕಾಡಲಾರಂಭಿಸಿತು. ತನ್ನ ಹಿರಿಯ ಮಗ ಕರ್ಣನು ದುರ್ಯೋಧನನ ಪರ ನಿಂತು ಯುದ್ಧಮಾಡಿದರೆ ತನ್ನ ಮಕ್ಕಳೇ ಒಬ್ಬರಿಗೊಬ್ಬರು ಪ್ರಾಣಹರಣ ಮಾಡಿಕೊಳ್ಳುವ ಸಂದರ್ಭವುಂಟಾಗುತ್ತದೆ, ಇದನ್ನು ಹೇಗಾದರೂ ತಪ್ಪಿಸಬೇಕು ಎಂಬ ಮಾತೃಸಹಜ ಕಳಕಳಿಯನ್ನು ಹೊಂದುತ್ತಾಳೆ. ಯಾವ ತಾಯಿಯು ತಾನೆ ತನ್ನ ಮಕ್ಕಳು ಒಬ್ಬರಿಗೊಬ್ಬರು ಹೊಡೆದಾಡುವುದನ್ನು ನೋಡಲು ಬಯಸುತ್ತಾಳೆ? ಅದರಲ್ಲೂ ಸೂರ್ಯಪುತ್ರನು ಎಂತಹ ಪರಾಕ್ರಮಿ ಎಂದು ಅವಳಿಗೆ ತಿಳಿದಿತ್ತು. ಅವನಿಂದ ಆಗುವ ಹಾನಿಯನ್ನು ತಪ್ಪಿಸಲು ಕರ್ಣನನ್ನು ಭೇಟಿ ಮಾಡಿ ಅವನ ಜೊತೆ ಮಾತನಾಡಲು ನಿಶ್ಚಯಿಸಿದಳು. ಕರ್ಣನು ಬೆಳಗಿನ ಸಮಯದಲ್ಲಿ ನದಿಯ ತೀರದಲ್ಲಿ ಸೂರ್ಯನಿಗೆ ಅರ್ಘ್ಯಪ್ರದಾನ ಮಾಡುವ ಸಮಯದಲ್ಲಿ ಅವನ ಎದುರಿಗೆ ಹೋದಳು. ಮೊದಲ ಬಾರಿಗೆ ತಾನು ಅವನ ತಾಯಿ ಎಂಬ ಸತ್ಯವನ್ನು ಅವನಿಗೆ ತಿಳಿಸಿ, ಯುದ್ಧದಲ್ಲಿ ಪಾಂಡವರ ಜೊತೆ ಸೇರುವಂತೆ ಕೇಳಿಕೊಂಡಳು. ಇಷ್ಟು ದಿನ ಈ ಸತ್ಯವನ್ನು ಮರೆಮಾಚಿದ ತಾಯಿಯು ಈಗಲೂ ತನಗಾಗಿ ಅಲ್ಲ ತನ್ನ ಇತರ ಪುತ್ರರಿಗೋಸ್ಕರ ತನ್ನ ಬಳಿ ಬಂದಿದ್ದಾಳೆ ಎಂದು ಯೋಚಿಸುತ್ತಾನೆ ಕರ್ಣ. ಆದರೂ ಬೇಡಿ ಬಂದವರನ್ನು ನಿರಾಶೆ ಮಾಡುವವನಲ್ಲ ಅವನು. ಅರ್ಜುನನ್ನು ಹೊರತುಪಡಿಸಿ, ಬೇರಾವ ಪಾಂಡವನನ್ನೂ ಕೊಲ್ಲುವುದಿಲ್ಲ ಎಂದು ತಾಯಿಗೆ ವಚನವನ್ನು ನೀಡಿದನು. ಆಕೆಯ ರಾಜನೀತಿಯು ಪೂರ್ತಿಯಾಗಿ ಸಫಲವಾಗದಿದ್ದರೂ ತನ್ನ ನಾಲ್ಕು ಮಕ್ಕಳ ಜೀವಕ್ಕೆ ಅಭಯ ಸಿಕ್ಕಂತಾಗುತ್ತದೆ. ಆದರೆ ಇದೇ ವಿಷಯವನ್ನು ಪಾಂಡವರ ಬಳಿ ಮಾತನಾಡಿ ಅವರು ಕರ್ಣನನ್ನು ಕೊಲ್ಲದಿರುವಂತೆ ತಿಳಿಸುವುದಿಲ್ಲ ಅವಳು. ಇದರಿಂದ ಅವಳು ತನ್ನ ಮಕ್ಕಳೆಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲಿಲ್ಲ, ಕರ್ಣನಲ್ಲಿ ಮಲತಾಯಿ ಧೋರಣೆಯನ್ನು ತೋರಿದಳು ಎಂದು ಅನ್ನಿಸದಿರುವುದಿಲ್ಲ.

ಯುದ್ಧದಲ್ಲಿ ಅರ್ಜುನನ ಕೈಯಲ್ಲಿ ಕರ್ಣನ ಸಂಹಾರವಾದ ವಿಷಯವು ಕುಂತಿಗೆ ತಿಳಿಯುತ್ತದೆ. ಕೂಡಲೇ ರಣರಂಗಕ್ಕೆ ಹೋಗಿ ಕರ್ಣನ ದೇಹದ ಮುಂದೆ ಕುಳಿತು ಮಗನೇ ಎಂದು ಪ್ರಲಾಪಿಸತೊಡಗಿದಳು. ತನ್ನ ಮಕ್ಕಳಿಗೆ ಕರ್ಣನ ವಿಷಯವನ್ನು ತಿಳಿಸದೆ ತಪ್ಪು ಮಾಡಿದೆ ಎಂದು ರೋದಿಸತೊಡಗಿದಳು. ಅಲ್ಲಿಗೆ ಬಂದ ಧರ್ಮರಾಯನಿಗೆ ಈ ವಿಷಯವು ತಿಳಿದು ಆಶ್ಚರ್ಯ, ಕೋಪ, ಕರ್ಣನ ಬಗ್ಗೆ ಅನುಕಂಪ ಎಲ್ಲ ಭಾವಗಳೂ ಒಟ್ಟಿಗೆ ಆವಿರ್ಭವಿಸಿದವು. ಕರ್ಣನು ತನ್ನ ಅಣ್ಣ ಎನ್ನುವ ವಿಷಯವು ಮೊದಲೇ ತಿಳಿದಿದ್ದರೆ ಈ ಅನರ್ಥ ಜರುಗುವುದಕ್ಕೆ ತಾನು ಅವಕಾಶ ಕೊಡುತ್ತಿರಲಿಲ್ಲ ಎನ್ನಿಸಿತು. ಇಂತಹ ಗಹನವಾದ ವಿಷಯವನ್ನು ಇಷ್ಟು ದಿನ ತಮ್ಮಿಂದ ಮುಚ್ಚಿಟ್ಟಿದ್ದ ತಾಯಿಯ ಮೇಲೆ ಎಲ್ಲಿಲ್ಲದ ಕೋಪವು ಮೂಡಿತು. ಆ ಕೋಪದಲ್ಲಿ ಅವನು ಹೆಣ್ಣು ಕುಲಕ್ಕೇ ಒಂದು ಶಾಪವನ್ನು ಕೊಟ್ಟುಬಿಡುತ್ತಾನೆ – “ಹೆಂಗಸರಿಗೆ ಇನ್ನು ಮುಂದೆ ಯಾವ ರಹಸ್ಯವನ್ನೂ ಗುಪ್ತವಾಗಿ ಇಟ್ಟುಕೊಳ್ಳಲು ಆಗದಿರಲಿ” ಎಂದು ಶಪಿಸುತ್ತಾನೆ, ಕರ್ಣನ ಮಗ ವೃಷಕೇತುವನ್ನು ಸಂತೈಸಿ ಜೊತೆಗೆ ಕರೆದೊಯ್ಯುತ್ತಾನೆ. ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯ ಸಿಕ್ಕಿದರೂ ಕುಂತಿಯ ಮನಸ್ಸಿಗೆ ನೆಮ್ಮದಿ ಸಿಗಲೇ ಇಲ್ಲ!

ಯುದ್ಧ ಮುಗಿದು ಶಾಂತಿ ಮೂಡಿದ ಮೇಲೆ ತಮ್ಮ ನೂರು ಪುತ್ರರನ್ನು ಹಾಗೂ ಅಳಿಯನನ್ನು ಕಳೆದುಕೊಂಡ ಧೃತರಾಷ್ಟ್ರ ಮತ್ತು ಗಾಂಧಾರಿಯರು ತಾವು ಅರಮನೆಯನ್ನು ತೊರೆದು ವಾನಪ್ರಸ್ಥಕ್ಕೆ ಹೊರಡುವ ನಿರ್ಧಾರವನ್ನು ಮಾಡಿದರು. ಜೀವನದಲ್ಲಿ ಸಾಕಷ್ಟು ನೊಂದು ಬೆಂದಿದ್ದ ಕುಂತಿಯು ಕೂಡ ಅವರ ಜೊತೆಯಲ್ಲಿ ಹೊರಟು ನಿಂತಳು. ಮಕ್ಕಳು, ಸೊಸೆಯಂದಿರು ಎಷ್ಟು ತಡೆದರೂ ಅವಳು ಮನಸ್ಸನ್ನು ಬದಲಾಯಿಸುವುದಿಲ್ಲ. ಆಗ ಭೀಮನು ತನ್ನ ಕೊನೆಯ ಪ್ರಯತ್ನವಾಗಿ ಹೀಗೆನ್ನುತ್ತಾನೆ “ಅಮ್ಮಾ!  ನಿನಗೆ ಕಾಡಿಗೆ ಹೋಗುವ ಇಚ್ಛೆ ಇದ್ದಿದ್ದರೆ ನಮ್ಮನ್ನು ಯುದ್ಧಮಾಡಿ ರಾಜ್ಯವನ್ನು ಗೆಲ್ಲುವಂತೆ ಏಕೆ ಪ್ರೋತ್ಸಾಹಿಸಿದೆ? ಇಷ್ಟೊಂದು ನರಮೇಧದ ಬಳಿಕ ನಾವು ರಾಜ್ಯವನ್ನು ಗೆದ್ದಿದ್ದೇವೆ. ನೀನೇ ನಮ್ಮೊಡನೆ ಇಲ್ಲದಿದ್ದರೆ ಯಾವ ಪುರುಷಾರ್ಥಕ್ಕಾಗಿ ಇದನ್ನೆಲ್ಲ ಸಾಧಿಸಬೇಕಿತ್ತು. ಆದ್ದರಿಂದ ನೀನು ನಮ್ಮೊಡನೆಯೇ ಇರಬೇಕು” ಎಂದು ಕೋರುತ್ತಾನೆ. ಅದಕ್ಕೆ ಕುಂತಿಯು “ಮಗೂ, ನೀವು ಹೇಡಿಗಳಂತೆ ಕೈಕಟ್ಟಿ ಕೂರಬಾರದು, ಕ್ಷತ್ರಿಯೋಚಿತ ಮಾರ್ಗವನ್ನು ಅನುಸರಿಸಿ ದುಷ್ಟರ ದಮನವನ್ನು ಮಾಡಬೇಕು ಎನ್ನುವ ಕಾರಣಕ್ಕಾಗಿ ನಾನು ನಿಮ್ಮನ್ನು ಯುದ್ಧ ಮಾಡುವಂತೆ ಪ್ರೇರೇಪಿಸಿದೆನು. ಅದನ್ನು ಹೊರತುಪಡಿಸಿ ನನಗೆ ಅರಮನೆಯ ಭೋಗ ಸಿಗಬೇಕೆಂಬ ಆಸೆಯಿಂದಲ್ಲ” ಎನ್ನುತ್ತಾ ಮಗನಿಗೆ ಸಾಂತ್ವನವನ್ನು ಹೇಳಿದಳು.   ಮೂವರು ವೃದ್ಧರೂ ಕಾಡಿನ ಕಡೆಗೆ ಪ್ರಯಾಣವನ್ನು ಬೆಳೆಸಿದರು. ತನ್ನ ಅಕ್ಕ, ಭಾವನ ಸೇವೆ ಮಾಡುತ್ತ ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಾಳೆ ಕುಂತಿ. ಕಾಡಿನಲ್ಲಿ ಸ್ವಲ್ಪ ಕಾಲ ವಾಸ ಮಾಡುವಷ್ಟರಲ್ಲಿ ಅನಿರೀಕ್ಷಿತವಾಗಿ ಹಬ್ಬಿದ ಕಾಡ್ಗಿಚ್ಚಿನಲ್ಲಿ ಸಿಲುಕಿ ಮೂವರೂ ಅಸುನೀಗಿದರು. ಬಹುಶಃ ಜೀವನದಲ್ಲಿ ಅವರು ಅನುಭವಿಸಿದ ನೋವಿನ ಬೆಂಕಿಗಿಂತಲೂ ಈ ಕಾಡ್ಗಿಚ್ಚು ಅವರಿಗೆ ಹೆಚ್ಚಿನ ಮನೋಕ್ಲೇಷವನ್ನು ಕೊಟ್ಟಿರಲಾರದು. ಅವರು ಸಂತೋಷದಿಂದಲೇ ತಮ್ಮ ಜೀವನದಲ್ಲಿ ಅನುಭವಿಸುತ್ತಿರುವ ನೋವುಗಳಿಂದ ಬಿಡುಗಡೆ ಸಿಕ್ಕಿತೆಂಬ ಸಮಾಧಾನದಿಂದಲೇ ಪ್ರಾಣತ್ಯಾಗವನ್ನು ಮಾಡಿರಬಹುದು.

ಜಗತ್ತಿಗೆ ನಾಲ್ಕು ಜನ ಮಹಾಮಹಿಮ ಪುತ್ರರನ್ನು ಕೊಟ್ಟ ಮಹಾ ಮಾತೆ ಕುಂತಿ. ಅವಳ ಧೈರ್ಯ, ಪರೋಪಕಾರ ಪ್ರಜ್ಞೆ, ಕಷ್ಟಸಹಿಷ್ಣುತೆ, ಪತಿವ್ರತಾ ಧರ್ಮ ಪಾಲನೆ, ಪುತ್ರವಾತ್ಸಲ್ಯ ಮುಂತಾದ ಸದ್ಗುಣಗಳನ್ನು ಹೊಂದಿದ್ದ ಕುಂತಿಯು ಪಂಚಮಹಾಕನ್ಯೆಯರಲ್ಲಿ ಒಬ್ಬಳಾಗಿ ಜನಮಾನಸದಲ್ಲಿ ನಿಂತಿದ್ದಾಳೆ. ಈಗಲೂ ಕುಂತಿಯು ಜನರ ಆರಾಧ್ಯದೈವವಾಗಿದ್ದಾಳೆ. ಕುಂತಿಯನ್ನು ದೇವತೆಯನ್ನಾಗಿ ಪೂಜಿಸುವ ಸಂಪ್ರದಾಯವು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೂಢಿಯಲ್ಲಿದೆ. ಡಿ. ಲಿಂಗಯ್ಯನವರು ತಮ್ಮ ʻಕೊಂತಿ ಪೂಜೆʼ ಎಂಬ ಪ್ರಬಂಧದಲ್ಲಿ ವಿವರವಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಕುಂತಿಯನ್ನು ಹಳ್ಳಿಗರು ʻಕೊಂತಿʼ ಎಂಬುದಾಗಿ ಕರೆಯುತ್ತಾರೆ. ಈ ಸಂಬಂಧವಾದ ಪೂಜೆಯೇ ʻಕೊಂತಿ ಪೂಜೆʼ. ಪ್ರತಿವರ್ಷದ ಕಾರ್ತಿಕದಲ್ಲಿ ಬೆಳದಿಂಗಳಿರುವ ರಾತ್ರಿಗಳಲ್ಲಿ ನಿರಂತರವಾಗಿ ಹದಿನಾರು ದಿವಸಗಳು ಈ ಪೂಜೆ ನಡೆಯುತ್ತದೆ. ಯಾರಾದರೊಬ್ಬರ ಮನೆಯಲ್ಲಿ ಎರೆಯ ಮಣ್ಣಿನಿಂದ ಮಾಡಿದ ಸ್ತ್ರೀವಿಗ್ರಹವನ್ನು ಕೂರಿಸಿ ಪೂಜಿಸುತ್ತಾರೆ. ಊರ ಹೆಂಗಸರೆಲ್ಲ ಸೇರಿ ಕುಂತಿಗೆ ಸಂಬಂಧಪಟ್ಟ ಹಾಡುಗಳನ್ನು ಹಾಡುತ್ತಾರೆ. ಹೀಗೆ ಹದಿನಾರು ದಿವಸಗಳು ಕಳೆದ ಮೇಲೆ ಗಣಪತಿಯನ್ನು ವಿಸರ್ಜಿಸುವಂತೆ ಕೆರೆಯಲ್ಲಿ ಆ ಮಣ್ಣಿನ ವಿಗ್ರಹವನ್ನು ವಿಸರ್ಜಿಸುತ್ತಾರೆ.

(ಈ ವ್ಯಕ್ತಿಚಿತ್ರವನ್ನು ಎಸ್.‌ ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)