ಕ್ರಿಸ್ತಪೂರ್ವ 80ರ ಕಾಲ. ಪುರಾತನ ರೋಮ್‌ನಲ್ಲಿ ಆಗೊಂದು ಭಯಾನಕ ಗೊಂದಲದ ವಾತಾವರಣವಿತ್ತು. ಕಿರಿದಾದ ರಸ್ತೆಗಳ ನಡುವೆ ಮರದಿಂದ ಕಟ್ಟಿದ ಚಿಕ್ಕಪುಟ್ಟ ಮನೆಗಳು ಒತ್ತೊತ್ತಾಗಿರುತ್ತಿದ್ದವು. ಎಲ್ಲಿಯಾದರೂ ಸಣ್ಣದಾಗಿ ಬೆಂಕಿ ತಗುಲಿದರೂ ಸಾಕು, ಇಡೀ ಪ್ರದೇಶವೇ ಹೊತ್ತಿ ಉರಿಯುತ್ತಿತ್ತು. ಇಂತಹ ಘಟನೆಗಳು ನಡೆದಾಗ, ಕುಟುಂಬಗಳು ಮಹಡಿಯ ಮೇಲೆ ನಿಂತು ಹಾಹಾಕಾರ ಹಾಕುವುದು, ಇದ್ದಬದ್ದ ಸಾಮಾನನ್ನು ಉಳಿಸಿಕೊಳ್ಳಲು ಪರದಾಡುವುದು ಸಾಮಾನ್ಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ, ದಟ್ಟವಾದ ವಿಷಕಾರಿ ಹೊಗೆಯಿಂದಾಗಿ ಉಸಿರುಗಟ್ಟಿ ಸಾಯುವವರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಅಂದಿನ ಕಾಲದಲ್ಲಿ ಅಗ್ನಿಯನ್ನು ನಂದಿಸಲು ಮೀಸಲಾದ ಯಾವುದೇ ಅಗ್ನಿಶಾಮಕ ಪಡೆಯಾಗಲೀ, ವ್ಯವಸ್ಥೆಯಾಗಲೀ ಇರಲಿಲ್ಲ.

ಇಂತಹ ಕಾಲಘಟ್ಟದಲ್ಲಿ ಎದುರಾದವನೇ ಮಾರ್ಕಸ್ ಲಿಸಿನಿಯಸ್ ಕ್ರಾಸಸ್ ಎಂಬ ಉದ್ಯಮಿ. ರೋಮನ್ ಅಂತರ್ಯುದ್ಧಗಳಲ್ಲಿ (Civil Wars) ಅಪಾರ ಅನುಭವ ಹೊಂದಿದ್ದ ಈತ ಅದರಿಂದ ಬದುಕುಳಿದಿದ್ದನು. ಹಲವು ಕಷ್ಟ-ಕಾರ್ಪಣ್ಯಗಳಿಂದಾಗಿ ತನ್ನ ಕುಟುಂಬದವರನ್ನೇ ಕಳೆದುಕೊಂಡಿದ್ದರೂ, ಅವನ ಮಹತ್ವಾಕಾಂಕ್ಷೆ ಮಾತ್ರ ಬಲವಾಗಿತ್ತು. ಊರಿಗೆ ಬೆಂಕಿ ಬಿದ್ದು ಉರಿಯುವಾಗ ಅವನಿಗೆ ಅಲ್ಲಿ ದುರಂತ ಕಾಣಲಿಲ್ಲ; ಬದಲಿಗೆ, ತನಗೊಂದು ಭಾರಿ ಅವಕಾಶ ಗೋಚರಿಸಿತು.

ಯಾರಿಗೂ ತಿಳಿಯದಂತೆ ಅವನು 500 ಜನರ ಖಾಸಗಿ ಗುಲಾಮರ ತಂಡವೊಂದನ್ನು ಕಟ್ಟಿದನು. ಅದರಲ್ಲಿ ಕಲ್ಲಿನ ಕೆಲಸ ಮಾಡುವವರು, ವಾಸ್ತುಶಿಲ್ಪಿಗಳು, ಕಟ್ಟಡ ಕೆಡವುವವರು ಹಾಗೂ ನೀರು ಹೊರುವವರನ್ನು ಸ್ವತಃ ತಾನೇ ಆಯ್ದು ತನ್ನ ಅಗ್ನಿಶಾಮಕ ತಂಡವನ್ನು ರಚಿಸಿದನು. ಅವರೆಲ್ಲರೂ ರಹಸ್ಯವಾಗಿ ತರಬೇತಿ ಪಡೆದು, ಯುದ್ಧಕ್ಕೆ ಸಜ್ಜಾದ ತೋಳಗಳಂತೆ ಕಾಯುತ್ತಾ ಕುಳಿತರು.

ಇದರ ಕುರಿತಾದ ಸುದ್ದಿ ಊರಿನಲ್ಲಿ ಬೇಗನೆ ಹರಡಿತು. ರಾತ್ರಿಯ ಹೊತ್ತು ಎಲ್ಲಿಯಾದರೂ 'ಬೆಂಕಿ... ಬೆಂಕಿ...' ಎಂಬ ಸದ್ದು ಕೇಳಿಬಂದದ್ದೇ ತಡ, ಕ್ರಾಸಸ್‌ನ ದಂಡು ಕುದುರೆಗಳ ಮೇಲೆ ಸವಾರಿ ಮಾಡುತ್ತಾ, ಕೈಯಲ್ಲಿ ಕೊಳ್ಳಿ ಹಿಡಿದು ತಕ್ಷಣ ಅಲ್ಲಿಗೆ ಧಾವಿಸುತ್ತಿತ್ತು. ದಗದಗನೆ ಉರಿಯುವ ಬೆಂಕಿಯ ಬೆಳಕಿನಲ್ಲಿ ಇವರ ಹೆಲ್ಮೆಟ್‌ಗಳು ಪಳಪಳನೆ ಹೊಳೆಯುತ್ತಿದ್ದವು.

ಬೆಂಕಿ ಬಿದ್ದ ಜಾಗಕ್ಕೆ ಹೋಗಿ "ನಾವು ನಿಮ್ಮನ್ನು ರಕ್ಷಿಸುತ್ತೇವೆ" ಎಂದು ಅವರು ಹೇಳುತ್ತಿದ್ದರಾದರೂ, ತಕ್ಷಣಕ್ಕೆ ಬೆಂಕಿಯನ್ನು ನಂದಿಸುತ್ತಿರಲಿಲ್ಲ. ಸುಮ್ಮನೆ ಅಲ್ಲಿ ನಿಲ್ಲಲು ಮಾತ್ರ ಅವರಿಗೆ ಸೂಚನೆ ನೀಡಲಾಗಿತ್ತು. "ನಮ್ಮನ್ನು ಪಾರುಮಾಡಿ, ನಿಮಗೆ ನಾವು ಸ್ವಾತಂತ್ರ್ಯ ಕೊಡುತ್ತೇವೆ" ಎಂದು ಜನ ಬೇಡಿಕೊಂಡರೂ, ಇವರು ಕದಲದೆ ನಿಲ್ಲುತ್ತಿದ್ದರು. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು, "ಇದೇನಿದು? ಇವರು ಬೆಂಕಿ ನಂದಿಸಲು ಸಹಾಯ ಮಾಡುತ್ತಿಲ್ಲವಲ್ಲ! ನಮ್ಮ ಮನೆಗಳಿಗೂ ಬೆಂಕಿ ತಗಲುವ ಮುನ್ನ ಏನಾದರೂ ಮಾಡಿ" ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು.

ಅಷ್ಟು ಹೊತ್ತಿಗೆ ಸರಿಯಾಗಿ ಕ್ರಾಸಸ್‌ನ ಬಂಟನೊಬ್ಬ ಮೆತ್ತಗೆ ಬಂದು, "ನೋಡು, ಈ ಜಾಗವನ್ನು ನನಗೆ ಮಾರಿಬಿಡು. ನಾನು ಕೊಡುವ ಬೆಲೆಗೆ ಒಪ್ಪದಿದ್ದರೆ, ನಿನ್ನ ಇಡೀ ಆಸ್ತಿ ಬೆಂಕಿಯ ಪಾಲು" ಎಂದು ಬೆದರಿಸುತ್ತಿದ್ದನು. ಬೆಂಕಿಯಿಂದ ಮನೆಯನ್ನಾದರೂ ಉಳಿಸಿಕೊಳ್ಳಬೇಕೇ ಅಥವಾ ಪ್ರಾಣ ಉಳಿಸಿಕೊಂಡು ಹೊರಬರಬೇಕೇ ಎಂಬ ಇಕ್ಕಟ್ಟಿಗೆ ಸಿಲುಕಿದ ಮಾಲೀಕರು, ಬೇರೆ ದಾರಿಯಿಲ್ಲದೆ ಆಸ್ತಿಯನ್ನು ಕೇವಲ ಕಾಲು ಭಾಗದಷ್ಟು ಬೆಲೆಗೆ ಮಾರಿ ಹೊರಟುಬಿಡುತ್ತಿದ್ದರು.

ಜಾಗದ ಒಪ್ಪಂದ ಆಗಿದ್ದೇ ತಡ, ಕ್ರಾಸಸ್‌ನ ದಂಡು ಚುರುಕಾಗಿ ಎದ್ದು ನೀರು ಸುರಿದು ಬೆಂಕಿಯನ್ನು ನಂದಿಸುತ್ತಿತ್ತು. ಆ ದಂಡಿನಲ್ಲಿ ಹೆಚ್ಚಿನವರು ಕುಶಲಕರ್ಮಿಗಳು ಹಾಗೂ ಕಟ್ಟಡ ಕಟ್ಟುವವರೇ ಆಗಿದ್ದರಿಂದ, ರಾತ್ರಿ ಬೆಳಗಾಗುವಷ್ಟರಲ್ಲಿ ಸುಟ್ಟು ಹೋದದ್ದನ್ನೆಲ್ಲ ತೆಗೆದು ಖಾಲಿ ಮಾಡುತ್ತಿದ್ದರು. ಕೇವಲ ಒಂದೇ ವಾರದಲ್ಲಿ ಆ ಜಾಗದಲ್ಲಿ ಹೊಸ ಮನೆಯನ್ನು ಕಟ್ಟಿ ಮುಗಿಸುತ್ತಿದ್ದರು.

ಹೀಗೆ ತನ್ನ ಕೈಗೆ ಬಂದ ಜಾಗವನ್ನು ಕ್ರಾಸಸ್ ರೋಮಿನ ಅತಿ ಶ್ರೀಮಂತ ಕುಟುಂಬಗಳಿಗೆ ದುಬಾರಿ ಬೆಲೆಗೆ ಮಾರುತ್ತಿದ್ದ. ಅಥವಾ ಬಾಡಿಗೆಗೆ ಕೊಡುತ್ತಿದ್ದನು. ಒಂದಾದ ಮೇಲೊಂದರಂತೆ ಹೀಗೆ ಹಲವು ಕಟ್ಟಡಗಳನ್ನು ತನ್ನ ಹೆಸರಿಗೆ ಮಾಡಿಕೊಂಡು, ಮಾರಿ ಅಪಾರ ದುಡ್ಡು ಮಾಡಿಕೊಂಡನು. ಒಂದು ಕಾಲದಲ್ಲಿ 200 ಮಿಲಿಯನ್ ಸೆಸ್ಟರ್ಸೆಸ್ (ರೋಮನ್ ನಾಣ್ಯ) ಸಂಪತ್ತು ಅವನ ಬಳಿ ಇತ್ತಂತೆ! ರೋಮನ್ ಸೆನೆಟರ್‌ಗಳನ್ನು ಕೊಂಡುಕೊಳ್ಳುವಷ್ಟು ಅವನಿಗೆ ಕ್ಷಮತೆಯಿತ್ತು. ಸ್ಪಾರ್ಟಕಸ್‌ನ ಗುಲಾಮರ ದಂಗೆಯನ್ನು ಸದೆಬಡಿಯುವಷ್ಟು ಹಣ ಹಾಗೂ ಪಾಂಪೆ ಮತ್ತು ಜೂಲಿಯಸ್ ಸೀಸರ್‌ಗೆ ಸರಿಸಮಾನವಾಗಿ ನಿಲ್ಲುವಷ್ಟು ಸಂಪತ್ತು ಅವನಲ್ಲಿತ್ತು.

ಇದು ಕ್ರಿಸ್ತಪೂರ್ವ ಕಾಲದ ಕಥೆ. ಈಗಿನ ಕಾಲಕ್ಕೆ ಬರೋಣ. ಬೆಂಗಳೂರಿನಂತಹ ಮಹಾನಗರಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ಎಗ್ಗಿಲ್ಲದೆ ಸಾಗಿದೆ. ರೈತರ ಬಳಿ ಇರುವ ಜಾಗವನ್ನು, ಅವರಿಗೆ ತುರ್ತು ಪರಿಸ್ಥಿತಿ ಬಂದಾಗ ಅತ್ಯಂತ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ನಮ್ಮ ಹೊಸ ಯುಗದ 'ಕ್ರಾಸಸ್'ಗಳು ಕಾದು ಕುಳಿತಿರುತ್ತಾರೆ. ಇವರುಗಳಿಗೆ ಕುಶಲಕರ್ಮಿಗಳಾಗಲೀ, ಕಟ್ಟಡ ಕಟ್ಟುವವರಾಗಲೀ ಬೇಕೆಂದೇನಿಲ್ಲ. ಜಾಗವಿದ್ದರೆ ಸಾಕು, ಬೆಂಗಳೂರಿನ ಜನ ಯಾವತ್ತಿದ್ದರೂ ಖರೀದಿಸುತ್ತಾರೆ. ಹೂಡಿಕೆಯ (Investment) ಕಾರಣಕ್ಕೆಂದು ಅಥವಾ ಮನೆ ಕಟ್ಟಲೆಂದು ಜಾಗ ಹುಡುಕುವವರ ಸಂಖ್ಯೆ ಕೋವಿಡ್ ನಂತರವಂತೂ ಅತಿ ಹೆಚ್ಚಾಗಿದೆ.

ಕ್ರಾಸಸ್‌ನ ಈ ವ್ಯಾಪಾರ ಮಾದರಿ ಇಂದಿನ ದಿನಗಳಲ್ಲೂ ನಿಮಗೆ ಕಾಣಲು ಸಿಗುತ್ತದೆ. ಬೇರೊಬ್ಬರ ಸಂದಿಗ್ಧ ಪರಿಸ್ಥಿತಿಯಲ್ಲಿ ತನಗೊಂದು ಅವಕಾಶ ಹುಡುಕಿಕೊಂಡು, ಅದರಿಂದ ಕೋಟಿಗಟ್ಟಲೆ ದುಡ್ಡು ಮಾಡಿಕೊಳ್ಳುವವರನ್ನು ನಾವು ಇಂದು ನೋಡುತ್ತಲೇ ಇರುತ್ತೇವೆ. ಹೀಗೆ ಸಂಪಾದಿಸಿದ ದುಡ್ಡು ಮುಂದೆ ರಾಜಕಾರಣಕ್ಕೆ ಹಾಗೂ ಅಧಿಕಾರದಲ್ಲಿ ಬೇರೂರಲು ಉಪಯೋಗವಾಗುವುದೂ ಕೂಡ ಸಾಮಾನ್ಯವಾಗಿದೆ.

ಸಾವಿರಾರು ವರ್ಷಗಳ ಹಿಂದಿನ ಕಥೆಯೊಂದು ಇವತ್ತಿಗೂ ನಮ್ಮ ಕಣ್ಮುಂದೆ ಯಾವುದಾದರೊಂದು ರೂಪದಲ್ಲಿ ನಡೆಯುತ್ತಿದ್ದರೂ, ಅದು ನಮಗೆ ಅರಿವಿಗೆ ಬಾರದಂತೆ ಇರುವುದು ವಿಪರ್ಯಾಸ.

ಚಿತ್ರ: Sergey Sosnovskiy (ವಿಕಿಮೀಡಿಯ ಕಾಮನ್ಸ್).