ರಾಘವ ತನ್ನ ತಂದೆಗಾಗಿ ಒಂದು ಅಂಗಿಯನ್ನು ಕೊಳ್ಳಲು ನಗರದ ಪ್ರತಿಷ್ಠಿತ ಬಟ್ಟೆ ಅಂಗಡಿಗೆ ಬಂದಿದ್ದ. ಹಬ್ಬ ಹರಿದಿನಗಳ ಸಮಯವಾದ್ದರಿಂದ ಅಂಗಡಿಯ ತುಂಬೆಲ್ಲಾ ಜನವೋ ಜನ. ತಂದೆಗೆ ಹೆಚ್ಚು ಪ್ರಿಯವಾದ ತಿಳಿ ನೀಲಿ ಬಣ್ಣದ ರೇಮಂಡ್ ಸಂಸ್ಥೆಯ ಅಂಗಿಯನ್ನೇ ಹುಡುಕುತ್ತಿದ್ದ. ಅವನ ಕಣ್ಣಿಗೆ ಅದು ಬೀಳಲೇ ಇಲ್ಲ. ಅಲ್ಲಿದ್ದ ಒಬ್ಬ ಸಹಾಯಕನನ್ನು ಕರೆದು ಕೇಳಿದ. ರಾಘವನನ್ನು ಮಹಡಿಯ ಮೇಲೆ ಪುರುಷರಿಗಾಗಿಯೇ ಉಡುಪಗಳಿದ್ದ ವಿಭಾಗಕ್ಕೆ ಕರೆದುಕೊಂಡು ಹೋದನು. ಬಹಳ ಸಮಯದ ಹುಡುಕಾಟದ ನಂತರ ಅವನಿಗೆ ಬೇಕಾದ ತಿಳಿ ನೀಲಿ ಅಂಗಿ ದೊರೆಯಿತು.ಇದರ ನಡುವೆ ಮನೆಯಿಂದ ಎರಡು ಬಾರೀ ಕರೆ ಬಂತು. ಇಲ್ಲಿಂದ ನೇರವಾಗಿ ಊರಿಗೇ ಹೋಗಿ ತಂದೆಗೆ ಸರ್ಪ್ರೈಸ್ ಕೊಡುವುದೆಂದು ನಿರ್ಧರಿಸಿದ್ದ ರಾಘವ ಕರೆಯನ್ನು ಸ್ವೀಕರಿಸಲಿಲ್ಲ. ಮತ್ತು ಫೋನನ್ನು ಸ್ವಿಚ್ ಆಫ್ ಮಾಡಿದನು.ರಾಘವನ ಹುಡುಕುವಿಕೆಯ ಕಾತುರತೆಯನ್ನು ಕಂಡು ಅಲ್ಲಿನ ಸಹಾಯಕ ಕೇಳಿದ ,
“ಯಾರಿಗೆ ಸರ್!! ಈ ಅಂಗಿ? “
“ಇದು.ಇದು... ನನ್ನ ತಂದೆಗೆ “ ಎಂದು ಹೇಳಿದಾಗ, ರಾಘವನ ಮುಖ ಅರಳಿದ ಹೂವಿನಂತಾಗಿತ್ತು.ತಂದೆಗೆ ಇಷ್ಟವಾದ ಅಂಗಿ ದೊರೆತಿದಕ್ಕೆ ಸಂತೋಷವಾಯಿತು. ಕಳೆದ ಬಾರಿ ತಾನಿದ್ದ ಆರ್ಥಿಕ ಪರಿಸ್ಥಿತಿಯಲ್ಲಿ ತಂದೆಗೆ ಅದನ್ನು ಕೊಡಿಸಲು ಸಾಧ್ಯವಾಗಿರಲಿಲ್ಲ ಎಂದು ಯೋಚಿಸುತ್ತಲೇ. ಅವನ ಆಲೋಚನೆ ಅವನನ್ನು ಒಂದು ವರ್ಷದ ಹಿಂದೆ ಕರೆದುಕೊಂಡು ಹೋಯಿತು.
ಆಗ ರಾಘವನ ತಂಗಿಯ ಮದುವೆಯ ಸಂಧರ್ಭ. ತನ್ನ ತಂಗಿಯ ಮದುವೆಗಾಗಿ ಎಲ್ಲೆಲ್ಲಿ ಸಾಧ್ಯವೋ ಎಲ್ಲಾ ಕಡೆಯಿಂದ ಸಾಲವನ್ನು ಪಡೆದು ಅದರಿಂದ ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಮುಗಿಸಿದ್ದ. ಆದರೆ ಮದುವೆಯ ದಿನದ ಮೇಲಿನ ಖರ್ಚಿಗೆ ಅವನ ಜೇಬಿನಲ್ಲಿ ಒಂದು ಪೈಸೆಯೂ ಇರಲಿಲ್ಲ. ಏನು ಮಾಡುವುದು? ಎಂದು ಯೋಚಿಸುತ್ತಿರವಾಗಲೇ, ಅವನ ಆಪ್ತಮಿತ್ರ ವಿನೋದ ಪರಿಸ್ಥಿತಿಯನ್ನು ಅರಿತು. ಅವನ ಜೇಬಿಗೆ ಮೂವತ್ತು ಸಾವಿರಗಳ ನೋಟಿನ ಕಂತನ್ನು ಹಾಕಿದ್ದ. ಸ್ನೇಹಿತರ ಸಹಾಯದಿಂದ ಮದುವೆಯನ್ನು ಗಂಡಿನ ಮನೆಯವರು ಬಯಸಿದಂತೆ ಅದ್ಧೂರಿಯಾಗಿಯೇ ಮಾಡಿ ಮುಗಿಸಿದ್ದ.
ಆಗವನಿಗೆ ಬರುತ್ತಿದ್ದ ಸಂಬಳದಲ್ಲಿ ಸಾಲಕ್ಕಾದ ಬಡ್ಡಿಯನ್ನು ಮಾತ್ರ ತೀರಿಸಿ ಉಳಿದ ಹಣ ಮನೆಯ ಖರ್ಚಿಗೆ ಸರಿ ಹೋಗುತ್ತಿತ್ತು.
ತಂದೆ ಕೃಷ್ಣಯ್ಯ ತನ್ನ ನೇಕಾರ ವೃತ್ತಿಯಲ್ಲಿ ಸಾಕಷ್ಟು ನಷ್ಟವನ್ನು ಹೊಂದಿ, ಹರಸಾಹಸ ಪಡುತ್ತಿದ್ದಾಗ, ರಾಘವ ಇನ್ನೂ ಕೆಲಸವನ್ನು ಹುಡುಕುತ್ತಿದ್ದ. ಸಾಲಗಾರರ ಹಾವಳಿ ಒಂದು ಕಡೆಯಾದರೆ, ನೇಯ್ದ ಸೀರೆಗಳಿಗೆ ಒಳ್ಳೆಯ ಬೆಲೆಯು ಸಿಗದೇ ಅತೀವ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಒಬ್ಬ ಸೇಟು ಕೃಷ್ಣಯ್ಯನ ಬಳಿ ಸೀರೆಗಳನ್ನು ತೆಗೆದುಕೊಂಡು ,ಹಣವನ್ನು ಕೊಡದೇ ಸತಾಯಿಸುತ್ತಿದ್ದ. ಅವನ ಬಳಿ ಒಂದು ವರ್ಷದಿಂದಲೂ ಅಲೆದಾಡುತ್ತಿದ್ದ. ಇಂತಹ ಸ್ಥಿತಿಯಲ್ಲಿಯೂ ಪರೋಪಕಾರಿಯಾದ ಕೃಷ್ಣಯ್ಯ ತನ್ನ ಸಂಬಂಧಿಕರಿಗೆ , ಸ್ನೇಹಿತರಿಗೆ ಸಾಲವನ್ನು ಕೊಡಿಸುವುದರಲ್ಲಿ ನಿಸ್ಸೀಮರು. ಕೊನೆಗೆ ಅವರು ಸಾಲವನ್ನು ತೀರಿಸದೇ ಹೋದರೇ ಅದೂ ಕೃಷ್ಣಯ್ಯನ ತಲೆಗೆ ಬರುತ್ತಿತ್ತು. ಈ ವಿಷಯದಲ್ಲಿ ತಂದೆ ಮಗನಿಗೆ ನಿತ್ಯವೂ ಮನಸ್ತಾಪ ತಪ್ಪಿದ್ದಲ್ಲ. ಆದರೂ ಕೃಷ್ಣಯ್ಯ ತನ್ನ ಪರೋಪಕಾರದ ಬುದ್ಧಿಯನ್ನು ಬಿಡುತ್ತಿರಲಿಲ್ಲ. ಕೃಷ್ಣಯ್ಯನ ಸಂಪಾದನೆ ಆರಕ್ಕೆ ಹೇಳದೇ ಮೂರಕ್ಕೆ ಬೀಳದೇ ಹೇಗೋ ಸಾಗುತ್ತಿತ್ತು.
ರಾಘವನಿಗೆ ಎಂಜನಿಯರಿಂಗ್ ಮುಗಿಸಿ ಒಂದು ವರ್ಷವಾದರೂ ಕೆಲಸ ಸಿಗದೇ ಒದ್ದಾಡುತ್ತಿದ್ದ, ಜೊತೆಗೆ ತಂದೆಯ ಸಾಲ ಬೆಟ್ಟದಂತೆ ಬೆಳೆಯುತ್ತಿತ್ತು. ಕಡೆಗೆ ಹೇಗೋ ಸಾಹಸ ಪಟ್ಟು ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಕೆಲಸಕ್ಕೆ ಸೇರಿದ ಮೊದಲ ವರ್ಷದಲ್ಲೇ ಬರುತ್ತಿದ್ದ ಸಣ್ಣ ಸಂಬಳದಲ್ಲೇ ತಂದೆಯ ಸಾಲದ ಹೆಚ್ಚು ಪಾಲನ್ನು ತೀರಿಸಿದ್ದ. ಮನೆಯ ಮೇಲಿನ ಸಾಲವನ್ನೂ ತೀರಿಸಿ ಮನೆಯ ಪತ್ರವನ್ನೂ ಬಿಡಿಸಿಕೊಂಡು ಬಂದಿದ್ದ. ಇನ್ನೇನು ನಿರಾಳವಾಗಿ ಜೀವನವನ್ನು ಸಾಗಿಸಬಹುದು ಎಂದು ಯೋಚಿಸುತ್ತಿರವಾಗಲೇ, ಅವನಿಗೆ ಗೊತ್ತಿಲ್ಲದೇ ತಂದೆ ತಂಗಿ ಶಾರದೆಯ ಮದುವೆಯನ್ನು ನಿರ್ಧರಿಸಿದ್ದರು. ಇದು ಅವನಿಗೆ ಕೋಪ ತರಿಸಿದರೂ ವಿಧಿಯಿಲ್ಲದೇ ಮದುವೆಗೆ ಸಿದ್ಧತೆ ನಡೆಸಬೇಕಾಯಿತು. ಗಂಡಿನ ಮನೆಯವರ ಅತಿರೇಕದ ಬೇಡಿಕೆಗಳಿಗೆ ಬೇಸತ್ತು ,ಇತ್ತ ಅವರನ್ನು ಎದುರಿಸಲು ಆಗದೇ ತಂದೆಗೆ ಬೈಯ್ಯಲು ಆಗದೇ ಮನಸ್ಸಿನಲ್ಲಿಯೇ ದುಗುಡವನ್ನು ನುಂಗಿ ನಗುತ್ತ ಎಲ್ಲರೊಂದಿಗೆ ಮಾತನಾಡುತ್ತಿದ್ದನು. ಈಗ ಬರುತ್ತಿದ್ದ ಸಂಬಳ ಸಾಲವನ್ನೂ ತೀರಿಸಲು ಸಾಧ್ಯವಾಗದೇ ಬೇರೆ ಕಂಪನಿಗಳಲ್ಲಿ ಕೆಲಸಕ್ಕಾಗಿ ಅರ್ಜಿಗಳನ್ನು ಹಾಕುತ್ತಿದ್ದನು.
ಇದೇ ಸಮಯದಲ್ಲಿ ಗಂಡನ ಮನೆಗೆ ಹೋಗಿದ್ದ ತಂಗಿ ಮೊದಲ ಹಬ್ಬಕ್ಕೆಂದು ತವರಿಗೆ ಬಂದಿದ್ದಳು. ಅದು ಮೊದಲ ಗೌರಿ ಹಬ್ಬ. ಹಬ್ಬವೆಂದರೇ ಸುಮ್ಮನೆ ಆಗುತ್ತದೆಯೇ. ರಾಘವ ಮನೆಗೆ ತಲುಪುವಷ್ಟರಲ್ಲಿ ತಾಯಿಯ ದೊಡ್ಡ ಪಟ್ಟಿ ಅವನ ಕೈಯಲ್ಲಿತ್ತು. ತಂದೆಯ ಕಡೆ ನೋಡಿದರೇ ಅವರ ಮುಖ ಸಹಜವಾಗಿಯೇ ಇತ್ತು. ಇದರಿಂದಾಗುವ ಆರ್ಥಿಕ ಹೊರೆಯ ಬಗ್ಗೆ ಅವರ ಯೋಚನೆಯಿರಲಿಲ್ಲ. ಬಂದ ಮಗಳು ಅಳಿಯಂದರನ್ನು ಉಪಚರಿಸುವುದರಲ್ಲಿ ಉತ್ಸುಕರಾಗಿದ್ದರು. ರಾಘವನ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಏನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದನು. ಅಷ್ಟರಲ್ಲಿ ತಂದೆ ಕೃಷ್ಣಯ್ಯ ಹೊರಗೆ ಬಂದು , ಮಗನು ಪೇಟೆಗೆ ಹೋಗದೇ ಇನ್ನೂ ಜಗುಲಿಯ ಮೇಲೆ ಕುಳಿತಿರುವುದನ್ನು ನೋಡಿ, ಸ್ವಲ್ಪ ಜೋರಾದ ಧ್ವನಿಯಲ್ಲಿಯೇ
“ರಾಘವ!! ಈಗಾಗಲೇ ಬಹಳ ಸಮಯವಾಗಿದೆ. ಬೇಗ ಪೇಟೆಗೆ ಹೋಗಿ ಹಬ್ಬಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬಾ “ ಎಂದರು.
ರಾಘವನಿಗೆ ಕೋಪ ಬಂದರೂ ಬಾಯಲ್ಲಿಯೇ ಅದುಮಿಟ್ಟುಕೊಂಡು.
“ಅಪ್ಪಾ!! ಇನ್ನು ಸ್ವಲ್ಪ ದಿನ ಕಾದು ತಂಗಿಯ ಮದುವೆ ಮಾಡ ಬಹುದಿತ್ತಲ್ಲಾ. ನೀವು ಮಾಡಿದ್ದ ಸಾಲ ತೀರಿಸಿ ಹೆಚ್ಚು ಸಮಯವಾಗಿರಲಿಲ್ಲ. ಸ್ವಲ್ಪ ದುಡ್ಡನ್ನು ಹೊಂದಿಸಿ ನಂತರ ಮಾಡಿದ್ದರೇ.?..... ಈಗ ನೋಡಿ ಬಂದ ಹಣ ಮದುವೆಗೆ ಆದ ಸಾಲದ ಬಡ್ಡಿಯನ್ನು ಮಾತ್ರ ತೀರಿಸಲು ಸಾಲುತ್ತಿದೆ. ಮೇಲಾಗಿ ಈ ಖರ್ಚುಗಳು ಬೇರೇ. ಈಗ ನನ್ನ ಬಳಿ ಹಣವಿಲ್ಲ. ಏನು ಮಾಡುವುದು.?”
“ಅದಕ್ಕೇಕೆ ಚಿಂತೆ ರಾಘವ!!!ನಾನು ನೋಡಿಕೊಳ್ಳುತ್ತೇನೆ. ಮಗಳು ಅಳಿಯ ಸದಾ ಬರುವುದಿಲ್ಲವಲ್ಲಾ. ಇದು ಬೇರೇ ತವರುಮನೆಗೆ ಮರಳಿ ಬಂದಿರುವ ಮೊದಲ ಹಬ್ಬದ ಸಮಯ.”
“ಅಪ್ಪಾ !! ನಿಮ್ಮ ಬಳಿ ಹಣವೆಲ್ಲಿದೆ? ಅದು ಹೇಗೆ ಈ ಪರಿಸ್ಥಿತಿಯನ್ನು ನಿಭಾಯಿಸುವುದೋ ತಿಳಿಯದು ? “
“ನೀನೇಕೆ ಅಷ್ಟು ಯೋಚಿಸುತ್ತೀಯಾ? ನನ್ನ ಸ್ನೇಹಿತ ಚಂದುಲಾಲ್ ಇದ್ದಾನಲ್ಲ ಅವನ ಬಳಿ ಕೇಳಿದರೇ ಹಣವನ್ನು ಖಂಡಿತಾ ಕೊಡುತ್ತಾನೆ. ನನಗೆ ಇಲ್ಲವೆಂದು ಇದುವರೆಗೂ ಹೇಳಿಯೇ ಇಲ್ಲ.”
“ಏನು? ಮತ್ತೆ ಸಾಲ ಮಾಡುತ್ತೀರಾ? ಬೇಡ ಬೇಡ ಕಳೆದ ಬಾರಿ ನೀವು ಮಾಡಿದ ಸಾಲಕ್ಕೆ ಚಕ್ರ ಬಡ್ಡಿಯನ್ನು ಕಟ್ಟೀ ಕಟ್ಟೀ ನಾನು ಸುಸ್ತಾಗಿ ಹೋಗಿದ್ದೇನೆ. ನೀವು ಏನನ್ನೂ ಮಾಡದೇ ಸುಮ್ಮನಿರಿ. ನಾನೇ ಏನಾದರೂ ವ್ಯವಸ್ಥೆ ಮಾಡುತ್ತೇನೆ, “ಎಂದು ಸ್ವಲ್ಪ ಖಾರವಾಗಿಯೇ ಹೇಳಿದ.
ಅದಕ್ಕೆ ಕೃಷ್ಣಯ್ಯ ನೊಂದುಕೊಂಡರೂ ಏನು ಮಾತಾಡಲು ಹೋಗಲಿಲ್ಲ.ಪ್ರಸ್ತುತ ಅವರದು ನಿಸ್ಸಹಾಯಕ ಸ್ಥಿತಿ.
ರಾಘವ ಹಣದ ಬಗ್ಗೆ ಯೋಚಿಸುತ್ತಲೇ , ಮನೆಯಿಂದ ಹೊರಗೆ ಬರುತ್ತಿದ್ದಾಗ. ಅವನ ಫೋನಿಗೆ ಗೆಳೆಯ ವಿನೋದನ ಕರೆ ಬಂದಿತ್ತು.
ಸ್ನೇಹಿತನ ಮಾತಿನ ಧಾಟಿಯಲ್ಲಿಯೇ ಪರಿಸ್ಥಿತಿಯನ್ನರಿತ ವಿನೋದ,
“ರಾಘವ!! ನಿನ್ನ ಧ್ವನಿಯಲ್ಲಿ ಏನೋ ವಿಷಾದವಿದೆ. ಏನು ವಿಷಯ.? ಏನು ಸಮಸ್ಯೆ?”
“ವಿನೋದ್!! ನಿನಗೇ ಗೊತ್ತು ಮೊದಲು ಸಾಲದ ಹೊರೆ ನಂತರ ತಂಗಿಯ ಮದುವೆಯ ಖರ್ಚು , ನನ್ನ ತಂದೆಯನ್ನು ಸಾಲದಿಂದ ಮುಕ್ತನನ್ನಾಗಿ ಮಾಡಿ ಈಗ ನಾನು ಸಾಲದ ಹೊರೆಯನ್ನು ಹೊರುತ್ತಿದ್ದೇನೆ. ಅದರ ಜೊತೆ ತಂಗಿ ತನ್ನ ಗಂಡನೊಂದಿಗೆ ಹಬ್ಬಕ್ಕೆಂದು ತವರಿಗೆ ಬಂದಿದ್ದಾಳೆ. ಈಗ ನೋಡಿದರೇ ನನ್ನ ಬಳಿ ಒಂದು ಪೈಸೆ ಹಣವಿಲ್ಲ. ತಾಯಿ ಬೇರೆ ಉದ್ದ ಪಟ್ಟಿಯನ್ನು ಕೊಟ್ಟಿದ್ದಾರೆ. ಏನು ಮಾಡುವುದು “ ಎಂದು ಯೋಚಿಸುತ್ತಿದ್ದೆ.
“ರಾಘವ!! ಹೆಚ್ಚು ಯೋಚನೆ ಬೇಡ.ಎಷ್ಟು ಬೇಕು. ನಿನ್ನ ಬ್ಯಾಂಕಿನ ವಿವರಗಳು ಹೇಳು, ಈಗಲೇ ಕಳಿಸುತ್ತೇನೆ.”
“ಅದೂ.. ಈಗಾಗಲೇ ನಿನ್ನ ಬಳಿ ೩೦ ಸಾವಿರ ತೆಗೆದುಕೊಂಡಿದ್ದೇನೆ. ಮತ್ತೇ...”
“ಮತ್ತೆ.. ಎಲ್ಲವನ್ನೂ ಒಟ್ಟಿಗೇ ತೀರಿಸು. ಈಗ ಎಷ್ಟು ಬೇಕು?”
“ಹತ್ತು.. ಹತ್ತು ಸಾವಿರ “ಎಂದು ತೊದಲುತ್ತಾ ಹೇಳಿದ ರಾಘವ. “ಸರಿ ಈಗಲೇ ಕಳಿಸುತ್ತೇನೆ “ ಎಂದು ಕರೆ ಕಡಿತವಾಗಿತ್ತು.
ಮುಂದಿನ ಕೆಲವೇ ನಿಮಿಷಗಳಲ್ಲಿ ರಾಘವನ ಖಾತೆಗೆ ೧೦ ಸಾವಿರ ಬಂದು ಸೇರಿತ್ತು. ಬಂದ ಹಣದೊಂದಿಗೆ ತಂದೆಯನ್ನು ಕರೆದುಕೊಂಡು ಪೇಟೆಗೆ ಹೋದ ರಾಘವ. ಪಟ್ಟಿಯಲ್ಲಿದ್ದ ಎಲ್ಲವನ್ನೂ ತೆಗೆದುಕೊಂಡು. ಕೊನೆಗೆ ಬಟ್ಟೆಯ ಅಂಗಡಿಗೆ ಹೋದ. ಅಲ್ಲಿ ಕೃಷ್ಣಯ್ಯ ಮಗಳು ಅಳಿಯನಿಗೆ ಒಳ್ಳೆಯ ಬಟ್ಟೆಯನ್ನೇ ಖರೀಸಿದರು. ರಾಘವ ಮನೆಯವರಿಗೆಲ್ಲಾ ಸಾಧಾರಣ ಬೆಲೆಯ ಬಟ್ಟೆಯನ್ನು ತೆಗೆದುಕೊಂಡ. ಆದರೆ ಕೃಷ್ಣಯ್ಯನ ಕಣ್ಣು ಮಾತ್ರ ಏಕೋ ರೇಮಂಡ್ ಕಂಪೆನಿಯ ಆ ತೆಳು ನೀಲಿ ಬಣ್ಣದ ಅಂಗಿಯ ಮೇಲೆ ಹೋಗಿತ್ತು.
“ರಾಘವ!! ನನಗೆ ಆ ಅಂಗಿಯನ್ನು ಕೊಡಿಸುವೆಯಾ? “ಎಂದರು ಮೆಲ್ಲನೆ.
ಆದರೆ ರಾಘವನ ಜೇಬು ಖಾಲಿಯಾಗಿತ್ತು.
ಅವನು ಕೊಂಚ ಬೇಸರದಿಂದಲೇ, “ಅಪ್ಪಾ!! ಈಗ ನನ್ನ ಬಳಿ ಹಣವಿಲ್ಲ, ಮುಂದಿನ ಬಾರಿ ಖಂಡಿತಾ ಕೊಡಿಸುತ್ತೇನೆ “ಎಂದನು.
ಕೃಷ್ಣಯ್ಯನ ಮುಖ ಬಾಡಿದರೂ, ಪರಿಸ್ಥಿತಿಯನ್ನು ಅರಿತು ಸುಮ್ಮನಾದರು.
ಇದು ಕಳೆದು ಒಂದು ವರ್ಷವಾದರೂ ಹೊಸ ಅಂಗಿಯನ್ನು ಕೊಡಿಸಲು ರಾಘವನಿಗೆ ಸಾಧ್ಯವಾಗಿರಲಿಲ್ಲ.ಗೌರಿ ಗಣೇಶನ ಹಬ್ಬ ಮತ್ತೆ ಬಂದಿತ್ತು. ತಾನೀಗ ಹೊಸ ಸಂಸ್ಥೆಗೆ ಸೇರಿದ್ದ, ಸಂಬಳ ಹೆಚ್ಚು ಬರುತ್ತಿತ್ತು. ಮೊದಲ ತಿಂಗಳ ಸಂಬಳದಲ್ಲೇ ತಂದೆಗೆ ಅಂಗಿಯನ್ನು ಕೊಳ್ಳಲು ಬಂದು.ಸಂತೋಷದಿಂದ ಅಂಗಿಯನ್ನು ಖರೀದಿಸಿ ಹೊರಗೆ ಬಂದಿದ್ದ. ಹೊರ ಬಂದ ತಕ್ಷಣ ಏನೋ ನೆನಪಾಗಿ ಫೋನನ್ನು ಆನ್ ಮಾಡಿದ. ಅದರಲ್ಲಿ ಹಲವು ಸಂದೇಶಗಳು, ಕರೆಗಳು. ಅದನ್ನು ಕಂಡು ಆಶ್ಚರ್ಯವಾಯಿತು ಮತ್ತು ಮನದಲ್ಲೇನೋ ಅರಿಯದ ಆತಂಕ. ಹೊಟ್ಟೆಯಲ್ಲಿ ಸಂಕಟ ಒಮ್ಮೆಲೇ ಆಯಿತು.ಅವನು ಫೋನ್ ಆನ್ ಮಾಡಿದ ಕೆಲವೇ ಕ್ಷಣದಲ್ಲಿ ಕರೆ ಬಂತು.ಕರೆಯನ್ನು ಸ್ವೀಕರಿಸಿದ.
ಅತ್ತಕಡೆ ರಾಘವನ ತಾಯಿ ಬಹಳ ಗಾಬರಿಯಾಗಿದ್ದರು, ಅಳುತ್ತಿದ್ದರು. ವಿಷಯವೇನೆಂದು ಕೇಳಿದರೇ , ಅವರು ಉತ್ತರ ನೀಡುವ ಸ್ಥಿತಿಯಲ್ಲಿರಲಿಲ್ಲ. ಅವರ ಬಳಿ ಫೋನ್ ತೆಗೆದುಕೊಂಡು ಸ್ನೇಹಿತ ವಿನೋದ್ ಮಾತನಾಡಿದ.
“ರಾಘವ!! ನಾನು ಹೇಳುತ್ತಿರುವ ವಿಷಯವನ್ನು ಕೇಳಲು ನಿನ್ನ ಗುಂಡಿಗೆಯನ್ನು ಗಟ್ಟಿ ಮಾಡಿಕೊ “ ಎಂದ.
ರಾಘವನ ಮನಸ್ಸು ಕೇಡನ್ನು ಎದುರು ನೋಡುವಂತಿತ್ತು. ಎದೆಯಲ್ಲಿ ಅತೀವ ಸಂಕಟ. “ವಿನೋದ್!! ಅದು ಏನೆಂದು ಬೇಗ ಹೇಳು ಪರವಾಗಿಲ್ಲ.”
“ಅದು.. ಅದು...ನಿಮ್ಮ ತಂದೆಗೆ ಹೃಧಯಾಘಾತ ಸಂಭವಿಸಿದೆ. ನಿನಗೆ ಬಹಳ ಸಲ ಕರೆ ಮಾಡಿದೆವು, ಆದರೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಶೀಘ್ರವೇ ಆಂಬುಲೆನ್ಸ್ ಕರೆದು, ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅವರು ಮಾರ್ಗ ಮಧ್ಯದಲ್ಲೇ ನಮ್ಮನ್ನೆಲ್ಲಾ ಆಗಲಿ ಪರಲೋಕಕ್ಕೆ ಹೋದರು. ವಿಧಿಯಿಲ್ಲದೇ ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಬಂದೆವು. ಈ ಪರಿಸ್ಥಿತಿಯಲ್ಲಿ ನೀನು ಧೈರ್ಯವಾಗಿರಬೇಕು, ಬೇಗನೇ ಊರಿಗೆ ಹೊರಟು ಬಾ “ ಎಂದು ಕರೆಯನ್ನು ಕಡಿತಗೊಳಿಸಿದ.
ರಾಘವ ತಾನು ಏತಕ್ಕಾಗಿ ಫೋನ್ ಸ್ವಿಚ್ ಆಫ್ ಮಾಡಿದೆ. ತಂದೆ ನನಗೆ ಏನಾದರೂ ಹೇಳಲು ಪ್ರಯತ್ನಿಸುತ್ತಿದ್ದರೇ? ಅವರ ಕೊನೆಯ ಮಾತುಗಳನ್ನೂ ಕೇಳಲು ಸಾಧ್ಯವಾಗಲಿಲ್ಲ, ಎಂತಹ ನತದೃಷ್ಟ ನಾನು. ಕಣ್ಣುಗಳು ಮಂಜಾಗಿ ಸುತ್ತಲೂ ಕತ್ತಲೆ ಆವರಿಸಿದಂತಾಗಿ ರಾಘವ ಅಲ್ಲೇ ಮೆಟ್ಟಿಲ ಮೇಲೆ ಕುಸಿದ, ಅಲ್ಲಿದ್ದ ಜನ ಗಾಬರಿಯಿಂದ ಓಡಿ ಬಂದರು. ಅವನ ಸ್ಥಿತಿಯನ್ನು ನೋಡಿ, ಮುಖಕ್ಕೆ ನೀರನ್ನು ಚುಮುಕಿಸಿ,ಎಬ್ಬಿಸಿ ಕುಡಿಯಲು ನೀರನ್ನು ಕೊಟ್ಟರು. ರಾಘವ ಆಘಾತದಿಂದ ಸ್ವಲ್ಪ ಚೇತರಿಸಿಕೊಂಡ.
ಅಂಗಡಿಯ ಸಹಾಯಕ ಮೆಲ್ಲಗೆ “ಏನಾಯಿತು ಸರ್? “ ಎಂದ.
ಕೈಯಲ್ಲಿದ್ದ ನೀಲಿ ಬಣ್ಣದ ಅಂಗಿಯ ಕಡೆ ತೋರಿಸಿ, ಅದನ್ನು ಉಡಲು ನನ್ನ ತಂದೆ ಇಲ್ಲ ಎಂದು ವಿಷಾದದ ನಗೆ ಬೀರಿದನು.
ತನ್ನ ತಂದೆಯ ಸಣ್ಣ ಆಸೆಯನ್ನೂ ನೆರವೇರಿಸದ ಹಾಗಾಯಿತು ಎಂದು ಮರುಗುತ್ತಾ ರಾಘವ, ಕೊನೆಗೆ ಹೊಸತಾಗಿ ತೆಗೆದುಕೊಂಡಿದ್ದ ನೀಲಿ ಅಂಗಿಯನ್ನು ಅವರಿಗೆ ಹಾಕಿಯೇ ತಂದೆಯ ಅಂತ್ಯ ಸಂಸ್ಕಾರವನ್ನು ಮಾಡಿ ಮುಗಿಸಿದ್ದ.
ನಮ್ಮ ಪ್ರೀತಿ ಪಾತ್ರರು ಬದುಕಿದ್ದಾಗಲೇ ಅವರ ಸಣ್ಣ ಪುಟ್ಟ ಕೋರಿಕೆಗಳನ್ನು ತೀರಿಸಿದರೇ, ನಾವು ಸಾಯುವವರೆಗೆ ಆ ಕೋರಿಕೆಗಳನ್ನು ತೀರಿಸಿದೆವಲ್ಲಾ ಎಂಬ ತೃಪ್ತಿಯಿರುತ್ತದೆ. ಇಲ್ಲದೇ ಹೋದರೇ ಅವಕಾಶವಿದ್ದರೂ ತೀರಿಸಲಿಲ್ಲವೆಂಬ ಕೊರಗು ನಮ್ಮನ್ನು ಕಾಡದೇ ಬಿಡುವುದಿಲ್ಲ.
*******
ಪ್ರತಿಕ್ರಿಯೆ (1)
ನೀಲಿ ಅಂಗಿ ನೀಲ ಗಗನ ಸೇರಿತು. ಮಧ್ಯಮ ವರ್ಗದ ಜನರ ನೈಜ ಚಿತ್ರಣ.