ಪ್ರತಿ ದಿನ ಸಂಜೆ ಆಫೀಸಿನಿಂದ ಮನೆಗೆ ಹಿಂದಿರುಗುವಾಗ ಬಸ್ಸಿನ ಕಿಟಕಿಯ ಪಕ್ಕದ ಸೀಟು ಸಿಕ್ಕರೆ ಅದೇ ನನಗೆ ಒಂದು ಸಣ್ಣ ಸಂತೋಷ. ಆ ಕಿಟಕಿಗೆ ತಲೆಒರಗಿಸಿ ಹೊರಗೆ ನೋಡುತ್ತಾ ಕುಳಿತರೆ, ಆಫೀಸಿನ ಪಕ್ಕದಲ್ಲಿರುವ ಕಾರ್ ಶೋರೂಮ್ ಕಾಣಿಸುತ್ತದೆ. ಗಾಜಿನ ಗೋಡೆಗಳ ಹಿಂದೆ ಸಾಲಾಗಿ ನಿಂತ ಹೊಸ ಕಾರುಗಳು, ಅವುಗಳ ಮೈಮೇಲೆ ಜಾರುತ್ತಿರುವ ಸಂಜೆಯ ಬೆಳಕು... ನನಗೆ ಗೊತ್ತಿಲ್ಲದಂತೆ ನನ್ನ ಕಣ್ಣುಗಳು ಅತ್ತಲೇ ಹೋಗುತಿದ್ದವು. ಆದರೆ ಆ ನೋಟದಲ್ಲಿ ಮೆಚ್ಚುಗೆಗಿಂತ ಹೆಚ್ಚಾಗಿ ಒಂದು ನೋವಿತ್ತು. ಎದೆಯಾಳದಲ್ಲಿ ಚುಚ್ಚುವ ಒಂದು ಕೊರತೆ — ಅಮ್ಮನಿಗೆ ಕೊಟ್ಟ ಮಾತು ಇನ್ನೂ ಈಡೇರಿಲ್ಲ ಎಂಬ ಕೊರತೆ.
ಅಮ್ಮನ ಬಹಳ ದಿನಗಳ ಕೋರಿಕೆ — ಸ್ವಂತ ಕಾರಿನಲ್ಲಿ ಓಡಾಡಬೇಕು. ಅದೂ ನಾನೇ ಖುದ್ದಾಗಿ ಕಾರನ್ನು ಓಡಿಸಬೇಕು. ನಾನು ಸ್ಟೀರಿಂಗ್ ಹಿಡಿದು, ಅಮ್ಮ ಹಿಂದಿನ ಸೀಟಿನಲ್ಲಿ ಕೂತು, ಎಲ್ಲರೂ ಒಟ್ಟಿಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಹೋಗಬೇಕು. ಎಂದೆಲ್ಲ ಅವರು ಕನಸು ಕಟ್ಟಿಕೊಂಡಿದ್ದರು. ಆ ಕನಸನ್ನು ಹೇಳುವಾಗ ಅವರ ಕಣ್ಣುಗಳಲ್ಲಿ ಮಕ್ಕಳಂತಹ ಹೊಳಪು. "ನನ್ನ ಮಗ ಕಾರ್ ಓಡಿಸ್ತಾ ಇದ್ದಾನೆ ಅಂತ ಊರಿನವರೆಲ್ಲ ನೋಡಬೇಕು ಕಣೋ," ಎಂದು ನಗುತ್ತಾ ಹೇಳುತ್ತಿದ್ದರು. ಆ ನಗುವಿನ ಹಿಂದೆ ಎಷ್ಟು ವರ್ಷಗಳ ಕಾಯುವಿಕೆಯಿತ್ತು ಎಂಬುದು ನನಗೆ ಮಾತ್ರ ಗೊತ್ತು.
ಆದರೆ ನನಗೆ ಬರುತಿದ್ದ ವೇತನದಲ್ಲಿ ಮನೆಯನ್ನು ನೋಡಿಕೊಂಡು ತುಸು ಉಳಿತಾಯ ಮಾಡುವುದೇ ಸಾಹಸದ ಕೆಲಸವಾಗಿತ್ತು. ತಿಂಗಳ ಕೊನೆಗೆ ಲೆಕ್ಕ ಹಾಕುತ್ತಾ ಕುಳಿತರೆ, ಸಂಬಳದ ಪ್ರತಿಯೊಂದು ರೂಪಾಯಿಗೂ ಈಗಾಗಲೇ ಹೆಸರು ಬರೆದಾಗಿರುತಿತ್ತು — ಮನೆ ಖರ್ಚು, ತಮ್ಮನ ಉನ್ನತ ವ್ಯಾಸಂಗದ ಫೀಸು, ಮಗಳ ಶಾಲೆಯ ಖರ್ಚು, ಇತರೆ ಬೇಡಿಕೆಗಳು... ಮತ್ತು ಎಲ್ಲಕಿಂತ ಮುಖ್ಯವಾಗಿ ಅಮ್ಮನ ವೈದಕೀಯ ಚಿಕಿತ್ಸೆ. ಅಪ್ಪನಿದ್ದಾಗ ಮನೆಯ ಆಧಾರಸ್ತಂಭ ಅವರಾಗಿದ್ದರು. ಅವರ ಮರಣದ ನಂತರ ಆ ಭಾರವೆಲ್ಲ ನನ್ನ ಹೆಗಲ ಮೇಲೆ ಬಿತ್ತು. ಕಾರು ಎಂಬುದು ನನಗೆ ದೂರದ ಕನಸಾಗಿಯೇ ಉಳಿದಿತ್ತು. ಪ್ರತಿ ತಿಂಗಳು ಆ ಕನಸನ್ನು ಮತ್ತೆ ಮಡಚಿಟ್ಟು, "ಮುಂದಿನ ವರ್ಷ ನೋಡೋಣ" ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತಿದ್ದೆ.
ಅಮ್ಮನ ಆರೋಗ್ಯ ಮೊದಲಿನಂತಿರಲಿಲ್ಲ. ವಯಸ್ಸು, ಜೊತೆಗೆ ಅಪ್ಪನ ಅಗಲಿಕೆಯ ನೋವು — ಎರಡೂ ಸೇರಿ ಅವರನ್ನು ಒಳಗೊಳಗೇ ಕುಗ್ಗಿಸಿದ್ದವು. ಪ್ರತಿ ತಿಂಗಳು ಊರಿನಿಂದ ನಗರಕ್ಕೆ ವೈದ್ಯಕೀಯ ತಪಾಸಣೆಗಾಗಿ ಬರುತಿದ್ದರು. ತಂದೆಯ ಮರಣದ ನಂತರ ಊರಿನ ವೈದ್ಯರ ಬಳಿ ಹೋಗುವುದನ್ನು ಬಿಟ್ಟಿದ್ದರು; "ಅಲ್ಲಿ ಹೋದರೆ ನಿಮ್ಮಪ್ಪನ ನೆನಪಾಗುತ್ತೆ ಕಣೋ," ಎಂದು ಒಮ್ಮೆ ಕಣ್ಣೀರು ತುಂಬಿಕೊಂಡು ಹೇಳಿದ್ದರು. ನಗರಕ್ಕೆ ಹೋಗಲು ಬಸ್ಸನ್ನೇ ಅವಲಂಬಿಸಬೇಕಿತ್ತು. ಜನದಟ್ಟಣೆಯ ಬಸ್ಸಿನ ಮೆಟ್ಟಿಲು ಹತ್ತಲು ಅಮ್ಮ ಹಲವು ಸಲ ಸಾಹಸ ಪಡುತ್ತಿದ್ದರು — ಒಂದು ಕೈಯಲ್ಲಿ ಕಂಬಿ ಹಿಡಿದು, ಇನ್ನೊಂದು ಕೈಯಲ್ಲಿ ನನ್ನ ಹೆಗಲು ಹಿಡಿದು, ಉಸಿರು ಬಿಗಿಹಿಡಿದು ಮೆಟ್ಟಿಲೇರುವ ಆ ದೃಶ್ಯವನ್ನು ನೋಡುವಾಗ ನನ್ನ ಎದೆ ಹಿಂಡುತಿತ್ತು. ಇದನ್ನು ನೋಡಲಾರದೆ ಕೊನೆಗೆ ಟ್ಯಾಕ್ಸಿಯ ವ್ಯವಸ್ಥೆಯನ್ನು ಮಾಡಿದೆ. ಸ್ವಲ್ಪ ಮಟ್ಟಿಗೆ ಇದು ಅನುಕೂಲಕರವಾಗಿತ್ತು. ಆದರೆ ಟ್ಯಾಕ್ಸಿಯಲ್ಲಿ ಕೂತ ಅಮ್ಮನ ಮುಖದಲ್ಲಿ ಸಮಾಧಾನವಿರಲಿಲ್ಲ. "ಪರರ ಕಾರು ಕಣೋ, ನಮ್ಮದಲ್ಲ," ಎಂದು ಒಮ್ಮೆ ಮೆಲ್ಲಗೆ ಅಂದಿದ್ದರು. ಅಂದಿನಿಂದ ಸ್ವಂತ ಕಾರಿನಲ್ಲಿ ಹೋಗಬೇಕೆಂಬ ಬಯಕೆ ಅವರಲ್ಲಿ ಇನ್ನಷ್ಟು ಗಟ್ಟಿಯಾಗಿತ್ತು. ಈ ದಿನ ಕೂಡ ಅವರು ಮತ್ತೆ ಅದನ್ನೇ ತಿಳಿಸಿದರು — "ಯಾವಾಗ ಕಣೋ ನಮ್ಮ ಕಾರು ಬರೋದು?" ಆ ಪ್ರಶ್ನೆಯಲ್ಲಿ ದೂರಿರಲಿಲ್ಲ, ಹಟವಿರಲಿಲ್ಲ; ಇದ್ದದ್ದು ಒಂದೇ — ಮಗನ ಮೇಲಿನ ಅಚಲ ನಂಬಿಕೆ.
ಆಫೀಸಿಗೆ ಬಂದ ಮೇಲೆ ನನಗೊಂದು ಅಚ್ಚರಿ ಕಾದಿತ್ತು. ಅಂದು ನನ್ನ ಕೆಲಸದಲ್ಲಿ ಬಡ್ತಿ ಸಿಕ್ಕ ದಿನ — ಹಲವು ವರ್ಷಗಳ ಕಷ್ಟದ ಪ್ರತಿಫಲ. ಸಹೋದ್ಯೋಗಿಗಳು ಅಭಿನಂದಿಸಿದರು, ಮೇಲಧಿಕಾರಿ ಬೆನ್ನು ತಟ್ಟಿದರು. ಆದರೆ ಆ ಸಂತೋಷದ ಕ್ಷಣದಲ್ಲಿ ನನ್ನ ತಲೆಯಲ್ಲಿ ತಕ್ಷಣ ಬಂದ ಯೋಚನೆ ಒಂದೇ — ಕಾರು. ಅಮ್ಮನ ಮುಖ. "ಇನ್ನು ತಡ ಮಾಡಬಾರದು," ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ಮಧ್ಯಾಹ್ನದ ಸಮಯದಲ್ಲಿ ಸಹೋದ್ಯೋಗಿಯೊಡನೆ ಶೋರೂಮಿಗೆ ಹೊರಟೆ. ಗಾಜಿನ ಬಾಗಿಲು ತಳ್ಳಿ ಒಳಗೆ ಕಾಲಿಟ್ಟಾಗ, ಬಸ್ಸಿನ ಕಿಟಕಿಯಿಂದ ನೋಡುತ್ತಿದ್ದ ಆ ಕಾರುಗಳೇ ಕಣ್ಣೆದುರು ನಿಂತಿದ್ದವು. ಸುಧೀರ್ಘ ಚರ್ಚೆಯ ನಂತರ ಒಂದು ಕಾರನ್ನು ಬುಕ್ ಮಾಡಿದೆ. ಕೈ ನಡುಗುತ್ತಿತ್ತು — ಸಂತೋಷದಿಂದಲೋ, ಭಯದಿಂದಲೋ ಗೊತ್ತಿಲ್ಲ. ನಂತರ ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿಯನ್ನು ಹಾಕಿದೆ. ಕಾರಿನ ಮಾಲೀಕನಾಗುವುದಕ್ಕೆ ಸುಮಾರು ಎರಡು ವಾರಗಳೇ ಬೇಕಾಯಿತು. ಆ ಎರಡು ವಾರಗಳು ನನಗೆ ಎರಡು ಯುಗಗಳಂತೆ. ಅಮ್ಮನಿಗೆ ಆಶ್ಚರ್ಯ ಕೊಡಬೇಕೆಂದು ಅವರಿಗೆ ಕಾರಿನ ಬಗ್ಗೆ ತಿಳಿಸಲೇ ಇಲ್ಲ. ಪ್ರತಿ ದಿನ ಮನೆಗೆ ಹೋಗುವಾಗ, "ಅಮ್ಮಾ, ನಿಮಗೊಂದು ಸರ್ಪ್ರೈಸ್ ಇದೆ" ಎಂದು ಹೇಳಬೇಕೆಂಬ ಆಸೆ ಗಂಟಲಲ್ಲೇ ಸಿಲುಕಿಕೊಳ್ಳುತಿತ್ತು. ಅವರ ಮುಖದಲ್ಲಿ ಆ ಸಂತೋಷದ ಕ್ಷಣವನ್ನು ಕಲ್ಪಿಸಿಕೊಂಡು ನಾನೇ ನಗುತ್ತಿದ್ದೆ.
ಕಾರ್ ತೆಗೆದುಕೊಳ್ಳುವ ದಿನ ಬಂದೇ ಬಿಟ್ಟಿತು. ಬೆಳಿಗ್ಗೆ ಲಗುಬಗೆಯಿಂದ ಎದ್ದು, ಅಮ್ಮನಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೊರಟೆ. ಅವರು ನನ್ನ ತಲೆಯ ಮೇಲೆ ಕೈಯಿಟ್ಟು, "ದೇವರು ಒಳ್ಳೆಯದು ಮಾಡಲಿ ಕಣೋ," ಎಂದರು. ಆದರೆ ಅವರ ಕಣ್ಣುಗಳಲ್ಲಿ ಒಂದು ವಿಚಿತ್ರ ಭಾವ — ಏನೋ ಹೇಳಬೇಕೆಂದಿದ್ದು ಹೇಳಲಾಗದ ಸಂಕಟ, ಏನೋ ಅರಿತಂತಹ ನೋಟ. ಅವರು ಮುಗುಳ್ನಕ್ಕರು. ಆ ನಗು ಇಂದಿಗೂ ನನ್ನ ಕಣ್ಣೆದುರು ಕಟ್ಟಿದೆ. ಬಹುಶಃ ತಾಯಿಯ ಹೃದಯಕ್ಕೆ ಏನೋ ಮುನ್ಸೂಚನೆ ಸಿಕ್ಕಿತ್ತೇನೋ.
ಶೋರೂಮಿಂದ ಕಾರ್ ತೆಗೆದುಕೊಂಡು ಹೊರಗೆ ಬರುವಷ್ಟರಲ್ಲಿ ಹೆಂಡತಿಯಿಂದ ಕರೆ ಬಂತು. ಫೋನ್ ಎತ್ತಿದ ಕ್ಷಣ ಅವಳ ದನಿಯಲ್ಲಿದ್ದ ನಡುಕವೇ ಎಲ್ಲವನ್ನೂ ಹೇಳಿತ್ತು — "ಅಮ್ಮನ ಆರೋಗ್ಯದ ಸ್ಥಿತಿ ಗಂಭೀರವಾಗಿದೆ, ತಕ್ಷಣ ಬನ್ನಿ." ಒಂದೇ ಕ್ಷಣದಲ್ಲಿ ಜಗತ್ತು ನಿಂತಂತಾಯಿತು. ಕೈಯಲ್ಲಿದ್ದ ಹೊಸ ಕಾರಿನ ಕೀಲಿ ಬೆವರಿನಲ್ಲಿ ಒದ್ದೆಯಾಯಿತು. ತಲೆಯಲ್ಲಿ ನೂರಾರು ಯೋಚನೆಗಳು — ಬೆಳಿಗ್ಗೆ ಅಮ್ಮನ ಆ ವಿಚಿತ್ರ ನೋಟ, ಆ ಮುಗುಳ್ನಗೆ... "ದೇವರೇ, ಹೀಗಾಗಬಾರದಿತ್ತು," ಎಂದು ಮನಸ್ಸು ಗೋಳಾಡುತ್ತಿತ್ತು. ಕಾರನ್ನು ನಾನು ಹೇಗೆ ಓಡಿಸಿದೆನೋ ನನಗೇ ಗೊತ್ತಿಲ್ಲ.
ಮನೆಯನ್ನು ತಲುಪುವಷ್ಟರಲ್ಲಿ ಸುಮಾರು ಜನ ಸೇರಿದ್ದರು. ಬಾಗಿಲಲ್ಲಿ ನಿಂತ ನೆರೆಹೊರೆಯವರ ಮುಖಗಳಲ್ಲಿದ್ದ ಮೌನವೇ ಕಥೆ ಹೇಳುತ್ತಿತ್ತು. ಒಳಗೆ ಹೋದೆ — ಅಮ್ಮ ಮಂಚದ ಮೇಲೆ, ಕಣ್ಣು ಮುಚ್ಚಿ, ನಿಶ್ಚಲ. ಅಮ್ಮನಿಗೆ ಪ್ರಜ್ಞೆ ಇರಲಿಲ್ಲ. ನನ್ನ ಕಾಲುಗಳು ನಡುಗಿದವು. "ಅಮ್ಮಾ!" ಎಂದು ಕೂಗಿದೆ — ಉತ್ತರವಿಲ್ಲ. ಆ ಕ್ಷಣದಲ್ಲಿ ಬಡ್ತಿಯ ಸಂತೋಷ, ಹೊಸ ಕಾರಿನ ಸಂಭ್ರಮ — ಎಲ್ಲವೂ ಅರ್ಥಹೀನವಾಗಿ ಕಂಡವು.
ತಡ ಮಾಡುವ ಸಮಯವಿರಲಿಲ್ಲ. ತಮ್ಮನ ಸಹಾಯದಿಂದ ಅಮ್ಮನನ್ನು ಕಾರಲ್ಲಿ ಕೂರಿಸಿದೆ. ತಮ್ಮ ನನ್ನ ಪಕ್ಕದಲ್ಲಿ ಕುಳಿತ. ಹಿಂದೆ ಹೆಂಡತಿ ಮತ್ತು ಮಗಳು ಅಮ್ಮನ ಜೊತೆ — ಮಗಳು ಅಮ್ಮನ ಕೈ ಹಿಡಿದು ಅಳುತ್ತಿದ್ದಳು, ಹೆಂಡತಿ ಅವಳನ್ನು ಸಮಾಧಾನಪಡಿಸುತ್ತಲೇ ಅಮ್ಮನ ಹಣೆಗೆ ಕೈಯಾಡಿಸುತ್ತಿದ್ದಳು. ನಗರದ ಆಸ್ಪತ್ರೆಯ ಕಡೆ ಕಾರು ಹೊರಟಿತು. ರಸ್ತೆಯಲ್ಲಿ ಕಾರು ಚೀರುತ್ತಾ ಸಾಗುತ್ತಿತ್ತು; ನನ್ನ ಕಣ್ಣುಗಳು ರಸ್ತೆಯ ಮೇಲಿದ್ದರೂ ಮನಸ್ಸು ಮಾತ್ರ ಹಿಂದಿನ ಸೀಟಿನಲ್ಲಿತ್ತು.
ಅಮ್ಮನು ಬಯಸಿದಂತೆ ಸ್ವಂತ ಕಾರಿನಲ್ಲಿ ಇಡೀ ಕುಟುಂಬ ಹೋಗುತ್ತಿದ್ದೇವೆ — ನಾನೇ ಓಡಿಸುತ್ತಿದ್ದೇನೆ, ಎಲ್ಲರೂ ಒಟ್ಟಿಗೆ ಇದ್ದೇವೆ. ಆದರೆ ಪ್ರೇಕ್ಷಣೀಯ ಸ್ಥಳಕ್ಕಲ್ಲ. ಅಮ್ಮನಿಗೆ "ಇದು ನಮ್ಮ ಸ್ವಂತ ಕಾರು ಅಮ್ಮಾ" ಎಂದು ತಿಳಿಸಲು ಅವಳಿಗೆ ಪ್ರಜ್ಞೆ ಬಂದಿಲ್ಲ. ಅವಳು ಕಂಡ ಕನಸು ನನಸಾಗಿದೆ, ಆದರೆ ಅವಳೇ ಅದನ್ನು ನೋಡುವ ಸ್ಥಿತಿಯಲ್ಲಿಲ್ಲ — ಈ ವಿಪರ್ಯಾಸ ಎದೆಯನ್ನು ಸೀಳುತ್ತಿದೆ. ಹಿಂಬದಿಯ ಕನ್ನಡಿಯಲ್ಲಿ ಅಮ್ಮನ ಮುಖ ನೋಡುತ್ತಾ, ಅವಳ ಆರೋಗ್ಯದ ಬಗ್ಗೆ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಕಣ್ಣೀರು ಕಣ್ಣನ್ನು ಮಂಜು ಮಾಡುತ್ತಿದೆ. ದೇವರು ಏನೆಂದು ತೀರ್ಮಾನಿಸಿದ್ದಾನೋ ತಿಳಿಯದು.
suc
ಪ್ರತಿಕ್ರಿಯೆ (2)
ಪಕ್ಕದಲ್ಲೇ ಕೂತು ಮಾತನಾಡಿ ಹೋದಂತೆ ಅನಿಸಿತು. ಅತ್ಯುತ್ತಮ ಕಥಾ ಸಾರಾಂಶ.
ನನ್ನ ಅನಿಸಿಕೆ ದೈಹಿಕ ಪ್ರಜ್ಞೆಗಿಂತ, ಮಾನಸಿಕ ಪ್ರಜ್ಞೆಯಲಿ ಅವರು ಅದನ್ನು ಅನುಭವಿಸಿರುತ್ತಾರೆ. ಕಾರು ಅದರ ಕೆಲಸ ಖಂಡಿತಾ ಮಾಡಿದೆ. ಆಕಸ್ಮಾತ್ ಚಿಕಿತ್ಸೆ ಫಲಿಸಿದ್ದರೆ? ಅದು ಕಾರಿನ ಗುರುತಲ್ಲ, ಮಗನ ಗುರುತು ಅಮ್ಮ ಹುಡುಕಿದ್ದು. ಎಲ್ಲವನ್ನು ನಿಭಾಯಿಸುವ ಜೀವ, ತಾನು ಸೃಷ್ಟಿಸಿದ ಜೀವಕ್ಕೆ ಇದು ಮಾಡುವೆ ಎಂದು ಮನಸಲ್ಲೇ ಹೇಳಿ ಕಳುಹಿಸಿದ್ದು.
ಇಲ್ಲಿ ಕಾಲನ ಆಟ ನಮ್ಮೆಲ್ಲರ ಲೆಕ್ಕಾಚಾರಕೆ ದಾಟಿ ಹೋಗಿರತ್ತೆ.
ನಾನು ಎಂಬುದಿಲ್ಲಿ ಎಲ್ಲರಿಗೂ ಅನ್ವಹಿಸಿ ಪ್ರತಿಯೊಬ್ಬರೂ ತಾವೇ ಡ್ರೈವರ್ ಸೀಟಿನಲ್ಲಿ ಕುಳಿತು ಅಮ್ಮನ ಚೇತರಿಕೆಯ ಕ್ಷಣಗಳನ್ನು ಎದುರುಗೊಳ್ಳುವಂತೆ ಮಾಡಿದೆ ಈ ಬರಹ... ನಮ್ಮ ಕಾರು ಕೊಳ್ಳುವಿಕೆಯ ಸಂದರ್ಭವನ್ನು ನೆನಪಿಸಿತು...