ಆದರ್ಶದ ಬದುಕಿಗೆ ಆಶಿಸುವ ಆಕಾಶ ದೇವತೆ
ನಾನು, ನನ್ನದು ಎನ್ನುವ ಸ್ವಾರ್ಥಪರ ಸಂಕೋಲೆಗಳಲ್ಲಿ ಬಂಧಿತವಾದ ಇಂದಿನ ಕಾಲಘಟ್ಟದ ಬದುಕು ತೀರ ಅಸ್ವಸ್ಥ ಜಗತ್ತಿನ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ವೈಜ್ಞಾನಿಕವಾಗಿ ಅತ್ಯಂತ ಮುಂದುವರೆದ ಸಂದರ್ಭದಲ್ಲಿ ನಾವಿದ್ದರೂ ಅದಕ್ಕೆ ಪೂರಕವಾದ ವೈಚಾರಿಕತೆಯನ್ನು ನಮ್ಮ ಬದುಕಿಗೆ ಸಮೀಕರಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಬದುಕಿನ ಮುಗ್ಧತೆ ಮತ್ತು ಸಾಚಾತನಗಳನ್ನು ಅಪಮೌಲ್ಯೀಕರಣಕ್ಕೆ ಒಳಗು ಮಾಡಿ ಪಟ್ಟಭದ್ರ ಹಿತಾಸಕ್ತಿಗಳು ವಿಜೃಂಭಿಸುತ್ತಿವೆ. ದಟ್ಟಗೊಳ್ಳುತ್ತಿರುವ ವಿಷಾದದ ಛಾಯೆಗಳ ನಡುವೆ ಕಂಗೆಟ್ಟ ನಾಳೆಗಳನ್ನು ಎದುರಿಸುವುದು ದುಸ್ತರ ಸಂಗತಿಯೇ ಸರಿ. ಹಾಗಂತ ಕೊಟ್ಟ ಕುದರೆಯನೇರಲರಿಯದೆ, ಮತ್ತೊಂದು ಕುದುರೆಯ ಬಯಸುವುದು ಸಾಧುವಲ್ಲ ಎನ್ನುವ ಅಲ್ಲಮನ ಮಾತಿನಂತೆ, ಲೋಕಜೀವನವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ನಮ್ಮ ನಡುವಿನ ಆತಂಕಗಳಿಗೆ, ಸ್ಥಗಿತಗೊಂಡ ಬದುಕಿನ ಸಂಕಟಗಳಿಗೆ, ವಿಕಾರಗೊಂಡ ಮನಸುಗಳಿಗೆ ಸಾಧ್ಯವಾದಷ್ಟು ಮದ್ದನ್ನರೆಯುವ ಕಾರ್ಯವನ್ನು ನಾವು ಸಾಧ್ಯವಾದಷ್ಟು ಮಾಡುತ್ತಲೇ ಇರಬೇಕು. ಇಂತದೊಂದು ಅಗತ್ಯವಾದ ಕಾರ್ಯವನ್ನು ಮಾಡುವಲ್ಲಿ ಸಾಹಿತ್ಯ ಮತ್ತು ಸೃಜನಶೀಲ ಸಾಹಿತಿಯೊಬ್ಬ ಹಿಂಜರಿಯದೇ ಮಾಡುತ್ತಲೇ ಇರಬೇಕು. ಸಾಧ್ಯವಾದಷ್ಟು ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇರಬೇಕು. ವಿಶೇಷವಾಗಿ ಕನ್ನಡ ಕಥಾಲೋಕ ಇಂತದೊಂದು ಮಹತ್ತರ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಮಾನವೀಯ ಸಂಬಂಧಗಳು ವಿಚ್ಛಿದ್ರಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಜೀವಪ್ರೀತಿಗೆ ಎರವಾಗುವ ವಿಷಮತೆಗಳ ಕತ್ತಲು ನಮ್ಮ ಸುತ್ತಲೂ ಆವರಿಸಿದೆ. ಬದುಕಿನ ಮೌಲ್ಯಗಳನ್ನು, ಸನ್ನಡತೆಯ ರೀತಿ-ರಿವಾಜುಗಳನ್ನು ಕಂಗೆಡಿಸುತ್ತಿರುವ ಸಂದಿಗ್ಧತೆಗಳ ನಡುವೆಯೂ ನಾಳೆಯ ನೆಮ್ಮದಿ ಬದುಕಿಗೆ ಸಣ್ಣದೊಂದು ಹಣತೆಯನ್ನು ಹಚ್ಚಿ ಅದರ ಬೆಳಕಿನಲ್ಲಿ ಬದುಕಿನ ಭವಿತ್ಯವದ ಹಾದಿ ಕಂಡುಕೊಳ್ಳುವ, ಸಂಕಟಗಳ ನಡುವೆಯೂ ಸಾಮರಸ್ಯದ ಹಾದಿಯನ್ನು ಹುಡುಕುವ ಆಶಯವನ್ನು ಹೊತ್ತುಕೊಂಡ ಸಾಹಿತಿ ಮಹಾದೇವ ಬಸರಕೋಡ ಅವರ ಆಕಾಶ ದೇವತೆ ಕಥಾಸಂಕಲನ ಮೊದಲ ಓದಿನಲ್ಲಿ ಮನಸ್ಸನ್ನು ಆವರಿಸಿಬಿಡುತ್ತದೆ.
ಪ್ರೀತಿಯೇ ಜೀವಂತಿಕೆ. ಅದರ ಗೈರು ಹಾಜರಿ ಸಾವಲ್ಲದೇ ಇನ್ನೇನೂ ಅಲ್ಲ. ಪ್ರೀತಿಯಂತ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲ ಎಂಬ ಮಾತು ಅಲ್ಲಗಳೆಯಲಾಗದ್ದು. ಅದು ವ್ಯಕ್ತಿ-ವ್ಯಕ್ತಿಗಳ ಅದು ನಡುವೆ ಅನಾವರಣಗೊಂಡು, ತನ್ನ ವಿಸ್ತಾರವನ್ನು, ಕಂಡುಕೊಳ್ಳುತ್ತಲೇ ಲೋಕಪ್ರೀತಿಯಾಗಿ ರೂಪಾಂತರಗೊಳ್ಳುತ್ತದೆ ಎಂಬ ಸದಾಶಯವನ್ನುಸಂಕಲನದ ಶಿರ್ಷಿಕೆಯ ʼಆಕಾಶ ದೇವತೆʼ ಕತೆ ಒತ್ತಿ ಹೇಳುತ್ತದೆ, ಮಾತ್ರವಲ್ಲದೇ ಒಟ್ಟು ಕಥಾಸಂಕಲನದ ಸ್ಥಾಯಿಭಾವವಾಗಿ ತೋರುತ್ತದೆ. ಬದುಕಿನಲ್ಲಿ ಸಕಾರಾತ್ಮಕ ನಂಬಿಕೆಯನ್ನು ನಾವು ಇರಿಸಿಕೊಳ್ಳಲೇ ಬೇಕು. ಅದಿಲ್ಲದಿದ್ದರೆ ಅದಕ್ಕೆ ಯಾವ ಅರ್ಥವೂ ಇಲ್ಲ. ಬದುಕಿನ ನಡೆ ಕೇಡಿನತ್ತ ಮುಖ ಮಾಡುತ್ತದೆ. ತನ್ನ ತಾಯಿ ಲೋಕವನ್ನು ತ್ಯೇಜಿಸಿ ಹೋಗುವ ಮುನ್ನ ತನ್ನ ಮಗನಿಗೆ ಹೇಳಿದ ʼಸಂಕಟಗಳ ಸಮಯದಲ್ಲಿ ಖಂಡಿತವಾಗಿ ಸಹಾಯದ ಕಿರಣವೊಂದು ಎಲ್ಲಿಂದಾದರೂ ತೂರಿ ಬರುತ್ತದೆ. ನಂಬಿಕೆ ಇರುಬೇಕು ನಮಗೆ ಎನ್ನುವ ಮಾತು ಶಿವುನಿಗೆ ಕಾಕತಾಳೀಯದಂತೆ ಘಟಿಸಿದರೂ ಅದು ಅವನತಿಯತ್ತ ಸಾಗುತ್ತಿದ್ದ ಬದುಕಿಗೆ ಸಂಜೀವಿನಿ ಒದಗಿಸಿದ್ದು ಮಾತ್ರ ಸತ್ಯವೇ. ಅದೇಷ್ಟೋ ಬಾರಿ ಇಂತಹ ನಂಬಿಕೆಗಳೇ ಬದುಕಿನಲ್ಲಿ ಗೆಲುವು ತಂದುಕೊಡಲು ಕಾರಣವಾಗುತ್ತದೆ ಎಂಬುದು ಒಪ್ಪಿಕೊಳ್ಳಲೇಬೇಕು. ಲೋಕರೂಢಿಯ ಅರ್ಥದ ಜೊತೆಗೆ ಬದುಕನೆಲ್ಲ ಹೊಂದಿಸಿಕೊಂಡು, ಸಂಕಟಗಳ ಬೇಗುದಿಯಲ್ಲಿ ಬೆಂದು ಇಲ್ಲವಾಗುವ ಮುನ್ನ ಒಂದಷ್ಟು ಆಕ್ರೋಶ ಅನಿವಾರ್ಯ. ಕೆಲವು ಬಾರಿ ಸಿಡಿದೇಳದಿದ್ದರೆ ಬದುಕು ಸೀದು ಹೋಗುವ ಸಾಧ್ಯತೆ ಹೆಚ್ಚು. ಸಂಯಮದಾಚೆಯೂ ಒಂದಷ್ಟು ಪ್ರತಿಭಟನೆ ಮಾತ್ರವೇ ಬದುಕಿನ ಹಾದಿಯಲ್ಲಿ ಬಂದ ಅಪವಾದಗಳನ್ನು ದೂರ ಮಾಡಬಲ್ಲದು ಎಂಬ ಸಂಗತಿಯನ್ನು ʼಕರವೀರಪ್ಪನ ಪ್ರಾಮಾಣಿಕತೆʼ ಕತೆ ಬಿಚ್ಚಿಡುತ್ತದೆ. ಸತ್ಯ, ಪ್ರಾಮಾಣಿಕತೆ, ಸಂಭಾವಿತನ ಮಾತ್ರವೇ ಸದಾ ಕಾಲ ನಿಲ್ಲುವುದಿಲ್ಲ. ಕೆಲವು ಬಾರಿ ನಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡುವ ಧೈರ್ಯವೂ ಬೇಕು ಎನ್ನುವುದನ್ನು ಕತೆ ವಿವರಿಸುತ್ತದೆ. ʼಐಸ್ಕ್ರೀಮ್ ಹುಡುಗʼ ಆಕಾಶ ತನಗೆ ಒತ್ತಾಯಪೂರ್ವಕವಾಗಿ ನೀಡಿದ ಹಣವನ್ನು ವ್ಯಾಪಾರಕ್ಕಾಗಿ ಸದ್ಭಳಕೆ ಮಾಡಿಕೊಂಡು ಮತ್ತೆ ಅದನ್ನು ಹಿಂದಿರುಗಿಸುವ ಪ್ರಾಮಾಣಿಕತೆ, ತಾಯಿ ಮಾತನ್ನು ವೇದವಾಕ್ಯವೆಂದು ಪರಿಣಿಸುವ ಪರಿ ಇಂದಿನ ಭ್ರಷ್ಟಗೊಂಡ ವ್ಯವಸ್ಥೆಗೆ ಚಾಟಿ ಏಟು ನೀಡುವುದು ಮಾತ್ರವಲ್ಲದೇ ಅನುಕರಣೀಯವೆನಿಸುತ್ತದೆ. ಸ್ವಾರ್ಥಪರ ಭಾವಗಳೇ ರುದ್ರನೃತ್ಯಕ್ಕಿಳಿದ ಸಂದರ್ಭದಲ್ಲಿ, ಎಲ್ಲವನ್ನೂ ಲಾಭದ ತಕ್ಕಡಿಯಲ್ಲಿ ತೂಗಿ ನೋಡುತ್ತಿರುವ ನಮ್ಮ ಜೀವನದ ಶೈಲಿಯನ್ನು ವಿಡಂಬನೆ ಮಾಡುವಂತೆ ಆಕಾಶನ ನಡೆ ತೀರ ಗಮನಸೆಳೆಯುತ್ತದೆ. ಮನಸ್ಸನ್ನು ಕೆಲ ಕಾಲವಾದರೂ ಕಲಕುತ್ತದೆ.
ʼಗುರುಬ್ರಹ್ಮ, ಗುರುವಿಷ್ಣು, ಗುರುದೇವೋಭವʼ ಎಂದು ಜಪಿಸಿದ ನಮ್ಮ ನೆಲದಲ್ಲಿಂದು ಗುರು-ಶಿಷ್ಯರ ಸಂಬಂಧಗಳು ಸಡಿಲಗೊಳ್ಳುತ್ತಿವೆ ಎಂಬುದು ತೀರ ವಿಷಾದದ ಸಂಗತಿಯಾಗಿದೆ. ಲೇಖಕ ಮೂಲತಃ ಶಿಕ್ಷಕರಾಗಿರುವುದರಿಂದ ತಮ್ಮ ಬದುಕಿನ ಅನುಭವಗಳನ್ನು ಹರಳುಗೊಳಿಸಿ ಅದನ್ನು ಅತ್ಯಂತ ಸಮಯೋಚಿತವಾಗಿ ಹೊಳೆಯಿಸುವ ರೀತಿ ʼಗುರುಸಂಕಲ್ಪʼ ಕತೆಯಲ್ಲಿ ತುಂಬ ಅನನ್ಯವೆನಿಸುವಂತೆ ಮೂಡಿಬಂದಿದೆ. ನಿಜಕ್ಕೂ ಗುರು ದೇವರ ಸಮಾನ ಎಂಬ ಸತ್ಯವನ್ನು ಅದು ಸಾರುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿನ ಪುನರ್ ವ್ಯಾಖ್ಯಾನಕ್ಕೆ ಒಳಪಡುತ್ತಿರುವ ದಾಂಪತ್ಯದ ಬದುಕಿನ ಮನೋಪಾತಳಿಯ ಮೇಲೆ ಸೃಜನಗೊಂಡ ʼಒಲವೇ ಬದುಕಿನ ದಾರಿದೀಪʼ ಎನ್ನುವ ಕಥೆಯ ಕಥಾನಾಯಕಿ ಬಿಂದು ತನ್ನ ಕುಟುಂಬದ ಸ್ತರವನ್ನು ಮೀರಿ ಮಹೇಶನ ಕಡೆಗೆ ಹರಿದೋಡುವ ಚಂಚಲ ಮನಸ್ಥಿತಿಗೆ ಕಡಿವಾಣ ಹಾಕಿ, ಮೌಲ್ಯದ ದಾಂಪತ್ಯದ ಬದುಕಿನತ್ತ ಮತ್ತೆ ಹೊರಳಿ ನಿಲ್ಲುವ ಅವಳ ನಿರ್ಧಾರ ಇಂದಿನ ತೀರ ತುರ್ತು. ಸಡಿಲಗೊಂಡ ದಾಂಪತ್ಯದ ಸಂಬಂಧಗಳನ್ನು ಹುರಿಗೊಳಿಸುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣುತ್ತದೆ. ಮನುಷ್ಯ ಏರಿಲಾಶಿಸುವ ಹಂಬಲಗಳನ್ನು ಕಳೆದುಕೊಳ್ಳದೆಯೂ ಜೀವನಪ್ರೀತಿಯಲ್ಲಿ ನಮ್ಮನು ಉಳಿಸುವಂತೆ ಮಾಡುವುದು ಬದುಕಿನ ಬಹುದೊಡ್ಡ ಆದರ್ಶ ಎಂಬ ಸಂಗತಿಯನ್ನು ಒತ್ತಿ ಹೇಳುತ್ತದೆ.
ನಮ್ಮನ್ನು ಸಾಕಿ ಸಲಹುವ, ಬದುಕನ್ನು ಉದ್ಧರಿಸುವ ಮುಖವಾಡಗಳ ಹಿಂದಿರು ಸ್ವಾರ್ಥ, ಪಿತೃಪ್ರಧಾನ ಕುಟುಂಬ ವ್ಯವಸ್ಥೆಯ ಆವಾಂತರಗಳು, ಧರ್ಮದ ಆಚಾರ ವಿಚಾರಗಳ ವಿಷವರ್ತುಲಗಳು ಬದುಕನ್ನು ಇಂದು ಕೂಡ ಕಿತ್ತು ತಿನ್ನುತ್ತಿವೆ. ಇಂಥ ಅನಿರ್ವಾತೆಗಳ ನಡುವೆಯೂ ಬದುಕನ್ನು ಮುರಿದು ಕಟ್ಟುವ ದಿಟ್ಟತನವನ್ನು ಲಾಕ್ಡೌನ್ ಕಥೆ ಮತ್ತೆ ಸಂಗತ ಬದುಕಿಗೆ, ಸಮಾಧಾನದ ಮನಸ್ಥಿತಿಗೆ ದಾರಿ ಮಾಡಿಕೊಡುವ ಉತ್ಸಾಹವನ್ನು ತೋರಿರುವುದು ನಿಜಕ್ಕೂ ನಮ್ಮ ಮೆಚ್ಚುಗೆ ಗಳಿಸುತ್ತದೆ.
ಇನ್ನುಳಿದಂತೆ ಇಲ್ಲಿನ ತಬ್ಬಲಿಯಾದೆ, ಅಂತರ್ಮುಖಿ, ಅಬಲೆಯ ಕನಸು, ಇಲ್ಲದ ದೇವರನು ಸೇರಿದಂತೆ ಇತರ ಕಥೆಗಳು ಸಮಾಜದ ರೀತಿ-ನೀತಿ-ನಡಾವಳಿಗಳನ್ನು, ಮನುಷ್ಯ ಸ್ವಭಾವದ ಓರೆ-ಕೋರೆಗಳನ್ನು, ತಮ್ಮ ಕಥಾ ವಸ್ತುಗಳನ್ನಾಗಿ ಮಾಡಿಕೊಂಡು ಯಾವುದೇ ಭಾವುಕತೆಗೆ ಒಳಗಾಗದೆ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹವಣಿಸುವುದು ಗಮನೀಯವಾಗಿದೆ. ವೈರುದ್ಧ್ಯಗಳು ಒಡಲಿನಲ್ಲಿದ್ದರೂ ಅವುಗಳನ್ನು ಮೀರಿ ಪ್ರೀತಿಯ ಬೆಸುಗೆಯಲ್ಲಿ ಬದುಕನ್ನು ಹಿಡಿದಿಡುವ ಪ್ರಯತ್ನವನ್ನು ಕತೆಗಾರ ಮಹಾದೇವ ಬಸರಕೋಡ ಮಾಡಿರುವುದು ಸಮಂಜಸವೆನಿಸುತ್ತದೆ. ಸಂಗತವೆನಿಸದ ಬೇಲಿಗಳ ಬಂಧನದ ಕೀಲಿ ತಗೆದು ಮುಕ್ತ ಮತ್ತು ಸಂಯಮದ ಬದುಕಿಗೆ ಮುನ್ನುಡಿ ಬರೆಯುವ ಮಹತ್ತರ ಆಶಯಗಳನ್ನು ಹೊತ್ತುಕೊಂಡ ಕಥಾಸಂಕಲನ ಹೊಸ ಪಯಣಕ್ಕೆ ದಾರಿಯನ್ನು ತೋರುತ್ತದೆ. ಸಾರ್ಥಕ ಬದುಕಿನ ಫಲವಂತಿಕೆಗೆ ಅವಾಜ್ಯ ವಾತ್ಸಲ್ಯದ ದರ್ಶನ ಮಾಡಿಸುತ್ತದೆ. ಈ ಹೊತ್ತು ನಮ್ಮನ್ನು ಕಾಡುತ್ತಿರುವ ಹತ್ತು ಹಲವು ಆತಂಕಗಳಿಗೆ ದೂರಕ್ಕೆ ಸರಿಸುತ್ತದೆ. ಜೀವನದ ಅಂತಃಸತ್ವದ ಹುಡುಕಾಟದಿಂದ ತಮ್ಮ ಅಸ್ತಿತ್ವದ ಸಾರ್ಥಕತೆಯನ್ನು ಎತ್ತಿ ತೋರಿಸುವ ಹಂಬಲ ಕಥಾ ಸಂಕಲನದ ಒಟ್ಟು ಆಶಯವಾಗಿ ಹೊರಹೊಮ್ಮುತ್ತದೆ. ಅಪರೂಪದ ಕ್ರಿಯಾಶೀಲತೆ, ಮತ್ತು ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ನಮ್ಮ ನಡುವಿನ ಮಹತ್ವದ ಬರಹಗಾರ ಮಹಾದೇವ ಬಸರಕೋಡ ಅವರು ತಮ್ಮ ಪ್ರಥಮ ʼಆಕಾಶದೇವತೆʼ ಕಥಾಸಂಕಲನದ ಮೂಲಕ ಕಥಾಲೋಕ ಪ್ರವೇಶಿಸಿ ಹೊಸದೊಂದು ಭರವಸೆಯನ್ನು ತುಂಬಿರುವುದನ್ನು ನಾನು ಮನಸಾರೆ ಅಭಿನಂದಿಸುತ್ತೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!