ಬತ್ತುವುದಿಲ್ಲ ಜೀವದೊಲವು

ಜೀವದೊಲವಿನ ಹಣತೆ ಹಚ್ಚುವ ಕವಿತೆಗಳು..

ಕಾವ್ಯವೆನ್ನುವುದು ಒಂದರ್ಥದಲ್ಲಿ ಕವಿಯ ವಯಕ್ತಿಕ ಅನುಭವದ ತೀವೃತೆಯ ಅಭಿವ್ಯಕ್ತಿಯಾಗಿದೆ. ಅದು ಹಿಂದಣ ಹೆಜ್ಜೆಗಳ ಸ್ಮರಣೆಯಿಂದಾಗಲಿ, ಅಥವಾ ಭವಿತವ್ಯದ ಹೊಂಗನಸುಗಳನು ಕಾಣುವ ಉತ್ಕಟತೆಯ ಭಾವಾವೇಶಗಳಿಂದಾಗಲಿ ಹುಟ್ಟು ಪಡೆಯುವಂತದ್ದಲ್ಲ. ಅದು ಸಮಕಾಲೀನ ಪ್ರಜ್ಞೆಯ ಅಭಿವ್ಯಕ್ತಿಯ ಅಮೂರ್ತ ರೂಪವಾಗಿ ಹೊರಹೊಮ್ಮಬೇಕು ಎಂಬುದು ಅನುಭವಿಗಳ ಮಾತು. ಒಂದೆಡ ಎಜ್ರಾ ಪೌಂಡ್‌, ʼಕಾವ್ಯ ಕವಿಯ ಸಮಕಾಲೀನ ಪ್ರಜ್ಞೆಯ ಮೂಸೆಯಲ್ಲಿ ಮೂಡಿ ಬಂದು, ಗದ್ಯದ ಗಟ್ಟಿತನವನ್ನು, ಅದರ ಸತ್ವವನ್ನು ಹೊಂದಿರಬೇಕು, ಎಂದು ಹೇಳುತ್ತಾನೆ. ಹಾಗಂತ ಕವಿ ಭೂತ ಮತ್ತು ಭವಿತ್ಯವದ ಬಂಧನಗಳ ಬೇಲಿಯನ್ನು ದಾಟಿ ಸಾಗಬೇಕು ಎಂಬುದು ಕೂಡ ಒಪ್ಪಿತವಲ್ಲ ಎಂಬುದು ಅಷ್ಟೇ ಸತ್ಯವಾದ ಸಂಗತಿ. ಅದು ಭೂತ ಮತ್ತು ಭವಿತವ್ಯವನ್ನು ಸಮಕಾಲೀನದ ಬದುಕಿನ ಸಂಕೀರ್ಣತೆಗಳೊಂದಿಗೆ ಸಮೀಕರಿಸುವ ಸೂತ್ರವೆಂಬುದು ಸತ್ಯ ಸಂಗತಿಯಾಗಿದೆ. ಕವಿಯೊಬ್ಬ ತನ್ನ ಅನುಭವಕ್ಕೆ ಬಾರದ ಸಂಗತಿಗಳನ್ನು ತನ್ನದೆಂದು ಭ್ರಮಿಸದೇ, ಸ್ವಾನುಭವಕ್ಕೆ ಪ್ರಾಮಾಣಿಕನಾಗಿ ತನ್ನ ಅಂತರಂಗವನ್ನು, ಜೀವನದ ಅಂತರಾಳದಲ್ಲಿ ಅಡಗಿಕೊಂಡಿರುವ ಸತ್ಯದ ಅನ್ವೇಷಣೆಗೆ ಮುಂದಾದರೆ, ಅದನ್ನು ಭಾಷೆಯಲ್ಲಿ ಭಾವಾಭಿನಯವಾಗುವಂತೆ ಕಾವ್ಯ ಕಟ್ಟಿದರೆ ಅದು ಉತ್ತಮ ಕಾವ್ಯದ ಲಕ್ಷಣವಾಗುತ್ತದೆ. ಬದುಕಿನ ವಿಭಿನ್ನ ಆಯಾಮಗಳ ಆಳ-ಸ್ತರಗಳನ್ನು ಒಳಗೊಂಡ, ತನ್ನ ಅನುಭವದ ಸುಸಂಬದ್ಧ ರಚನೆಯನ್ನು ಕಾಣುವ ವಯಕ್ತಿಕ ತೀವೃತೆ, ಕವಿಯ ಭಾಷೆಯಲ್ಲಿ ಸಂಕೇತ-ಪ್ರತಿಮೆ-ಪ್ರತೀಕಗಳ ಸಂಯೋಜನೆಯಿಂದ ಉತ್ತಮ ಕಾವ್ಯ ಹುಟ್ಟಿ ಅದು ಸಮಾಜಕ್ಕ ಮಾರ್ಗದರ್ಶಿಯಾಗಿ ನಿಲ್ಲುತ್ತದೆ. ನಮ್ಮ ನಡುವಿನ ಮಹತ್ವದ ಕವಿ, ಸೃಜನಶೀಲ ಬರಹಗಾರ, ಸಂಘಟಕ, ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಹಾದೇವ ಬಸರಕೋಡ ಅವರ ʼಬತ್ತುವುದಿಲ್ಲ ಜೀವದೊಲವುʼ ಇವೆಲ್ಲವುಗಳ ಹಿನ್ನೆಲೆಯಲ್ಲಿ ಮೂಡಿ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ. ಕವಿ ಮಹಾದೇವ ಬಸರಕೋಡ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಭಾವಗೀತೆ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಇದರೊಟ್ಟಿಗೆ ಪ್ರಸ್ತುತ ಕವನ ಸಂಕಲನದ ಪ್ರಕಟಣೆ ಅವರು ತಮ್ಮ ಹೃದಯದಲ್ಲಿ ಕಾವ್ಯದ ಕುರಿತಾಗಿ ಕಾಪಿಟ್ಟುಕೊಂಡ ಪ್ರೀತಿಯನ್ನು ಅನುರಣಿಸುತ್ತದೆ.

ತನ್ನ ದೈನಂದಿನ ಬದುಕಿನ ಅನುಭವ, ಅಧ್ಯಯನದ ವ್ಯಾಪ್ತಿ, ಮತ್ತು ಬತ್ತದ ಜೀವದೊಲವಿನ ಹರಿವಿನಲ್ಲಿ ಬದುಕನ್ನು ಈಗ ಇರುವುದಕ್ಕಿಂತ ಇನ್ನಷ್ಟು ಸುಂದರವಾಗಿಸಬೇಕು ಎನ್ನುವ ತಹತಹ, ಅದಕ್ಕೆ ಪ್ರತಿಯಾಗಿ ಗ್ರಹಿಸಿದ ಅರ್ಥಕ್ಕೆ ಪ್ರತಿಯಾಗಿ ಅರ್ಥ ಮಂಡನೆಗಾಗಿ ಕವಿಯೊಬ್ಬನ ಕವಿತೆಗಳು ರಚಿಸಲ್ಪಡುತ್ತವೆ. ಇಲ್ಲಿಯೂ ಕೂಡ ಕವಿತೆ ಬರೆಯುವ ಮೂಲಕ ತನ್ನ ಸುತ್ತಣದ ಹತ್ತು ಹಲವು ಸಂಕಟಗಳಿಗೆ, ವೈರುಧ್ಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಒಂದಿನಿತಾದರೂ ಒಳಿತು ಮಾಡಬೇಕು ಎನ್ನುವ ಮಹತ್ವಾಂಕ್ಷೆಯಿಂದ ಕವಿ ಮಹಾದೇವ ಇಲ್ಲಿ ಸುಮಾರು ನಲವತ್ತು ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ. ನಿಲುಕದ ಎತ್ತರಗಳಿಗೆ ಏರಲಾಶಿಸಿ, ನಿರಾಸೆಗೊಳ್ಳುವುದಕ್ಕಿಂತ, ಇರುವ ಬದುಕನ್ನು ಇರುವಂತೆ ಒಪ್ಪಿಕೊಳ್ಳಬೇಕು, ಅದನ್ನು ಎದೆಗುಂದದೆ, ಸಮರ್ಥವಾಗಿ ಎದುರಿಸಬೇಕು. ವೈಪರೀತ್ಯಗಳನ್ನು ಕಂಡರಿದು ಕೊಟ್ಟ ಕುದುರೆಯಂತೆ ಪಳಗಿಸಿಬೇಕು ಪರಿಹಾರಗಳನ್ನು ಕಂಡುಕೊಳ್ಳಬೇಕು. ಜೀವದೊಲವಿನ ಬೀಜಗಳನ್ನು ಎದೆಯಾಳದಲ್ಲಿ ಬಿತ್ತಬೇಕು. ಬೀಜಾಂಕುರವಾಗುವಂತೆ ಪ್ರಯತ್ನಿಸಬೇಕು ಎನ್ನುವುದು ಕವಿತೆಗಳ ಸದಾಶಯವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಬೆನ್ನುಡಿಯಲ್ಲಿ ಡಾ. ಬರಗೂರು ರಾಮಚಂದ್ರಪ್ಪ ಅವರು ಹೇಳುವಂತೆ ಜೀವನ ಪ್ರೀತಿ ಮತ್ತು ತಾತ್ವಿಕ ನೀತಿಗಳ ಸ್ಪಷ್ಟ ನೆಲೆಗಳ ಹುಡುಕಾಟ ಕೂಡ, ಎನ್ನುವುದು ಕವನ ಸಂಕಲನದ ಒಟ್ಟು ಆಶಯವಾಗಿರುವುದನ್ನು ಸಹಜವಾಗಿಯೇ ಎಲ್ಲರೂ ಗಮನಿಸಬಹುದಾಗಿದೆ.

ಪ್ರಸ್ತುತ ದಿನಗಳಲ್ಲಿ ಬದುಕು ನಿತ್ಯವೂ ನೂರೆಂಟು ಅಪವ್ಯಸಗಳಿಂದ ಬಂಧಿಯಾಗಿದೆ.  ಜನರನ್ನು ಒಂದುಗೂಡಿಸಿ, ಮನಸ್ಸನ್ನು ಸುಸಂಕೃತವಾಗಿಸಬೇಕಾದ ಧರ್ಮಗಳಳು ವಿಭಜಕ ಶಕ್ತಿಗಳಾಗಿವೆ. ಭ್ರಷ್ಟಾಚಾರದ ಹಸಿವು ತನ್ನ ವಿಕಾರ ಹಸಿವೆಯನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ರಕ್ಕಸತನವನ್ನು ಇನ್ನಿಲ್ಲದಂತೆ ಪ್ರದರ್ಶಿಸುತ್ತಿದೆ. ಪರಿಸರ ನಾಶ, ಕೋಮುವಾದ, ಭಯೋತ್ಪಾದನೆ ಹಿಂಸೆಗಳು ನಮ್ಮನ್ನು ನಿತ್ಯವೂ ತಲ್ಲಣಗೊಳಿಸುತ್ತಿವೆ. ಅಭಿವೃದ್ಧಿಯ ನೆಪದಲ್ಲಿ ನಿಸರ್ಗ ನಾಶ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ. ರಾಜಕಾರಣದ ಅಪವಿತ್ರ ಮೈತ್ರಿಗಳು ಸಾಂವಿಧಾನಿಕ ಆಶಯಗಳನ್ನು ಸಡಿಲಗೊಳಿಸುತ್ತಿವೆ. ಒಟ್ಟಿನಲ್ಲಿ ಬದುಕನ್ನು ಎಲ್ಲ ರೀತಿಯಲ್ಲೂ ತಿಂದು ತೇಗುವ ಬೆಂಕಿ ಬದುಕಿನ ಭಾಗವಾಗುತ್ತಿದೆ. ಅದು ಇಂದಿನ ಬದುಕಿನ ವೈಪರೀತ್ಯವೇ ಸರಿ. ಇದನ್ನು ನಿರಾಕರಿಸುವುದು ಭ್ರಮೆಯೇ ಸರಿ.  ಆದರೂ ಇಂತದೊಂದು ಸಂದಿಗ್ಧತೆಯಲ್ಲು ಬೆಳಕನ್ನು  ಹುಡಕಲೇಬೇಕು ಅದು ಇಂದಿನ ತುರ್ತು ಕೂಡಾ ಹೌದು. ಬೆಂಕಿಯ ನಡುವೆಯೇ ಬೆಳಕನನು ಹುಡುಕಿಕೊಳ್ಳುವ ಮಹತ್ತರ ಆಶಯವೇ ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕಂಡು ಬರುತ್ತದೆ. ಕವಿ ಮಹಾದೇವ ಬಸರಕೋಡ ಅವರು ನಿರಾಸೆಯ ಕತ್ತಲ್ಲೂ ಹೊಸ ಕನಸುಗಳನ್ನು ಕಾಣಲು ಹಂಬಲಿಸುತ್ತಾರೆ. ಕಾರ್ಮೋಡಗಳ ಬಿಗಿದ ಬಂಧನದಲ್ಲಿಯೂ ನಲುಗದ ಸೂರ್ಯ, ಮುಳ್ಳುಗಳ ಹೊದರಿನಲ್ಲಿ ನಗುವ ಹೂವು, ಎಲೆಗಳನ್ನೆಲ್ಲ ಕಳೆದುಕೊಂಡು ಬರುಡಾದ ಮರ ಒಂದಿನಿತೂ ಕಂಗೆಡೆದ ಹೊಸ ಚಿಗುರಿಗಾಗಿ ಆಶಿಸುವಂತೆ ಕವಿ ಸಾವಿರಾರು ಸಂಕಟಗಳ ನಡುವೆಯೂ ಸದಾ ಸಕಾರತ್ಮಕತೆ ಹಾದಿಯನ್ನು ಹುಡುಕುತ್ತಾರೆ.

ಜಾತಿ, ಮತ, ಭಾಷೆ, ಬಣ್ಣ  ಮೌಢ್ಯ

ಪಟ್ಟ ಭದ್ರ ಹಿತಾಸಕ್ತಿಗಳು

ಸಂಶಯದ ಗಡಿಗಳು                                                                            

ಒಟ್ಟಾಗಿ ಹಿಡಿದು ಬಂದರೂ

ಚಾಕು, ಚೈನು, ಬಂದೂಕು, ಸಿಡಿಗುಂಡುಗಳನು

ಅಳುವುದಿಲ್ಲ ಬದುಕಿನೆದೆಗಳು

ಬತ್ತುವುದಿಲ್ಲ ಜೀವದೊಲವು..

ಎನ್ನುವ ಕವಿ ಸಾಲುಗಳು ಸಂಧಿಕಾಲದ ಆಗುಹೋಗುಗಳಿಗೆ ತೆರೆದ ಹೃದಯದಿಂದ ಸ್ಪಂದಿಸುತ್ತಾರೆ. ಕಷ್ಟ ಕಾರ್ಪಣ್ಯಗಳಿಗ ಸೋಲದೇ ಅದರಲ್ಲಿಯೇ ಸೌಂದರ್ಯವನ್ನು, ಆನಂದವನ್ನು, ಮಧುರ ಬಾಂಧವ್ಯವನ್ನು ಕಂಡುಕೊಳ್ಳಲು ಹವಣಿಸುತ್ತಾರೆ.

 

ಬಿಟ್ಟು ಬಿಡಬೇಕಿದೆ ಇನ್ನಾದರೂ

ಹಚ್ಚು ಹುಚ್ಚುತನವನ್ನು  (ಬೆಳಕು ಚಲ್ಲೋಣ)

 ಎನ್ನುವ ಕವಿಯ ಸಾಲುಗಳು ಬೆಂಕಿ ಹಚ್ಚುವ ಹುಚ್ಚುತನಕ್ಕೆ ಕಡಿವಾಣ ಹಾಕಿ, ಮೈಕೊಡಿವಿ ಬೆಳಕು ಹುಡುಕುವ ಭಾವಕ್ಕೆ ದನಿಯಾಗುತ್ತವೆ.  ಬೆಂಕಿ ಮತ್ತು ಬೆಳಕು ಎರಡರಲ್ಲಿ ಯಾವಾಗಲೂ ಬೆಳಕು ನಮ್ಮ ಆಯ್ಕೆಯಾಗಬೇಕು, ಜೊತೆಗೆ ಬೆಂಕಿಯನ್ನು ಕೇಡುಗಳನ್ನು ಸುಡಲು ಬಳಸಿಬೇಕು ಎನ್ನುವ ಕವಿ ಸದಾ ಬದುಕಿನ ಒಳಿತಿಗಾಗಿ ಹಂಬಲಿಸುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ. ಮುನ್ನುಡಿಯಲ್ಲಿ ಹಿರಿಯ ಕವಿಗಳಾದ ಡಾ. ಚೆನ್ನಪ್ಪ ಕಟ್ಟಿಯವರು ಹೇಳುವಂತೆ ನಮ್ಮ ಬದುಕಿನಲ್ಲಿ ಇರುವ ಬೆಂಕಿಯನ್ನು ಒಪ್ಪಿಕೊಳ್ಳುತ್ತಲೇ ಅದರ ಜಾಗೆಯಲ್ಲಿ ಬೆಳಕನ್ನು ಸ್ಥಾಪಿಸಿಕೊಳ್ಳುವ ದಾರಿಯನ್ನು ಶೋಧಿಸಿಕೊಳ್ಳುವ ಅರ್ಥಪೂರ್ಣ ಪ್ರಯತ್ನ ಅವರ ಬಹುಪಾಲು ಕವಿತೆಗಳಲ್ಲಿ ಕಾಣಸಿಗುತ್ತದೆ.. ಎಂಬುದು ಎಲ್ಲ ಕವಿತೆಗಳ ಮೂಲ ಆಶಯವನ್ನು ಸೂಚಿಸುತ್ತದೆ ಎನ್ನುವುದು ಗಮನೀಯ ಸಂಗತಿಯಾಗಿದೆ. ಅಂತೆಯೇ ಅವರು ಬದುಕನರಳಿಸು ಬೆಂಕಿಯೇ ಎಂದು ಬೇಡಿಕೊಳ್ಳುತ್ತಾರೆ.ಬದುಕು ಇಂದು ಅನಗತ್ಯ ಸಂಗತಿಗಳಲ್ಲಿ ಸಿಲುಕಿಕೊಂಡು ತುಂಬ ಬ್ಯುಸಿಯಾಗಿ ಬಿಟ್ಟಿದೆ. ಕರುಳ ಸಂಬಂಧಗಳನ್ನು ಕೂಡ ಕಡೆಗಣಿಸುವ ಹುಚ್ಚುತನ ಹೆಚ್ಚುತ್ತಿದೆ.  ಇರುವುದೆಲ್ಲವ ಬಿಟ್ಟು ಬೆರೆಡೆಗೆ ತುಡಿಯುವುದೇ ಬದುಕಿನ ಮಂತ್ರವಾದಂತೆ ತೋರುತ್ತಿದೆ. 

 ನನ್ನನ್ನು ಹೊತ್ತು ಹೆತ್ತು ಎದೆಯ ಹಾಲುಣಿಸಿ

ತನಗಾಗಿ ಏನೊಂದು ಬಯಸದೇ

ತನ್ನ ಪಾಲಿನದೆಲ್ಲವನ್ನು

ನನಗಾಗಿಯೇ ತ್ಯಾಗ ಮಾಡಿದ

ನನ್ನವನ್ನನ್ನು ಪ್ರೀತಿಸುವೆನೆಂದು

ಅವಳಿಗೊಮ್ಮೆಯಾದರೂ ಹೇಳದಷ್ಟು (ಪುರಸುತ್ತಿಲ್ಲದಷ್ಟು..)

 ಜನುಮ ನೀಡಿದ ತಂದೆ-ತಾಯಿ, ನಮ್ಮನ್ನೆ ನಂಬಿ ಬಂದ ಸತಿ, ನಮ್ಮಿಂದ ಜನುಮ ಪಡೆದ ಮಕ್ಕಳನ್ನೂ ಕೂಡ ಕಡೆಗಣಿಸುವಷ್ಟು ಬ್ಯುಸಿಯಾಗಿರುವುದು ಬಹುದೊಡ್ಡ ದುರಂತವೇ ಸರಿ. ಕವಿ ನಮ್ಮ ನೆಲದ ಹಿಂದಣ ಪರಂಪರೆಯಲ್ಲಿ ಬೆಳಕಾಗಿ ಬಂದ ಬುದ್ಧ, ಬಸವ, ಅಂಬೇಡ್ಕರ, ಗಾಂಧಿಜೀ ಅವರನ್ನು ಆದರಿಸುತ್ತ ಬುದ್ಧನ ಕರುಣೆಯ ಹಾದಿ, ಬಸವಣ್ಣನ ಕರುಳಬಳ್ಳಿಯ ಕಾಳಜಿ, ಅಂಬೇಡ್ಕರ ಅವರ ಹೋರಾಟವನ್ನು ತಮ್ಮ ಕವಿತೆಗೆ ಮೂಲದ್ರವ್ಯವಾಗಿಸಿಕೊಂಡು ಅದರ ಬೆಳಕನ್ನು ನಿಂದ ಹೆಜ್ಜೆಯಲ್ಲಿ  ಚೆಲ್ಲುತ್ತ ಮುಂದಿನ ಸಾರ್ಥಕ ಹಾದಿಯನ್ನು ತೋರಿಸುವ ತೋರುದೀಪವಾಗಿಸಿಕೊಳ್ಳುತ್ತಾರೆ. ಮನುಷ್ಯರ ನಡುವೆ ಕಂದಕಗಳನ್ನು ಸೃಜಿಸಲು ಹವಣಿಸುತ್ತಿರುವ ಕೆಟ್ಟು ಹೋದ ಕೇಡಿನ ಮನಸ್ಸುಗಳನ್ನು ಖಂಡಿಸುತ್ತಾರೆ. ವರ್ತಮಾನದ ಬಿಕ್ಕಟ್ಟುಗಳಿಗೆ ಒಂದಿನಿತು ಪರಿಹಾರ ಕಂಡುಕೊಳ್ಳುವಲ್ಲಿ ಸಫಲತೆ ಸಾಧಿಸುತ್ತಾರೆ. ಅಸ್ವಸ್ಥತೆಯ ಮಟ್ಟವನ್ನು ದಾಟಿ ಆರೋಗ್ಯಕರವಾದ ವಾತಾವರಣಕ್ಕೆ ಆಶಿಸುತ್ತಾರೆ. ರಾಗ ದ್ವೇಷಗಳನ್ನು ಮೀರಿದ ಶಾಂತಿಗಾಗಿ, ಸಹನೆಗಾಗಿ ತುಡಿಯುತ್ತಲೇ ವಯಕ್ತಿಕ ಮತ್ತು ಸಾಮಾಜಿಕ ನೆಲೆಗಳ ನಡುವೆ ಸೇತುವೆ ಕಟ್ಟುವ ಕಳಕಳಿ ತೋರುತ್ತಾರೆ.

 ತಮಗೆ ಕಂಡುದದನ್ನು ಕವಿತೆಯಾಗಿಸುವ ಮಹಾದೇವರ ಅವರು ಉತ್ಸಾಹ ಅದಮ್ಯವಾದುದು. ಅವರ ಸುಪ್ತಪ್ರಜ್ಞೆಯಲ್ಲಿ ಪುಟಿದೇಳುವ ಪ್ರತಿಮೆ ಪ್ರತೀಕಗಳು ಕಾವ್ಯಾತ್ಮಕ ಗುಣಗಳಾಗಿ ಎದ್ದು ನಿಲ್ಲುತ್ತವೆ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎನ್ನವ ಮಾತಿನಂತೆ ನಮ್ಮ ಬದುಕಿನ ಆಚರಣೆಗಳು ಜಾರಿಗೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಜೀವನದ ವಾಸ್ತವ ಪ್ರಜ್ಞೆಯ ಹಾಗೂ ಸಾಮಾಜಿಕ ಕಳಕಳಿಯನ್ನು ತಮ್ಮ ಕವಿತೆಯ ಪ್ರಧಾನ ಗುಣಗಳನ್ನಾಗಿಸಿಕೊಂಡು, ವೈಚಾರಿಕತೆಯನ್ನು ಲೇಪಿಸಿಕೊಂಡು ಭಾಷೆ ಹಾಗೂ ಛಂದದಲ್ಲಿ ಸಮಕಾಲೀನತೆಯ ಗತಿಯನ್ನು ಎದ್ದುಕಾಣಿಸುತ್ತಾರೆ. ಕಾವ್ಯ ಪ್ರೇಮಿಗಳು ಪ್ರಸ್ತುತ ಕವನ ಸಂಕಲವನ್ನು ಸಂತೋಷದಿಂದ ಸ್ವಾಗತಿಸುತ್ತಾರೆ ಎಂದು ಆಶಿಸುತ್ತೇನೆ.