ಮಳೆ ನಿಂತು ಎರಡು ದಿನಗಳಾಗಿದ್ದವು. ಹಳ್ಳಿಯ ಕೆಂಪು ಮಣ್ಣಿನ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಇನ್ನೂ ಸಣ್ಣ ಸಣ್ಣ ಕೊಳಗಳಾಗಿ ನಿಂತಿತ್ತು. ಹೊಲಗಳಲ್ಲಿ ಹಸಿರು ಮೊಳಕೆಗಳು ಭೂಮಿಯ ಎದೆಯ ಮೇಲೆ ಹಸಿರು ಹಾಸಿಗೆಯಂತೆ ಹರಡಿಕೊಂಡಿದ್ದವು. ದೂರದಲ್ಲಿ ಎತ್ತಿನ ಕೊರಳ ಗಂಟೆಗಳ ಸದ್ದು, ದೇವಾಲಯದ ಬೆಳಗಿನ ಸುಪ್ರಬಾತ, ಕೋಳಿಯ ಕೂಗು ಎಲ್ಲವೂ ಸೇರಿ ಹಳ್ಳಿಯ ದಿನವನ್ನು ಎಚ್ಚರಿಸುತ್ತಿದ್ದವು.

ವಿಜಯನಗರ ಜಿಲ್ಲೆಯ ಗಡಿಯಲ್ಲಿದ್ದ ಆ ಪುಟ್ಟ ಹಳ್ಳಿಯ ಹೆಸರು ಬಸರಕೋಡು. ಅಲ್ಲಿ ದೊಡ್ಡ ಮನೆಗಳಿರಲಿಲ್ಲ. ಎತ್ತರದ ಕಟ್ಟಡಗಳಿರಲಿಲ್ಲ. ಇದ್ದದ್ದು ಮಣ್ಣಿನ ಗೋಡೆಗಳು, ಹೆಂಚಿನ ಛಾವಣಿಗಳು, ಬೆವರಿನ ವಾಸನೆ ಮತ್ತು ಬಡತನದ ನಡುವೆ ಬದುಕು ಕಟ್ಟಿಕೊಂಡಿದ್ದ ಜನ. ಆ ಹಳ್ಳಿಯ ಕೊನೆಯ ಮನೆಯ ಮುಂದೆ, ಹಳೆಯ ಬೇವಿನ ಮರದ ನೆರಳಿನಲ್ಲಿ ಒಬ್ಬ ಹುಡುಗಿ ಕುಳಿತಿದ್ದಳು. ಅವಳ ಕೈಯಲ್ಲಿ ‘ಭಾರತದಸಂವಿಧಾನ’ ಪುಸ್ತಕ ಇತ್ತು. ಪುಸ್ತಕವು ಹಳೆಯಾಗಿತ್ತು ಎಂಬುದನ್ನು ಅದರ ಹರಿದ ಅಂಚುಗಳು ಹೇಳುತ್ತಿದ್ದವು. ಪುಸ್ತಕದ ಮೊದಲ ಪುಟದಲ್ಲಿ ನೀಲಿ ಮಸಿಯಲ್ಲಿ "ಆದ್ಯಾ – ಕನಸು: ಐಎಎಸ್" ಎಂದು  ಬರೆದಿತ್ತು. ಹದಿನಾರು ವರ್ಷದ ಆ ಹುಡುಗಿಯ ಕಣ್ಣುಗಳಲ್ಲಿ ವಿಚಿತ್ರ ಹೊಳಪು ಇತ್ತು.

ಅವಳಿಗೆ ಆಕಾಶದಲ್ಲಿ ಹಾರುವ ವಿಮಾನ ಕಂಡರೂ ಒಂದು ಪ್ರಶ್ನೆ ಹುಟ್ಟುತ್ತಿತ್ತು. "ಇದನ್ನು ಯಾರು ನಡೆಸುತ್ತಾರೆ?". ಹೊಸ ರಸ್ತೆ ನಿರ್ಮಾಣವಾದರೆ "ಇದರ ಹಿಂದೆ ಸರ್ಕಾರ ಹೇಗೆ ಕೆಲಸ ಮಾಡುತ್ತದೆ?". ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಬಂದರೆ  "ಇದನ್ನು ಶಾಶ್ವತವಾಗಿ ಪರಿಹರಿಸಲಾಗುವುದಿಲ್ಲವೇ?" ಹೀಗೆ ಪ್ರತಿಯೊಂದಕ್ಕೂ ಒಂದೊಂದು ಪ್ರಶ್ನೆ ಮತ್ತು ಅದಕ್ಕೆ ಸಾಧ್ಯಂತ ಪರಿಹಾರ ಕಂಡುಕೊಳ್ಳುತ್ತಿದ್ದಳು. ಇತರ ಮಕ್ಕಳಂತೆ ಅವಳಿಗೆ ಸಿನಿಮಾ ನಟಿಯಾಗಬೇಕು, ಹಾಡುಗಾರ್ತಿಯಾಗಬೇಕು ಎಂಬ ಕನಸು ಇರಲಿಲ್ಲ. ಅವಳಿಗೆ ಇದ್ದದ್ದು ಒಂದೇ ಕನಸು. ಅದು "ಜಿಲ್ಲಾಧಿಕಾರಿಯಾಗಬೇಕು." ಎಂಬುದು.

**************

"ಆದ್ಯಾ... ಅಕ್ಕಿ ಖಾಲಿಯಾಗಿದೆ. ಅಂಗಡಿಯಿಂದ ಅರ್ಧ ಕಿಲೋ ತಂದುಕೊಡು." ಒಳಗಿನಿಂದ ತಾಯಿ ಗೌರಮ್ಮನ ಧ್ವನಿ ಕೇಳಿಸಿತು. ಆದ್ಯಾ ಪುಸ್ತಕ ಮುಚ್ಚಿ ಒಳಗೆ ಹೋದಳು. ಮನೆಯೊಳಗೆ ನೋಡಿದರೆ ಬಡತನವೇ ಗೋಡೆಗಳಿಗೆ ಅಂಟಿಕೊಂಡಂತಿತ್ತು. ಒಂದು ಚಿಕ್ಕ ಸ್ಟವ್. ಮೂರು ಅಲ್ಯೂಮಿನಿಯಂ ಪಾತ್ರೆಗಳು. ಮೇಲ್ಚಾವಣಿಗೆ ಹೊದಿಸಿದ್ದ ಸಿಮೆಂಟ್ ಶೀಟ್ ಗಳು ಬಿರುಕು ಬಿಟ್ಟಿದ್ದವು.  ಬಿರುಕುಗಳಿಂದ ಸೂರ್ಯನ ಕಿರಣಗಳು ಒಳಬರುತ್ತಿದ್ದವು.

ಗೌರಮ್ಮ ತನ್ನ ಸೀರೆಯ ಸೆರಗಿಗೆ ಕಟ್ಟಿದ್ದ ಹತ್ತು ರೂಪಾಯಿಯ ನೋಟನ್ನು ಬಿಚ್ಚಿ ಮಗಳ ಕೈಗೆ ಕೊಡುತ್ತಾ "ಇದಷ್ಟೇ ಉಳಿದಿದೆ." ಎಂದಳು. ಆದ್ಯಾ ನೋಟನ್ನು ಕೈಯಲ್ಲಿ ಹಿಡಿದು ನೋಡುತ್ತಾ  ಕ್ಷಣಕಾಲ ಮೌನವಾಗಿದ್ದಳು. ನಂತರ ಅಂಗಡಿಗೆ ಹೋಗಿ ಅಕ್ಕಿ ತಂದು ಅಮ್ಮನ ಕೈಗೆ ಕೊಡುತ್ತಾ, "ಅಮ್ಮ... ನಮಗೆ ಶಾಲೆಯಲ್ಲಿ ಮಧ್ಯಾಹ್ನದ ಊಟ ಸಿಗುತ್ತದೆ. ನೀನೂ ಮತ್ತು  ಅಪ್ಪ ಇಬ್ಬರೂ ಊಟ ಮಾಡಿ." ಎಂದಳು.

"ನಾವು ತಿಂದಿದ್ದೇವೆ." ಗೌರಮ್ಮ ನಗುವಂತೆ ನಟಿಸಿದಳು. ಆದ್ಯಾಗೆ ಗೊತ್ತಿತ್ತು. ಅದು ಸುಳ್ಳು ಎಂದು. ತಾಯಿ ಬೆಳಿಗ್ಗೆ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದನ್ನು ನೋಡಿದ್ದಳು. ತಂದೆ ಹೊಲಕ್ಕೆ ಹೋದಾಗಲೂ ಏನೂ ತಿನ್ನಿರಲಿಲ್ಲ. ಆದರೆ ಯಾರೂ ಹೇಳುತ್ತಿರಲಿಲ್ಲ. ಬಡತನದಲ್ಲಿ ಪ್ರೀತಿಯೂ ಹಸಿವಿನಂತೆ ಮೌನವಾಗಿರುತ್ತದೆ.

*********

ಸಂಜೆ ಆದ್ಯಾ ಹೊಲದ ಕಡೆ ನಡೆದಳು. ಅಲ್ಲಿ ಅವಳ ತಂದೆ ಹನುಮಂತಪ್ಪ, ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಸೂರ್ಯನ ಬಿಸಿಲಿನಿಂದ ಅವನ ಚರ್ಮ ಕಪ್ಪಾಗಿತ್ತು. ಕೈಗಳೆಲ್ಲ ಕೆಲಸ ಮಾಡಿ ಮಾಡಿ ಬಿರುಸಾಗಿದ್ದವು.  ಕಾಲಿನ ಚಪ್ಪಲಿಗಳು ಹರಿದು ಹೋಗಿದ್ದವು. ಆದ್ಯಾಳನ್ನು ನೋಡಿದ ತಕ್ಷಣ ಅವನ ಮುಖ ಅರಳಿತು.

"ಬಂದೆಯಾ ಕಂದಾ?" ಮಗಳನ್ನು ಪ್ರೀತಿಯಿಂದ ಮಾತಾಡಿಸಿದ.

"ಅಪ್ಪ... ನೀರು." ಅವಳು ತಂದಿದ್ದ ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿದು ಹನುಮಂತಪ್ಪ ಉಸಿರೆಳೆದ. "ಇವತ್ತು ಶಾಲೆಯಲ್ಲಿ ಏನು ಕಲಿತೆ?"

"ಭಾರತದ ಆಡಳಿತ ವ್ಯವಸ್ಥೆ."

"ಹಾಗಂದರೆ ಏನು ಮಗಳೆ?". ಆದ್ಯಾಳ ಮುಖದಲ್ಲಿ ನಗು ಮೂಡಿತು. ಅವಳು ಮಣ್ಣಿನ ಮೇಲೆ ಕಡ್ಡಿಯಿಂದ ಭಾರತದ ನಕ್ಷೆ ಬಿಡಿಸಿದಳು. ಜಿಲ್ಲೆ, ರಾಜ್ಯ, ಕೇಂದ್ರ ಸರ್ಕಾರ ಎಲ್ಲವನ್ನೂ ವಿವರಿಸಿದಳು. ಹನುಮಂತಪ್ಪ ಅವಳ ಮಾತುಗಳನ್ನೇ ಕೇಳುತ್ತಿದ್ದ. ಅವನಿಗೆ ಅದ್ಯಾವುದೂ ಅರ್ಥವಾಗುತ್ತಿರಲಿಲ್ಲ.  ಆದರೆ ಒಂದು ವಿಷಯ ಚೆನ್ನಾಗಿ ಗಮನಿಸಿದ. ತನ್ನ ಮಗಳು ದೊಡ್ಡವಳಾಗುತ್ತಾಳೆ.

ಹಠಾತ್ತನೆ ಅವನು ಜೇಬಿನಿಂದ ಮಡಚಿದ ಐವತ್ತು ರೂಪಾಯಿಯ ನೋಟನ್ನು ತೆಗೆದ. "ಇದು ಇಟ್ಟುಕೋ." ಎಂದ.

"ಏಕೆ ಅಪ್ಪ?"

"ನೀನು ಕೇಳಿದ ಆ ಪುಸ್ತಕಕ್ಕೆ."

"ಆದರೆ ಇದೆಲ್ಲಿಂದ ಬಂತಪ್ಪಾ…"

"ಇವತ್ತು ಕೂಲಿಯ ಜೊತೆಗೆ ಹೆಚ್ಚುವರಿ ಕೆಲಸ ಮಾಡಿದೆ."

ಅವನು ಹೆಚ್ಚುವರಿ ಕೆಲಸ ಮಾಡಿರಲಿಲ್ಲ ಎಂಬುದು ಆದ್ಯಾಳಿಗೆ ಗೊತ್ತಿತ್ತು. ಮಧ್ಯಾಹ್ನ ಊಟ ಮಾಡದೆ ಉಳಿಸಿಕೊಂಡ ಹಣ ಅದು ಎಂದು ಅರಿತಳು. ಅವಳ ಕಣ್ಣುಗಳು ತೇವವಾದವು.

*****************

ಸರ್ಕಾರಿ ಪ್ರೌಢಶಾಲೆಯ ಬೆಳಗಿನ ಪ್ರಾರ್ಥನೆ ಮುಗಿದಿತ್ತು. ಮುಖ್ಯ ಶಿಕ್ಷಕ ಶಂಕರಮೂರ್ತಿ ವೇದಿಕೆಯ ಮೇಲೆ ನಿಂತಿದ್ದರು. "ಈ ವರ್ಷದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿನಿ..." ಎಂದು ಹೇಳುತ್ತಿದ್ದಂತೆ ಮಕ್ಕಳೆಲ್ಲ ಚಪ್ಪಾಳೆ ತಟ್ಟುತ್ತಾ “ಆದ್ಯ… ಆದ್ಯ… ಆದ್ಯ” ಎಂದು ಜೋರಾಗಿ ಕೂಗತೊಡಗಿದರು.

"ಹೌದು ನಮ್ಮ ಶಾಲೆಯ ಆದ್ಯಾ ಈ ವರ್ಷದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಅದಕ್ಕಾಗಿ ನಾವೆಲ್ಲರೂ ಅವಳಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ" ಎನ್ನುತ್ತಿದ್ದಂತೆ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟುತಿದ್ದರು. ಆದ್ಯಾ ವೇದಿಕೆಯ ಮೇಲೆ ಹೋದಳು. ಬಹುಮಾನವಾಗಿ ಒಂದು ಪುಸ್ತಕ ಹಾಗೂ 500 ರೂಪಾಯಿ ಸಿಕ್ಕಿತು.  "ಭಾರತದ ಮಹಾನ್ ಆಡಳಿತಾಧಿಕಾರಿಗಳು." ಎಂಬ ಪುಸ್ತಕ ಕೊಟ್ಟು ಶಂಕರಮೂರ್ತಿ ಹೇಳಿದರು. "ಇದು ಬಹುಮಾನ ಅಲ್ಲ. ಇದು ನಿನ್ನ ಭವಿಷ್ಯದ ವಿಳಾಸ." ಎಲ್ಲರೂ ಅಭಿನಂದನೆ ಸಲ್ಲಿಸಿದರು. ಮುಖ್ಯಗುರುಗಳು ಮಾತನ್ನು ಮುಂದುವರಿಸಿದರು. "ಮಕ್ಕಳೇ... ನಿಮ್ಮಲ್ಲಿ ಹಲವರು ಬಡವರು ಇದ್ದೀರಿ. ನಾನು ಕೂಡ ಬಡವನಾಗಿದ್ದೆ. ಆದರೆ  ಒಂದು ಮಾತು ನೆನಪಿಟ್ಟುಕೊಳ್ಳಿ, ಬಡತನ ಎಂದರೆ ಹಣದ ಕೊರತೆಯಲ್ಲ. ಕನಸಿನ ಕೊರತೆ". ಆ ಮಾತು ಶಾಲೆಯ ಗೋಡೆಗಳಲ್ಲಿ ಪ್ರತಿಧ್ವನಿಸಿತ್ತು.

***************

ಕೆಲವು ದಿನಗಳ ನಂತರ ಹಳ್ಳಿಯಲ್ಲಿ ವಿಚಿತ್ರ ಘಟನೆ ನಡೆಯಿತು. ತಾಲೂಕು ಕಚೇರಿಯಿಂದ ಬಂದ ಅಧಿಕಾರಿಗಳು, ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಶ್ರೀಮಂತ ಜಮೀನುದಾರನ ವಿರುದ್ಧ ಕ್ರಮ ಕೈಗೊಂಡರು. ಹಳ್ಳಿಯ ಜನರೆಲ್ಲ ಆಶ್ಚರ್ಯದಿಂದ ನೋಡುತ್ತಿದ್ದರು. ಇಷ್ಟು ವರ್ಷ ಯಾರೂ ಅವನ ವಿರುದ್ಧ ಮಾತಾಡಿರಲಿಲ್ಲ. ಒಬ್ಬ ಅಧಿಕಾರಿ ಮಾತ್ರ ದಾಖಲೆಗಳನ್ನು ಪರಿಶೀಲಿಸಿ, ಕಾನೂನು ಓದಿ, ಆದೇಶ ಬರೆದು ಕ್ರಮ ಕೈಗೊಂಡ. ಆದ್ಯಾ ದೂರದಿಂದ ಎಲ್ಲವನ್ನೂ ನೋಡುತ್ತಿದ್ದಳು. ಕಾರ್ಯ ಮುಗಿದ ನಂತರ ಅವಳು ಧೈರ್ಯ ಮಾಡಿ ಅಧಿಕಾರಿಯ ಬಳಿ ಹೋದಳು.

"ಸರ್..." ಅವರು ತಿರುಗಿ ನೋಡಿದರು.

"ಏನು ಮಗಳೇ?"

"ನಿಮ್ಮಂತಾಗಲು ಏನು ಓದಬೇಕು?". ಅಧಿಕಾರಿ ನಗುತ್ತ ಕೇಳಿದರು.

"ನೀನು ಏನಾಗಬೇಕು?"

"ಐಎಎಸ್." ಕೆಲವು ಕ್ಷಣ ಅವರು ಅವಳನ್ನು ನೋಡುತ್ತ ನಿಂತರು. ನಂತರ ತಮ್ಮ ಜೇಬಿನಿಂದ ಒಂದು ಪೆನ್ ತೆಗೆದು ಅವಳ ಕೈಗೆ ಕೊಟ್ಟರು.

"ಈ ಪೆನ್ ತುಂಬಾ ದುಬಾರಿ ಅಲ್ಲ. ಆದರೆ ನಾನು ಯುಪಿಎಸ್ಸಿ ಪರೀಕ್ಷೆ ಬರೆದಾಗ ಬಳಸಿದ್ದ ಪೆನ್ ಇದು. ಇದನ್ನು ನಾನು ಅದೃಷ್ಟಕ್ಕಾಗಿ ಇಟ್ಟುಕೊಂಡಿದ್ದೆ. ಈಗ ಇದು ನಿನ್ನದು." ಆದ್ಯಾಳ ಕೈಗಳು ನಡುಗಿದವು.

"ಆದರೆ ಸರ್..."

"ಒಂದು ಮಾತು ನೆನಪಿಡು. ನಿನ್ನನ್ನು ಬಡತನ ಸೋಲಿಸುವುದಿಲ್ಲ. ನಿನ್ನ ಭಯ ಮಾತ್ರ ಸೋಲಿಸುತ್ತದೆ." ಆ ದಿನದಿಂದ ಆ ಪೆನ್ ಅವಳಿಗೆ ದೇವರ ಪ್ರಸಾದದಂತಾಯಿತು.

*************

ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನ. ಶಾಲೆಯ ಮುಂದೆ ಹಳ್ಳಿಯ ಜನರೆಲ್ಲ ಸೇರಿದ್ದರು. ವಿದ್ಯಾರ್ಥಿಗಳಿಗಿಂತ ಪೋಷಕರೇ ಹೆಚ್ಚು ಆತಂಕದಲ್ಲಿದ್ದರು. ಶಾಲೆಯ ಜವಾನ ಫಲಿತಾಂಶದ ಪಟ್ಟಿಯನ್ನು ಅಂಟಿಸಿದ ತಕ್ಷಣ ಎಲ್ಲರೂ ಅತ್ತ ಓಡಿದರು. ಸ್ವಲ್ಪ ಹೊತ್ತಿನ ನಂತರ ಯಾರೋ ಕೂಗಿದರು. "ಆದ್ಯಾ... ಜಿಲ್ಲೆಗೆ ಮೊದಲ ರ್ಯಾಂಕ್‌ನಲ್ಲಿ ಬಂದಿದ್ದಾಳೆ!"

ಗೌರಮ್ಮ ಅಲ್ಲಿ ಇದ್ದವರನ್ನೆಲ್ಲ ಮರೆತು ಮಗಳನ್ನು ಅಪ್ಪಿಕೊಂಡಳು. ಹನುಮಂತಪ್ಪನ ಕಣ್ಣುಗಳಲ್ಲಿ ನೀರು ತುಂಬಿತು. ಆ ಸಂಜೆ ಇಡೀ ಹಳ್ಳಿ ಸಿಹಿ ಹಂಚಿಕೊಂಡಿತು. ಹಳ್ಳಿಯವರು ಮೊದಲ ಬಾರಿಗೆ ಒಬ್ಬ ಬಡ ಕೂಲಿಕಾರನ ಮಗಳನ್ನು ಹೆಮ್ಮೆಯಿಂದ ನೋಡುತ್ತಿದ್ದರು.

***************

ಪದವಿಪೂರ್ವ ಶಿಕ್ಷಣ ಮುಗಿಯಿತು. ನಂತರ ಪದವಿಯೂ ಮುಗಿಯಿತು. ಆದ್ಯಾ ಕಾಲೇಜಿನಲ್ಲಿಯೂ ಮೆರಗು ತೋರಿದಳು. ಅವಳು ಗ್ರಂಥಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು. ಹಳೆಯ ಪತ್ರಿಕೆಗಳನ್ನು ಓದುತ್ತಿದ್ದಳು. ಯುಪಿಎಸ್ಸಿ ಟಾಪರ್‌ಗಳ ಸಂದರ್ಶನಗಳನ್ನು ಕತ್ತರಿಸಿ ಪುಸ್ತಕದೊಳಗೆ ಇಟ್ಟುಕೊಳ್ಳುತ್ತಿದ್ದಳು. ಆದರೆ ಒಂದು ದಿನ ಅವಳು ಲೆಕ್ಕ ಹಾಕಿದಳು. ಯುಪಿಎಸ್ಸಿ ತರಬೇತಿ, ಪುಸ್ತಕಗಳು, ವಸತಿ, ಪ್ರಯಾಣ, ಪರೀಕ್ಷಾ ಶುಲ್ಕ ಎಲ್ಲವೂ ಸೇರಿ ಅವರ ಕುಟುಂಬಕ್ಕೆ ಅಸಾಧ್ಯವಾದ ಮೊತ್ತ ಎನಿಸಿತು. ಆ ರಾತ್ರಿ ಅವಳು ಮನೆಯ ಹೊರಗೆ ಕುಳಿತು ಯೋಚಿಸುತ್ತದ್ದಳು. ಆಕಾಶದಲ್ಲಿ ಪೂರ್ಣಚಂದ್ರ ಮಿನುಗುತ್ತಿದ್ದ. ಗಾಳಿ ನಿಶ್ಶಬ್ದವಾಗಿತ್ತು. ಅಷ್ಟರಲ್ಲಿ ಹನುಮಂತಪ್ಪ ಬಂದು ಮಗಳ ಪಕ್ಕದಲ್ಲಿ ಕುಳಿತ.

"ಏನಾಯಿತು?"

"ಅಪ್ಪ... ಯುಪಿಎಸ್ಸಿಗೆ ಹೆಚ್ಚು  ಹಣ ಬೇಕಾಗುತ್ತೆ".  ಹನುಮಂತಪ್ಪ ಸ್ವಲ್ಪ ಹೊತ್ತು ಮೌನವಾಗಿದ್ದ. ನಂತರ ನಿಧಾನವಾಗಿ ಹೇಳಿದ.

"ನಾನು ನಮ್ಮ ಅರ್ಧ ಎಕರೆ ಜಮೀನು ಮಾರಿಬಿಡುತ್ತೇನೆ." ಆದ್ಯಾ ಬೆಚ್ಚಿಬಿದ್ದಳು.

"ಬೇಡ ಅಪ್ಪ!".

"ಜಮೀನು ಮತ್ತೆ ಕೊಂಡುಕೊಳ್ಳಬಹುದು ಮಗಳೆ."

"ಆದರೆ ಅದು ನಮ್ಮ ಬದುಕು."

"ಇಲ್ಲ ಮಗಳೇ, ನೀನೇ ನಮ್ಮ ಬದುಕು." ಆ ಮಾತು ಕೇಳಿ ಆದ್ಯಾ ಕಣ್ಣೀರಿಟ್ಟಳು. ಅವಳು ತಂದೆಯ ಕೈ ಹಿಡಿದು ಹೇಳಿದಳು. "ನಾನು ನಿಮ್ಮನ್ನು ಸಾಲದಲ್ಲಿ ಮುಳುಗಿಸಿ ಓದುವುದಿಲ್ಲ. ಬದಲಾಗಿ ಕೆಲಸ ಮಾಡುತ್ತೇನೆ. ಸ್ವಂತ ದುಡಿಮೆಯಿಂದ ಯುಪಿಎಸ್ಸಿ ಓದುತ್ತೇನೆ." ಹನುಮಂತಪ್ಪ ಏನೂ ಹೇಳಲಿಲ್ಲ. ಆಕಾಶದತ್ತ ನೋಡುತ್ತಾ “ದೈವೇಚ್ಛೆಯಂತೆ ಆಗಲಿ” ಎಂದ.

ತನ್ನ ಮಗಳ ಈ ನಿರ್ಧಾರವೇ ಅವಳ ಬದುಕನ್ನು ಒಂದು ಭಯಾನಕ ತಿರುವಿನತ್ತ ಕೊಂಡೊಯ್ಯಲಿದೆ ಎಂಬುದು ಅವನಿಗೆ ಗೊತ್ತಿರಲಿಲ್ಲ.

************

ಅದೇ ವಾರ, ಹಳ್ಳಿಗೆ ಹೊಸ ಮುಖವೊಂದು ಕಾಲಿಟ್ಟಿತು. ಚೆನ್ನಾಗಿ ಸೀರೆ ಉಟ್ಟಿದ್ದ, ಮೃದುವಾಗಿ ಮಾತನಾಡುತ್ತಿದ್ದ ಮಧ್ಯವಯಸ್ಕ ಮಹಿಳೆ ಊರಿನಲ್ಲಿ ವೈನಾಗಿ ಓಡಾಡುತ್ತಿದ್ದಳು. ತನ್ನನ್ನು ಉದ್ಯೋಗ ಸಲಹೆಗಾರ್ತಿ ಎಂದು ಪರಿಚಯಿಸಿಕೊಂಡಳು.

"ಮುಂಬೈನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕಚೇರಿ ಸಹಾಯಕಿಯ ಕೆಲಸ. ಉತ್ತಮ ಸಂಬಳ. ವಸತಿ ಮತ್ತು ಊಟ ಉಚಿತ." ಆದ್ಯಾಳ ಕಣ್ಣುಗಳಲ್ಲಿ ಆಶೆಯ ಬೆಳಕು ಮೂಡಿತು. ಆದರೆ ಆ ಮಹಿಳೆಯ ನಗುವಿನ ಹಿಂದೆ ಅಡಗಿದ್ದ ಸತ್ಯವನ್ನು ಆ ಹಳ್ಳಿಯಲ್ಲಿ ಯಾರೂ ಅರಿತಿರಲಿಲ್ಲ.

*********************

ಬಸರಕೋಡಿನಲ್ಲಿ ಆ ದಿನ ವಿಚಿತ್ರ ಸಂಭ್ರಮವಿತ್ತು. "ಆದ್ಯಾ ಮುಂಬೈಗೆ ಕೆಲಸಕ್ಕೆ ಹೋಗುತ್ತಿದ್ದಾಳೆ." ಸುದ್ದಿ ಊರಿಡೀ ಹರಡಿತ್ತು. ಕೆಲವರು ಸಂತೋಷಪಟ್ಟರು. "ನೋಡ್ರಿ... ನಮ್ಮ ಊರಿನ ಹುಡುಗಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡ್ತಾಳಂತೆ."

ಕೆಲವರು ಅಸೂಯೆಯಿಂದ ನಕ್ಕರು. "ಐಎಎಸ್ ಆಗ್ತೀನಿ ಅಂತಿದ್ದವಳು ಈಗ ಕೆಲಸಕ್ಕೆ ಹೋಗ್ತಾಳಲ್ಲಾ!"

ಆದ್ಯಾ ಯಾರ ಮಾತನ್ನೂ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಅವಳ ಕಣ್ಣು ಮುಂದೆ ಒಂದೇ ಗುರಿ ಇತ್ತು.

"ಎರಡು ವರ್ಷ ಕೆಲಸ,  ನಂತರ ಯುಪಿಎಸ್ಸಿ ಕೋಚಿಂಗ್, ಆನಂತರ ಐಎಎಸ್." ಆ ಕನಸೇ ಅವಳನ್ನು ಬದುಕಿಸುತ್ತಿತ್ತು.

***********

ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆ ಹಳ್ಳಿಯ ಬಸ್ ನಿಲ್ದಾಣದ ಮುಂದೆ ಮೂರು ಜನ ನಿಂತಿದ್ದರು. ಹನುಮಂತಪ್ಪ. ಗೌರಮ್ಮ ಮತ್ತು ಆದ್ಯಾ.

"ಮುಂಬೈನಲ್ಲಿ ಚಳಿ ಇರಬಹುದು." ಚಳಿಗಾಳಿಗೆ ಗೌರಮ್ಮ ಮಗಳ ಭುಜದ ಮೇಲೆ ಹಳೆಯ ಶಾಲು ಹೊದಿಸಿದಳು. ಆದ್ಯಾ ನಕ್ಕಳು.

"ಅಮ್ಮ... ಅದು ದೊಡ್ಡ ನಗರ."

"ನಗರ ದೊಡ್ಡದಾದರೆ ಚಳಿ ಬರುವುದಿಲ್ಲವೇ?" ಮೂರೂ ಜನ ನಕ್ಕರು. ಆ ನಗುವಿನೊಳಗೆ ಅಡಗಿದ್ದ ಕಣ್ಣೀರನ್ನು ಯಾರೂ ಗಮನಿಸಲಿಲ್ಲ. ಬಸ್ ಬಂತು. ಆದ್ಯಾ ಬಸ್ ಹತ್ತಿದಳು. ಹನುಮಂತಪ್ಪ ಕಿಟಕಿಯ ಬಳಿ ನಿಂತು ಜೇಬಿನಿಂದ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಚಿಕ್ಕ ಪೊಟ್ಟಣವನ್ನು ಕೊಟ್ಟ.

"ಇದು ಏನು ಅಪ್ಪ?"

"ತೆರೆಯಬೇಡ. ಅಲ್ಲಿಗೆ ಹೋದ ಮೇಲೆ ನೋಡು." ಬಸ್ ನಿಧಾನವಾಗಿ ಚಲಿಸತೊಡಗಿತು.  ತಾಯಿ ಬಸ್ ನ ಓಡುತ್ತಾ ಕೈ ಬೀಸುತ್ತಿದ್ದಳು. ತಂದೆ ಅಲ್ಲೇ ನಿಂತಿದ್ದ. ಆದ್ಯಾಳ ಕಣ್ಣು ಮಸುಕಾದವು. ಅವಳು ಮೊದಲ ಬಾರಿಗೆ ತನ್ನ ಹಳ್ಳಿಯನ್ನು ಬಿಟ್ಟು ಹೊರಟಿದ್ದಳು. ಅದೇ ಕೊನೆಯ ಬಾರಿ ತನ್ನ ಬಾಲ್ಯದ ಹಳ್ಳಿಯನ್ನು ನೋಡುವುದೆಂದು ಅವಳಿಗೆ ತಿಳಿದಿರಲಿಲ್ಲ.

*******************

ಹೊಸಪೇಟೆ ರೈಲು ನಿಲ್ದಾಣ ಜನಸಂದಣಿಯಿಂದ ತುಂಬಿತ್ತು. ಅನೇಕ ಗೂಡ್ಸ್ ರೈಲುಗಳು ಹಾರ್ನ್ ಮಾಡುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಚಲಿಸುತ್ತಿದ್ದವು. ಅವಳಿಗೆ ಎಲ್ಲವೂ ಹೊಸದು ಎನಿಸಿತ್ತು. ಅಲ್ಲಿ ಆ ಉದ್ಯೋಗ ಸಂಸ್ಥೆಯ ಮಹಿಳೆ ಆಗಲೇ ನಿಂತಿದ್ದಳು. ಅವಳ ಹೆಸರು ಮಾಧವಿ ಎಂದು ಪರಿಚಯಿಸಿಕೊಂಡಳು.

"ಬಾ ಮಗಳೇ... ಇನ್ನೂ ಮೂವರು ಹುಡುಗಿಯರು ಬರುವವರಿದ್ದಾರೆ" ಎಂದಳು. ಸ್ವಲ್ಪ ಹೊತ್ತಿನಲ್ಲೇ ಇನ್ನೂ ಮೂವರು ಯುವತಿಯರು ಬಂದರು. ಒಬ್ಬಳು ಕೂಡ್ಲಿಗಿಯವಳು, ಇನ್ನೊಬ್ಬಳು ಹಡಗಲಿಯವಳು. ಮತ್ತೊಬ್ಬಳು ಹರಪನಹಳ್ಳಿಯ ಗಡಿ ಭಾಗದವಳು. ಎಲ್ಲರ ಮುಖದಲ್ಲೂ ಒಂದೇ ಭಾವನೆ. ಅದು ಭವಿಷ್ಯದ ನಿರೀಕ್ಷೆ.

******************

ಮುಂಬೈಗೆ ಹೊರಟ ರೈಲು ವೇಗವಾಗಿ ಚಲಿಸುತ್ತಿತ್ತು. ಕಿಟಕಿಯಾಚೆ ಹಸಿರು ಹೊಲಗಳು, ನದಿಗಳು, ಬೆಟ್ಟಗಳು ಒಂದೊಂದಾಗಿ ಹಿಂದೆ ಸರಿಯುತ್ತಿದ್ದವು. ನಾಲ್ವರೂ ಬೇಗನೇ  ಸ್ನೇಹಿತರಾದರು.

"ನಿನ್ನ ಕನಸು ಏನು?" ಹರಪನಹಳ್ಳಿ ಹುಡುಗಿ ಕೇಳಿದಳು.

"ಐಎಎಸ್."

ಮೂರೂ ಜನ ಆಶ್ಚರ್ಯದಿಂದ ನೋಡಿದರು.

"ಅಯ್ಯೋ... ದೊಡ್ಡ ಕನಸು!"

ಆದ್ಯಾ ನಸು ನಗುತ್ತಾ "ದೊಡ್ಡ ಕನಸು ಕಾಣಲು ಹಣ ಬೇಕಾಗಲ್ಲ." ಎಂದಳು.

ಆ ಮಾತು ಕೇಳಿ ಎದುರು ಕುಳಿತಿದ್ದ ಒಬ್ಬ ವೃದ್ಧ ಪ್ರಾಧ್ಯಾಪಕರು ಮೃದುವಾಗಿ ನಕ್ಕರು.

"ಮಗಳೇ..."

"ಹೇಳಿ ಸರ್."

"ಕನಸು ಕಾಣುವವರನ್ನು ಜಗತ್ತು ಎರಡು ರೀತಿಯಲ್ಲಿ ನೋಡುತ್ತದೆ."

"ಹೇಗೆ? ಸರ್?”

"ಯಶಸ್ವಿಯಾದರೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಸೋತರೆ ಎಲ್ಲರೂ ನಗುತ್ತಾರೆ."

"ನಾನು ಸೋಲುವುದಿಲ್ಲ ಸರ್."

"ಹಾಗೇ ಇರಬೇಕು." ಅವರು ತಮ್ಮ ಬ್ಯಾಗಿನಿಂದ "ಸ್ವಾಮಿ ವಿವೇಕಾನಂದರ ಚಿಂತನೆಗಳು."  ಎನ್ನುವಚಿಕ್ಕ ಪುಸ್ತಕ ತೆಗೆದರು.

"ಇದನ್ನು ಇಟ್ಟುಕೋ ಮಗಳೇ."

"ಬೇಡ ಸರ್."

"ನಾನು ಓದಿ ಮುಗಿಸಿದ್ದೇನೆ. ಈಗ ಇದು ನಿನ್ನದು."

ಆದ್ಯಾಳಿಗೆ ತನ್ನ ಮುಖ್ಯಶಿಕ್ಷಕರ ನೆನಪಾಯಿತು. ಜೀವನದಲ್ಲಿ ಒಳ್ಳೆಯವರು ಇನ್ನೂ ಇದ್ದಾರೆ ಎಂಬ ಭರವಸೆ ಮೂಡಿತು.

*******************

ರಾತ್ರಿ ಎಲ್ಲರೂ ಮಲಗಿದ ನಂತರ ಅವಳು ತಂದೆ ಕೊಟ್ಟಿದ್ದ ಪೊಟ್ಟಣ ತೆರೆದಳು. ಅದರೊಳಗೆ ಎರಡು ಸಾವಿರ ರೂಪಾಯಿ,  ಒಂದು ಹಳೆಯ ಫೋಟೋ, ಹಾಗೂ ಒಂದು ಚೀಟಿ ಇತ್ತು.

ನಡುಗುವ ಕೈಬರಹದಲ್ಲಿ ಹನುಮಂತಪ್ಪ ಬರೆದಿದ್ದ. "ಕಂದಾ, ಇದು ನಾನು ಐದು ವರ್ಷಗಳಿಂದ ಸ್ವಲ್ಪ ಸ್ವಲ್ಪವಾಗಿ ಉಳಿಸಿದ ಹಣ. ನೀನು ಐಎಎಸ್ ಓದಲು ಉಪಯೋಗಿಸು. ನಾವು ಚೆನ್ನಾಗಿದ್ದೇವೆ ಎಂದು ಯೋಚಿಸಿ ಓದು. ಒಂದು ಮಾತು ಮಾತ್ರ ನೆನಪಿಡು. ಯಾವುದೇ ಕಷ್ಟ ಬಂದರೂ ಸತ್ಯದ ದಾರಿ ಬಿಡಬೇಡ. – ನಿನ್ನ ಅಪ್ಪ." ಆದ್ಯಾಳ ಕಣ್ಣೀರು ಆ ಪತ್ರದ ಮೇಲೆ ಬಿತ್ತು.

"ಅಪ್ಪ... ನಿಮ್ಮ ಕನಸು ನಾನು ಖಂಡಿತ ಈಡೇರಿಸುತ್ತೇನೆ." ಅವಳು ಮನಸ್ಸಿನಲ್ಲಿ ಮಾತು ಕೊಟ್ಟಳು. ಆ ಮಾತು ಉಳಿಸಿಕೊಳ್ಳಲು ಅವಳು ಎಷ್ಟು ಬೆಲೆ ತೆರಬೇಕೋ, ಇನ್ನೂ ಯಾರಿಗೂ ಗೊತ್ತಿರಲಿಲ್ಲ.

***************

ಮೂರನೇ ದಿನ ಬೆಳಿಗ್ಗೆ. ರೈಲು ನಿಧಾನವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಪ್ರವೇಶಿಸಿತು. ಆದ್ಯಾ ಕಿಟಕಿಯಿಂದ ಹೊರಗೆ ನೋಡಿದಳು. ಅವಳು ಇದುವರೆಗೆ ನೋಡಿರದಷ್ಟು ದೊಡ್ಡ ನಗರ. ಅಸಂಖ್ಯಾತ ಜನ. ಆಕಾಶ ಮುಟ್ಟುವ ಕಟ್ಟಡಗಳು. ಒಂದೆಡೆ ದುಬಾರಿ ಕಾರುಗಳು. ಇನ್ನೊಂದೆಡೆ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಜನ. ಒಂದೇ ನಗರದಲ್ಲಿ ಎರಡು ಪ್ರಪಂಚಗಳು.

"ಬನ್ನಿ..." ಮಾಧವಿ ಎಲ್ಲರನ್ನು ಕರೆದುಕೊಂಡು ಹೊರಟಳು. ಒಂದು ಬಿಳಿ ವ್ಯಾನ್ ಹೊರಗೆ ನಿಂತಿತ್ತು. ಅವರು ಅದರೊಳಗೆ ಕುಳಿತರು. ಆದ್ಯಾ ನಗರವನ್ನು ಕುತೂಹಲದಿಂದ ನೋಡುತ್ತಿದ್ದಳು. "ಇಲ್ಲಿ ಎಲ್ಲಾದರೂ ಯುಪಿಎಸ್ಸಿ ಲೈಬ್ರರಿ ಇರಬಹುದಲ್ಲ..." ಅವಳು ಮನಸ್ಸಿನಲ್ಲಿ ಯೋಚಿಸಿದಳು.

***************

ವ್ಯಾನ್ ನಗರದ ಮುಖ್ಯ ರಸ್ತೆಯನ್ನು ಬಿಟ್ಟು ಕಿರಿದಾದ ಬೀದಿಗಳೊಳಗೆ ಪ್ರವೇಶಿಸಿತು. ಆದ್ಯಾ ಕೇಳಿದಳು. "ಆಫೀಸ್ ಇನ್ನೂ ದೂರವೇ?"

ಮಾಧವಿ ನಗುತ್ತಾ ಉತ್ತರಿಸಿದಳು. "ಮೊದಲು ವಸತಿ ತೋರಿಸುತ್ತೇವೆ."  ಇನ್ನೂ ಸ್ವಲ್ಪ ಮುಂದೆ ಹೋದರು. ಸುತ್ತಲಿನ ಪ್ರದೇಶ ಬದಲಾಗತೊಡಗಿತು. ಹಳೆಯ ಕಟ್ಟಡಗಳು. ಗೋಡೆಗಳು ಮಸುಕಾಗಿದ್ದವು. ಬೀದಿಗಳು ಇಕ್ಕಟ್ಟಾಗಿದ್ದವು. ಆದ್ಯಾಳಿಗೆ ಏನೋ ಸರಿಯಿಲ್ಲ ಎಂಬ ಭಾವನೆ ಶುರುವಾಯಿತು.

"ಇದು ಯಾವ ಏರಿಯಾ?"

"ಹಳೆಯ ಮುಂಬೈ."

"ಕಂಪನಿ ಇಲ್ಲೇನಾ?"

"ಹೌದು." ಮಾಧವಿಯ ಉತ್ತರದಲ್ಲಿ ಆತ್ಮವಿಶ್ವಾಸ ಇರಲಿಲ್ಲ.

****************

ಒಂದು ಹಳೆಯ ಕಟ್ಟಡದ ಮುಂದೆ ವ್ಯಾನ್ ನಿಂತಿತು. ಒಳಗೆ ಕರೆದುಕೊಂಡು ಹೋದರು. ಒಂದು ಕೊಠಡಿಯಲ್ಲಿ ಕುಳ್ಳಿರಿಸಿದರು. ಒಬ್ಬ ಮಹಿಳೆ ತಣ್ಣನೆಯ ಹಣ್ಣಿನ ಜ್ಯೂಸ್ ತಂದುಕೊಟ್ಟಳು. "ಪ್ರಯಾಣ ಆಯಾಸವಾಗಿದೆ ಎನಿಸುತ್ತೆ. ಈ ಜ್ಯೂಸ್ ಕುಡಿಯಿರಿ. ಸ್ವಲ್ಪ ರಿಲ್ಯಾಕ್ಸ್ ಆಗುತ್ತೆ" .

ಉಳಿದ ಮೂವರು ಸರಸರನೇ ಜ್ಯೂಸ್ ಕುಡಿದರು. ಆದ್ಯಾ ಗ್ಲಾಸ್ ಕೈಗೆತ್ತಿಕೊಂಡಳು. ಹಠಾತ್ತನೆ ತಂದೆಯ ಮಾತು ನೆನಪಾಯಿತು. "ಯಾವುದೇ ಕಷ್ಟ ಬಂದರೂ ಎಚ್ಚರಿಕೆಯಿಂದಿರು." ಅವಳು ಕ್ಷಣಕಾಲ ಯೋಚಿಸಿದಳು.

"ಏನಾಯಿತು?" ಮಾಧವಿ ಪ್ರಶ್ನಿಸಿದಳು.

"ಏನಿಲ್ಲ." ಎನ್ನುತ್ತಾ ಸ್ವಲ್ಪ ಜ್ಯೂಸ್ ಕುಡಿದಳು. ಹತ್ತು ನಿಮಿಷಗಳ ನಂತರ ಇಡೀ ಕೊಠಡಿ ತಿರುಗಲು ಆರಂಭಿಸಿತು. ಕಣ್ಣು ಮಂಜಾಯಿತು. ಕಿವಿಯಲ್ಲಿ ಶಬ್ದಗಳು ದೂರದಿಂದ ಕೇಳಿಬರುತ್ತಿದ್ದವು.

"ಇವಳಿಗೂ ಪರಿಣಾಮವಾಗಿದೆ. "ಬೇಗ ಒಳಗೆ ತೆಗೆದುಕೊಂಡು ಹೋಗಿ." ಯಾರೋ ಹೇಳಿದ ಧ್ವನಿ ದೂರದಿಂದ ಕೇಳಿದಂತಾಯ್ತು.  ಆದ್ಯಾ ಎದ್ದು ನಿಲ್ಲಲು ಯತ್ನಿಸಿದಳು. ದೇಹ ಸಹಕರಿಸಲಿಲ್ಲ. ಅವಳು ನೆಲಕ್ಕೆ ಕುಸಿದಳು.

*************

ಎಷ್ಟು ಹೊತ್ತು ಕಳೆದಿತೋ ಗೊತ್ತಾಗಲಿಲ್ಲ. ಕಣ್ಣು ತೆರೆದಾಗ ಅವಳು ಅಪರಿಚಿತ ಕೊಠಡಿಯಲ್ಲಿ ಇದ್ದಳು. ಕಿಟಕಿಗೆ ಕಬ್ಬಿಣದ ಸರಳುಗಳು. ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿತ್ತು. ಅವಳ ಬ್ಯಾಗ್ ಕಾಣಿಸಲಿಲ್ಲ. ಮೊಬೈಲ್ ಇರಲಿಲ್ಲ. ಅಂಕಪಟ್ಟಿಗಳು ಹಾಗೂ ವಿದ್ಯಾಭ್ಯಾಸದ ಪ್ರಮಾಣಪತ್ರಗಳು, ಹಣ, ತಂದೆಯ ಪತ್ರ, ಎಲ್ಲವೂ ಕಾಣೆಯಾಗಿದ್ದವು.

"ಹಲೋ! ಯಾರಿದ್ದೀರಿ?"  ಕೂಗಿದಳು. ಯಾರೂ ಉತ್ತರಿಸಲಿಲ್ಲ. ಬಾಗಿಲನ್ನು ಬಲವಾಗಿ ಬಡಿದಳು.

"ಯಾರಾದರೂ ಇದ್ದೀರಾ?" ನಿಶ್ಶಬ್ದ. ಸ್ವಲ್ಪ ಹೊತ್ತಿನ ನಂತರ ಬೀಗದ ಶಬ್ದ ಕೇಳಿಸಿತು. ಬಾಗಿಲು ತೆರೆದಿತು. ಸುಮಾರು ಐವತ್ತು ವರ್ಷದ ಮಹಿಳೆಯೊಬ್ಬಳು ಒಳಬಂದಳು. ಮುಖದಲ್ಲಿ ಕಠಿಣತೆ ತುಂಬಿ ತುಳುಕುತ್ತಿತ್ತು. ಕಣ್ಣಲ್ಲಿ ಕರುಣೆ ಇರಲಿಲ್ಲ.

"ಎದ್ದು ನಿಲ್ಲು." ಗಡಸು ಧ್ವನಿ ಕೇಳಿತು.

"ನಾನು ಎಲ್ಲಿದ್ದೇನೆ?" ಅವಳು ಉತ್ತರಿಸಲಿಲ್ಲ.

"ನನ್ನ ಬ್ಯಾಗ್ ಎಲ್ಲಿದೆ?" ಮೌನ.

"ನನ್ನನ್ನು ಇಲ್ಲಿ ಏಕೆ ತಂದಿದ್ದೀರಿ?". ನಿಂತಿದ್ದ ಮಹಿಳೆ ಆದ್ಯಾಳ ಕಣ್ಣಿನಲ್ಲಿ ನೇರವಾಗಿ ನೋಡಿದಳು. ನಂತರ ನಿಧಾನವಾಗಿ ಹೇಳಿದಳು. "ನಿನ್ನ ಹಳೆಯ ಜೀವನ ಮುಗಿತು". ಆದ್ಯಾಳ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು.

"ಅರ್ಥವೇನು?"

"ನಿನ್ನನ್ನು ಮೋಸ ಮಾಡಿ ಇಲ್ಲಿ ತಂದಿದ್ದಾರೆ."

"ಇಲ್ಲ... ನಾನು ಕೆಲಸಕ್ಕೆ ಸೇರಬೇಕು"

"ಅದು ಸುಳ್ಳು."

ಆದ್ಯಾಳ ಕಾಲುಗಳು ನಡುಗತೊಡಗಿದವು. ಅವ್ಯಕ್ತ ಭಯ ಶುರುವಾಯಿತು.

"ನನ್ನ ಅಪ್ಪ... ಅಮ್ಮ..."

"ಅವರಿಗೆ ನೀನು ಎಲ್ಲಿದ್ದೀಯೆಂದು ಗೊತ್ತಾಗುವುದಿಲ್ಲ."

"ನನ್ನನ್ನು ಬಿಟ್ಟು ಬಿಡಿ."

"ಇಲ್ಲಿಂದ ಯಾರೂ ಸುಲಭವಾಗಿ ಹೋಗುವುದಿಲ್ಲ." ಆದ್ಯಾ ಅಳತೊಡಗಿದಳು.

"ನಾನು ಏನೂ ತಪ್ಪು ಮಾಡಿಲ್ಲ." ಆ ಮಹಿಳೆ ಕ್ಷಣಕಾಲ ಮೌನವಾಗಿ ನಿಂತಳು. ಅವಳ ಕಣ್ಣಲ್ಲಿ ಮೊದಲ ಬಾರಿಗೆ ಸ್ವಲ್ಪ ನೋವು ಕಾಣಿಸಿತು.

"ಇಲ್ಲಿಗೆ ಬರುವ ಯಾರೂ ತಪ್ಪು ಮಾಡಿರುವುದಿಲ್ಲ." ಎಂದು ಹೇಳಿ ಹೊರಗೆ ಹೋಗಿಬಿಟ್ಟಳು. ಬಾಗಿಲು ಮತ್ತೆ ಬೀಗವಾಯಿತು. ಕೊಠಡಿಯಲ್ಲಿ ಆದ್ಯಾ ಒಬ್ಬಳೇ ಉಳಿದಳು. ಆ ಕ್ಷಣದಲ್ಲಿ ಅವಳಿಗೆ ಮೊದಲ ಬಾರಿಗೆ ಅರ್ಥವಾಯಿತು. ಕೆಲವು ಬಾಗಿಲುಗಳು ಕೇವಲ ಮರದಿಂದ ಮಾಡುವುದಿಲ್ಲ.  ಕೆಲವು ಬಾಗಿಲುಗಳನ್ನು ಭಯ, ಮೋಸ ಮತ್ತು ಮಾನವ ಕಳ್ಳಸಾಗಣೆಯ ಕ್ರೌರ್ಯದಿಂದ ಕಟ್ಟಿರುತ್ತಾರೆ. ಆ ಕತ್ತಲೆಯ ಕೊಠಡಿಯಲ್ಲಿ ಕುಳಿತ ಆದ್ಯಾಳಿಗೆ ತನ್ನ ತಂದೆ ಕೊಟ್ಟ ಪೆನ್, ತಾಯಿಯ ಶಾಲು, ಶಿಕ್ಷಕರ ಆಶೀರ್ವಾದ, ಐಎಎಸ್ ಕನಸು ಎಲ್ಲವೂ ಒಂದೊಂದಾಗಿ ನೆನಪಾಗತೊಡಗಿದವು. ಹೊರಗೆ ಮುಂಬೈ ನಗರ ಎಂದಿನಂತೆ ಓಡುತ್ತಲೇ ಇತ್ತು. ಆದರೆ ಆ ನಗರದ ಒಂದು ಮುಚ್ಚಿದ ಬಾಗಿಲಿನ ಹಿಂದೆ, ಒಬ್ಬ ಕನಸುಗಾರ್ತಿಯ ಜೀವನ ಸಂಪೂರ್ಣವಾಗಿ ಬದಲಾಗುತ್ತಿತ್ತು.

*****************

ಕೊಠಡಿಯ ಒಂದು ಮೂಲೆಯಲ್ಲಿ ಮೊಣಕಾಲುಗಳನ್ನು ಅಪ್ಪಿಕೊಂಡು ಕುಳಿತಿದ್ದ ಆದ್ಯಾಳಿಗೆ ಸಮಯದ ಅರಿವೇ ಇರಲಿಲ್ಲ. ಬೆಳಗಾಗುತ್ತಿದೆಯೋ... ರಾತ್ರಿಯಾಗುತ್ತಿದೆಯೋ... ಯಾವುದೂ ತಿಳಿಯುತ್ತಿರಲಿಲ್ಲ. ಗೋಡೆಯ ಮೇಲಿದ್ದ ಸಣ್ಣ ಕಿಟಕಿಯಿಂದ ಒಳಬರುತ್ತಿದ್ದ ಬೆಳಕನ್ನು ನೋಡಿ ಮಾತ್ರ ಹಗಲು-ರಾತ್ರಿ ಅಂದಾಜು ಮಾಡಬೇಕಾಗುತ್ತಿತ್ತು. ಅವಳ ಮನಸ್ಸಿನಲ್ಲಿ ಒಂದೇ ಪ್ರಶ್ನೆ. "ನನ್ನ ಅಪ್ಪ-ಅಮ್ಮ ಈಗ ಏನು ಯೋಚಿಸುತ್ತಿರಬಹುದು?" ಬಹುಶಃ ಅವರು ಪ್ರತಿದಿನ ಫೋನ್‌ಗಾಗಿ ಕಾಯುತ್ತಿರಬಹುದು. ಬಹುಶಃ ಅವಳು ಕೆಲಸದಲ್ಲಿ ಬ್ಯುಸಿಯಾಗಿದ್ದಾಳೆ ಎಂದು ಸಮಾಧಾನ ಮಾಡಿಕೊಂಡಿರಬಹುದು. ಅಥವಾ ಯಾವುದೋ ಅನಾಹುತವಾಗಿದೆ ಎಂಬ ಭಯದಲ್ಲಿ ಕಣ್ಣೀರಿಡುತ್ತಿರಬಹುದು. ಆ ಯೋಚನೆಯೇ ಅವಳ ಹೃದಯವನ್ನು ಚೂರುಚೂರಾಗಿಸಿತು.

**************

ಮರುದಿನ ಬೆಳಿಗ್ಗೆ ಬಾಗಿಲು ತೆರೆದಿತು. ನಿನ್ನೆ ಕಂಡ ಅದೇ ಮಧ್ಯವಯಸ್ಕ ಮಹಿಳೆ ಒಳಬಂದಳು. ಈ ಬಾರಿ ಅವಳ ಕೈಯಲ್ಲಿ ಒಂದು ತಟ್ಟೆ ಇತ್ತು.

"ಊಟ ಮಾಡು." ಆದ್ಯಾ ತಲೆ ಅಲ್ಲಾಡಿಸಿದಳು.

"ನನಗೆ ಬೇಡ."

"ಮೂರು ದಿನ ಹಸಿದಿದ್ದರೆ ಕನಸೂ ಕಾಣಲು ಆಗುವುದಿಲ್ಲ." ಆದ್ಯಾ ಮೌನವಾಗಿದ್ದಳು.

"ನಿಮ್ಮ ಹೆಸರು ಏನು?"

"ಇಲ್ಲಿ ಹೆಸರುಗಳಿಗೆ ಬೆಲೆ ಇಲ್ಲ."

"ಆದರೂ..." ಮಹಿಳೆ ಸ್ವಲ್ಪ ಹೊತ್ತು ನಿಂತು ನಿಧಾನವಾಗಿ ಹೇಳಿದಳು.

"ಒಮ್ಮೆ ನನ್ನ ಹೆಸರು ರಝಿಯಾ ಆಗಿತ್ತು."

"ಒಮ್ಮೆ ಅಂದರೆ?"

"ಈ ಜಾಗಕ್ಕೆ ಬಂದ ದಿನದಿಂದ ನನ್ನ ಹಳೆಯ ಬದುಕು ಸತ್ತುಹೋಯಿತು." ಆದ್ಯಾಳಿಗೆ ಉತ್ತರ ಸಿಕ್ಕಿರಲಿಲ್ಲ. ಆದರೆ ಪ್ರಶ್ನೆಗಳು ಹೆಚ್ಚಾಗಿದ್ದವು.

***************

ಮುಂದಿನ ಕೆಲವು ದಿನಗಳಲ್ಲಿ ಆದ್ಯಾಳನ್ನು ಕಟ್ಟಡದ ಮತ್ತೊಂದು ಭಾಗಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅನೇಕ ಮಹಿಳೆಯರು ಇದ್ದರು. ಯಾರೋ ಕಿಟಕಿಯಾಚೆ ಶೂನ್ಯಕ್ಕೆ ನೋಡುತ್ತಿದ್ದರು. ಯಾರೋ ಹಳೆಯ ಫೋಟೋ ಹಿಡಿದು ಅಳುತ್ತಿದ್ದರು. ಯಾರೋ ಮಕ್ಕಳ ಚಿತ್ರ ಬಿಡಿಸುತ್ತಿದ್ದರು. ಆದ್ಯಾ ನಿಧಾನವಾಗಿ ಅವರ ಜೊತೆ ಮಾತನಾಡಲು ಆರಂಭಿಸಿದಳು. ಪ್ರತಿಯೊಬ್ಬರ ಕಥೆಯೂ ಬೇರೆ. ಆದರೆ ಅಂತ್ಯ ಒಂದೇ. ಅದೇ ಮೋಸ. ಒಬ್ಬಳು ನರ್ಸಿಂಗ್ ಕೆಲಸದ ಹೆಸರಿನಲ್ಲಿ ಬಂದಿದ್ದಳು. ಇನ್ನೊಬ್ಬಳು ಸಿನಿಮಾ ಅವಕಾಶದ ಆಸೆಯಲ್ಲಿ. ಇನ್ನೊಬ್ಬಳನ್ನು ಬಾಲ್ಯದಲ್ಲೇ ಅಪಹರಿಸಲಾಗಿತ್ತು. ಆದ್ಯಾಳಿಗೆ ಮೊದಲ ಬಾರಿಗೆ ಅರ್ಥವಾಯಿತು. ಇದು ಕೆಲವರ ಅಪರಾಧವಲ್ಲ. ಇದು ಸಂಘಟಿತ ಮಾನವ ಕಳ್ಳಸಾಗಣೆಯ ಜಾಲ.

***************

ಒಂದು ದಿನ ಗೋಡೆಯ ಮೇಲಿದ್ದ ಹಳೆಯ ಕ್ಯಾಲೆಂಡರ್ ಅವಳ ಗಮನ ಸೆಳೆಯಿತು. ಅದರ ಮೇಲೆ ಕೆಂಪು ಪೆನ್ನಿನಿಂದ ಒಂದು ವಾಕ್ಯ ಬರೆಯಲಾಗಿತ್ತು. "ದಿನಗಳನ್ನು ಎಣಿಸಬೇಡ... ಕಾರಣವನ್ನು ಹುಡುಕು." ಆ ವಾಕ್ಯವನ್ನು ಯಾರು ಬರೆದಿದ್ದರು ಎಂದು ಕೇಳಿದಳು. ಒಬ್ಬ ವಯಸ್ಸಾದ ಮಹಿಳೆ ನಕ್ಕಳು.

"ಒಬ್ಬ ಶಿಕ್ಷಕಿ."

"ಅವರು ಈಗ ಎಲ್ಲಿದ್ದಾರೆ?"

"ಒಂದು ಸ್ವಯಂಸೇವಾ ಸಂಸ್ಥೆಯವರು ರಕ್ಷಿಸಿ ಕರೆದುಕೊಂಡು ಹೋದರು."

"ಅವರು ಏನು ಮಾಡುತ್ತಿದ್ದರು?"

"ಪ್ರತಿದಿನ ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರು."  ಆ ರಾತ್ರಿ ಆದ್ಯಾಳಿಗೆ ನಿದ್ರೆ ಬರಲಿಲ್ಲ.

"ನಾನು ಏನು ಮಾಡಬಹುದು?" ಅವಳು ತನ್ನನ್ನೇ ಕೇಳಿಕೊಂಡಳು.

**************

ಕಟ್ಟಡದ ಹಿಂಭಾಗದಲ್ಲಿ ವಿಶಾಲವಾದ ಕೊಳೆಗೇರಿ ಇತ್ತು. ಬೆಳಗಾಗುತ್ತಿದ್ದಂತೆ ಸಣ್ಣ ಮಕ್ಕಳು ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಹುಡುಕುತ್ತಿದ್ದರು.  ಕೆಲವರು ಹೋಟೆಲ್‌ಗಳ ಉಳಿದ ಆಹಾರಕ್ಕಾಗಿ ಕಾಯುತ್ತಿದ್ದರು. ಅದರಲ್ಲಿ ಒಬ್ಬ ಪುಟ್ಟ ಹುಡುಗ ಹಾಳಾದ ಪುಸ್ತಕದ ಪುಟಗಳನ್ನು ಜೋಡಿಸಿ ಓದುವ ಪ್ರಯತ್ನ ಮಾಡುತ್ತಿದ್ದ. ಆ ದೃಶ್ಯ ಆದ್ಯಾಳ ಮನಸ್ಸನ್ನು ಕದಲಿಸಿತು. "ನಾನು ಒಬ್ಬಳ ಜೀವನ ಉಳಿಸಿಕೊಳ್ಳಲಾಗದಿದ್ದರೂ... ಇವರ ಭವಿಷ್ಯವನ್ನು ಉಳಿಸಬಹುದಲ್ಲ?" ಆ ಕ್ಷಣವೇ ಅವಳ ಜೀವನದ ದಿಕ್ಕು ಬದಲಾಯಿತು.

*************

ಅಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಗಾರ್ತಿ ಶಾಂತಾ, ಆದ್ಯಾಳ ಶಾಂತ ಸ್ವಭಾವವನ್ನು ಗಮನಿಸುತ್ತಿದ್ದಳು. ಒಂದು ದಿನ ಅವಳು ನಿಧಾನವಾಗಿ ಕೇಳಿದಳು.

"ನೀನು ಓದಿದ್ದೀಯಾ?"

"ಹೌದು."

"ಎಷ್ಟು?"

"ಪದವಿ."

ಶಾಂತಾ ಆಶ್ಚರ್ಯದಿಂದ ನೋಡಿದಳು.

"ಹಾಗಿದ್ದರೆ ಆ ಮಕ್ಕಳಿಗೆ ಸಂಜೆ ಓದಿಸಬಹುದೇ?"

ಆದ್ಯಾಳ ಮುಖದಲ್ಲಿ ಹಲವು ದಿನಗಳ ನಂತರ ಮೊದಲ ಬಾರಿಗೆ ಒಂದು ನಗು ಮೂಡಿತು.

"ನಿಜವಾಗಿಯೇ?"

"ಹೌದು. ಎರಡು ಗಂಟೆ ಮಾತ್ರ."

ಆ ದಿನದಿಂದ ಪ್ರತೀ ಸಂಜೆ ಹತ್ತು-ಹನ್ನೆರಡು ಮಕ್ಕಳು ಹಿಂಭಾಗದ ಖಾಲಿ ಶೆಡ್‌ನಲ್ಲಿ ಸೇರುತ್ತಿದ್ದರು. ಕಾಗದ ಇರಲಿಲ್ಲ. ಸರಿಯಾದ ಪುಸ್ತಕಗಳಿರಲಿಲ್ಲ. ಕಪ್ಪು ಹಲಗೆಯೂ ಇರಲಿಲ್ಲ. ಆದ್ಯಾ ನೆಲದಲ್ಲೇ ಬೆರಳಿನಿಂದ ಅ, ಆ, ಇ ಎಂದು ಬರೆಯುತ್ತ ಕಲಿಸುತ್ತಿದ್ದಳು.

************

ಒಂದು ಸಂಜೆ ಏಳು ವರ್ಷದ ಹುಡುಗ ಕೇಳಿದ.

"ನಿಮ್ಮ ಹೆಸರು ಏನು?"

"ಆದ್ಯಾ." ಅವನಿಗೆ ಉಚ್ಚರಿಸಲು ಕಷ್ಟವಾಯಿತು.

"ನಾವು ನಿಮಗೆ 'ಟೀಚರ್ ಅಮ್ಮ' ಅಂತ ಕರೆಯಬಹುದಾ?" ಆದ್ಯಾಳ ಗಂಟಲು ಬಿಗಿಯಿತು.

"ಖಂಡಿತ." ಅಂದು ರಾತ್ರಿ ಅವಳು ಮೊದಲ ಬಾರಿಗೆ ಅತ್ತಳು. ಆದರೆ ಅದು ದುಃಖದ ಕಣ್ಣೀರಲ್ಲ.  ಅದು ಅರ್ಥ ಸಿಕ್ಕ ಬದುಕಿನ ಕಣ್ಣೀರು.

ಆದ್ಯಾಳಿಗೆ ಒಂದು ಕನಸು ಮೂಡಿತು. ಆ ಮಕ್ಕಳಿಗೆ ನಿಜವಾದ ಪುಸ್ತಕಗಳನ್ನು ಕೊಡಬೇಕು. ಅವಳು ರಝಿಯಾ ಜೊತೆ ಮಾತನಾಡಿದಳು. "ಹಳೆಯ ಪತ್ರಿಕೆಗಳು, ಬಳಸಿದ ಹಳೆಯ ಪುಸ್ತಕಗಳು ಸಿಗುತ್ತವೆಯಾ?" ಎಂದಳು. ರಝಿಯಾ ಆಶ್ಚರ್ಯದಿಂದ ಕೇಳಿದಳು.

"ಏಕೆ?"

"ಗ್ರಂಥಾಲಯ ಮಾಡಬೇಕು."

"ಇಲ್ಲಿ?"

"ಹೌದು. ಸಣ್ಣದಾದರೂ ಸಾಕು." ರಝಿಯಾ ಏನೂ ಹೇಳಲಿಲ್ಲ. ಆದರೆ ಮುಂದಿನ ವಾರ ಅವಳು ಹಳೆಯ ಪುಸ್ತಕಗಳ ಒಂದು ಚೀಲವನ್ನು ತಂದುಕೊಟ್ಟಳು.

"ಒಬ್ಬ ಕಾಲೇಜು ವಿದ್ಯಾರ್ಥಿ ಎಸೆಯಲು ಕೊಟ್ಟಿದ್ದ." ಆದ್ಯಾಳ ಕಣ್ಣುಗಳು ಮಿನುಗಿದವು. ಅವಳು ಅವನ್ನು ಸ್ವಚ್ಛಗೊಳಿಸಿದಳು. ಹಳೆಯ ಪುಸ್ತಕಗಳಿಗೆ ಹೊಸ ಕವರ್ ಹಾಕಿದಳು. ಒಂದು ಮರದ ಪೆಟ್ಟಿಗೆಯೊಳಗೆ ಜೋಡಿಸಿದಳು. ಅದೇ ಆ ಮಕ್ಕಳ ಮೊದಲ ಗ್ರಂಥಾಲಯ.

ಕೆಲವೇ ತಿಂಗಳಲ್ಲಿ ಮಕ್ಕಳ ಸಂಖ್ಯೆ ಹನ್ನೆರಡರಿಂದ ಇಪ್ಪತ್ತೈದಕ್ಕೆ ಏರಿತು. ಯಾರೋ ಅಕ್ಷರ ಕಲಿತರು. ಯಾರೋ ಗಣಿತ ಕಲಿತರು. ಯಾರೋ ಮೊದಲ ಬಾರಿಗೆ ತಮ್ಮ ಹೆಸರನ್ನು ಬರೆಯಲು ಕಲಿತರು. ಒಂದು ದಿನ ಹತ್ತು ವರ್ಷದ ಹುಡುಗ ರಾಹುಲ್ ಒಂದು ಕಾಗದ ತಂದುಕೊಟ್ಟ. ಅದರ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ. "ನಾನು ಪೊಲೀಸ್ ಆಗುತ್ತೇನೆ." ಆದ್ಯಾ ನಗುತ್ತ ಕೇಳಿದಳು.

"ಏಕೆ?"

"ನನ್ನಂಥ ಮಕ್ಕಳನ್ನು ಯಾರೂ ಕದಿಯಬಾರದು."

ಆ ಮಾತು ಕೇಳಿ ಅಲ್ಲಿದ್ದ ಪ್ರತಿಯೊಬ್ಬರೂ ಮೌನರಾದರು.

ಆದ್ಯಾಳ ಮನಸ್ಸಿನಲ್ಲಿ ಮಿಂಚೊಂದು ಹೊಳೆಯಿತು.

"ನಾನು ಐಎಎಸ್ ಆಗಲಿಲ್ಲ... ಆದರೆ ಇವರನ್ನು ಅಧಿಕಾರಿಗಳನ್ನಾಗಿ ಮಾಡಬಹುದು." ಆ ಕ್ಷಣದಿಂದ ಅವಳ ಕನಸು ಬದಲಾಯಿತು. ತನ್ನ ಕನಸನ್ನು ತಾನು ಬದುಕುವುದಕ್ಕಿಂತ, ನೂರಾರು ಮಕ್ಕಳಲ್ಲಿ ಕನಸು ಬಿತ್ತಬೇಕು ಎಂದು ಅವಳು ನಿರ್ಧರಿಸಿದಳು.

ಆ ರಾತ್ರಿ ಆದ್ಯಾ ತನ್ನ ಹಳೆಯ ನೋವನ್ನು ಮೊದಲ ಬಾರಿಗೆ ಕಾಗದದ ಮೇಲೆ ಬರೆದಳು. ಕೊನೆಯ ಸಾಲಿನಲ್ಲಿ ಹೀಗೆ ಬರೆದಳು. "ನನ್ನ ಜೀವನವನ್ನು ಕದ್ದವರು ನನ್ನ ಭವಿಷ್ಯವನ್ನು ಕದಿಯಬಹುದು. ಆದರೆ ನನ್ನ ಮೂಲಕ ಹುಟ್ಟುವ ನೂರಾರು ಭವಿಷ್ಯಗಳನ್ನು ಅವರು ಎಂದಿಗೂ ಕದಿಯಲಾರರು." ಅದೇ ಸಾಲು ಮುಂದೆ ಒಂದು ಚಳವಳಿಯ ಧ್ಯೇಯವಾಕ್ಯವಾಗಲಿದೆ ಎಂಬುದು ಆಗ ಯಾರಿಗೂ ತಿಳಿದಿರಲಿಲ್ಲ.

***************

ಕಾಲ ನಿಧಾನವಾಗಿ ಸಾಗುತ್ತಿತ್ತು. ಆದರೆ ಆದ್ಯಾಳ ಜೀವನದಲ್ಲಿ ಪ್ರತಿದಿನವೂ ಒಂದು ವರ್ಷದಷ್ಟು ಉದ್ದವಾಗಿತ್ತು. ಹಗಲು ಮಕ್ಕಳಿಗೆ ಪಾಠ.  ರಾತ್ರಿ ತನ್ನೊಳಗಿನ ಗಾಯಗಳ ಜೊತೆ ಮೌನದ ಹೋರಾಟ. ಅವಳ ಮುಖದಲ್ಲಿ ನಗು ಇತ್ತು. ಆದರೆ ಆ ನಗುವಿನ ಹಿಂದೆ ಎಷ್ಟು ಕಣ್ಣೀರು ಇತ್ತು ಎಂಬುದು ಅವಳಿಗೆ ಮಾತ್ರ ಗೊತ್ತಿತ್ತು. ಒಮ್ಮೆ ಕನ್ನಡಿ ಮುಂದೆ ನಿಂತು ತನ್ನನ್ನೇ ನೋಡಿಕೊಂಡಳು.

"ನೀನು ಯಾರು?" ಕ್ಷಣಕಾಲ ಉತ್ತರವೇ ಸಿಗಲಿಲ್ಲ. ನಂತರ ಕನ್ನಡಿಯಲ್ಲಿದ್ದ ತನ್ನ ಪ್ರತಿಬಿಂಬವನ್ನೇ ನೋಡಿ ನಿಧಾನವಾಗಿ ಹೇಳಿದಳು. "ನಾನು ಆದ್ಯಾ... ಐಎಎಸ್ ಆಗಬೇಕೆಂದು ಕನಸು ಕಂಡ ಹುಡುಗಿ."

ಮತ್ತೊಂದು ಧ್ವನಿ ಮನಸ್ಸಿನೊಳಗೆ ಕೇಳಿಸಿತು. "ಇಲ್ಲ... ಈಗ ನೀನು ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಕಿ." ಆ ದಿನ ಅವಳು ತನ್ನ ಭೂತಕಾಲವನ್ನು ಮೊದಲ ಬಾರಿಗೆ ಕ್ಷಮಿಸಲು ಪ್ರಯತ್ನಿಸಿದಳು.

************

ಒಂದು ಸಂಜೆ ಮಳೆ ಸುರಿಯುತ್ತಿತ್ತು. ಹೊರಗೆ ಕೊಳೆಗೇರಿಯ ರಸ್ತೆಗಳು ಕೆಸರಿನಿಂದ ತುಂಬಿದ್ದವು. ಆದ್ಯಾ ಮತ್ತು ರಝಿಯಾ ಕಿಟಕಿಯ ಬಳಿ ಕುಳಿತಿದ್ದರು.

"ರಝಿಯಾ... ನೀನು ಮನೆಗೆ ಹೋಗಬೇಕು ಅನ್ನಿಸೋದಿಲ್ಲವೇ?"

ರಝಿಯಾ ಕಹಿ ನಗೆ ನಕ್ಕಳು. "ಯಾವ ಮನೆ?"

"ನಿನ್ನ ಊರು..."

"ಇಪ್ಪತ್ತೈದು ವರ್ಷಗಳ ಹಿಂದೆ ನಾನು ಹೊರಟ ಊರಿನಲ್ಲಿ ಈಗ ಯಾರೂ ನನ್ನನ್ನು ಗುರುತಿಸುವುದಿಲ್ಲ."

"ನಿನ್ನ ಅಪ್ಪ-ಅಮ್ಮ?"

"ನಾನು ಕಾಣೆಯಾಗಿದ್ದೇನೆ ಎಂದು ಅತ್ತಿರಬಹುದು. ನಂತರ ಸತ್ತಿರಬಹುದು." ಆದ್ಯಾಳ ಕಣ್ಣು ತೇವಗೊಂಡವು. ರಝಿಯಾ ಮುಂದುವರಿಸಿದಳು.

"ನಾನು ಮೊದಲ ಎರಡು ವರ್ಷ ಪ್ರತಿದಿನ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೆ."

"ನಂತರ?"

"ಒಂದು ದಿನ ಕನ್ನಡಿಯಲ್ಲಿ ನನ್ನನ್ನೇ ನೋಡಿದೆ. ಆಗ ಅರ್ಥ ಆಯಿತು. ದೇಹವನ್ನು ಬಂಧಿಸಬಹುದು. ಆದರೆ ಮನಸ್ಸನ್ನು ಬಂಧಿಸಬೇಕೋ ಬೇಡವೋ ಎನ್ನುವುದು ನನ್ನ ನಿರ್ಧಾರ." ಆ ಮಾತು ಆದ್ಯಾಳ ಹೃದಯದಲ್ಲಿ ಉಳಿದುಬಿಟ್ಟಿತು.

***************

ಕೆಲವೇ ತಿಂಗಳಲ್ಲಿ ಮಕ್ಕಳ ಸಂಖ್ಯೆ ಮೂವತ್ತನ್ನು ದಾಟಿತು. ಶೆಡ್‌ನಲ್ಲಿ ಎಲ್ಲರೂ ಕೂರಲು ಜಾಗ ಇರಲಿಲ್ಲ. ಆದ್ಯಾ ಹಳೆಯ ಮರದ ಪೆಟ್ಟಿಗೆಗಳನ್ನು ತಂದು ಬೆಂಚುಗಳನ್ನಾಗಿ ಮಾಡಿದಳು. ಬಳಸಿದ ಸಿಮೆಂಟ್ ಚೀಲಗಳನ್ನು ತೊಳೆದು ನೆಲಕ್ಕೆ ಹಾಸಿದಳು. ಗೋಡೆಯ ಮೇಲೆ ಸುಣ್ಣದಿಂದ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವರ್ಣಮಾಲೆ ಬರೆದಳು. ಪ್ರತಿ ಭಾನುವಾರ ಮಕ್ಕಳಿಗೆ ಕಥೆ ಹೇಳುತ್ತಿದ್ದಳು. ಅವಳ ಪ್ರಿಯ ಕಥೆ ಯಾವುದು ಗೊತ್ತೇ?  ಡಾ. ಬಿ.ಆರ್. ಅಂಬೇಡ್ಕರ್. "ಅವರು ಬಡವರಾಗಿದ್ದರು." "ಅವರಿಗೆ ತೊಂದರೆಗಳಿದ್ದವು." "ಆದರೂ ಶಿಕ್ಷಣವನ್ನು ಬಿಡಲಿಲ್ಲ." ಮಕ್ಕಳು ಕಣ್ಣು ಮಿಟುಕಿಸದೆ ಕೇಳುತ್ತಿದ್ದರು.

"ಅಮ್ಮ..." ರಾಹುಲ್ ಕೇಳಿದ.

"ಅಂಬೇಡ್ಕರ್‌ರಂತೆ ನಾವೂ ಆಗಬಹುದಾ?"

ಆದ್ಯಾ ಉತ್ತರಿಸಿದಳು. "ಅವರಂತೆಯೇ ಆಗಬೇಕಾಗಿಲ್ಲ."

"ಹಾಗಾದರೆ?"

"ನಿಮ್ಮಂತೆಯೇ ದೊಡ್ಡವರಾಗಬೇಕು."

***********

ಆದ್ಯಾಳ ಬಳಿ ಓದುತ್ತಿದ್ದ ಮಕ್ಕಳಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮೀರಾ ಅತ್ಯಂತ ಚುರುಕಾಗಿದ್ದಳು. ಒಂದು ದಿನ ಅವಳು ಕೇಳಿದಳು.

"ಅಮ್ಮ... ನಾನು ಶಾಲೆಗೆ ಹೋಗಬಹುದಾ?". ಆ ಪ್ರಶ್ನೆ ಆದ್ಯಾಳ ಮನಸ್ಸನ್ನು ಕದಡಿತು. ಇದುವರೆಗೂ ಅವರು ಅನೌಪಚಾರಿಕವಾಗಿ ಓದುತ್ತಿದ್ದರು. ಆದರೆ ನಿಜವಾದ ಶಾಲೆ? ಅದಕ್ಕೆ ದಾಖಲೆಗಳು ಬೇಕು. ವಿಳಾಸ ಬೇಕು. ಪೋಷಕರ ಹೆಸರು ಬೇಕು. ಅವುಗಳಲ್ಲಿ ಯಾವುದೂ ಇರಲಿಲ್ಲ. ಆದರೂ ಆದ್ಯಾ ನಿರ್ಧರಿಸಿದಳು.  "ನಿನ್ನನ್ನು ಶಾಲೆಗೆ ಸೇರಿಸಿಯೇ ತೀರುತ್ತೇನೆ."

ಆ ಪ್ರದೇಶಕ್ಕೆ ಆಗಾಗ್ಗೆ ಬರುತ್ತಿದ್ದ ಒಂದು ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತೆ ಇದ್ದಳು. ಅವಳ ಹೆಸರು ಅನಿತಾ ದೇಶಮುಖ್.  ಅವಳು ಮಕ್ಕಳಿಗೆ ಔಷಧಿ, ಬಟ್ಟೆ, ಆಹಾರ ತಂದುಕೊಡುತ್ತಿದ್ದಳು. ಒಂದು ದಿನ ಶೆಡ್‌ನೊಳಗೆ ನಡೆಯುತ್ತಿದ್ದ ತರಗತಿಯನ್ನು ನೋಡಿ ಬೆರಗಾದಳು.

"ಇದು ಯಾರು ನಡೆಸುತ್ತಿದ್ದಾರೆ?" ಮಕ್ಕಳೆಲ್ಲ ಒಂದೇ ಧ್ವನಿಯಲ್ಲಿ ಹೇಳಿದರು.

"ನಮ್ಮ ಟೀಚರ್ ಅಮ್ಮ."

ಅನಿತಾ ಆದ್ಯಾಳನ್ನು ಭೇಟಿಯಾದಳು.

"ನೀವು ಶಿಕ್ಷಕಿಯಾ?" ಆದ್ಯಾ ಕೆಲ ಕ್ಷಣ ಮೌನವಾಗಿದ್ದಳು.

"ನರಕದ ಜೀವನವೇ ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿತು." ಅನಿತಾ ಎಲ್ಲವನ್ನೂ ಅರ್ಥಮಾಡಿಕೊಂಡಳು. ಆ ದಿನದಿಂದ ಅವಳು ಆದ್ಯಾಳಿಗೆ ಗುಪ್ತವಾಗಿ ಸಹಾಯ ಮಾಡಲು ಆರಂಭಿಸಿದಳು. ಹಳೆಯ ಪುಸ್ತಕಗಳು. ನೋಟ್‌ಬುಕ್‌ಗಳು. ಪೆನ್ಸಿಲ್‌ಗಳು. ಶಾಲಾ ಚೀಲಗಳು. ಒಂದೊಂದಾಗಿ ಮಕ್ಕಳಿಗೆ ಸಿಗತೊಡಗಿದವು.

************

ಅನಿತಾಳ ಸಹಾಯದಿಂದ ನಾಲ್ಕು ಮಕ್ಕಳನ್ನು ಸಮೀಪದ ಮುನ್ಸಿಪಲ್ ಶಾಲೆಗೆ ಸೇರಿಸಲಾಯಿತು. ಆ ದಿನ ಮಕ್ಕಳು ಹೊಸ ಸಮವಸ್ತ್ರ ಧರಿಸಿದ್ದರು. ರಾಹುಲ್ ಕನ್ನಡಿಯ ಮುಂದೆ ನಿಂತು ತನ್ನನ್ನೇ ನೋಡುತ್ತಿದ್ದ.

"ಅಮ್ಮ... ನಾನು ನಿಜವಾಗಿಯೂ ವಿದ್ಯಾರ್ಥಿಯಂತೆ ಕಾಣ್ತಿದ್ದೀನಾ?" ಆದ್ಯಾಳ ಕಣ್ಣು ತುಂಬಿಬಂತು.

"ನೀನು ವಿದ್ಯಾರ್ಥಿಯಲ್ಲ ರಾಹುಲ್..."

"ಹಾಗಾದರೆ?"

"ನೀನು ಭವಿಷ್ಯದ ಅಧಿಕಾರಿ." ರಾಹುಲ್ ನಕ್ಕ. ಅವನಿಗೆ ಆ ಮಾತಿನ ಅರ್ಥ ಅಷ್ಟು ದೊಡ್ಡದಾಗಿ ಅರ್ಥವಾಗಿರಲಿಲ್ಲ. ಆದರೆ ಆದ್ಯಾಳಿಗೆ ಅದು ಕೇವಲ ಪ್ರೋತ್ಸಾಹದ ಮಾತಲ್ಲ. ಅದು ಪ್ರತಿಜ್ಞೆಯಾಗಿತ್ತು.

*************

ಒಂದು ದಿನ ಅನಿತಾ ಆದ್ಯಾಳಿಗೆ ಒಂದು ಚಿಕ್ಕ ಕೆಂಪು ಬಣ್ಣದ ಡೈರಿಯನ್ನು ಉಡುಗೊರೆಯಾಗಿ ಕೊಟ್ಟಳು.

"ಇದರಲ್ಲಿ ಏನು ಬರೆಯಬೇಕು?" ಆದ್ಯಾ ಕೇಳಿದಳು.

"ನಿಮ್ಮ ಕನಸುಗಳು." ಆ ರಾತ್ರಿ ಆದ್ಯಾ ಡೈರಿಯ ಮೊದಲ ಪುಟದಲ್ಲಿ ಬರೆದಳು. 'ಆದ್ಯಾ ಶಿಕ್ಷಣ ನಿಧಿ'

ಕೆಳಗೆ ಮೊದಲ ಗುರಿ. 10 ಮಕ್ಕಳು ಎಸ್‌ಎಸ್‌ಎಲ್‌ಸಿ ಮುಗಿಸುವುದು,

ಎರಡನೇ ಗುರಿ. 5 ಮಕ್ಕಳು  ಪದವಿ ಮುಗಿಸುವುದು.

ಮೂರನೇ ಗುರಿ. ಕನಿಷ್ಠ ಒಬ್ಬ ಮಗು  ಯುಪಿಎಸ್ಸಿಮುಗಿಸುವುದು. ಬರೆಯುತ್ತಿದ್ದಾಗಲೇ ಅವಳು ನಕ್ಕಳು.

"ನಾನು ತುಂಬಾ ದೊಡ್ಡ ಕನಸು ಕಾಣುತ್ತಿದ್ದೇನಾ?" ರಝಿಯಾ ಪಕ್ಕದಿಂದಲೇ ಉತ್ತರಿಸಿದಳು.

"ನೀನು ಸಣ್ಣ ಕನಸು ಕಾಣುವವಳೇ ಅಲ್ಲ."

****************

ಕೆಲ ತಿಂಗಳ ನಂತರ ಅನಿತಾ ಹಳ್ಳಿಯಿಂದ ಬಂದ ಒಂದು ಪತ್ರವನ್ನು ಕೈಗೆತ್ತಿಕೊಂಡು ನಿಂತಿದ್ದಳು. ಅದರಲ್ಲಿ ಆದ್ಯಾಳ ಹೆಸರಿತ್ತು. ಆದರೆ ಆ ಪತ್ರವನ್ನು ಅವಳಿಗೆ ಕೊಡಬೇಕೋ ಬೇಡವೋ ಎಂದು ಅವಳು ದ್ವಂದ್ವದಲ್ಲಿದ್ದಳು. ಆದರೂ ಕೊನೆಗೆ ಕೊಟ್ಟಳು. ಪತ್ರ ಬರೆದಿದ್ದವರು ಬಸರಕೋಡು ಪ್ರೌಢಶಾಲೆಯ ಮುಖ್ಯಶಿಕ್ಷಕ ಶಂಕರಮೂರ್ತಿ. ಪತ್ರದಲ್ಲಿ ಕೆಲವು ಸಾಲುಗಳು ಮಾತ್ರ.

"ಆದ್ಯಾ, ನೀನು ಎಲ್ಲಿದ್ದೀಯೋಗೊತ್ತಿಲ್ಲ. ನಿನ್ನ ಅಪ್ಪ ಹನುಮಂತಪ್ಪ ನಿನ್ನನ್ನು ಹುಡುಕುತ್ತಲೇ ಇದ್ದರು. ಕೆಲ ತಿಂಗಳ ಹಿಂದೆ ಅವರು ಅನಾರೋಗ್ಯದಿಂದ ನಿಧನರಾದರು. ಕೊನೆಯ ಕ್ಷಣದವರೆಗೂ 'ನನ್ನ ಮಗಳು ಐಎಎಸ್ ಆಗುತ್ತಾಳೆ' ಎಂದೇ ಹೇಳುತ್ತಿದ್ದರು."

ಆದ್ಯಾಳ ಕೈಯಿಂದ ಪತ್ರ ಜಾರಿಬಿತ್ತು. ಅವಳ ಕಿವಿಗೆ ಏನೂ ಕೇಳಿಸಲಿಲ್ಲ. ಉಸಿರೇ ನಿಂತಂತಾಯಿತು.

"ಅಪ್ಪ..." ಅವಳು ನೆಲದ ಮೇಲೆ ಕುಳಿತು ಬಿಕ್ಕಿಬಿಕ್ಕಿ ಅತ್ತಳು. ಅನಿತಾ ಅವಳ ಭುಜದ ಮೇಲೆ ಕೈ ಇಟ್ಟಳು. ಆದರೆ ಆ ನೋವನ್ನು ಸಮಾಧಾನಪಡಿಸಲು ಯಾವುದೇ ಮಾತು ಸಾಕಾಗಲಿಲ್ಲ. ಆ ರಾತ್ರಿ ಆದ್ಯಾ ತನ್ನ ತಂದೆಯ ನೆನಪಿಗಾಗಿ ಒಂದೇ ನಿರ್ಧಾರ ತೆಗೆದುಕೊಂಡಳು. ಅವಳು ಕೆಂಪು ಡೈರಿಯ ಮೂರನೇ ಗುರಿಯ ಕೆಳಗೆ ಮತ್ತೊಂದು ಸಾಲು ಬರೆದಳು. "ಒಬ್ಬ ಅಲ್ಲ... ಕನಿಷ್ಠ ಹತ್ತು ಐಎಎಸ್ ಅಧಿಕಾರಿಗಳು."  ಅವಳ ಕಣ್ಣೀರು ಆ ಅಕ್ಷರಗಳ ಮೇಲೆ ಬಿತ್ತು. ಆದರೆ ಆ ಕಣ್ಣೀರು ದುರ್ಬಲತೆಯದ್ದಲ್ಲ. ಅದು ಹೊಸ ಪ್ರತಿಜ್ಞೆಯ ಮುದ್ರೆಯಂತಿತ್ತು.

************

ಆ ದಿನದಿಂದ ಆದ್ಯಾ ಮಕ್ಕಳಿಗೆ ಕೇವಲ ಪಾಠ ಹೇಳಲಿಲ್ಲ. ಅವರಿಗೆ ಭಾಷಣ ಕಲಿಸಿದಳು. ಸಂವಿಧಾನ ಓದಿಸಿದಳು. ಪತ್ರಿಕೆ ಓದುವ ಅಭ್ಯಾಸ ಬೆಳೆಸಿದಳು. ಪ್ರತಿ ಬೆಳಿಗ್ಗೆ ಎಲ್ಲ ಮಕ್ಕಳೂ ನಿಂತು ಒಂದೇ ವಾಕ್ಯ ಹೇಳುತ್ತಿದ್ದರು. "ನಾವು ನಮ್ಮ ಭೂತಕಾಲದಿಂದ ನಿರ್ಧಾರವಾಗುವುದಿಲ್ಲ. ನಮ್ಮ ಶಿಕ್ಷಣದಿಂದ ನಮ್ಮ ಭವಿಷ್ಯವನ್ನು ನಿರ್ಮಿಸುತ್ತೇವೆ." ಆ ಶೆಡ್ ಈಗ ಸಾಮಾನ್ಯ ತರಗತಿ ಕೊಠಡಿಯಾಗಿರಲಿಲ್ಲ. ಅದು ಒಂದು ಹೊಸ ಭಾರತದ ಬೀಜ ಬಿತ್ತುತ್ತಿದ್ದ ಶಾಲೆಯಾಗಿತ್ತು. "ಕತ್ತಲೆಯನಡುವೆ ಒಂದು ದೀಪ ಹಚ್ಚಿದರೆ ಅದು ಕೇವಲ ಬೆಳಕು ಕೊಡುವುದಿಲ್ಲ; ಇನ್ನೂ ಸಾವಿರ ದೀಪಗಳನ್ನು ಹಚ್ಚುವ ಧೈರ್ಯವನ್ನೂ ಕೊಡುತ್ತದೆ."

****************

ಮುಂಬೈನ ಆ ಭಾಗದಲ್ಲಿ ಆ ಬೆಳಿಗ್ಗೆ ವಿಚಿತ್ರ ಗದ್ದಲವಿತ್ತು. ಪೊಲೀಸ್ ವಾಹನಗಳು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು. ಕೆಲವು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು. ಎಲ್ಲರೂ ಒಂದೇ ಕಟ್ಟಡದ ಮುಂದೆ ನಿಂತಿದ್ದರು. ಆದ್ಯಾಳಿಗೆ ಏನಾಗುತ್ತಿದೆ ಎಂಬುದು ಅರ್ಥವಾಗಲಿಲ್ಲ. ರಝಿಯಾ ಕಿಟಕಿಯಿಂದ ಹೊರಗೆ ನೋಡುತ್ತಾ ನಿಧಾನವಾಗಿ ಹೇಳಿದಳು,

"ಬಹುಶಃ... ಕಾರ್ಯಾಚರಣೆ ನಡೆಯುತ್ತಿದೆ"

"ಯಾವ ಕಾರ್ಯಾಚರಣೆ?"

"ಇಂತಹ ಜಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯರನ್ನು ರಕ್ಷಿಸಲು ಕೆಲವೊಮ್ಮೆ ಸರ್ಕಾರ ಬರುತ್ತದೆ." ಅವಳ ಧ್ವನಿಯಲ್ಲಿ ಆಶೆಗಿಂತ ಅನುಭವವೇ ಹೆಚ್ಚಾಗಿತ್ತು.

"ಆದರೆ..."

"ಎಲ್ಲರೂ ಉಳಿಯುವುದಿಲ್ಲ ಆದ್ಯಾ. ಕೆಲವರು ಭಯದಿಂದ ತಮ್ಮ ಹೆಸರನ್ನೇ ಹೇಳುವುದಿಲ್ಲ."

ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದಿತ್ತು. ಒಳಗೆ ಬಂದವಳು ಅನಿತಾ. ಆದರೆ ಈ ಬಾರಿ ಅವಳು ಒಬ್ಬಳೇ ಇರಲಿಲ್ಲ. ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇದ್ದರು.

"ಆದ್ಯಾ..." ಅನಿತಾಳ ಧ್ವನಿ ನಡುಗುತ್ತಿತ್ತು.

"ನೀವು ಸುರಕ್ಷಿತವಾಗಿದ್ದೀರಿ." ಆದ್ಯಾ ನಂಬಲಾರದೆ ಅವಳನ್ನು ನೋಡಿದಳು.

"ನನ್ನನ್ನು... ಇಲ್ಲಿಂದ ಕರೆದುಕೊಂಡು ಹೋಗುತ್ತೀರಾ?" ಅನಿತಾ ತಲೆಯಾಡಿಸಿದಳು.

"ಹೌದು." ಆ ಕ್ಷಣದಲ್ಲಿ ಆದ್ಯಾಳ ಕಣ್ಣೀರು ನಿಲ್ಲಲಿಲ್ಲ. ಆದರೆ ಹೊರಡುವಾಗ ಅವಳು ಹಿಂದೆ ತಿರುಗಿ ನೋಡಿದಳು. ಅಲ್ಲಿ ಇನ್ನೂ ಹಲವಾರು ಮಹಿಳೆಯರು ನಿಂತಿದ್ದರು. ಅವರ ಕಣ್ಣುಗಳಲ್ಲಿ ಒಂದೇ ಪ್ರಶ್ನೆ. "ನಮ್ಮನ್ನು ಯಾರು ಕರೆದುಕೊಂಡು ಹೋಗುತ್ತಾರೆ?" ಆದ್ಯಾಳ ಹೃದಯ ಮತ್ತೊಮ್ಮೆ ಭಾರವಾಯಿತು.

**************

ರಕ್ಷಣೆ ಕೇಂದ್ರದಲ್ಲಿ ಕೆಲವು ವಾರಗಳು ಕಳೆದವು. ಮನೋವೈದ್ಯರು, ಸಮಾಜಸೇವಕರು, ಕಾನೂನು ಸಲಹೆಗಾರರು  ಎಲ್ಲರೂ ಅವಳನ್ನು ಹೊಸ ಜೀವನದತ್ತ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು. ಒಂದು ದಿನ ಅನಿತಾ ಕೇಳಿದಳು.

"ನಿನ್ನ ಊರಿಗೆ ಹೋಗಬೇಕೆ?" ಆದ್ಯಾ ಬಹಳ ಹೊತ್ತು ಮೌನವಾಗಿದ್ದಳು.

"ಇಲ್ಲ."

"ಏಕೆ?"

"ನನ್ನ ಅಮ್ಮ ನನ್ನನ್ನು ಈ ಸ್ಥಿತಿಯಲ್ಲಿ ನೋಡಬಾರದು."

"ಆದರೆ..."

"ನನ್ನ ಊರು ನನ್ನ ನೆನಪುಗಳಲ್ಲಿ ಇರಲಿ. ನಾನು ಹಿಂದಿರುಗುವುದಿಲ್ಲ." ಅನಿತಾ ಅವಳ ನಿರ್ಧಾರವನ್ನು ಗೌರವಿಸಿದಳು.

ಆದ್ಯಾಳ ಸುರಕ್ಷತೆಯ ದೃಷ್ಟಿಯಿಂದ ಅವಳಿಗೆ ಹೊಸ ದಾಖಲೆಗಳನ್ನು ಸಿದ್ಧಪಡಿಸಲಾಯಿತು.

ಅನಿತಾ ಕೇಳಿದಳು, "ಹೊಸ ಹೆಸರು ಬೇಕೇ?"

ಆದ್ಯಾ ನಕ್ಕಳು. "ಬೇಡ."

"ಏಕೆ?"

"ನನ್ನ ಹೆಸರಿನ ಅರ್ಥ 'ಹೊಸ ಆರಂಭ'. ನನಗೆ ಇನ್ನೊಂದು ಹೆಸರು ಬೇಡ. ನನಗೆ ಹೊಸ ಜೀವನ ಸಾಕು." ಅನಿತಾ ಅವಳ ಕೈ ಹಿಡಿದಳು.

"ನೀನು ತುಂಬಾ ಬಲವಾದ ಹುಡುಗಿ." ಆದ್ಯಾ ನಿಧಾನವಾಗಿ ಉತ್ತರಿಸಿದಳು.

"ಇಲ್ಲ... ನಾನು ಒಡೆದುಹೋಗಿದ್ದೆ. ಆದರೆ ಆ ಒಡೆದ ತುಂಡುಗಳಿಂದ ಇನ್ನೊಬ್ಬರ ಬದುಕು ಕಟ್ಟಲು ನಿರ್ಧರಿಸಿದ್ದೇನೆ."

ಅನಿತಾ ಕೆಲಸ ಮಾಡುತ್ತಿದ್ದ ಸ್ವಯಂಸೇವಾ ಸಂಸ್ಥೆಯಲ್ಲಿ ಆದ್ಯಾಗೆ ಸಣ್ಣ ಕೆಲಸ ಸಿಕ್ಕಿತು. ಬೆಳಗ್ಗೆ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ. ಸಂಜೆ ಕೊಳೆಗೇರಿಯ ಮಕ್ಕಳಿಗೆ ಉಚಿತ ಪಾಠ. ಅವಳ ಜೀವನ ಮತ್ತೆ ಪುಸ್ತಕಗಳೊಂದಿಗೆ ಸೇರಿಕೊಂಡಿತು. ಆದರೆ ಈ ಬಾರಿ ತನ್ನ ಪರೀಕ್ಷೆಗಾಗಿ ಅಲ್ಲ. ಇತರರ ಭವಿಷ್ಯಕ್ಕಾಗಿ.

**********

ಒಂದು ಸಂಜೆ ಮಳೆ ಸುರಿಯುತ್ತಿತ್ತು. ಕೇಂದ್ರದ ಬಾಗಿಲಿನ ಮುಂದೆ ಸುಮಾರು ಹತ್ತು ವರ್ಷದ ಹುಡುಗ ನಿಂತಿದ್ದ. ಕೈಯಲ್ಲಿ ಹರಿದ ಚೀಲ. ಕಣ್ಣಲ್ಲಿ ಭಯ.

"ಏನು ಬೇಕು?" ಆದ್ಯಾ ಕೇಳಿದಳು.

"ಊಟ..."

"ನಿನ್ನ ಅಪ್ಪ-ಅಮ್ಮ ಎಲ್ಲಿದ್ದಾರೆ?" ಹುಡುಗ ಮೌನವಾಗಿದ್ದ. ಬಹಳ ಹೊತ್ತಿನ ನಂತರ ನಿಧಾನವಾಗಿ ಹೇಳಿದ.

"ಇಲ್ಲ." ಅವನು ಅನಾಥ. ಹೆಸರು ರಾಹುಲ್. ಆದ್ಯಾ ಅವನಿಗೆ ಊಟ ಕೊಟ್ಟಳು. ಆ ದಿನ ರಾತ್ರಿ ಹೊರಡುವಾಗ ರಾಹುಲ್ ಕೇಳಿದ, "ನಾನು ನಾಳೆ ಮತ್ತೆ ಬರಬಹುದಾ?" ಆದ್ಯಾಳ ಮನಸ್ಸಿಗೆ ತನ್ನ ಬಾಲ್ಯದ ನೆನಪು ಬಂತು.

"ನಾಳೆ ಮಾತ್ರ ಅಲ್ಲ..."

"ಹಾಗಾದರೆ?"

"ನೀನು ಇನ್ನು ಮುಂದೆ ಇಲ್ಲೇ ಇರುತ್ತೀಯ." ಆ ದಿನ ರಾಹುಲ್ ಆದ್ಯಾಳ ಜೀವನದ ಮೊದಲ ಮಗನಾದ.

**********

ಕೆಲವೇ ತಿಂಗಳಲ್ಲಿ ಮತ್ತೊಬ್ಬ ಮಗು ಸೇರಿತು. ನಂತರ ಇಬ್ಬರು ಸಹೋದರಿಯರು. ಮತ್ತೆ ಒಬ್ಬ ಬಾಲಕ. ಒಬ್ಬಳು ರೈಲು ನಿಲ್ದಾಣದಲ್ಲಿ ಸಿಕ್ಕಿದ್ದಳು. ಇನ್ನೊಬ್ಬನು ಕಸದ ರಾಶಿಯಲ್ಲಿ ಬದುಕುತ್ತಿದ್ದ. ಯಾರಿಗೋ ತಂದೆ ಇರಲಿಲ್ಲ. ಯಾರಿಗೋ ತಾಯಿ ಇರಲಿಲ್ಲ. ಯಾರಿಗೋ ಇಬ್ಬರೂ ಇರಲಿಲ್ಲ. ಆದ್ಯಾ ಎಲ್ಲರಿಗೂ ಒಂದೇ ಮಾತು ಹೇಳುತ್ತಿದ್ದಳು.

"ನಿಮ್ಮ ಜನ್ಮವನ್ನು ನೀವು ಆಯ್ಕೆ ಮಾಡಿಲ್ಲ. ಆದರೆ ನಿಮ್ಮ ಭವಿಷ್ಯವನ್ನು ನೀವು ಆಯ್ಕೆ ಮಾಡಬಹುದು." ಮಕ್ಕಳು ಅವಳನ್ನು "ಅಮ್ಮ" ಎಂದು ಕರೆಯಲು ಆರಂಭಿಸಿದರು. ಮೊದಲ ಬಾರಿ ಆ ಪದ ಕೇಳಿದಾಗ ಅವಳು ಕಣ್ಣು ಮುಚ್ಚಿಕೊಂಡಳು. ಅವಳು ಕಳೆದುಕೊಂಡ ಬದುಕು ಮರಳಿ ಬರಲಿಲ್ಲ. ಆದರೆ ಹೊಸ ಬದುಕು ಅವಳನ್ನು ಅಪ್ಪಿಕೊಳ್ಳುತ್ತಿತ್ತು.

********

ಸಂಸ್ಥೆಯ ಹಿಂಭಾಗದಲ್ಲಿ ಬಳಕೆಯಾಗದ ಚಿಕ್ಕ ಕೊಠಡಿ ಇತ್ತು. ಆದ್ಯಾ ಅನಿತಾಳ ಬಳಿ ಕೇಳಿದಳು.

"ಈ ಕೊಠಡಿಯನ್ನು ಮಕ್ಕಳ ಓದುವ ಕೋಣೆಯನ್ನಾಗಿ ಮಾಡಬಹುದಾ?"

"ಹಣ ಬೇಕಾಗುತ್ತದೆ."

"ನಾನು ಕೆಲಸ ಮಾಡುತ್ತೇನೆ."

"ಪುಸ್ತಕಗಳು?"

"ನಾನು ಸಂಗ್ರಹಿಸುತ್ತೇನೆ."

"ಮೇಜು?"

"ಹಳೆಯದ್ದನ್ನು ದುರಸ್ತಿ ಮಾಡೋಣ." ಅನಿತಾ ನಕ್ಕಳು.

"ನೀನು ಅಸಾಧ್ಯ ಅನ್ನೋ ಪದವೇ ಬಳಸೋದಿಲ್ಲ ಅಲ್ವಾ?"

"ಅಸಾಧ್ಯ ಅಂದ್ರೆ ಇನ್ನೂ ಪ್ರಯತ್ನ ಮಾಡಿಲ್ಲ ಅಷ್ಟೇ."

ಮುಂದಿನ ಮೂರು ತಿಂಗಳು ಆದ್ಯಾ ಒಂದು ವಿಚಿತ್ರ ಕೆಲಸ ಮಾಡಿದಳು. ಮುಂಬೈನ ವಿವಿಧ ಕಾಲೇಜುಗಳಿಗೆ  "ಹಳೆಯ ಪುಸ್ತಕಗಳಿದ್ದರೆ ದಾನ ಮಾಡಿ” ಎಂದು ಪತ್ರ ಬರೆದಳು. ಮೊದಲ ವಾರ ಐದು ಪುಸ್ತಕಗಳು ಬಂದವು. ಎರಡನೇ ವಾರ ಮೂವತ್ತು. ಮೂರನೇ ತಿಂಗಳ ಕೊನೆಯಲ್ಲಿ ಸುಮಾರು ಐನೂರು ಪುಸ್ತಕಗಳು. ಕಥಾ ಸಂಕಲನ, ವಿಜ್ಞಾನ, ಇತಿಹಾಸ, ಸಂವಿಧಾನ, ನಿಘಂಟುಗಳು, ಹೀಗೆ ಹಲವು ಮಾದರಿಯ ಪುಸ್ತಕಗಳು ಸೇರಿದವು.  ಒಂದು ಹಳೆಯ ಅಲಮಾರಿಗೆ ಬಣ್ಣ ಹಚ್ಚಿ ಅದರಲ್ಲಿ ಪುಸ್ತಕಗಳನ್ನು ಜೋಡಿಸಿದಳು. ಬಾಗಿಲಿನ ಮೇಲೆ ಒಂದು ಫಲಕ ಹಾಕಿದಳು. "ಡಾ. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ."

ರಾಹುಲ್ ಕೇಳಿದ. "ಅಮ್ಮ... ಪುಸ್ತಕಗಳಿಗೂ ಮನೆ ಇರುತ್ತದಾ?"

ಆದ್ಯಾ ನಗುತ್ತಾ "ಹೌದು." ಎಂದಳು.

"ಹಾಗಾದರೆ ಈ ಮನೆ ನಮ್ಮದು."

ಆದ್ಯಾ ಪ್ರತಿದಿನ ರಾತ್ರಿ ಮಕ್ಕಳ ಪ್ರಗತಿಯನ್ನು ಬರೆದುಕೊಳ್ಳುತ್ತಿದ್ದಳು. ರಾಹುಲ್ -ಗಣಿತದಲ್ಲಿ ಆಸಕ್ತಿ. ಮೀರಾ -ಭಾಷಣದಲ್ಲಿ ಪ್ರತಿಭಾವಂತೆ. ಇಮ್ರಾನ್ -ವಿಜ್ಞಾನದಲ್ಲಿ ಚುರುಕು. ನಂದಿನಿ-ನಾಯಕತ್ವ ಗುಣ.

ಒಂದು ದಿನ ಅವಳು ಬಿಳಿ ಕಾಗದದ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಳು. "2038 – ನಮ್ಮ ಮನೆಯಿಂದ ಮೊದಲ ಐಎಎಸ್." ಅನಿತಾ ಆ ಬರಹ ನೋಡಿ ನಕ್ಕಳು.

"ಇನ್ನೂ ಈ ಮಕ್ಕಳು ಐದನೇ ತರಗತಿಯಲ್ಲಿದ್ದಾರೆ."

"ಆದರೆ ಏನು?"

"ಇದು ತುಂಬಾ ದೊಡ್ಡ ಕನಸು." ಆದ್ಯಾ ಕಿಟಕಿಯಾಚೆ ನೋಡುತ್ತಾ ಉತ್ತರಿಸಿದಳು.

"ಒಮ್ಮೆ ನಾನು ನನಗಾಗಿ ಐಎಎಸ್ ಕನಸು ಕಂಡಿದ್ದೆ. ಈಗ ಇಲ್ಲಿನ ಪ್ರತಿಯೊಂದು ಮಗುವಿನ ಕಣ್ಣಿನಲ್ಲಿ ಅದೇ ಕನಸನ್ನು ಕಾಣುತ್ತಿದ್ದೇನೆ."

ಆ ರಾತ್ರಿ ಮಕ್ಕಳೆಲ್ಲಾ ಮಲಗಿದ ನಂತರ ಆದ್ಯಾ ಒಬ್ಬಳೇ ಗ್ರಂಥಾಲಯದಲ್ಲಿ ಕುಳಿತಿದ್ದಳು. ಅವಳು ತನ್ನ ತಂದೆಯ ಹಳೆಯ ಪತ್ರದ ನೆನಪಾಗಿ ತಲೆತಗ್ಗಿಸಿ ಅಳತೊಡಗಿದಳು. ನಂತರ ಸಂವಿಧಾನದ ಪುಸ್ತಕವನ್ನು ತೆರೆದು ಅದರ ಮೊದಲ ಪುಟದಲ್ಲಿ ಬರೆದಳು. "ಅಪ್ಪ... ನಾನು ಐಎಎಸ್ ಆಗಲಿಲ್ಲ. ಆದರೆ ನಾನು ಐಎಎಸ್ ಅಧಿಕಾರಿಗಳನ್ನು ಬೆಳೆಸುತ್ತೇನೆ. ಇದು ನಿಮ್ಮ ಮಗಳು ನಿಮಗೆ ಕೊಟ್ಟ ಮಾತು." ಕಿಟಕಿಯ ಹೊರಗೆ ಮಳೆ ಹನಿಗಳು ನಿಧಾನವಾಗಿ ಸುರಿಯುತ್ತಿದ್ದವು. ಆ ಮಳೆಯ ಶಬ್ದದಲ್ಲಿ ಒಂದು ಹೊಸ ಇತಿಹಾಸ ಬರೆಯಲು ಆರಂಭವಾಗಿತ್ತು. ಅದು ಒಬ್ಬ ಮಹಿಳೆಯ ಬದುಕಿನ ಕಥೆಯಲ್ಲ. ಒಂದು ತಾಯಿಯ ಕನಸು ನೂರಾರು ಮಕ್ಕಳ ಭವಿಷ್ಯವಾಗುತ್ತಿದ್ದ ಕಥೆ. "ಶಿಕ್ಷಣದದೊಡ್ಡ ಅದ್ಭುತವೆಂದರೆ ಅದು ಒಂದು ಮನುಷ್ಯನನ್ನು ಮಾತ್ರ ಬದಲಾಯಿಸುವುದಿಲ್ಲ; ಒಂದು ತಲೆಮಾರನ್ನೇ ಬದಲಾಯಿಸುತ್ತದೆ."

***************

ವರ್ಷಗಳು ಉರುಳಿದವು. ಮುಂಬೈನ ಗಗನಚುಂಬಿ ಕಟ್ಟಡಗಳು ಇನ್ನಷ್ಟು ಎತ್ತರವಾದವು. ಮೆಟ್ರೋ ಮಾರ್ಗಗಳು ವಿಸ್ತರಿಸಿದವು. ಹೊಸ ಸೇತುವೆಗಳು ನಿರ್ಮಾಣವಾದವು. ಆದರೆ ನಗರದ ಒಂದು ಮೂಲೆಯಲ್ಲಿ ಇದ್ದ ಆ ಪುಟ್ಟ ಗ್ರಂಥಾಲಯ ಮಾತ್ರ ತನ್ನ ಮೌನದ ಕ್ರಾಂತಿಯನ್ನು ಮುಂದುವರಿಸುತ್ತಿತ್ತು. ಅದರ ಬಾಗಿಲಿನ ಮೇಲೆ ಇನ್ನೂ ಅದೇ ಫಲಕ ಇತ್ತು. "ಡಾ. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ." ಒಳಗೆ ಹೋದರೆ ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಒಂದು ವಾಕ್ಯ ಬರೆಯಲಾಗಿತ್ತು. "ನಿಮ್ಮ ಪರಿಸ್ಥಿತಿ ನಿಮ್ಮ ಗುರುತು ಅಲ್ಲ. ನಿಮ್ಮ ಶಿಕ್ಷಣವೇ ನಿಮ್ಮ ಗುರುತು." ಆ ವಾಕ್ಯವನ್ನು ಪ್ರತಿದಿನ ಓದುತ್ತಿದ್ದ ಮಕ್ಕಳು ಈಗ ಚಿಕ್ಕ ಮಕ್ಕಳಾಗಿರಲಿಲ್ಲ. ಅವರ ಕನಸುಗಳೂ ದೊಡ್ಡದಾಗಿದ್ದವು.

ಒಂದು ಸಂಜೆ ಹನ್ನೆರಡನೇ ತರಗತಿಯ ಪರೀಕ್ಷೆ ಮುಗಿಸಿ ಬಂದ ರಾಹುಲ್, ಆದ್ಯಾಳ ಎದುರು ಕುಳಿತ.

"ಅಮ್ಮ..."

"ಏನಪ್ಪಾ?"

"ನಾನು ಒಂದು ಪ್ರಶ್ನೆ ಕೇಳಬಹುದಾ?"

"ಕೇಳು."

"ನಮ್ಮ ಅಪ್ಪ ಯಾರು?". ಆದ್ಯಾಳ ಕೈಯಲ್ಲಿದ್ದ ಪುಸ್ತಕ ನಿಧಾನವಾಗಿ ಮುಚ್ಚಿತು. ಅವಳು ಉತ್ತರಿಸುವ ಮೊದಲು ರಾಹುಲ್ ಮತ್ತೆ ಮಾತನಾಡಿದ.

"ನನ್ನನ್ನು ಯಾರು ಹೆತ್ತರು ಅಂತ ಕೇಳುತ್ತಿಲ್ಲ. ಹಾಗಾದರೆ ಮನುಷ್ಯನನ್ನು ದೊಡ್ಡವನನ್ನಾಗಿ ಮಾಡುವವರು ಯಾರು?" ಆದ್ಯಾಳ ಕಣ್ಣುಗಳಲ್ಲಿ ಮಮತೆ ತುಂಬಿತು.

"ನಿನ್ನನ್ನು ಹುಟ್ಟಿಸಿದವರು ನಿನಗೆ ಜೀವ ಕೊಟ್ಟಿದ್ದಾರೆ. ಆದರೆ ನಿನ್ನನ್ನು ಮನುಷ್ಯನನ್ನಾಗಿ ಮಾಡುವವರು ನಿನಗೆ ಬದುಕು ಕೊಡುತ್ತಾರೆ." ರಾಹುಲ್ ಎದ್ದು ಅವಳ ಕಾಲಿಗೆ ನಮಸ್ಕರಿಸಿದ.

"ಹಾಗಾದರೆ ನೀವೇ ನಮಗೆ ಬದುಕು ಕಟ್ಟಿಕೊಟ್ಟ ಮಾತೇ. ನಮಗೆ ನೀನೇ ಅಮ್ಮ." ಆದ್ಯಾಳ ಕಣ್ಣುಗಳು ಮತ್ತೆ ತೇವವಾದವು.

*********

ಪ್ರತಿ ಭಾನುವಾರ ಆದ್ಯಾ ವಿಶೇಷ ತರಗತಿ ನಡೆಸುತ್ತಿದ್ದಳು. ಆ ದಿನ ಯಾವುದೇ ಪಠ್ಯಪುಸ್ತಕ ಇರಲಿಲ್ಲ. ಬದಲಿಗೆ ಭಾರತೀಯ ಸಂವಿಧಾನದ ಪಾಠ ನಡೆಯುತ್ತಿತ್ತು. ಒಂದು ದಿನ ಅವಳು ಮಕ್ಕಳನ್ನು ಕೇಳಿದಳು.

"ದೇಶವನ್ನು ಯಾರು ಕಟ್ಟುತ್ತಾರೆ?"

ಒಬ್ಬನು ಹೇಳಿದ, "ಪ್ರಧಾನಮಂತ್ರಿ."

ಇನ್ನೊಬ್ಬ, "ಸೈನಿಕರು."

ಮೂರನೆಯವನು, "ವಿಜ್ಞಾನಿಗಳು."

ಆದ್ಯಾ ನಕ್ಕಳು. "ಅವರೂ ಕಟ್ಟುತ್ತಾರೆ. ಆದರೆ,,,"

"ಹಾಗಾದರೆ ಯಾರು ಕಟ್ಟುತ್ತಾರೆ?”

"ಆದರೆ ನ್ಯಾಯವಾಗಿ ಕೆಲಸ ಮಾಡುವ ಪ್ರತಿಯೊಬ್ಬ ಶಿಕ್ಷಕ, ವೈದ್ಯ, ರೈತ, ಪೊಲೀಸ್, ಅಧಿಕಾರಿ, ನ್ಯಾಯಾಧೀಶ ಇವರೆಲ್ಲರೂ ಸೇರಿ ದೇಶ ಕಟ್ಟುತ್ತಾರೆ."

ಮೀರಾ ಕೈ ಎತ್ತಿದಳು.

"ಅಮ್ಮ..."

"ಹೇಳು."

"ಹಾಗಾದರೆ ನಾನು ನ್ಯಾಯಾಧೀಶೆಯಾಗುತ್ತೇನೆ."

ರಾಹುಲ್ ತಕ್ಷಣ ಹೇಳಿದ. "ನಾನು ಐಎಎಸ್."

ಇಮ್ರಾನ್ ಹೇಳಿದ. "ನಾನು ವೈದ್ಯ."

ನಂದಿನಿ ಹೇಳಿದಳು. "ನಾನು ಐಪಿಎಸ್."

ಆದ್ಯಾಳಿಗೆ ಆ ಕ್ಷಣದಲ್ಲಿ ತನ್ನ ಹಳ್ಳಿಯ ಬೇವಿನ ಮರದ ಕೆಳಗೆ ಕುಳಿತು ಪುಸ್ತಕ ಓದುತ್ತಿದ್ದ ಬಾಲ್ಯ ನೆನಪಾಯಿತು. ಅವಳು ನಸುನಕ್ಕಳು. ಈಗ ಆ ಕನಸು ಒಬ್ಬಳದ್ದಾಗಿರಲಿಲ್ಲ. ಅಲ್ಲಿನ ಮಕ್ಕಳ ಕನಸಾಗಿತ್ತು.

**********

ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಎಂದರೆ ದುಬಾರಿ ಪುಸ್ತಕಗಳು, ಕೋಚಿಂಗ್, ನಗರ ಜೀವನ. ಅನಿತಾ ಒಂದು ದಿನ ಕೇಳಿದಳು.

"ಆದ್ಯಾ, ನಿನ್ನ ಬಳಿ ಹಣವಿಲ್ಲ."

"ಗೊತ್ತು."

"ಹಾಗಾದರೆ?"

"ಪುಸ್ತಕಗಳಿವೆ."

"ಅಷ್ಟರಿಂದ ಸಾಲುತ್ತದೆಯಾ?"

"ಪುಸ್ತಕಗಳ ಜೊತೆ ಪರಿಶ್ರಮ ಇದ್ದರೆ ಸಾಕು."

ಅದೇ ವರ್ಷ ಅವಳು ಒಂದು ಹೊಸ ಯೋಜನೆ ಆರಂಭಿಸಿದಳು. ಅದೇ "ರಾತ್ರಿ ಅಧ್ಯಯನ ಕೇಂದ್ರ." ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆಯವರೆಗೆ ಗ್ರಂಥಾಲಯ ತೆರೆದಿರುತ್ತಿತ್ತು.  “ವಿದ್ಯುತ್ ಹೋದರೆ?”  ಅನಿತ ಕೇಳಿದಳು.

ಕೂಡಲೇ ರಾಹುಲ್ ನಗುತ್ತಾ ಕೇಳಿದ. "ಅಮ್ಮ... ನಿಮ್ಮ ಹಳೆಯ ಲಾಂಟರ್ನ್ ಇದೆ ಅಲ್ಲ!" ಆದ್ಯಾ ನಗುತ್ತಿದ್ದಳು. "ಬೆಳಕು ಕಡಿಮೆಯಾದರೂ ಚಿಂತೆಯಿಲ್ಲ, ಕನಸು ಕಡಿಮೆಯಾಗುವುದಿಲ್ಲ."

ಕಾಲೇಜಿನ ಫಲಿತಾಂಶ ಪ್ರಕಟವಾಯಿತು. ರಾಹುಲ್ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಿದ್ದ. ಇಮ್ರಾನ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಮೀರಾ ಕಾನೂನು ಪದವಿಗೆ ಆಯ್ಕೆಯಾಗಿದ್ದಳು. ನಂದಿನಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಳು. ಆ ಸಂಜೆ ಎಲ್ಲ ಮಕ್ಕಳು ಸೇರಿ ಆದ್ಯಾಳಿಗೆ ಒಂದು ಚಿಕ್ಕ ಉಡುಗೊರೆ ಕೊಟ್ಟರು. ಒಂದು ಹೊಸ ಪೆನ್. ಆದ್ಯಾಳ ಕೈ ನಡುಗಿತು. ಅವಳಿಗೆ ತಕ್ಷಣ ವರ್ಷಗಳ ಹಿಂದೆ ಒಬ್ಬ ಜಿಲ್ಲಾಧಿಕಾರಿ ಕೊಟ್ಟಿದ್ದ ಹಳೆಯ ಪೆನ್ ನೆನಪಾಯಿತು. ಅದು ಈಗ ಇರಲಿಲ್ಲ. ಆದರೆ ಅದರ ಕನಸು ಇನ್ನೂ ಬದುಕಿತ್ತು.

ರಾಹುಲ್ ಹೇಳಿದ. "ಅಮ್ಮ... ನೀವು ನಮಗೆ ಸಾವಿರಾರು ಪೆನ್ ಕೊಟ್ಟಿದ್ದೀರಿ. ಇದು ನಮ್ಮ ಮೊದಲ ಉಡುಗೊರೆ."

*************

ಐದು ವರ್ಷಗಳು ಮತ್ತೊಮ್ಮೆ ಉರುಳಿದವು. ಒಂದು ಚಿಕ್ಕ ಕೊಠಡಿಯಲ್ಲಿ ನಾಲ್ವರು ಕುಳಿತಿದ್ದರು. ರಾಹುಲ್. ನಂದಿನಿ. ಮೀರಾ. ಇಮ್ರಾನ್. ಗೋಡೆಯ ಮೇಲೆ ಭಾರತದ ನಕ್ಷೆ. ಮುಂದೆ ಸಂವಿಧಾನ. ಆದ್ಯಾ ಒಳಗೆ ಬಂದಳು. "ಭಯವಾಗುತ್ತಿದೆಯಾ?"  ರಾಹುಲ್ ನಕ್ಕ. 

"ಸ್ವಲ್ಪ."

"ಏಕೆ?"

"ಇದು ನಮ್ಮ ಜೀವನದ ದೊಡ್ಡ ಪರೀಕ್ಷೆ." ಆದ್ಯಾ ನಿಧಾನವಾಗಿ ಹೇಳಿದಳು.

"ಇಲ್ಲ." ಎಲ್ಲರೂ ಅವಳ ಕಡೆ ನೋಡಿದರು.

"ನಿಮ್ಮ ದೊಡ್ಡ ಪರೀಕ್ಷೆ ನೀವು ಹಸಿದಿದ್ದಾಗ ಓದಿದ ದಿನ. ಮಳೆ ಸೋರಿದ ಛಾವಣಿಯ ಕೆಳಗೆ ಪುಸ್ತಕ ಓದಿದ ದಿನ. ಜನರು ನಿಮ್ಮನ್ನು ಅನಾಥ ಎಂದು ಕರೆದ ದಿನ. ಅವುಗಳನ್ನು ಗೆದ್ದವರು ಈ ಪರೀಕ್ಷೆಯನ್ನು ಕೂಡ ಗೆಲ್ಲುತ್ತಾರೆ. ಕೊಠಡಿಯಲ್ಲಿ ಮೌನ ಆವರಿಸಿತು.

ಯುಪಿಎಸ್ಸಿ ಫಲಿತಾಂಶ ಪ್ರಕಟವಾಯಿತು. ಆ ದಿನ ಪರೀಕ್ಷೆ ಬರೆದ ಎಲ್ಲರೂ ಕಂಪ್ಯೂಟರ್ ಮುಂದೆ ನಿಂತಿದ್ದರು. ರಾಹುಲ್‌ನ ಕೈಗಳು ನಡುಗುತ್ತಿದ್ದವು. ನಂದಿನಿ ಕಣ್ಣು ಮುಚ್ಚಿಕೊಂಡಿದ್ದಳು. ಅನಿತಾ ಪ್ರಾರ್ಥಿಸುತ್ತಿದ್ದಳು. ಆದ್ಯಾ ಮಾತ್ರ ಶಾಂತವಾಗಿದ್ದಳು. ರಾಹುಲ್ ರಿಜಿಸ್ಟರ್ ನಂಬರ್ ನಮೂದಿಸಿದ. ಪರದೆಯ ಮೇಲೆ ಒಂದು ಸಾಲು ಕಾಣಿಸಿತು.

"Qualified." ಕೆಲವು ಕ್ಷಣ ಯಾರಿಗೂ ಮಾತೇ ಬರಲಿಲ್ಲ.

ಮತ್ತೆ ನಂದಿನಿಯ ಫಲಿತಾಂಶ. "Qualified."

ಮೀರಾ. ಇಮ್ರಾನ್. ಒಬ್ಬರ ಹಿಂದೆ ಒಬ್ಬರು ಯಶಸ್ವಿಯಾದರು. ರಾಹುಲ್ ಕುರ್ಚಿಯಿಂದ ಎದ್ದು ಓಡಿ ಬಂದು ಆದ್ಯಾಳನ್ನು ಅಪ್ಪಿಕೊಂಡ.

"ಅಮ್ಮ..." ಅವನ ಧ್ವನಿ ನಡುಗುತ್ತಿತ್ತು.

"ನಿಮ್ಮ ಕನಸು..." ಆದ್ಯಾ ತಕ್ಷಣ ಅವನ ಮಾತು ನಿಲ್ಲಿಸಿದಳು.

"ಇಲ್ಲ."

"ಏಕೆ?"

"ಇದು ನನ್ನ ಕನಸು ಅಲ್ಲ."

"ಹಾಗಾದರೆ?"

"ಇದು ನಿಮ್ಮ ಪರಿಶ್ರಮ." ರಾಹುಲ್ ತಲೆಯಾಡಿಸಿದ.

"ಪರಿಶ್ರಮ ನಮ್ಮದು. ಆದರೆ ಕನಸು ನಿಮ್ಮದು."

*********

ಮುಂಬೈನ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಟ್ಟಿತ್ತು. ವೇದಿಕೆಯ ಮೇಲೆ ನಾಲ್ವರು ಯುವ ಅಧಿಕಾರಿಗಳು. ಕೆಳಗೆ ನೂರಾರು ಜನ.

ನಿರೂಪಕರು ಕೇಳಿದರು. "ನಿಮ್ಮ ಯಶಸ್ಸಿನ ಹಿಂದೆ ಇರುವ ಶಕ್ತಿ ಯಾರು?"

ರಾಹುಲ್ ಮೈಕ್ ಹಿಡಿದ. "ನನಗೆ ಅಪ್ಪ ಯಾರು ಗೊತ್ತಿಲ್ಲ." ಸಭಾಂಗಣ ಮೌನವಾಯಿತು. "ಅಮ್ಮ ಯಾರು ಎಂಬುದೂ ಗೊತ್ತಿಲ್ಲ."  ಆದ್ಯಾ ತಲೆ ತಗ್ಗಿಸಿದಳು.

"ಆದರೆ..." ಅವನು ವೇದಿಕೆಯಿಂದ ಇಳಿದು ನೇರವಾಗಿ ಆದ್ಯಾಳ ಬಳಿಗೆ ಬಂದ. ಅವಳ ಕೈ ಹಿಡಿದು ವೇದಿಕೆಗೆ ಕರೆದುಕೊಂಡು ಹೋದ.

"ಇವರು ನಮ್ಮ ಅಮ್ಮ." ಸಭಾಂಗಣದಲ್ಲಿ ಚಪ್ಪಾಳೆಗಳ ಮಹಾಪೂರವೇ ಹರಿಯಿತು. ರಾಹುಲ್ ಮುಂದುವರಿಸಿದ. "ಇವರು ನಮಗೆ ಜನ್ಮ ಕೊಡಲಿಲ್ಲ. ಆದರೆ ಬದುಕು ಕೊಟ್ಟರು. ನಮಗೆ ಊಟ ಕೊಟ್ಟರು. ಪುಸ್ತಕ ಕೊಟ್ಟರು. ಕನಸು ಕೊಟ್ಟರು. "ನಾವು ಇಂದು ಪಾಸಾಗಿದ್ದರೆ ..." ಅವನು ಕ್ಷಣಕಾಲ ನಿಂತ. "ಅದರ ಮೊದಲ ಫಲಿತಾಂಶ ಇವರ ಹೃದಯದಲ್ಲಿ ಬಹಳ ವರ್ಷಗಳ ಹಿಂದೆಯೇ ಬರೆಯಲ್ಪಟ್ಟಿತ್ತು." ಆದ್ಯಾಳ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಅವಳು ಮೊದಲ ಬಾರಿಗೆ ಸಾವಿರಾರು ಜನರ ಮುಂದೆ ಅತ್ತಳು. ಆದರೆ ಅದು ದುಃಖದ ಅಳುವಲ್ಲ. ಒಬ್ಬ ತಾಯಿಯ ಜೀವನ ಸಾರ್ಥಕವಾದ ಕ್ಷಣದ ಕಣ್ಣೀರು.

ಆದರೆ ಅದೇ ಸಭಾಂಗಣದ ಕೊನೆಯ ಸಾಲಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಮಾತ್ರ ಚಪ್ಪಾಳೆ ತಟ್ಟಲಿಲ್ಲ. ಅವನು ಮೌನವಾಗಿ ಆದ್ಯಾಳನ್ನು ನೋಡುತ್ತಿದ್ದ. ಅವನು ಅವಳನ್ನು ಗುರುತಿಸಿದ್ದ. ಅವಳು ಯಾರು? ಎಲ್ಲಿಂದ ಬಂದವಳು? ಎಲ್ಲವೂ ಅವನಿಗೆ ಗೊತ್ತಿತ್ತು. ಅವನ ಮುಖದಲ್ಲಿ ನಿಧಾನವಾಗಿ ಒಂದು ದುಷ್ಟ ನಗು ಮೂಡಿತು.

"ಆದ್ಯಾ..." ಅವನು ತನ್ನೊಳಗೆ ಗುನುಗಿದ. "ನಿನ್ನ ಭೂತಕಾಲ ಇನ್ನೂ ಮುಗಿದಿಲ್ಲ." ಆ ಮಾತಿನೊಂದಿಗೆ ಆದ್ಯಾಳ ಜೀವನದ ಹೊಸ ಹೋರಾಟ ಆರಂಭವಾಗಲಿತ್ತು.  "ಸತ್ಯವನ್ನುಕೆಲಕಾಲ ಮುಚ್ಚಿಡಬಹುದು. ಆದರೆ ಅದು ಒಂದು ದಿನ ಸಾಕ್ಷಿಯಾಗಿ ನ್ಯಾಯಾಲಯದ ಬಾಗಿಲು ತಟ್ಟುತ್ತದೆ."

*************

ಮುಂಬೈನ ಯುಪಿಎಸ್ಸಿ ಸಾಧಕರಿಗೆ ಸನ್ಮಾನ ಸಮಾರಂಭ ನಡೆದ ಮರುದಿನ ಎಲ್ಲಾ ಪತ್ರಿಕೆಗಳಲ್ಲೂ ಒಂದೇ ಚಿತ್ರ ಪ್ರಕಟವಾಗಿತ್ತು. ನಾಲ್ವರು ಯುವ ಅಧಿಕಾರಿಗಳು. ಅವರ ಮಧ್ಯದಲ್ಲಿ ಸರಳವಾದ ಬಿಳಿ ಹತ್ತಿಯ ಸೀರೆ ಧರಿಸಿದ್ದ ಮಹಿಳೆ. ಶೀರ್ಷಿಕೆ ಹೀಗಿತ್ತು - "ಅನಾಥ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ರೂಪಿಸಿದ ತಾಯಿ." ಆ ಸುದ್ದಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಆದರೆ ಒಬ್ಬ ವ್ಯಕ್ತಿಯ ಗಮನವನ್ನು ವಿಶೇಷವಾಗಿ ಸೆಳೆಯಿತು. ಅವರು ಹಿರಿಯ ತನಿಖಾ ಪತ್ರಕರ್ತ ಅಜಯ್ ದೇಶಪಾಂಡೆ. ಇಪ್ಪತ್ತೈದು ವರ್ಷಗಳಿಂದ ಅವರು ಮಾನವ ಕಳ್ಳಸಾಗಣೆ, ಮಕ್ಕಳ ಶೋಷಣೆ ಮತ್ತು ಭ್ರಷ್ಟಾಚಾರದ ಕುರಿತು ತನಿಖಾ ವರದಿಗಳನ್ನು ಮಾಡುತ್ತಿದ್ದರು. ಆ ಲೇಖನ ಓದುತ್ತಿದ್ದಾಗ ಅವರಿಗೆ ಒಂದು ವಿಷಯ ವಿಚಿತ್ರವಾಗಿ ಕಂಡಿತು. ಆ ಮಹಿಳೆಯ ಬಗ್ಗೆ ಎಲ್ಲ ಮಾಹಿತಿಯೂ ಇತ್ತು. ಆದರೆ ಅವಳ ಭೂತಕಾಲ ಮಾತ್ರ ಇರಲಿಲ್ಲ.

ಅಜಯ್ ತಮ್ಮ ಸಹಾಯಕಿ ಪೂಜಾಳನ್ನು ಕರೆಸಿದರು. "ಈ ಆದ್ಯಾ ಬಗ್ಗೆ ಮಾಹಿತಿ ಬೇಕು."

"ಸರ್... ಎಲ್ಲ ಪತ್ರಿಕೆಗಳಲ್ಲೂ ಒಂದೇ ಕಥೆ ಇದೆ."

"ಅದು ನನಗೆ ಗೊತ್ತು."

"ಹಾಗಾದರೆ?"

"ಅವಳು ಎಲ್ಲ ಜನಿಸಿದಳು? ಅವಳ ತಂದೆ ತಾಯಿ ಯಾರು? ಅವಳ ಕುಟುಂಬಈಗ ಎಲ್ಲಿದೆ? ಅವಳು ಏಕೆ ಮುಂಬೈಗೆ ಬಂದಳು?" ಎಲ್ಲವೂ ಬೇಕು ಎಂದರು.

"ಅವಳ ಬಗ್ಗೆ ಯಾವ ಮಾಹಿತಿಯೂ ಸಿಗುತ್ತಿಲ್ಲ ಸರ್" ಪೂಜಾ ಸ್ವಲ್ಪ ಹೊತ್ತು ಮೌನವಾಗಿದ್ದಳು.

"ಸರ್... ಬಹುಶಃ ಅವಳು ಹೇಳಲು ಇಷ್ಟಪಡದೇ ಇರಬಹುದು." ಅಜಯ್ ಕಿಟಕಿಯಾಚೆ ನೋಡುತ್ತಾ ಹೇಳಿದರು.

"ತಮ್ಮ ಭೂತಕಾಲವನ್ನು ಮರೆಮಾಚುವವರಲ್ಲಿ ಎರಡು ವಿಧ. ಒಬ್ಬರು ಅಪರಾಧಿಗಳು, ಇನ್ನೊಬ್ಬರು  ಅಥವಾ ಅಪರಾಧದ ಬಲಿಪಶುಗಳು."

ಕೆಲ ದಿನಗಳ ನಂತರ ಅಜಯ್ ಆದ್ಯಾಳನ್ನು ಭೇಟಿ ಮಾಡಿದರು. ಸಣ್ಣ ಗ್ರಂಥಾಲಯದಲ್ಲಿ ಮಕ್ಕಳು ಓದುತ್ತಿದ್ದರು. ಆದ್ಯಾ  ಪುಸ್ತಕಗಳನ್ನು ಜೋಡಿಸುತ್ತಿದ್ದಳು.

"ನಮಸ್ಕಾರ."

"ನಮಸ್ಕಾರ."

"ನಾನು ಅಜಯ್ ದೇಶಪಾಂಡೆ."

"ಗೊತ್ತು. ನಿಮ್ಮ ಲೇಖನಗಳನ್ನು ಓದಿದ್ದೇನೆ."

"ನಿಮ್ಮ ಬಗ್ಗೆ ಬರೆಯಬೇಕು."

ಆದ್ಯಾ ನಗುತ್ತಾ ಉತ್ತರಿಸಿದಳು. "ನನ್ನ ಬಗ್ಗೆ ಬರೆಯಬೇಡಿ."

"ಏಕೆ?"

"ಈ ಮಕ್ಕಳ ಬಗ್ಗೆ ಬರೆಯಿರಿ."

ಅಜಯ್ ಗಮನಿಸಿದರು. ಆದ್ಯಾ ತನ್ನ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತಿದ್ದಳು. ಮಾತುಕತೆ ಮುಗಿದ ನಂತರ ಗೋಡೆಯ ಮೇಲಿದ್ದ ಒಂದು ಹಳೆಯ ಫೋಟೋ ಅವರ ಕಣ್ಣಿಗೆ ಬಿತ್ತು. ಅದರೊಳಗೆ ಚಿಕ್ಕ ಹುಡುಗಿ. ಹಳೆಯ ಸರ್ಕಾರಿ ಶಾಲೆಯ ಸಮವಸ್ತ್ರ. ಕೈಯಲ್ಲಿ ಬಹುಮಾನ. ಅಜಯ್ ಹತ್ತಿರ ಹೋಗಿ ನೋಡಿದರು. ಫೋಟೋದ ಹಿಂದೆ ಮಸುಕಾದ ಅಕ್ಷರಗಳಲ್ಲಿ ಬರೆಯಲಾಗಿತ್ತು. "ಆದ್ಯಾ – ಜಿಲ್ಲಾ ಪ್ರಬಂಧ ಸ್ಪರ್ಧೆ, ಸರ್ಕಾರಿ ಪ್ರೌಢಶಾಲೆ ಬಸರಕೋಡು."

ಕೆಲ ದಿನಗಳ ನಂತರ ಅಜಯ್ ವಿಜಯನಗರ ಜಿಲ್ಲೆಯ ಬಸರಕೋಡಿಗೆ ಬಂದರು. ಹಳ್ಳಿ ಬದಲಾಗಿತ್ತು. ಆದರೆ ಶಾಲೆ ಹಾಗೆಯೇ ಇತ್ತು. ಮುಖ್ಯಶಿಕ್ಷಕರ ಕೊಠಡಿಯಲ್ಲಿ ನಿವೃತ್ತ ಶಿಕ್ಷಕ ಶಂಕರಮೂರ್ತಿ ಕುಳಿತಿದ್ದರು.

"ಆದ್ಯಾ?" ಅವರು ದೀರ್ಘ ನಿಟ್ಟುಸಿರು ಬಿಟ್ಟರು.

"ಆ ಹೆಸರನ್ನು ಎಷ್ಟು ವರ್ಷಗಳ ನಂತರ ಕೇಳುತ್ತಿದ್ದೇನೆ." ಅವರು ಹಳೆಯ ರಿಜಿಸ್ಟರ್ ತೆಗೆದರು.  ಅದರೊಳಗೆ ಆದ್ಯಾಳ ಅಂಕಪಟ್ಟಿ. ಪ್ರಬಂಧ ಸ್ಪರ್ಧೆಯ ಪ್ರಮಾಣಪತ್ರ. ಶಾಲೆಯ ವಾರ್ಷಿಕೋತ್ಸವದ ಚಿತ್ರಗಳು. ಶಂಕರಮೂರ್ತಿ ನಿಧಾನವಾಗಿ ಹೇಳಿದರು.

"ಅವಳು ನಮ್ಮ ಶಾಲೆಯ ಹೆಮ್ಮೆ."

"ನಂತರ?"

"ಮುಂಬೈಗೆ ಕೆಲಸಕ್ಕೆ ಹೋದಳು."

"ಮತ್ತೆ ಬರಲಿಲ್ಲ."

"ಅವಳ ತಂದೆ?"

"ಮಗಳಿಗಾಗಿ ಕಾಯುತ್ತಲೇ ಹೋದರು."

ಅಜಯ್ ಮೌನವಾಗಿ ಎಲ್ಲವನ್ನೂ ಬರೆದುಕೊಂಡರು.

ಮುಂಬೈಗೆ ಹಿಂತಿರುಗಿದ ನಂತರ ಅಜಯ್ ತಮ್ಮ ಕಚೇರಿಯಲ್ಲಿ ಹಳೆಯ ಪೊಲೀಸ್ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು. ಇಪ್ಪತ್ತು ವರ್ಷಗಳ ಹಿಂದೆ ಕಾಣೆಯಾದ ಯುವತಿಯರ ಪಟ್ಟಿಯಲ್ಲಿ ಒಂದು ಹೆಸರು ಕಂಡಿತು. ಆದ್ಯಾ ಹನುಮಂತಪ್ಪ.

ಸ್ಥಿತಿ: "ಪತ್ತೆಯಾಗಿಲ್ಲ." ಅವರ ಹೃದಯ ಬಡಿದುಕೊಂಡಿತು.

"ಅಂದರೆ..." ಅವರು ತಕ್ಷಣ ಇನ್ನಷ್ಟು ದಾಖಲೆಗಳನ್ನು ಹುಡುಕಿದರು. ಅದೇ ವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಕಾಣೆಯಾದ ಹಲವು ಯುವತಿಯರ ಪ್ರಕರಣಗಳು ಅಪೂರ್ಣವಾಗಿದ್ದವು. ಒಂದೇ ರೀತಿಯ ಮೋಸ. ನಕಲಿ ಉದ್ಯೋಗ. ಸುಳ್ಳು ನೇಮಕಾತಿ ಪತ್ರ. ಎಂಜಲು ಕಾಸಿಗೆ ಮರುಳಾದ ಮಧ್ಯವರ್ತಿಗಳು. ಆದರೆ ಪ್ರಕರಣಗಳು ಮುಂದೆ ಸಾಗಿರಲಿಲ್ಲ.

**************

ಈ ನಡುವೆ ರಾಹುಲ್ ಜಿಲ್ಲಾಧಿಕಾರಿಯಾಗಿ ಮೊದಲ ನೇಮಕಾತಿ ಪಡೆದಿದ್ದ. ನಂದಿನಿ ಭಾರತೀಯ ಪೊಲೀಸ್ ಸೇವೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದಳು. ಮೀರಾ ಹೈಕೋರ್ಟ್ ವಕೀಲೆಯಾಗಿದ್ದಳು. ಇಮ್ರಾನ್ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದನು. ಒಂದು ಸಂಜೆ ನಾಲ್ವರೂ ಮತ್ತೆ ಆದ್ಯಾಳ ಗ್ರಂಥಾಲಯದಲ್ಲಿ ಸೇರಿದರು. ಅಜಯ್ ಕೂಡ ಅಲ್ಲಿದ್ದರು. ಅವರು ಹಳೆಯ ದಾಖಲೆಗಳನ್ನು ಮೇಜಿನ ಮೇಲೆ ಇಟ್ಟರು.

"ನಿಮಗೆ ಒಂದು ವಿಷಯ ತಿಳಿಸಬೇಕು." ಆದ್ಯಾ ದಾಖಲೆಗಳನ್ನು ನೋಡಿದ ಕ್ಷಣ ಮುಖ ಬಿಳಿಯಾಯಿತು.  ಅದು ಅವಳ ಕಾಣೆಯಾದ ಪ್ರಕರಣದ ಕಡತ. ಕೊಠಡಿಯಲ್ಲಿ ಮೌನ ಆವರಿಸಿತು. ರಾಹುಲ್ ನಿಧಾನವಾಗಿ ಕೇಳಿದ.

"ಅಮ್ಮ..."

"ಹೌದು."

"ಇದು ನಿಮ್ಮದೇ ಪ್ರಕರಣವೇ?" ಆದ್ಯಾ ಬಹಳ ಹೊತ್ತು ಏನೂ ಮಾತನಾಡಲಿಲ್ಲ. ಕೊನೆಗೆ ತಲೆತಗ್ಗಿಸಿ ಹೇಳಿದರು.

"ಹೌದು."

ಅವಳು ಮೊದಲ ಬಾರಿಗೆ ತನ್ನ ಮಕ್ಕಳ ಮುಂದೆ ತನ್ನ ಬದುಕಿನ ನೋವನ್ನು ಹಂಚಿಕೊಂಡಳು. ಆದರೆ ಯಾರನ್ನೂ ದ್ವೇಷದಿಂದ ನೆನಪಿಸಲಿಲ್ಲ. ಯಾರ ಮೇಲೂ ಪ್ರತೀಕಾರದ ಮಾತು ಆಡಲಿಲ್ಲ. ಅವಳು ಕೇವಲ ಒಂದು ಮಾತು ಹೇಳಿದರು. "ನನ್ನಂತಾಗಿರುವ ಇನ್ನೊಬ್ಬ ಹುಡುಗಿ ಇಂದಿಗೂ ಎಲ್ಲೋ ಸಹಾಯಕ್ಕಾಗಿ ಕಾಯುತ್ತಿದ್ದಾಳೆ." ರಾಹುಲ್ ಮೇಜಿನ ಮೇಲೆ ಕೈ ಇಟ್ಟ.

"ಅಮ್ಮ..."

"ಹೇಳು."

"ಈ ಪ್ರಕರಣವನ್ನು ಮತ್ತೆ ತೆಗೆಯೋಣ." ನಂದಿನಿ ಕೂಡ ತಕ್ಷಣ ಹೇಳಿದರು.

"ಕಾನೂನು ಅವಕಾಶ ಕೊಟ್ಟರೆ ಹಳೆಯ ಜಾಲವನ್ನು ಸಂಪೂರ್ಣ ತನಿಖೆ ಮಾಡಬಹುದು."

ಮೀರಾ ಹೇಳಿದರು. "ಹಳೆಯ ಸಾಕ್ಷಿಗಳನ್ನು ಮರುಪರಿಶೀಲಿಸಬಹುದು."

ಇಮ್ರಾನ್ ಹೇಳಿದರು. "ರಕ್ಷಿಸಲ್ಪಟ್ಟ ಮಹಿಳೆಯರ ಪುನರ್ವಸತಿಗೂ ನಾವು ಹೊಸ ನೀತಿಯನ್ನು ರೂಪಿಸಬಹುದು." ಆದ್ಯಾಳ ಕಣ್ಣುಗಳಲ್ಲಿ ಮತ್ತೆ ಆಶೆಯ ಬೆಳಕು ಮೂಡಿತು.

ರಾಹುಲ್ ಭಾರತೀಯ ಸಂವಿಧಾನದ ಪ್ರತಿಯನ್ನು ಕೈಗೆತ್ತಿಕೊಂಡ. "ನಾವು ಪ್ರತೀಕಾರಕ್ಕಾಗಿ ಕೆಲಸ ಮಾಡುವುದಿಲ್ಲ."

ನಂದಿನಿ ಮುಂದುವರಿಸಿದರು. "ನ್ಯಾಯಕ್ಕಾಗಿ ಕೆಲಸ ಮಾಡುತ್ತೇವೆ."

ಮೀರಾ ಹೇಳಿದರು. "ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳದಂತೆ ಹುಡುಕುತ್ತೇನೆ”

ಇಮ್ರಾನ್ ಹೇಳಿದರು. "ಒಬ್ಬ ನಿರಪರಾಧಿಯೂ ಮತ್ತೆ ಬಲಿಯಾಗದಂತೆ ಶ್ರಮವಹಿಸುತ್ತೇನೆ”

ಆದ್ಯಾ ಎದ್ದು ನಿಂತಳು. ಅವಳು ತನ್ನ ತಂದೆ ಕೊಟ್ಟಿದ್ದ ಹಳೆಯ ಪೆನ್‌ನ್ನು ನೆನಪಿಸಿಕೊಂಡಳು. ಅದು ಈಗ ಇರಲಿಲ್ಲ. ಆದರೆ ಆ ಕನಸು ಇನ್ನೂ ಜೀವಂತವಾಗಿತ್ತು. ಅವಳು ಮಕ್ಕಳ ಕಡೆ ನೋಡುತ್ತಾ ನಿಧಾನವಾಗಿ ಹೇಳಿದರು. "ನೀವು ನನ್ನ ಮಕ್ಕಳಲ್ಲ... ನೀವು ಈ ದೇಶದ ಮಕ್ಕಳಾಗಿದ್ದೀರಿ. ನಿಮ್ಮ ಅಧಿಕಾರವು ನನ್ನ ನೋವಿಗೆ ಅಲ್ಲ, ನ್ಯಾಯಕ್ಕೆ ಸೇವೆ ಸಲ್ಲಿಸಬೇಕು."

ನಾಲ್ವರೂ ಒಂದೇ ಧ್ವನಿಯಲ್ಲಿ ಉತ್ತರಿಸಿದರು. "ಅಮ್ಮ... ಅದೇ ನಮ್ಮ ಪ್ರತಿಜ್ಞೆ." ಆ ಸಂಜೆ ಗ್ರಂಥಾಲಯದ ಹೊರಗೆ ಮಕ್ಕಳು ಎಂದಿನಂತೆ ಆಟವಾಡುತ್ತಿದ್ದರು. ಆ ಸಣ್ಣ ಗ್ರಂಥಾಲಯದಲ್ಲೇ ದೇಶವ್ಯಾಪಿ ಮಾನವ ಕಳ್ಳಸಾಗಣೆ ವಿರೋಧಿ ಅಭಿಯಾನದ ಮೊದಲ ಅಧ್ಯಾಯ ಬರೆಯಲ್ಪಡುತ್ತಿತ್ತು ಎಂಬುದು ಅವರಿಗೆ ಗೊತ್ತಿರಲಿಲ್ಲ,

"ಒಬ್ಬ ತಾಯಿಯ ಕಣ್ಣೀರಿನಿಂದಹುಟ್ಟಿದ ಕನಸು, ಒಂದು ದಿನ ದೇಶದ ನ್ಯಾಯ ವ್ಯವಸ್ಥೆಗೆ ದಾರಿದೀಪವಾಯಿತು."

***************

ಮುಂಬೈನ ಮಳೆಗಾಲ ಎಂದಿನಂತೆ ಆರಂಭವಾಗಿತ್ತು. ಆದರೆ ಈ ಬಾರಿ ಮಳೆಯ ಜೊತೆಗೆ ಇನ್ನೊಂದು ಹೊಸ ಅಲೆ ದೇಶದಾದ್ಯಂತ ಹರಡಿತ್ತು. ಮಾನವ ಕಳ್ಳಸಾಗಣೆ ವಿರೋಧಿ ರಾಷ್ಟ್ರೀಯ ಜಾಗೃತಿ ಅಭಿಯಾನ. ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು ಮತ್ತು ನ್ಯಾಯಾಂಗ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದರು. ಆ ಅಭಿಯಾನದ ಹಿಂದಿನ ಪ್ರೇರಣೆಯಾಗಿ ಒಂದೇ ಹೆಸರು ಕೇಳಿಬರುತ್ತಿತ್ತು. ಅದೇ ಆದ್ಯಾ.

ರಾಹುಲ್, ನಂದಿನಿ, ಮೀರಾ ಮತ್ತು ಇಮ್ರಾನ್ ತಮ್ಮ ತಮ್ಮ ಜವಾಬ್ದಾರಿಗಳ ವ್ಯಾಪ್ತಿಯಲ್ಲಿ ವರ್ಷಗಳಿಂದ ಮುಚ್ಚಿದ್ದ ಪ್ರಕರಣಗಳ ಪರಿಶೀಲನೆಗೆ ಮುಂದಾದರು. ಅವರು ಯಾವುದೇ ವ್ಯಕ್ತಿಯ ವಿರುದ್ಧ ಪೂರ್ವಗ್ರಹದಿಂದ ಕೆಲಸ ಮಾಡಲಿಲ್ಲ. ಹಳೆಯ ದಾಖಲೆಗಳು, ನ್ಯಾಯಾಲಯದ ಆದೇಶಗಳು, ಕಾಣೆಯಾದವರ ವರದಿಗಳು, ಪುನರ್ವಸತಿ ಕೇಂದ್ರಗಳ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಾನೂನಿನ ಚೌಕಟ್ಟಿನೊಳಗೆ ಮರುಪರಿಶೀಲಿಸಲಾಯಿತು. ಕೆಲವು ಪ್ರಕರಣಗಳು ಹೊಸ ಸಾಕ್ಷ್ಯಾಧಾರಗಳಿಂದ ಮತ್ತೆ ನ್ಯಾಯಾಲಯದ ಮುಂದೆ ಬಂದವು. ಕೆಲವು ನಿರಪರಾಧಿಗಳಿಗೆ ನ್ಯಾಯ ದೊರೆಯಿತು. ಹಲವಾರು ಬಲಿಪಶುಗಳಿಗೆ ಗುರುತು, ದಾಖಲೆಗಳು ಮತ್ತು ಪುನರ್ವಸತಿ ಸೌಲಭ್ಯಗಳು ಒದಗಿದವು. ಅತ್ಯಂತ ಮುಖ್ಯವಾಗಿ, ಅನೇಕ ರಾಜ್ಯಗಳಲ್ಲಿ ಉದ್ಯೋಗದ ಹೆಸರಿನಲ್ಲಿ ಮೋಸ ತಡೆಯಲು ಹೊಸ ಪರಿಶೀಲನಾ ವ್ಯವಸ್ಥೆಗಳು ಜಾರಿಯಾದವು.

***************

ಆದ್ಯಾಳ ಸಣ್ಣ ಗ್ರಂಥಾಲಯ ಈಗ ಒಂದು ದೊಡ್ಡ ಶಿಕ್ಷಣ ಕೇಂದ್ರವಾಗಿ ಬೆಳೆದಿತ್ತು. ಅಲ್ಲಿ ಕೇವಲ ಅನಾಥ ಮಕ್ಕಳಲ್ಲ. ರಕ್ಷಿಸಲ್ಪಟ್ಟ ಮಹಿಳೆಯರ ಮಕ್ಕಳು, ಬೀದಿಬದಿಯ ಮಕ್ಕಳು, ಶಾಲೆ ಬಿಟ್ಟ ಮಕ್ಕಳು—ಎಲ್ಲರಿಗೂ ಉಚಿತ ಶಿಕ್ಷಣ ದೊರೆಯುತ್ತಿತ್ತು. ಒಂದು ವಿಶ್ವವಿದ್ಯಾಲಯದ ಸಂಶೋಧನಾ ತಂಡ ಅಲ್ಲಿಗೆ ಭೇಟಿ ನೀಡಿತು. ಅವರು ಆಶ್ಚರ್ಯಪಟ್ಟರು.

"ಇಲ್ಲಿ ಬೆಳೆದ ಮಕ್ಕಳಲ್ಲಿ ಅಪರಾಧ ಪ್ರಮಾಣ ಅತ್ಯಂತ ಕಡಿಮೆ. ಶಾಲಾ ಬಿಡುವವರ ಪ್ರಮಾಣ ಬಹುತೇಕ ಶೂನ್ಯ. "ಉನ್ನತ ಶಿಕ್ಷಣಕ್ಕೆ ಹೋಗುವವರ ಪ್ರಮಾಣ ನಗರ ಸರಾಸರಿಗಿಂತ ಹೆಚ್ಚು." ಅವರು ಈ ಮಾದರಿಗೆ ಒಂದು ಹೆಸರು ನೀಡಿದರು.

"ಆದ್ಯಾ ಮಾದರಿ" (Adya Model of Community Education and Rehabilitation). ಮುಂದೆ ದೇಶದ ಹಲವು ನಗರಗಳಲ್ಲಿ ಇದೇ ಮಾದರಿಯನ್ನು ಅನುಸರಿಸಿ ಸಮುದಾಯ ಶಿಕ್ಷಣ ಕೇಂದ್ರಗಳು ಆರಂಭವಾದವು.

ಒಂದು ಬೆಳಿಗ್ಗೆ ಅಂಚೆ ಸಿಬ್ಬಂದಿ ಒಂದು ವಿಶೇಷ ಲಕೋಟೆ ತಂದರು. ಅದರ ಮೇಲೆ ರಾಷ್ಟ್ರಚಿಹ್ನೆ ಇತ್ತು. ಆದ್ಯಾ ಲಕೋಟೆ ತೆರೆದಳು. ರಾಹುಲ್ ಓದಲು ಆರಂಭಿಸಿದ. "ಶಿಕ್ಷಣ, ಪುನರ್ವಸತಿ ಮತ್ತು ಸಮಾಜ ಸೇವೆಯಲ್ಲಿ ನೀಡಿದ ವಿಶಿಷ್ಟ ಕೊಡುಗೆಯನ್ನು ಗೌರವಿಸಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ರಾಷ್ಟ್ರೀಯ ನಾಗರಿಕ ಸನ್ಮಾನ ಸಮಾರಂಭಕ್ಕೆ ಶ್ರೀಮತಿ ಆದ್ಯಾ ಅವರನ್ನು ಆಹ್ವಾನಿಸಲಾಗುತ್ತದೆ."

ಕೊಠಡಿಯಲ್ಲಿ ಕೆಲ ಕ್ಷಣ ಮೌನ ಆವರಿಸಿತು. ರಾಹುಲ್‌ನ ಧ್ವನಿ ನಡುಗಿತು.

"ಅಮ್ಮ..."

ಆದ್ಯಾ ನಗುತ್ತ ಹೇಳಿದರು. "ಈ ಆಹ್ವಾನ ನನಗಲ್ಲ."

"ಹಾಗಾದರೆ?" "ನಿಮ್ಮೆಲ್ಲರಿಗಿದೆ."

ರಾಷ್ಟ್ರಪತಿ ಭವನದ ಅಶೋಕ ಹಾಲ್. ದೇಶದ ವಿವಿಧ ಭಾಗಗಳಿಂದ ಬಂದ ವಿಜ್ಞಾನಿಗಳು, ಶಿಕ್ಷಕರು, ವೈದ್ಯರು, ಸಮಾಜಸೇವಕರು, ಕ್ರೀಡಾಪಟುಗಳು ಮತ್ತು ಕಲಾವಿದರು. ಅವರ ಮಧ್ಯೆ ಬಿಳಿ ಸೀರೆಯಲ್ಲಿ ಆದ್ಯಾ ಕುಳಿತಿದ್ದರು. ಅವರಿಗೆ ಯಾವುದೇ ಆಭರಣ ಇರಲಿಲ್ಲ. ಆದರೆ ಅವರ ಮುಖದಲ್ಲಿ ಅನುಭವದ ಪ್ರಕಾಶ ಇತ್ತು. ಅವರ ಹೆಸರನ್ನು ಅನೌನ್ಸ್ ಮಾಡಲಾಯಿತು.  "ಶಿಕ್ಷಣದಮೂಲಕ ಅನಾಥ ಮತ್ತು ಅಂಚಿನಲ್ಲಿದ್ದ ಮಕ್ಕಳ ಜೀವನದಲ್ಲಿ ಪರಿವರ್ತನೆ ತಂದ ಸಮಾಜಸೇವಕಿ ಶ್ರೀಮತಿ ಆದ್ಯಾ." ಸಭಾಂಗಣದಲ್ಲಿ ಕರತಾಡನ ಮೊಳಗಿತು. ಆದ್ಯಾ ನಿಧಾನವಾಗಿ ವೇದಿಕೆಯತ್ತ ನಡೆದು ಹೋದರು. ಸನ್ಮಾನ ಸ್ವೀಕರಿಸುವಾಗ ಅವರ ಕಣ್ಣು ಮುಂದೆ ಮೂರು ಮುಖಗಳು ಮೂಡಿದವು. ತಂದೆ ಹನುಮಂತಪ್ಪ. ತಾಯಿ ಗೌರಮ್ಮ. ಮುಖ್ಯಶಿಕ್ಷಕ ಶಂಕರಮೂರ್ತಿ. ಅವರ ಮನಸ್ಸಿನಲ್ಲೇ ಅವರು ನಮಸ್ಕರಿಸಿದರು.

ಸನ್ಮಾನದ ನಂತರ ಮಾತನಾಡಲು ಅವಕಾಶ ನೀಡಲಾಯಿತು. ಆದ್ಯಾ ಮೈಕ್ರೋಫೋನ್ ಮುಂದೆ ನಿಂತರು. ಕೆಲವು ಕ್ಷಣ ಮೌನವಾಗಿದ್ದರು. ನಂತರ ನಿಧಾನವಾಗಿ ಮಾತಾಡತೊಡಗಿದರು. "ನಾನು ಇಂದು ಇಲ್ಲಿ ಒಬ್ಬ ಸಮಾಜಸೇವಕಿಯಾಗಿ ನಿಂತಿಲ್ಲ. ನಾನು ಒಮ್ಮೆ ದೊಡ್ಡ ಕನಸು ಕಂಡಿದ್ದ ಸಾಮಾನ್ಯ ಹಳ್ಳಿಯ ಹುಡುಗಿಯಾಗಿ ನಿಂತಿದ್ದೇನೆ." ಸಭಾಂಗಣ ಮೌನವಾಗಿತ್ತು.

"ನನ್ನ ಜೀವನದಲ್ಲಿ ನಾನು ಬಹಳವನ್ನು ಕಳೆದುಕೊಂಡೆ. ಆದರೆ ಒಂದು ಸತ್ಯ ಕಲಿತೆ. ದುಃಖವನ್ನು ದ್ವೇಷವಾಗಿ ಬದಲಿಸಿದರೆ ಮತ್ತೊಂದು ನೋವು ಹುಟ್ಟುತ್ತದೆ. ದುಃಖವನ್ನು ಸೇವೆಯಾಗಿ ಬದಲಿಸಿದರೆ ಸಾವಿರ ಬದುಕುಗಳು ಅರಳುತ್ತವೆ."  ಮಧ್ಯದಲ್ಲಿ ಮಾತು ನಿಲ್ಲಿಸಿ ಮತ್ತೆ ಪ್ರಾರಂಭಿಸಿದಳು.

"ನನ್ನನ್ನು ಬದುಕಿಸಿದದ್ದು ಶಿಕ್ಷಣ. ನನ್ನ ಮಕ್ಕಳನ್ನು ಬೆಳೆಸಿದ್ದು ಶಿಕ್ಷಣ. ನಮ್ಮ ಸಮಾಜವನ್ನು ಬದಲಾಯಿಸುವುದೂ ಶಿಕ್ಷಣವೇ." ಕೊನೆಯ ಮಾತು ಸಭಾಂಗಣದಲ್ಲಿ ಪ್ರತಿಧ್ವನಿಸಿತು. "ಮನುಷ್ಯನ ಭೂತಕಾಲ ಅವನ ತಪ್ಪಾಗಿರಬೇಕೆಂದಿಲ್ಲ. ಆದರೆ ಅವನ ಭವಿಷ್ಯವನ್ನು ಕಟ್ಟುವುದು ಸಮಾಜದ ಜವಾಬ್ದಾರಿ."

ಕರಡಾತನ ಇಡೀ ಸಂಭಾಗಣವನ್ನು ಆವರಿಸಿತು. ಎಲ್ಲರೂ ಆದ್ಯಾಳ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಅಂತಿಮವಾಗಿ ಪೋಲೀಸರೇ ಜನರನ್ನು ಚದುರಿಸಿದರು.

ಮುಂಬೈಗೆ ಹಿಂದಿರುಗಿದ ನಂತರ ಮಕ್ಕಳು ಒಂದು ಸಣ್ಣ ಕಾರ್ಯಕ್ರಮ ಏರ್ಪಡಿಸಿದ್ದರು. ಆದ್ಯಾ ಒಳಗೆ ಬಂದಾಗ ಗ್ರಂಥಾಲಯದ ಗೋಡೆಯ ಮೇಲೆ ಹೊಸ ಫಲಕವೊಂದು ಕಾಣಿಸಿತು.

"ಆದ್ಯಾ ಸಮುದಾಯಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ." ಅವರು ಆಶ್ಚರ್ಯದಿಂದ ಮಕ್ಕಳ ಕಡೆ ನೋಡಿದರು.

"ಏನಿದು?"

ರಾಹುಲ್ ನಗುತ್ತ ಹೇಳಿದರು.

"ಅಮ್ಮ… ನಿಮ್ಮ ಹೆಸರನ್ನು ಗೋಡೆಯ ಮೇಲೆ ಬರೆಯಲು ನಾವು ತುಂಬಾ ತಡ ಮಾಡಿದ್ದೇವೆ."

ಆ ಕಾರ್ಯಕ್ರಮದ ಕೊನೆಯಲ್ಲಿ ರಾಹುಲ್ ಒಂದು ಚಿಕ್ಕ ಪೆಟ್ಟಿಗೆ ತಂದ.

"ಇದು ನಿಮಗಾಗಿ." ಆದ್ಯಾ ತೆರೆದರು.  ಅದರೊಳಗೆ ಒಂದು ಸುಂದರ ಪೆನ್ ಇತ್ತು.

ರಾಹುಲ್ ಹೇಳಿದ. "ನೀವು ಒಮ್ಮೆ ಒಬ್ಬ ಅಧಿಕಾರಿಯಿಂದ ಪೆನ್ ಉಡುಗೊರೆ ಪಡೆದಿದ್ದೀರಿ ಎಂದು ಹೇಳಿದ್ದಿರಿ."

"ಹೌದು."

"ಆ ಪೆನ್ ನಿಮ್ಮ ಕನಸಿಗೆ ಆರಂಭ ಕೊಟ್ಟಿತು. ಈಗ ಈ ಪೆನ್ ಇನ್ನೂ ಸಾವಿರ ಕನಸುಗಳಿಗೆ ಆರಂಭವಾಗಲಿ."

ಆದ್ಯಾ ಪೆನ್ ಕೈಗೆತ್ತಿಕೊಂಡು ಗ್ರಂಥಾಲಯದ ಭೇಟಿ ಪುಸ್ತಕದಲ್ಲಿ ಒಂದು ವಾಕ್ಯ ಬರೆದರು.

"ಕನಸುಗಳುಒಡೆಯಬಹುದು. ಆದರೆ ಅವುಗಳಿಂದ ಹುಟ್ಟುವ ಬೆಳಕನ್ನು ಯಾರೂ ಒಡೆಯಲು ಸಾಧ್ಯವಿಲ್ಲ."

ಹಲವು ವರ್ಷಗಳ ನಂತರ. ಮುಂಬೈನ ಆ ಸಣ್ಣ ಗ್ರಂಥಾಲಯ ಈಗ ದೇಶದಾದ್ಯಂತ ಪ್ರಸಿದ್ಧಿಯಾಗಿತ್ತು. ಪ್ರತಿ ವರ್ಷ ನೂರಾರು ಮಕ್ಕಳು ಅಲ್ಲಿಂದ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದರು. ಗೋಡೆಯ ಮೇಲೆ ಇನ್ನೂ ಅದೇ ವಾಕ್ಯ ಇತ್ತು. "ನಿಮ್ಮ ಪರಿಸ್ಥಿತಿ ನಿಮ್ಮ ಗುರುತು ಅಲ್ಲ. ನಿಮ್ಮ ಶಿಕ್ಷಣವೇ ನಿಮ್ಮ ಗುರುತು." ಒಂದು ಹೊಸ ಹುಡುಗಿ ಮೊದಲ ಬಾರಿಗೆ ಗ್ರಂಥಾಲಯಕ್ಕೆ ಬಂದಳು. ಅವಳ ಕೈಯಲ್ಲಿ ಹಳೆಯ ಪುಸ್ತಕ. ಕಣ್ಣಲ್ಲಿ ಭಯ. ಆದ್ಯಾ ಅವಳ ಬಳಿಗೆ ಹೋಗಿ ಕೇಳಿದರು. "ಮಗಳೇ... ನಿನ್ನ ಹೆಸರು?"

"ಸಾನ್ವಿ."

"ಏನಾಗಬೇಕು?"

ಹುಡುಗಿ ಸಂಕೋಚದಿಂದ ಉತ್ತರಿಸಿದಳು. "ಐಎಎಸ್."

ಆದ್ಯಾ ಕ್ಷಣಕಾಲ ನಗುತ್ತ ನಿಂತರು. ವರ್ಷಗಳ ಹಿಂದೆ ಬೇವಿನ ಮರದ ಕೆಳಗೆ ಕುಳಿತುಕೊಂಡಿದ್ದ ತನ್ನದೇ ಮುಖ ಅವರ ಕಣ್ಣ ಮುಂದೆ ಮೂಡಿತು. ಅವರು ಗ್ರಂಥಾಲಯದ ಬಾಗಿಲು ತೆರೆದು ಹೇಳಿದರು. "ಒಳಗೆ ಬಾ. ಇಲ್ಲಿ ಕನಸುಗಳಿಗೆ ಪ್ರವೇಶ ಶುಲ್ಕ ಇಲ್ಲ."

"ಒಬ್ಬ ಮಹಿಳೆ ತನ್ನ ಜೀವನದ ಕನಸನ್ನುಕಳೆದುಕೊಂಡಳು. ಆದರೆ ಅದೇ ಕನಸನ್ನು ನೂರಾರು ಮಕ್ಕಳ ಹೃದಯದಲ್ಲಿ ಬಿತ್ತಿದಳು. ಆ ಮಕ್ಕಳು ಕೇವಲ ಅಧಿಕಾರಿಗಳಾಗಲಿಲ್ಲ; ನ್ಯಾಯ, ಕರುಣೆ ಮತ್ತು ಶಿಕ್ಷಣದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ನಾಗರಿಕರಾದರು. ಅದೇ ಆದ್ಯಾಳ ನಿಜವಾದ ವಿಜಯ