ಕಾಮ್ರೆಡ್ ಅಡ್ಡೂರು ಶಿವಶಂಕರ ರಾಯರು ನನ್ನ ಆಪ್ತ ಮಿತ್ರ. ರಾಜಕೀಯವಾಗಿ ಜೊತೆಗೂಡಿ ನಡೆದ ಸಂಗಾತಿ.

ಇಂದೀಗ ನಾವಿಬ್ಬರೂ ವೃದ್ಧರಾಗಿದ್ದೇವೆ. ನಮ್ಮ ನಿರೀಕ್ಷೆಗಳಿಗೆ, ಆಕಾಂಕ್ಷೆಗಳಿಗೆ ಅನುಸಾರವಾಗಿ ಮೊದಲಿನಂತೆ ರಾಜಕೀಯದಲ್ಲಿ ಶ್ರಮಿಸಲು ನಮ್ಮ ದೇಹಗಳು ಅಸಮರ್ಥವಾಗಿವೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇದೆ, ಕಾಲಾವಧಿ ಇದೆ ಎಂಬ ಸತ್ಯದ ಗ್ರಹಿಕೆಗಳಿಂದ ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತಿದ್ದೇವೆ.

1941ರಲ್ಲಿ ನನ್ನ ಹುಟ್ಟೂರಾದ ಕೊಡಗಿನಿಂದ ಕಾಲೇಜು ವಿದ್ಯಾಭ್ಯಾಸಕ್ಕಾಗಿ ನಾನು ಮಂಗಳೂರಿಗೆ ಬಂದೆ. ಅಂದೇ ನನ್ನಲ್ಲಿ ರಾಜಕೀಯವಾಗಿ ಅಲ್ಪ ಚಿಂತನೆ ಇತ್ತು. 1971ರಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿ, ಅನಂತರ ಅಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ ಬದಲಾವಣೆಗಳು ನನ್ನಲ್ಲಿ ಒಂದು ರೀತಿಯ ಉದ್ವೇಗವನ್ನು ಉಂಟುಮಾಡಿತು. ಸೋಶಿಯಲ್ ಯೂನಿಯನ್‌ನ ಸಮಾಜದಲ್ಲಿ ಜನರು ತೃಪ್ತಿಯಿಂದ ಜೀವಿಸುವುದಾದರೆ, ನಮ್ಮ ದೇಶದಲ್ಲಿಯೂ ಅಂತಹ ಸಮಾಜ ಕ್ರಮದ ಅಸ್ತಿತ್ವಕ್ಕಾಗಿ ನಾವು ಏಕೆ ಹೋರಾಟ ಮಾಡಬಾರದು ಎಂಬ ಭಾವನೆಯು ಮನಸ್ಸನ್ನು ಚಂಚಲಿಸುತ್ತಿತ್ತು. ಆದರೆ ಮಾರ್ಕಿಸ್ಟ್ ತತ್ವದ ಆಧಾರದಲ್ಲಿ ಈ ಕ್ರಾಂತಿ ನಡೆಯಿತು ಮತ್ತು ಆ ತತ್ವವನ್ನು ಕೃತಿಗಿಳಿಸಿದ ಕಾರಣ ಸೋವಿಯತ್ ಯೂನಿಯನ್‌ನ ಜನತೆಗೆ ಪರಿಹಾರ ದೊರೆಯಿತು ಎಂಬ ತಾತ್ವಿಕ ವಿಚಾರಗಳ ಕುರಿತು ನನಗೆ ತಿಳಿದಿರಲಿಲ್ಲ.

ಆಗ ಮಂಗಳೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್‌ನಿನ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದ್ದವು. ಆ ಕಾರ್ಯಗಳಲ್ಲಿ ಕಾಮ್ರೆಡ್ ಬಿ.ವಿ.ಕಕ್ಕಿಲ್ಲಾಯ, ಕಾಮ್ರೆಡ್ ಹರಿದಾಸ್ ಆಚಾರ್, ಕಾಮ್ರೆಡ್ ಶಿವಶಂರ ರಾವ್ ಮೊದಲಾದವರು ಮುಖ್ಯ ಕಾರ್ಯಕರ್ತರಾಗಿದ್ದರು. ನನ್ನ ಭಾವ ಎಸ್.ಎಸ್.ಗಣೇಶ ಎಂಬವರೂ ಆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಓರ್ವ ವಿದ್ಯಾರ್ಥಿಯಾಗಿದ್ದರು. ನನ್ನ ಮನಸ್ಸಿನಲ್ಲಿದ್ದ ಭಾವನೆಗಳು ನನ್ನನ್ನು ಆ ಮಹಾನುಭಾವರೊಡನೆ ಒಡನಾಟಕ್ಕೆ ಪ್ರೇರೇಪಿಸಿದುವು.

ನಮ್ಮ ರಾಷ್ಟ್ರದಲ್ಲೂ ಒಂದು ಸಮಾಜವಾದದ ಸಮಾಜವನ್ನು ಸ್ಥಾಪಿಸಲು ಅನುವಾಗುವುದೇ ಈ ವಿದ್ಯಾರ್ಥಿ ಫೆಡರೇಶನ್‌ನ ಮುಖ್ಯ ಉದ್ದೇಶವೆಂಬುದನ್ನು ನಾನು ಮನನ ಮಾಡಿಕೊಂಡೆ. ಇದಕ್ಕಾಗಿ ಮಾರ್ಕಿಸ್ಟ್ ತತ್ವವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಅಗತ್ಯವೆನಿಸಿತ್ತು. ಈ ತಿಳುವಳಿಕೆ ನನ್ನಲ್ಲಿ ಉಂಟುಮಾಡಿದವರು ಶಿವಶಂಕರರಾಯರು. ಅವರು ಮೊದಲಿಗೆ ಮೇಕ್ಸಿಂ ಗೋರ್ಕಿಯ “ಮದರ್” ಎಂಬ ಪುಸ್ತಕವನ್ನು ಓದಲುಕೊಟ್ಟರು. ನಂತರ ಅಪ್‌ಟಾನ್‌ಸಿಂಕ್ಲೇಯರ್ ಬರೆದ “ಆಯಿಲ್” ಎಂಬ ಇನ್ನೊಂದು ಪುಸ್ತಕವನ್ನು ಕೊಟ್ಟರು. ಬಂಡವಾಳಶಾಹಿ ಸಮಾಜದಲ್ಲಿ ಸಮಾಜದ ಬಹುತೇಕ ಜನರ ಶೋಷಣೆಗಳು ಹೇಗೆ ನಡೆಯುತ್ತವೆ ಎಂಬುದು ಈ ಎರಡು ಪುಸ್ತಕಗಳ ಓದುವಿಕೆಯಿಂದ ನನಗೆ ಸ್ಪಷ್ಟವಾಯಿತು. ಅನಂತರ ಕಮ್ಯೂನಿಸ್ಟ್ ಪಕ್ಷದ ಪ್ರಣಾಳಿಕೆ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ” ಎಂಬ ಪುಸ್ತಕವನ್ನು ಓದಲು ಹೇಳಿದರು. ಇದರಿಂದ ಕಮ್ಯೂನಿಸ್ಟ್ ಪಕ್ಷದ ತತ್ವ, ಗೊತ್ತುಗುರಿ, ಉದ್ದೇಶಗಳನ್ನು ನಾನು ತಿಳಿದುಕೊಂಡೆ. ನಂತರ ನಾನು ಭೌತಿಕ ದ್ವಂದ್ವಮಾನ, ಚಾರಿತ್ರಿಕ ದ್ವಂದ್ವಮಾನ ಇವೇ ಮುಂತಾದ ಪುಸ್ತಕಗಳನ್ನು ಓದಿದೆ. ಇವೆಲ್ಲದಕ್ಕೂ ದೀಪವನ್ನು ಹಿಡಿದು ದಾರಿ ತೋರಿಸಿದವರು ಶಿವಶಂಕರ ರಾಯರು. ಅವರಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಮಾತ್ರವಲ್ಲ ಆ ಕುರಿತ ಪುಸ್ತಕಗಳು ಅವರಲ್ಲಿ ಸಾಕಷ್ಟಿತ್ತು.

ಆಗ ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಪ್ರತಿಬಂಧಕಾಜ್ಞೆ ಇದ್ದ ಕಾರಣ ಪಕ್ಷದ ಕುರಿತು ಬಹಿರಂಗವಾಗಿ ಚರ್ಚಿಸುವುದು, ಪಕ್ಷಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳುವುದು ಅಥವಾ ಬಹಿರಂಗವಾಗಿ ಓದುವುದು ಸಾಧ್ಯವಿರಲಿಲ್ಲ. ಈ ಆಜ್ಞೆಯನ್ನು ಅಂದಿನ ಬ್ರಿಟಿಷ್ ಸರಕಾರವು 1942ರಲ್ಲಿ ರದ್ದು ಮಾಡಿತು. ಅನಂತರ ಪಕ್ಷವು ಬಹಿರಂಗವಾಗಿ ಚಟುವಟಿಕೆಗಳನ್ನು ಪ್ರಾರಂಭಮಾಡಿ, ಮುಂಬೈಯಿ೦ದ “ಪೀಪಲ್ಸ್ ವಾರ್” ಎಂಬ ವಾರಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿತು. ಈ ಪತ್ರಿಕೆಯನ್ನು ವಿವಿಧ ವಕೀಲರು, ಡಾಕ್ಟರುಗಳು, ಇಂಗ್ಲೀಷ್ ವಿದ್ಯಾಭ್ಯಾಸವಿದ್ದವರ ಕಚೇರಿ, ಕ್ಲಿನಿಕ್ ಅಥವಾ ಮನೆಗಳಿಗೆ ಹೋಗಿ ಮಾರಾಟ ಮಾಡುವ ಮೂಲಕ ಪಕ್ಷದ ಕೆಲಸವು ಚುರುಕಾಯಿತು. ನನ್ನೊಡನೆ ಈ ಕೆಲಸದಲ್ಲಿ ಸಹಕರಿಸಿದವರಲ್ಲಿ ಸಂಪತ್ತಿಲ ಕೃಷ್ಣ ಭಟ್ಟರೆಂಬವರು ಪ್ರಮುಖರಾದವರು. ಅವರು ಕೂಡಾ ಶಿವಶಂಕರ ರಾಯರಂತೆ ಶ್ರೀಮಂತ ಕುಟುಂಬದಿಂದ ಬಂದವರು. ನಮ್ಮ ಈ ಕೂಟಕ್ಕೆ ಶಿವಶಂಕರಾಯರು ಮುಂದಾಳು. ನಮ್ಮ ಉತ್ಸಾಹ, ಸಾಹಸವನ್ನು ನೋಡಿದ ಅನೇಕರು ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಿದ್ದರು. ಓದುತ್ತಿದ್ದರೋ, ಇಲ್ಲವೋ ಎಂಬುದು ಬೇರೆ ಸಂಗತಿ.

1949ರಲ್ಲಿ ಕರ್ನಾಟಕ ಕಮ್ಯೂನಿಸ್ಟ್ ಪಕ್ಷದ ವತಿಯಿಂದ “ಜನಶಕ್ತಿ” ಎಂಬ ಪತ್ರಿಕೆಯ ಪ್ರಕಟಣೆ ಆರಂಭವಾಯಿತು. ಆದರೆ ಕೆಲವೇ ತಿಂಗಳುಗಳಲ್ಲಿ ಅಂದಿನ ಮುಂಬೈ ಸರಕಾರವು ಅದನ್ನು ನಿಷೇಧಿಸಿತು. ಕಾ. ಸದಾಶಿವ ಅದರ ಸಂಚಾಲಕರು (ಇವರೂ ಮಂಗಳೂರಿನವರು. ಅವರ ಅಕ್ಕ ಸುಂದರಿ ಎಂಬವರು ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ನಿವೃತ್ತಿ ಹೊಂದಿ, ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ.) ನಂತರ ಪಕ್ಷದ ವತಿಯಿಂದ ಬೇರೆ ಹೆಸರಿನಲ್ಲಿ ಪತ್ರಿಕೆಯನ್ನು ಹೊರಡಿಸುವ ವ್ಯವಸ್ಥೆ ಮಾಡಲು ನಾನು ಹುಬ್ಬಳ್ಳಿಗೆ ಹೋಗಬೇಕಾಯಿತು. ಅಂದಿನ ಮುಖಂಡರು ಭೂಗತರಾಗಿ ಅಡಗಿಕೊಂಡಿರಬೇಕಾಗಿತ್ತು. ಅವರ ಅಡಗುದಾಣಕ್ಕೆ “ಡೆನ್” ಎ೦ದು ಕರೆಯಲಾಗುತ್ತಿತ್ತು.

ನಾನು ಹುಬ್ಬಳ್ಳಿಗೆ ತಲುಪಿದ ಮರುದಿನವೇ ಆ ಮುಖಂಡರನ್ನು ಭೇಟಿಯಾಗಲು ಆ “ಡೆನ್”ಗೆ ಹೋಗಬೇಕಾಗಿತ್ತು. ಅವರನ್ನು ಭೇಟಿ ಮಾಡಲು ರಾತ್ರಿ ಮಾತ್ರ ಸಾಧ್ಯ. ಹಗಲು ಹೋಗುವುದೆಂದರೆ ಪೋಲೀಸರಿಗೆ ಸುಳಿವು ಕೊಟ್ಟಂತೆ. ಹಾಗೆ ರಾತ್ರಿ ಈ “ಡೆನ್”ಗೆ ನನ್ನನ್ನು ಓರ್ವ ಸಂಗಾತಿ ಕರೆದುಕೊಂಡು ಹೋದರು. “ಡೆನ್”ನ ಹತ್ತಿರದಲ್ಲಿ ನಿಂತಿದ್ದ ಓರ್ವ ಜುಟ್ಟು ಇದ್ದ ವೈದಿಕ ಬ್ರಾಹ್ಮಣ ವ್ಯಕ್ತಿ ನಮ್ಮನ್ನು ಭೇಟಿಯಾದರು. “ಡೆನ್”ನೊಳಗೆ ಸುತ್ತಿ ಹೋಗುವ ದಾರಿಯ ಮೂಲಕ ಈ ವ್ಯಕ್ತಿ ನಮ್ಮನ್ನು ಕರೆದೊಯ್ದರು. ಒಳ ಹೋದ ನಂತರವೇ ಈ ವ್ಯಕ್ತಿ ಶಿವಶಂಕರಾಯರು ಎಂದು ನನಗೆ ತಿಳಿಯಿತು!

ಪತ್ರಿಕೆಯನ್ನು ಮುಂದುವರಿಸಲು ಸರಕಾರವು ಅವಕಾಶ ನೀಡದಿದ್ದ ಕಾರಣ ನಾನು ಮಂಗಳೂರಿಗೆ ಹಿಂತಿರುಗಿ ಬಂದೆ. ಆಮೇಲೆ ಕೆಲವು ವರುಷಗಳ ತನಕ ನನಗೂ ಶಿವಶಂಕರಾಯರಿಗೂ ಪರಸ್ಪರ ಭೇಟಿಯಾಗುವ ಅವಕಾಶ ದೊರೆಯಲಿಲ್ಲ. ಅವರು ಹುಬ್ಬಳ್ಳಿಯಿಂದ ದಾವಣಗೆರೆ, ಭದ್ರಾವತಿ ಇವೇ ಮೊದಲಾದ ಸ್ಥಳಗಳಿಗೆ ಹೋಗಿ ಪಕ್ಷದ ಕೆಲಸದಲ್ಲಿ ತನ್ನ ಬಾಳ್ವೆಯನ್ನು ಸವೆಸಿದರು. ಆ ಅವಧಿಯಲ್ಲಿ ಅವರು ಪಟ್ಟ ಕಷ್ಟ ಸಂಕಷ್ಟಗಳನ್ನು ನಾನು ಗುರುತಿಸಿ ಬರೆಯುವ ಅವಶ್ಯಕತೆಯಿಲ್ಲ. ಅವರ ಜೀವನ ಚರಿತ್ರೆಯಿಂದ ಇವುಗಳೆಲ್ಲವನ್ನು ಗುರುತಿಸಬಹುದಾಗಿದೆ.

ನಂತರ ಅವರು ಮಂಗಳೂರಿಗೆ ಬಂದರು. ಇಷ್ಟರಲ್ಲಿ ಅವರು ಕೈಗೊಂಡ ಮಹತ್ವವಾದ ಕೆಲಸವೆಂದರೆ ಅವರ ಅಣ್ಣ ಡಾ.ಸುಬ್ಬರಾವ್ ಅವರನ್ನು ಕಮ್ಯೂನಿಸ್ಟ್ ಪಕ್ಷದೊಳಕ್ಕೆ ಸೆಳೆದದ್ದು. ಡಾ.ಸುಬ್ಬರಾವ್ ಅವರು ರಾಜ್ಯಸಭೆಯ ಸದಸ್ಯರಾದರು. ಅನಂತರ ಕೇರಳ ಸರಕಾರದಲ್ಲಿ ಮಂತ್ರಿಯಾದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಡಾ.ಸುಬ್ಬರಾವ್ ಅವರು ಓರ್ವ ಆದರ್ಶ ಕಮ್ಯೂನಿಸ್ಟ್. ಕಮ್ಯೂನಿಸ್ಟ್ ತತ್ವವನ್ನು ತಮ್ಮ ನಿತ್ಯ ಜೀವನದಲ್ಲಿಯೂ ಸಾಧಿಸಿದವರು. ಶ್ರೀಮಂತರಲ್ಲಿ ಸ್ವಾಭಾವಿಕವಾಗಿ ಇರುವ ಯಾವ ಅವಗುಣವೂ ಅವರಲ್ಲಿ ಕಂಡುಬರುತ್ತಿರಲಿಲ್ಲ. ಅವರಿಗೆ ನಾನು ಯಾವಾಗಲೂ ತಲೆಬಾಗುತ್ತಿದ್ದೆ. ನನ್ನಲ್ಲಿ ಅವರಿಗೂ ವಿಶ್ವಾಸವಿತ್ತು. ನಾನು ಬರೆದ ಲೇಖನಗಳನ್ನು ಅವರು ಓದದೆ ಬಿಡುತ್ತಿರಲಿಲ್ಲ. ಮಂಗಳೂರಿಗೆ ಮರಳಿದ ಶಿವಶಂಕರ ರಾಯರು ಕೆಲವು ವರುಷಗಳ ಕಾಲ ಪೂರ್ಣಕಾಲಿಕ ಕಾರ್ಯಕರ್ತನಾಗಿ ಪಕ್ಷದ ಕೆಲಸದಲ್ಲಿ ನಿರತರಾಗಿದ್ದರು.

ನಂತರ ಅವರ ಪಾಲಿಗೆ ಬಂದ ಆಸ್ತಿಯನ್ನು ಅವರೇ ನೋಡಿಕೊಳ್ಳುವ ಅನಿವಾರ್ಯತೆ ಬಂದೊದಗಿದ ಕಾರಣ, ಅವರು ಕೃಷಿರಂಗದಲ್ಲಿ ಸಕ್ರಿಯರಾದರು. ಈ ರಂಗದಲ್ಲಿ ಅವರು ಓರ್ವ ಪ್ರಗತಿಶೀಲ ವ್ಯವಸಾಯಗಾರರಾದರು. ಕೃಷಿಯ ಕುರಿತು ವೈಜ್ಞಾನಿಕ ಪುಸ್ತಕಗಳನ್ನು ಅಭ್ಯಾಸ ಮಾಡಿ ಹಲವು ರೈತರಿಗೆ ಸಲಹೆಗಾರರಾದರು. ಇಂದಿಗೂ ರೈತರ ಕುರಿತು ಸಭೆ, ವಿಚಾರ ವಿನಿಮಯಗಳು ನಡೆಯುವ ಸಂದರ್ಭಗಳಲ್ಲಿ ಅವರಿಗೆ ಕರೆ ಬಂದೇ ಬರುತ್ತದೆ.

“ಗುಣಕ್ಕೆ ಮತ್ಸರವಿಲ್ಲ” ಎಂಬ ನಿರಂತರ ಸತ್ಯವನ್ನು ಅಭಿವ್ಯಕ್ತಿಗೊಳಿಸುವ ಶಿವಶಂಕರರಾಯರನ್ನು ಸರ್ವಸಾಮಾನ್ಯವಾಗಿ ಎಲ್ಲರೂ ಗೌರವಿಸುತ್ತಾರೆ. ಎಂತಹ ದೊಡ್ಡ ಮನುಷ್ಯನೇ ಆಗಲಿ, ಅಂತಹವರ ಒಂದು ದುರ್ಗುಣ ಅಂದರೆ ಇನ್ನೊಬ್ಬರ ಕುರಿತು ಮತ್ಸರ ತಾಳುವುದು. ಅದನ್ನು ತ್ಯಜಿಸಬೇಕಾದರೆ ಆತನಲ್ಲಿ ಸೂಕ್ತವಾದ ಸಂಸ್ಕೃತಿ, ಆದರ್ಶ ನಡೆನುಡಿಗಳು ಅಗತ್ಯ. ಶಿವಶಂಕರರಾಯರಲ್ಲಿ ಯಾವ ದುರ್ಗುಣಗಳೂ ಇರಲಿಲ್ಲ.

ಇಂತಹ ಓರ್ವ ಉದಾತ್ತ , ತುಂಬು ಹೃದಯದ ವ್ಯಕ್ತಿಯಾದ ಕಾ. ಶಿವಶಂಕರ ರಾಯರು ಪರರಿಗಾಗಿ ತನ್ನ ಜೀವನದ ಕಥೆಯನ್ನು ಬರೆದ ಪುಸ್ತಕದಲ್ಲಿ ನನ್ನೊದೊಂದು ಲೇಖನ ಪ್ರಕಟಣೆಗೆ ಅವಕಾಶ ಮಾಡಿಕೊಟ್ಟದ್ದಕ್ಕೆ ಅವರಿಗೆ ನಾನು ಚಿರ‌ಋಣಿಯಾಗಿದ್ದೇನೆ.

ನನ್ನ ಪತ್ನಿ ಸಂಸ್ಕೃತಿಯೊಡನೆ ಇಂಗ್ಲೀಷ್ ಸಾಹಿತ್ಯದ ಕುರಿತು ಚರ್ಚೆ ನಡೆಸುವುದು ಅವರಿಗೆ ರೂಢಿಯಾಗಿತ್ತು. ಓದುವಿಕೆಯೇ ಅವರ ಬಾಳಿನ ಒಂದು ಸಾಧನೆಯಾಗಿರುವುದೇ ಇದಕ್ಕೆ ಕಾರಣ. ಅವರ ಸಂಪರ್ಕದಿಂದ ನಾವು ಅನೇಕ ಸುಗುಣಗಳನ್ನು ಗಳಿಸಿಕೊಂಡಿದ್ದೇವೆ. ಅವರ ಪ್ರೀತಿ ವಾತ್ಸಲ್ಯಗಳು ನಮ್ಮಲ್ಲೂ ಮೈಗೂಡಿಕೊ೦ಡಿವೆ.

ಶಿವಶಂಕರಾಯರು ಓರ್ವ ಸರಳಜೀವಿ. ಅಹಂಭಾವ, ಅಹಂಕಾರದ ಸುಳಿವೇ ಅವರಲ್ಲಿಲ್ಲ. ಅವರು ಎಂದಿಗೂ ಮೊದಲಿಗೆ ಹೋಗಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಸ್ವಭಾವದವರಲ್ಲ. ಅಂತೆಯೇ ಅವರು ಮುಖಂಡತ್ವಕ್ಕೆ, ಹಾಗೆಯೇ ಅದರ ಪ್ರತಿಷ್ಠೆಗೆ ಹಂಬಲಿಸಿದವರಲ್ಲ

ಈ ಎಲ್ಲಾ ಆದರ್ಶ ಗುಣಗಳಿಂದ ಮೈತುಂಬಿಕೊಂಡ ಶಿವಶಂಕರಾಯರಿಗೆ ನಮ್ಮ ಮನಪೂರ್ವಕ ಅಭಿನಂದನೆಗಳು.

ಫೋಟೋ: ನಾರಾಯಣ ಮೂರ್ತಿ ಜೊತೆ ಅಡ್ಡೂರು ಶಿವಶಂಕರ ರಾಯರು

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್