ನನ್ನ ದೊಡ್ಡಣ್ಣ ಡಾ. ಎ.ತಿಮ್ಮಪ್ಪಯ್ಯನದು ಎಲ್ಲೇ ಆಗಲಿ ಎದ್ದು ಕಾಣುವ ವ್ಯಕ್ತಿತ್ವ. ಬದುಕಿನಲ್ಲಿಯೂ ಎದ್ದು ಕಾಣುವ ಹತ್ತುಹಲವು ಸಾಧನೆಗಳು ಅವರದು. ನಮ್ಮ ಮನೆಯ ಹಿರಿಯಣ್ಣ, ತಾನು ವಹಿಸಿಕೊಂಡ ಹುದ್ದೆಗಳಲ್ಲಿಯೂ ಹಿರಿಯಣ್ಣನಂತಹ ಛಾಪು ಮೂಡಿಸಿದವರು.

ಮದರಾಸು ಪ್ರಾಂತ್ಯದ ಭಾಗವಾಗಿದ್ದ, ಈಗ ಆಂಧ್ರಕ್ಕೆ ಸೇರಿದ ಪಾಲಕೊಂಡಾದಲ್ಲಿ 1917ರಲ್ಲಿ ಜನಿಸಿದ ಡಾ.ತಿಮ್ಮಪ್ಪಯ್ಯರ ಫ್ರೌಢ ಶಾಲೆಯ ಕಲಿಕೆ ತಂಜಾವೂರಿನಲ್ಲಿ ಆಯಿತು. ಅನಂತರ ಮದರಾಸಿನ ಲೋಯೆಲಾ ಕಾಲೇಜಿಗೆ ಮನೆಯಿಂದ ಪ್ರತಿದಿನ (ಸುಮಾರು ಹನ್ನೆರಡು ಮೈಲಿಗಳ ಅಂತರ) ಸೈಕಲ್ಲಿನಲ್ಲಿ ಹೋಗಿಬಂದು ಕಾಲೇಜು ಶಿಕ್ಷಣ ಪಡೆದರು. ಅದಾದ ಬಳಿಕ ಮದರಾಸಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು.

ನನ್ನ ಅಣ್ಣ ವೈದ್ಯಕೀಯ ಶಿಕ್ಷಣದ ಕೊನೆಯ ವರುಷದ ಪರೀಕ್ಷೆಯ ಸಿದ್ಢತೆಯಲ್ಲಿದ್ದ. ಆಗ ಮದರಾಸಿನ ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಶರೀರಶಾಸ್ತ್ರ (ಅನಾಟಮಿ) ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ನಮ್ಮ ತಂದೆ ಡಾ. ಅಡ್ಡೂರು ಕೃಷ್ಣಯ್ಯ ಅವರು ಹೃದಯ ರೋಗದಿಂದ ನಿಧನರಾದರು. ತಂದೆಯವರ ಸಾವಿನ ಆಘಾತದಿಂದಾಗಿ ಓದಿಗೆ ತೊಂದರೆಯಾಗಿ ದೊಡ್ಡಣ್ಣ ಪರೀಕ್ಷೆಯಲ್ಲಿ ಪಾಸಾಗಲಿಕ್ಕಿಲ್ಲ ಎಂದು ಹಲವರು ಭಾವಿಸಿದ್ದರು. ಆದರೆ ದೊಡ್ದಣ್ಣ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು.

ಹೌಸ್ ಸರ್ಜನ್ ಮುಗಿಸಿ ದೊಡ್ಡಣ್ಣ ಮುಂದಿನ ವೃತ್ತಿ ಜೀವನದ ಬಗ್ಗೆ ಯೋಚಿಸಿದರು. ತನ್ನ ತಂದೆಯವರ ಉಳಿತಾಯದ ಹೆಚ್ಚಿನಂಶವನ್ನು ವೆಚ್ಚ ಮಾಡಿ ವೈದ್ಯಕೀಯ ಚಿಕಿತ್ಸಾಲಯ ಆರಂಭಿಸಲು ಅವರು ಸಿದ್ಢರಿರಲಿಲ್ಲ. ಯಾಕೆಂದರೆ ಹಾಗೆ ಮಾಡಿದರೆ ತನ್ನ ತಮ್ಮ-ತಂಗಿಯರ ಭವಿಷ್ಯಕ್ಕೆ ತೊಂದರೆ ಆದೀತು ಎಂಬ ಆತಂಕ ಅವರಿಗಿತ್ತು. ಆದ್ದರಿಂದ ಸೈನ್ಯಕ್ಕೆ ಸೇರಿದರು. ಸೈನ್ಯದ ಸೇವೆಯಲ್ಲಿ ಹೆಚ್ಚಿನ ಅವಧಿಯನ್ನು ಪರ್ಷಿಯಾ (ಈಗಿನ ಇರಾನ್) ಮುಂತಾದ ಮಧ್ಯ ಏಷ್ಯಾ ಪ್ರದೇಶಗಳಲ್ಲಿ ಕಳೆದರು. ಅವರು ಅಲ್ಲಿಂದ ನಮ್ಮ ತಾಯಿಗೆ ಪ್ರತೀ ತಿಂಗಳೂ ನೂರು ರೂಪಾಯಿ ಕಳುಹಿಸುತ್ತಿದ್ದರು. ಅದನ್ನು ಖರ್ಚು ಮಾಡದೆ ಹಾಗೆಯೇ ಉಳಿಸಿ, ದೊಡ್ಡಣ್ಣ ಸೈನ್ಯದ ಸೇವೆ ಮುಗಿಸಿ ಹಿಂತಿರುಗಿದಾಗ ಆ ಹಣವನ್ನು ತಾಯಿ ಅವರ ಕೈಗಿತ್ತರು. ಆಗ ದೊಡ್ಡಣ್ಣನಿಗೆ ದೊಡ್ಡ ಅಚ್ಚರಿ.

ಎರಡನೇ ಮಹಾಯುದ್ಢ ಮುಗಿದ ನಂತರ, ಅವರು ಸೈನ್ಯದಿಂದ ನಿವೃತ್ತಿ ಆದರು. ಬಳಿಕ ಸರಕಾರದ ಉದ್ಯೋಗಕ್ಕೆ ಸೇರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ನೇಮಕವಾದರು. ಹಲವು ದಶಕಗಳ ಮುಂಚೆ ನನ್ನ ತಂದೆಯವರೂ ಸರಕಾರಿ ಕೆಲಸಕ್ಕೆ ಮೊದಲ ಬಾರಿ ನೇಮಕವಾದದ್ದು ಹೊಸಪೇಟೆಯಲ್ಲೇ. ಅಲ್ಲಿ ನನ್ನ ತಂದೆಯವರ ಪರಿಚಯವಿದ್ದ ಕೆಲವರು ದೊಡ್ಡಣ್ಣನಿಗೆ ಆತ್ಮೀಯರಾದರು.

ಹೈದರಾಬಾದ್ ವಿಮೋಚನಾ ಹೋರಾಟ 1948ರಲ್ಲಿ ಆರಂಭವಾದಾಗ ಸೈನ್ಯಕ್ಕೆ ವೈದ್ಯಕೀಯ ಸೇವೆ ನೀಡಲು ದೊಡ್ಡಣ್ಣನನ್ನು ಕರೆಯಲಾಯಿತು. ಆ ಸಮಯದಲ್ಲಿ ತುಂಗಭದ್ರಾ ನದಿಯಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಆಗುತಿತ್ತು. ಹೊಳೆಯ ಆಚೆ ಬದಿಯ ಮುನಿರಾಬಾದ್ ಗುಡ್ಡಗಳಲ್ಲಿ ಹೈದರಾಬಾದಿನ ನಿಜಾಮನಿಗೆ ನಿಷ್ಠರಾದ ರಜಾಕಾರರು ಜಮಾಯಿಸಿದ್ದರು. ಅವರು ನದಿ ದಾಟಿ ಧಾಳಿ ಮಾಡುವ ಸಂಭವವಿತ್ತು. ಆಗ ನಮ್ಮ ಸೈನ್ಯದ ಕೆಲವು ತುಕಡಿಗಳು ಮುಂದೆ ಸಾಗಿದವು. ಆದರೆ ಹೋರಾಟದಲ್ಲಿ ಹಿನ್ನಡೆಯಾಯಿತು. ಆಗ ಗಾಯಗೊಂಡ ಸೈನಿಕರಿಗೆ ರಾತ್ರಿ ಹಗಲೆನ್ನದೆ ಶುಶ್ರೂಷೆ ಮಾಡಿ, ಅವರನ್ನು ಯುದ್ಢರಂಗಕ್ಕೆ ಮರಳಿ ಕಳುಹಿಸುವಲ್ಲಿ ದೊಡ್ಡಣ್ಣ ತಲ್ಲೀನನಾಗಿದ್ದರು. ಈ ರೀತಿ ಸೈನಿಕರ ಪುನರಾಗಮನವನ್ನು ಕಂಡು ನದಿಯ ಆಚೆ ದಡದಲ್ಲಿ ಕಾಯುತ್ತಿದ್ದ ರಜಾಕಾರರು ಹೊಸ ತುಕಡಿಗಳು ಬರುತ್ತಿವೆಯೆಂದು ಶಂಕಿಸಿ ನದಿ ದಾಟಿ ಧಾಳಿ ಮಾಡಲು ಹೆದರಿದರು.

ಆ ಸಂದರ್ಭದಲ್ಲಿ ಹೊಸಪೇಟೆಯ ಶ್ರೀಮಂತರೆಲ್ಲರೂ ರಜಾಕಾರರ ಭಯದಿಂದಾಗಿ ಊರು ಬಿಟ್ಟು ಹೋಗಲು ತಯಾರಾಗಿದ್ದರು. ಅವರು ಅಣ್ಣನನ್ನು ಆಗಾಗ ಸಂಪರ್ಕಿಸಿ ಪರಿಸ್ಥಿತಿ ಹೇಗಿದೆಯೆಂದು ಕೇಳುತ್ತಿದ್ದರು. ಅವರು ನನ್ನ ಅತ್ತಿಗೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಸೂಚಿಸಿದರು. ಆದರೆ ನನ್ನ ಅಣ್ಣ ಅವರಿಗೆಲ್ಲ ಧೈರ್ಯ ತುಂಬಿ ಕಾಯಲು ಹೇಳಿದರು. ಆಗ ಪರಿಸ್ಥಿತಿ ಬಹಳ ನಾಜೂಕಾಗಿತ್ತು. ಹಾಗೆ ಅವರೆಲ್ಲ ಊರು ಬಿಟ್ಟು ಪಲಾಯನ ಮಾಡುತ್ತಿದ್ದರೆ ರಜಾಕಾರರು ಮುನ್ನುಗ್ಗಿ ಬಂದು ಅನಾಹುತವಾಗುವ ಸಂಭವವಿತ್ತು. ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಮಲಬಾರ್ ಪೊಲೀಸ್ ಪಡೆಯ ತುಕಡಿ ಆಗಮಿಸಿದ್ದರಿಂದ ಪರಿಸ್ಥಿತಿ ಸುಧಾರಿಸಿತು. ಮಾರನೇ ದಿನ ರಜಾಕಾರರು ಶರಣಾದರು. ಆಗ ಅಲ್ಲಿ ಸೈನಿಕ ಕಾರ್ಯಾಚರಣೆಯ ನೇತೃತ್ವ ವಹಿಸಿದ ಬ್ರಿಗೇಡಿಯರ್ ಭಾಲ್ ಮತ್ತು ಲೆ.ಕ.ಚೆಂಗಪ್ಪ ಅಣ್ಣನನ್ನು ಬಹಳ ಪ್ರಶಂಸಿಸಿದರು. ಮುನಿರಾಬಾದ್‌ನಲ್ಲಿ ಸೈನಿಕ ಕಾರ್ಯಾಚರಣೆ ನಡೆದ ಸ್ಥಳಗಳಿಗೆಲ್ಲ ಅವರು ಅಣ್ಣನನ್ನು ಕರೆದುಕೊಂಡು ಹೋಗಿದ್ದರು.

ಆ ಕಾರ್ಯಾಚರಣೆಯಲ್ಲಿ ದೊಡ್ಡಣ್ಣ ಶೃದ್ಢೆಯಿಂದ ಕೆಲಸ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಅನಂತರ ಬಳ್ಳಾರಿ ಮತ್ತು ಊಟಿಗಳಲ್ಲಿಯೂ ಅಣ್ಣನ ಉತ್ತಮ ಸೇವೆಯನ್ನು ಮನಗಂಡ ಆರೋಗ್ಯ ಸಚಿವ ಎ.ಬಿ. ಶೆಟ್ಟಿಯವರು ಭಾಷಾವಾರು ಪ್ರಾಂತ್ಯ ರಚನಾ ವೇಳೆಗೆ ಕರ್ನಾಟಕ ಸರಕಾರದ ಸೇವೆಗೆ ಅಣ್ಣನನ್ನು ಕರೆಯಿಸಿ ಮಂಗಳೂರಿನ ಡಿ.ಎಂ.ಒ. ಆಗಿ ನೇಮಿಸಿದರು. ಹಾಗಾಗಿ, 1956ರಲ್ಲಿ ಮಂಗಳೂರಿನ ಜಿಲ್ಲಾ ವೈದ್ಯಾಧಿಕಾರಿಯಾಗಿ ದೊಡ್ಡಣ್ಣ ಡಾ.ತಿಮ್ಮಪ್ಪಯ್ಯ ಅಧಿಕಾರ ವಹಿಕೊಂಡರು.

ಅದೇ ಸಮಯದಲ್ಲಿ ಮಣಿಪಾಲದ ಪೈಗಳು ಮಂಗಳೂರಿನಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಸ್ಥಾಪಿಸಿದ್ದರು. ಆದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಆಸ್ಪತ್ರೆ ಸೌಕರ್ಯ ಇರಲಿಲ್ಲ. ಡಾ.ತಿಮ್ಮಪ್ಪಯ್ಯ ಮಂಗಳೂರಿನ ಸರಕಾರಿ ಆಸ್ಪತ್ರೆಯ ಎರಡು ಹೊರರೋಗಿಗಳ ದಿನಗಳನ್ನು ಮತ್ತು ಎರಡು ಶಸ್ತ್ರಚಿಕಿತ್ಸಾ ದಿನಗಳನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಒದಗಿಸಿ ಸಹಾಯ ಮಾಡಿದರು. ಈ ಕ್ರಮದ ಬಗ್ಗೆ ಕೆಲವರಿಗೆ ಸಮಾಧಾನವಿರಲಿಲ್ಲ. ಅಣ್ಣನ ಆಪ್ತ ಮಿತ್ರರೂ ಮಂಗಳೂರಿನ ಹಿರಿಯ ರಾಜಕೀಯ ಮುತ್ಸದ್ದಿಯೂ ಆದ ಡಾಕ್ಟರರೊಬ್ಬರು ಕೆ.ಎಂ.ಸಿ.ಗೆ ಅಂತಹ ಅನುಕೂಲಗಳನ್ನು ಒದಗಿಸಬಾರದೆಂದು ಕೇಳಿಕೊಂಡರು. ಆದರೆ ಡಾ. ತಿಮ್ಮಪ್ಪಯ್ಯ ತನ್ನ ನಿಲುವನ್ನು ಬದಲಿಸಲಿಲ್ಲ. ಕೆ.ಎಂ.ಸಿ.ಗೆ ಒದಗಿಸಿದ ಆಸ್ಪತ್ರೆಯ ದಿನಗಳನ್ನು ಹಿಂದೆಗೆಯಲು ಸೌಜನ್ಯದಿಂದಲೇ ನಿರಾಕರಿಸಿದರು.

ದೊಡ್ದಣ್ಣ ಮಂಗಳೂರಿನಲ್ಲಿ ಕೆಲಸದಲ್ಲಿದಾಗ ಮುಖ್ಯವಾಗಿ ಡಾ.ಅರಿಗ, ಡಾ.ಶೆಣೈ, ಡಾ.ಲೋಬೋ ಇವರೊಂದಿಗೆ ಸ್ನೇಹಭಾವದಿಂದಿದ್ದರು. ಅವರೂ ವಿಶ್ವಾಸದಿಂದ ಅಣ್ಣನಿಗೆ ಸಹಕಾರ ನೀಡುತ್ತಿದ್ದರು. ನನ್ನ ತಂದೆಯವರ ಕಿರಿಯ ಸಹೋದ್ಯೋಗಿ ಮತ್ತು ಮಿತ್ರರಾಗಿದ್ದ ಕೆ.ಎಂ.ಸಿ.ಯ ಡಾ.ವಲಿಯತ್‌ರವರ ಆಶೀರ್ವಾದ ಅಣ್ಣನಿಗಿತ್ತು. ತನ್ನ ಕೆಲಸದಲ್ಲಿ ಅಣ್ಣನಿಗೆ ಅಖಂಡ ಶೃದ್ಢೆ. ಅದರಿಂದಾಗಿಯೇ ನಡುರಾತ್ರಿ ಹೊತ್ತಿನಲ್ಲಿಯೂ ಅವರು ಅನಿರೀಕ್ಷಿತವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರೆಂದು ಜನರು ಆಡಿಕೊಳ್ಳುತ್ತಿದ್ದರು.

ದೊಡ್ಡಣ್ಣ ಎ.ಡಿ.ಯಂ. ಆಗಿ ಭಡ್ತಿ ಪಡೆದು ಬೆಂಗಳೂರಿಗೆ ಹೋದರು. ಕೆಲವು ಸಮಯದ ನಂತರ ಅವರನ್ನು ಅಮೇರಿಕಾದ ಯು.ಎಸ್.ಎ. ದೇಶಕ್ಕೆ ಉನ್ನತ ಅಧ್ಯಯನಕ್ಕಾಗಿ ಕಳುಹಿದರು. ಅಧ್ಯಯನ ಮುಗಿಸಿ ಮರಳಿದಾಗ ಕೇಂದ್ರ ಸರಕಾರವು ಅಣ್ಣನನ್ನು ನವದೆಹಲಿಯ ಆಸ್ಪತ್ರೆ ಆಡಳಿತದ ರಾಷ್ಟ್ರೀಯ ಸಂಸ್ಥೆಯ (ನ್ಯಾಷನಲ್ ಇನ್-ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮೆನೇಜ್-ಮೆಂಟ್) ಜಂಟಿ ನಿರ್ದೇಶಕರಾಗಿ ನೇಮಿಸಿತು. ನಂತರ ಅವರೇ ಅದರ ನಿರ್ದೇಶಕರಾದರು.

ಕೆಲವು ವರ್ಷಗಳ ಬಳಿಕ ದೊಡ್ಡಣ್ಣ ಆ ಹುದ್ದೆಯಿ೦ದ ನಿವೃತ್ತರಾದರು. ವಿಶ್ರಾಂತ ಜೀವನವನ್ನು ಸಾಧ್ಯವಾದರೆ ಆಡ್ಡೂರಿನಲ್ಲಿಯೇ ಕಳೆಯಬೇಕೆಂಬ ಅಭಿಲಾಷೆ ಅವರಿಗಿತ್ತು. ಆದರೆ ಮಣಿಪಾಲದ ಪೈ ಬಂಧುಗಳು ಅಣ್ಣನನ್ನು ಮಣಿಪಾಲದ ಕೆ.ಎಂ.ಸಿ.ಗೆ ಆಹ್ವಾನಿಸಿದರು. ಅಲ್ಲಿ ಅವರು ವೈದ್ಯಕೀಯ ಸೂಪರಿಂಟೆಂಡೆಂಟ್ ಸ್ಥಾನವನ್ನು ವಹಿಸಿಕೊಂಡರು. ಆ ಜವಾಬ್ದಾರಿಯನ್ನು ಸಮರ್ಥವಾಗಿ ಹಲವು ವರ್ಷ ನಿರ್ವಹಿಸಿದರು. ಮಣಿಪಾಲದಲ್ಲಿದ್ದಾಗ ತನ್ನ ಸಹಧರ್ಮಿಣಿ ಶಾರದಾ ನಿಧನರಾದ ಬಳಿಕ ಅಣ್ಣ ಬಹಳ ಖಿನ್ನರಾಗಿದ್ದು ಏಕಾಂಗಿತನದಿಂದ ಬಳಲಿದ್ದರು. ಯಾಕೆಂದರೆ ಅವರ ಇಬ್ಬರು ಮಗಳಂದಿರು ವಿದೇಶಗಳಲ್ಲಿದ್ದರು (ಒಬ್ಬಾಕೆ ಫಿಲಿಪ್ಪೈನ್ಸ್, ಇನ್ನೊಬ್ಬಾಕೆ ಬ್ರಿಟನ್‌ನಲ್ಲಿ). ಅವರ ಮಗ ಸೇನೆಗೆ ಸೇರಿ ಪೂನಾದಲ್ಲಿ ಇದ್ದ.

ಕೊನೆಗೆ ದೊಡ್ಡಣ್ಣ ತನಗೆ ವಿಶ್ರಾಂತಿ ಬೇಕೆಂದು ಆಗ್ರಹಿಸಿದರು. ಆಗ ಪೈ ಬಂಧುಗಳು ಅವರನ್ನು ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯ ಸಲಹಾ ಸಮಿತಿಯ ಸದಸ್ಯರಾಗಲು ಒಪ್ಪಿಸಿದರು. ಆದರೆ ಅಲ್ಲಿಯೂ ಏಕಾಂಗಿತನ ಅಣ್ಣನನ್ನು ದಣಿಸಿತು. ಅವರು ಒಬ್ಬರೇ ಗಂಗೇನಹಳ್ಳಿಯ ತನ್ನ ಮನೆಯಲ್ಲಿ ಕಾಲ ಕಳೆದರು. ಕೆಲ ಸಮಯದ ನಂತರ ಅವರಿಗೆ ಕ್ಯಾನ್ಸರ್ ತಗಲಿತು. ಅದರ ನೋವು ಅನುಭವಿಸುತ್ತಲೇ ದೊಡ್ಡಣ್ಣ ಕೊನೆಯುಸಿರೆಳೆದರು.

ಡಾ.ತಿಮ್ಮಪ್ಪಯ್ಯನವರದು ದೈತ್ಯ ಕೆಲಸದ ಮತ್ತು ಶಿಸ್ತಿನ ವ್ಯಕ್ತಿತ್ವ. ಅದರಿಂದಾಗಿಯೇ ಜೀವಮಾನದಲ್ಲಿ ತನ್ನ ಸಂಪರ್ಕಕ್ಕೆ ಬಂದ ಎಲ್ಲರಿಂದಲೂ ಅವರು ಅಪಾರ ಗೌರವ ಗಳಿಸಿಕೊಂಡರು.

ದೊಡ್ಡಣ್ಣ ಜೀವನದಲ್ಲಿ ಎತ್ತಿ ಹಿಡಿದ ಉದಾತ್ತ ಮೌಲ್ಯಗಳು ನನ್ನ ಮೇಲೆ ಅತ್ಯಧಿಕ ಪ್ರಭಾವ ಬೀರಿವೆ. ತನ್ನ ಜೀವನದ ಮುಖ್ಯ ಘಟನೆಯೊಂದನ್ನು ನನಗೆ ಅಣ್ಣ ತಿಳಿಸಿದ್ದರು. ರೋಗಿಯೊಬ್ಬ ಬದುಕಿ ಉಳಿಯುವ ಆಶೆಯನ್ನು ಎಲ್ಲರೂ ತೊರೆದಿದ್ದರು. ಅವನಿಗೆ ಅಣ್ಣ ಶುಶ್ರೂಷೆ ನೀಡಿ ಬದುಕಿಸಿದರು. ಅವನು ಡಿಸ್‌ಚಾರ್ಜ್ ಆದಾಗ ಒಂದು ತಟ್ಟೆಯಲ್ಲಿ ಹಣ್ಣುಹಂಪಲುಗಳನ್ನು ತಂದು ಅಣ್ಣನಿಗೆ ಕೊಡುತ್ತಾ “ನನ್ನ ಪ್ರಾಣ ಉಳಿಸಿದ ಉಪಕಾರಕ್ಕಾಗಿ ಈ ಕಿರುಕಾಣಿಕೆ ಸ್ವೀಕರಿಸಬೇಕು” ಎಂದು ಬೇಡಿಕೊಂಡ. ಅದನ್ನು ನಿರಾಕರಿಸಿದ್ದನ್ನು ನನಗೆ ತಿಳಿಸುತ್ತಾ, ‘ನನ್ನ ಕರ್ತವ್ಯ ಮಾಡಿದ್ದಕ್ಕೆ ಯಾವ ಕಾಣಿಕೆಯೂ ಬೇಡ’ ಎನ್ನುವಾಗಿನ ಆತ್ಮಸಂತೋಷ ಬೇರೆ ಯಾವುದರಲ್ಲೂ ಇಲ್ಲ ಎಂದು ದೊಡ್ಡಣ್ಣ ಹೇಳಿದ್ದರು.

ಜನಪ್ರತಿನಿಧಿಗಳು ಜನರಿಂದ ಚುನಾಯಿತರಾದವರು ಎಂಬ ಕಾರಣಕ್ಕಾಗಿ ಅವರನ್ನು ಅಣ್ಣ ಗೌರವಿಸುತ್ತಿದ್ದರು. ಆದರೆ ದೊಡ್ಡಣ್ಣ ಯಾವತ್ತೂ ತನ್ನ ಆತ್ಮಗೌರವವನ್ನು ಬಲಿಗೊಡಲಿಲ್ಲ.

ಮಂಗಳೂರಿನ ಸರಕಾರಿ ಆಸ್ಪತ್ರೆ ಮತ್ತು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ‘ಜನಸಮುದಾಯದ ಹಿತಕ್ಕಾಗಿ ವೈದ್ಯಕೀಯ ಸೇವೆ’ ಎಂಬ ಉನ್ನತ ಧ್ಯೇಯಪಾಲನೆಗೆ ಅವರ ಕೊಡುಗೆ ಮಹತ್ವದ್ದು.

ತನ್ನ ದುಡಿಮೆ, ಪ್ರಾಮಾಣಿಕತೆ, ಶಿಸ್ತು, ಕರ್ತವ್ಯನಿಷ್ಠೆ, ಅನುಕಂಪ ಮತ್ತು ಜೀವನದಲ್ಲಿ ಅನುಸರಿಸಿದ ಉನ್ನತ ಮೌಲ್ಯಗಳಿಂದಾಗಿ ನನ್ನ ದೊಡ್ಡಣ್ಣ ತನ್ನ ಜೀವಿತದ ಅವಧಿಯಲ್ಲೇ ಒಂದು ದಂತಕತೆಯಾದರು. ಇಂತಹ ಹಿರಿಯಣ್ಣನ ಬಗ್ಗೆ ನಮ್ಮ ಅಡ್ಡೂರು ಕುಟುಂಬದ ಎಲ್ಲರೂ ಅಭಿಮಾನ ಪಡುತ್ತೇವೆ - ಎಂದೆಂದಿಗೂ.

ಫೋಟೋ: ಅಡ್ಡೂರು ಶಿವಶಂಕರ ರಾವ್ (ಎಡ) ಮತ್ತು ಅವರ ದೊಡ್ಡಣ್ಣ ಡಾ. ಎ. ತಿಮ್ಮಪ್ಪಯ್ಯ

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್