ಬಳಕೆದಾರರು ಭಾವನಾತ್ಮಕವಾಗಿ ತನ್ನ ಮೇಲೆ ಅವಲಂಬಿತರಾಗುವಂತೆ ಪ್ರೇರೇಪಿಸುವ ಕೃತಕ ಬುದ್ದಿಮತ್ತೆ (ಎ.ಐ.) ಕಂಪ್ಯಾನಿಯನ್ ಚಾಟ್‌ ಬಾಟ್‌ಗಳ ತಯಾರಿಕೆಯನ್ನು ಚೀನ ಸರಕಾರ ನಿಷೇಧಿಸಿದೆ. ತಂತ್ರಜ್ಞಾನದ ಅತಿರೇಕದ ನಿಯಂತ್ರಣಕ್ಕೆ ಚೀನ ಕೈಗೊಂಡಿರುವ ಈ ಕಠಿನ ಕ್ರಮವು ಭಾರತ ಸಹಿತ ಇಡೀ ಜಗತ್ತೇ ಗಂಭೀರವಾಗಿ ಗಮನಿಸಬೇಕಾದ ಹೆಜ್ಜೆಯಾಗಿದೆ.

ಕೃತಕ ಬುದ್ಧಿಮತ್ತೆ ಆಧಾರಿತ ಎಐ ಸಂಗಾತಿಗಳು ನಿಜ ಜೀವನದ ಸಂಬಂಧಗಳ ಸ್ಥಾನವನ್ನು ಆಕ್ರಮಿಸಿಕೊಳ್ಳಬಹುದು, ಪರಿಣಾಮವಾಗಿ ಜನರು ವಿವಾಹ ಹಾಗೂ ಕುಟುಂಬವನ್ನು ಕಟ್ಟಿಕೊಳ್ಳುವ ಆಲೋಚನೆಯಿಂದ ದೂರ ಉಳಿಯಬಹುದು ಎಂಬ ಆತಂಕಗಳು ಮೂಡಿರುವ ಬೆನ್ನಲ್ಲೇ ಚೀನ ಈ ಕಾನೂನನ್ನು ಜಾರಿಗೊಳಿಸಿದೆ. ಕಳೆದ ವಾರದಿಂದ ಜಾರಿಗೆ ಬಂದಿರುವ ಈ ಕಾಯ್ದೆಯು ಚೀನದ ದೇಶೀಯ ಎಐ ಸೇವೆಗಳಿಗೆ ಅನ್ವಯಿಸಲಿದ್ದು, ಅಲಿಬಾಬಾ ಮತ್ತು ಬೈಟ್‌ ಡ್ಯಾನ್ಸ್ /ಟಿಕ್ ಟಾಕ್ ಮಾತೃ ಸಂಸ್ಥೆ ಸಂಸ್ಥೆಗಳು ಈಗಾಗಲೇ ತಮ್ಮ ಚಾಟ್‌ಬಾಟ್ ಗಳ ಕೆಲವು ಪ್ರಮುಖ ವೈಶಿಷ್ಟ್ಯ ಗಳನ್ನು ನಿಷ್ಕ್ರಿಯಗೊಳಿಸಲು ಆರಂಭಿಸಿವೆ. ಅಮೆರಿಕದ ಕೆಲವು ರಾಜ್ಯಗಳಲ್ಲಿ ಇಂತಹ ನಿಯಮಗಳಿದ್ದರೂ ಚೀನದ ನಿಯಮಗಳು ಬಿಗಿಯಾಗಿವೆ.

ಕೃತಕ ಬುದ್ದಿಮತ್ತೆಯು ವಿಕಾಸಗೊಳ್ಳುತ್ತಿರುವ ಈ ಹಂತದಲ್ಲಿ ಅದರ ನಕಾರಾತ್ಮಕ ಮುಖಗಳು ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರು. ಅರ್ಥಾತ್ ಮುಂದಿನ ಪೀಳಿಗೆಯವರ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ತೀವ್ರ ಆತಂಕಕಾರಿಯಾಗಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಏಕಾಂಗಿತನ ಅನುಭವಿಸುತ್ತಿರುವ ಮಕ್ಕಳು ಎಐ ಚಾಟ್ ಬಾಟ್‌ಗಳನ್ನು ತಮ್ಮ ಆಪ್ತ ಸ್ನೇಹಿತರೆಂದು ಭಾವಿಸಿ, ಅವುಗಳ ಮೇಲೆ ಅತಿಯಾಗಿ ಅವಲಂಬಿತರಾಗುತ್ತಿದ್ದಾರೆ. ಎಐಯನ್ನು ಸಂಗಾತಿಯೆಂದು ಭಾವಿಸಿ, ಅದು ಹೇಳಿದಂತೆ ಮಾಡುವ, ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕೂಡ ಸಂಭವಿಸಿವೆ. ಈ ಕೃತಕ ಗೆಳೆತನವು ಮಕ್ಕಳಲ್ಲಿ ನೈಜ ಸಾಮಾಜಿಕ ಸಂಪರ್ಕಗಳ ಕೊರತೆಯನ್ನು ಉಂಟುಮಾಡುತ್ತದೆ. ಪರಿಣಾಮವಾಗಿ ಮಕ್ಕಳು ಸಮಾಜದಿಂದ ದೂರ ಸರಿದು ಅಂತರ್ಮುಖಿಗಳಾಗುವ ಅಪಾಯ ಬಹಳವಾಗಿದೆ.

ಸಣ್ಣ ಸಣ್ಣ ಸಂಗತಿಗಳಿಗೂ ಎಐ ಅವಲಂಬನೆ ಅತಿಯಾದರೆ ಅಮೃತವೂ ವಿಷ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಇದು ಅವರ ಸಹಾನುಭೂತಿ, ಪರಸ್ಪರ ಸಂವಹನ ಮತ್ತು ನೈಜ ಜಗತ್ತಿನ ಮಾನವೀಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಹಜ ಸಾಮರ್ಥವನ್ನು ಕುಂಠಿತಗೊಳಿಸುತ್ತಿದೆ. ಅಷ್ಟೇ ಅಲ್ಲದೆ, ಎಐ ಚಾಟ್‌ ಬಾಟ್ಗಳು ನೀಡುವ ಯಾಂತ್ರಿಕ ಮತ್ತು ಸಿದ್ದ ಉತ್ತರಗಳು ಮಕ್ಕಳ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಹಾಗೂ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಕೌಶಲವನ್ನು ಮೊಂಡಾಗಿಸುತ್ತಿವೆ. ಕೃತಕ ಬುದ್ದಿಮತ್ತೆಯು ಹರಡಬಹುದಾದ ತಪ್ಪು ಮಾಹಿತಿ ಅಥವಾ ಪಕ್ಷಪಾತೀಯ ವಿಷಯಗಳನ್ನು ಮಕ್ಕಳು ಸುಲಭವಾಗಿ ನಂಬಿ ದಾರಿ ತಪ್ಪುವ ಅಪಾಯವೂ ಹೆಚ್ಚಾಗಿದೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಅವರನ್ನು ಕೇವಲ ತಂತ್ರಜ್ಞಾನದ ಗುಲಾಮರನ್ನಾಗಿ ಮಾಡುತ್ತದೆ. ಮಕ್ಕಳು ಮಾತ್ರ ಅಲ್ಲ ಪ್ರೌಢರೂ ವಿವೇಚನೆ ತಪ್ಪಿದರೆ ಈ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಯಾವುದೇ ತಂತ್ರಜ್ಞಾನಕ್ಕೆ ಒಳಿತು-ಕೆಡುಕುಗಳಿರುವಂತೆ, ಎಐ ತಂತ್ರಜ್ಞಾನವು ಮಕ್ಕಳು- ಹದಿಹರೆಯದವರ ಮುಗ್ಧ ಭಾವನೆಗಳನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಿರುವುದು ಅಪಾಯಕಾರಿ.

ಹೀಗಾಗಿ ಎಐ ಉಂಟುಮಾಡಬಹುದಾದ ಇಂತಹ ತೊಂದರೆಗಳನ್ನು ಕಾಲಕಾಲಕ್ಕೆ ಅಂದಾಜಿಸಿಕೊಂಡು ತಕ್ಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ಕೇವಲ ಸರಕಾರದ ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ: ಪಾಲಕರು ಮತ್ತು ಒಟ್ಟಾರೆ ಸಮಾಜವು ಈ ದಿಶೆಯಲ್ಲಿ ಸಮಷ್ಟಿ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕು. ಡಿಜಿಟಲ್ ಜಗತ್ತಿನ ಕೃತಕ ಆಕರ್ಷಣೆಗಿಂತ ನೈಜ ಮಾನವೀಯ ಸಂಬಂಧಗಳು ಮತ್ತು ಹೆತ್ತವರು, ಕುಟುಂಬ, ಸ್ನೇಹಿತರು, ಸಮಾಜದ ಆಪ್ತತೆಯೇ ಮಿಗಿಲಾದವು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರ ಭವಿಷ್ಯವನ್ನು ಕಾಪಾಡಲೇಬೇಕಾದ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೦೭-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ