ಸ್ಟಾಕ್ ಹೋಂ ನ  ನಗರದಲ್ಲಿ ಕಸ ನಿರ್ವಹಣೆಯ ಕೆಲವು ಚಿತ್ರಗಳನ್ನು ನೋಡೋಣ. ಪ್ರತಿ ಅಪಾರ್ಟಮೆಂಟಿನ ಕೆಳ ಅಂತಸ್ತಿನಲ್ಲಿ ಒಂದು ನೂರು ಚದರವುಳ್ಳ ಒಂದು ಕೊಠಡಿಯಿರುತ್ತದೆ. ಆ ಕೊಠಡಿಯಲ್ಲಿ,  ಆರೇಳು ಡಬ್ಬಿಗಳಿರುತ್ತವೆ. ಅಡುಗೆಮನೆ ತ್ಯಾಜ್ಯ, ಪೇಪರ್ ಮತ್ತು ಪೇಪರ್ ಬಾಕ್ಸ್ , ಪ್ಲಾಸ್ಟಿಕ್ ತ್ಯಾಜ್ಯ, ಗ್ಲಾಸ್ ಮತ್ತು ಉರಿದ ಬಲ್ಬುಗಳು, ಹೀಗೆ ಐದಾರು ಕಸ ವಿಂಗಡಣೆ ಮಾಡಿ,  ಸಂಗ್ರಹಿಸುವ ವ್ಯವಸ್ಥೆಯಿದೆ.‌ ಅಡುಗೆ ಮನೆ ತ್ಯಾಜ್ಯವನ್ನು ಒಂದು ಪೇಪರ್ತೊಟ್ಟೆಯಲ್ಲಿ ಹಾಕಬೇಕು. ಅದಕ್ಕೆ ಅಗತ್ಯವಾದ ಪೇಪರ್ ತೊಟ್ಟೆಯು ನಿಮಗೆ ಉಚಿತ ಸಿಗುವಂತೆ, ಆ ಕೊಠಡಿಯಲ್ಲಿಯೇ  ಕಟ್ಟು ಕಟ್ಟಿ (in bunches) ಇಟ್ಟಿರುತ್ತಾರೆ. ಆ ಅಪಾರ್ಟಮೆಂಟಿನ ನಿವಾಸಿಗಳು ಕಸ ವಿಂಗಡಿಸಿ ಆ ಕೊಠಡಿಯಲ್ಲಿರುವ ಡಬ್ಬಗಳಲ್ಲಿ ಸರಿಯಾಗಿ ಹಾಕುತ್ತಾರೆ. ಈ ಕಸ ವಿಲೇವಾರಿಗೆ ತಗಲುವ ವೆಚ್ಚವನ್ನು ಅಪಾರ್ಟಮೆಂಟಿನವರು  ಭರಿಸುತ್ತಾರೆ.‌ 

ಅಪಾರ್ಟಮೆಂಟ್ ಹೊರತಾಗಿರುವ ವಿಲ್ಲಾಗಳಲ್ಲಿ ( independent houses) ಮನೆಯೆದರು ಎರಡು ದೊಡ್ಡ ಡಬ್ಬಗಳಿರುತ್ತವೆ. ಆ ಮನೆಯ ನಿವಾಸಿಗಳು ಅಲ್ಲಿ, ಕಸವನ್ನು ವಿಂಗಡಿಸಿ ವಿಲೇವಾರಿ ಮಾಡುತ್ತಾರೆ.  ಅವರ ಹೆಚ್ಚುವರಿಕಸವನ್ನು, ಅರ್ಧ ಕಿಮಿ ದೂರದಲ್ಲಿರುವ ಕೆಲವು ಕಸದ ದೊಡ್ಡ ದೊಡ್ಡ ಡಬ್ಬಿಗಳಲ್ಲಿ ವಿಲೇವಾರಿ ಮಾಡಬೇಕು.  

kasa.jpg

ಇನ್ನು ಸಾರ್ವಜನಿಕ ಸ್ಥಳಗಳಾದ ಪಾರ್ಕ್, ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ ಗಳಲ್ಲಿ, ಮಾರ್ಗದ ಮಧ್ಯೆ, ಶಾಲಾ ಆವರಣದಲ್ಲಿ , ಕೆಲವು ಬಸ್ ಗಳಲ್ಲಿಯೂ ಕೂಡ ಕಸದ ಡಬ್ಬಗಳಿರುತ್ತವೆ. ಶಾಲಾ ಆವರಣ, ಪಾರ್ಕ್,  ವ್ಯಾಪಾರದ ಸ್ಥಳಗಳಲ್ಲಿ ಎಲ್ಲಾ ಕಡೆಯಲ್ಲಿ ಒಂದೆರಡು ಅಥವಾ ಮೂರು ಡಬ್ಬಿಗಳಿರುತ್ತವೆ. ನಾಗರಿಕರು, ಮಕ್ಕಳು ಸಹ ಬಾಳೆಹಣ್ಣಿನ ಸಿಪ್ಪೆ, ತಿಂಡಿಯ ಖಾಲಿ ಪೊಟ್ಟಣಗಳನ್ನು ಕಸದ ಡಬ್ಬಿಗಳಲ್ಲಿಯೇ ಹಾಕುವ  ಪರಿಪಾಠವಿದೆ. ಒಮ್ಮೊಮ್ಮೆ ಜ್ಯೂಸ್ ಕುಡಿದ ಕ್ಯಾನ್ ಗಳು ಹೊರಗೆ ಕಾಣಬಹುದು. ಅಂತಹ ಅಪರೂಪದ ದೃಶ್ಯಗಳು ಅತಿ ಕಡಿಮೆ. ಕಸ ನಿರ್ವಹಣೆ ಅವರ ಸಂಸ್ಕೃತಿಯಾಗಿ ಮಾರ್ಪಟ್ಟಿದೆ.  

ನಾವು ಒಂದು ದ್ವೀಪದಲ್ಲಿ ಒಂದು ವಾರ ಉಳಿದಿದ್ದೆವು. ಅಲ್ಲಿಯೂ ಕೂಡ ಅಲ್ಲಿರುವ 20 ಕಾಟೇಜಿನಲ್ಲಿ ಉಂಟಾಗುವ ತ್ಯಾಜ್ಯವನ್ನು ಅಲ್ಲಿ ಸುತ್ತಮುತ್ತ ನೀರಿನಲ್ಲಿ ಯಾರೂ ಬಿಸಾಕುವುದಿಲ್ಲ. ಅದನ್ನು ಕೂಡ ದಿನ, ದಿನವೂ ಸಂಗ್ರಹಿಸಿ,ಮೋಟಾರ್ ಬೋಟಿನಲ್ಲಿ ತೆಗೆದುಕೊಂಡು ಹೋಗುತ್ತಾರೆ.  ಕೆಲವು ತ್ಯಾಜ್ಯದಿಂದ ಗೊಬ್ಬರ ಮಾಡ್ತಾರೆ, ಕೆಲವನ್ನು ಸುಡುತ್ತಾರೆ, ಅದರಿಂದ ಉಂಟಾಗುವ ಶಾಖವನ್ನು , ಮನೆಗೆ ಬರುವ ಹೀಟರ್ ಪೈಪಿನ ನೀರಿಗೆ ಬಳಸುತ್ತಾರಂತೆ. ಒಟ್ಟಾರೆ ಕಸಕ್ಕೆ ಮುಕ್ತಿ ಸಿಗುತ್ತದೆ. ಮೂಲದಲ್ಲಿ ಕಸ ವಿಂಗಡಣೆ ಮುಖ್ಯ. ಅದರ ಹೊಣೆ ನಾಗರಿಕರದ್ದು. ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವ ಜವಾಬ್ದಾರಿ ಸ್ಥಳೀಯ ಸರ್ಕಾರದ್ದು. ಸ್ವಚ್ಛತೆ ಸಂಸ್ಕೃತಿಯ ಭಾಗವಾದರೆ ಕಸ ನಿರ್ವಹಣೆ ಸಾಧ್ಯ.  

-ಪ್ರಕಾಶ್ ಎನ್, ಮಂಗಳೂರು.