ಎಲ್ಲಾ ಸಂಬಂಧದಲ್ಲಿಯೂ ಹೇಗೆ ಭಿನ್ನಾಭಿಪ್ರಾಯ ಮತ್ತು  ಸಂಘರ್ಷ ಅನಿವಾರ್ಯವೋ, ಹಾಗೆಯೇ  ದಾಂಪತ್ಯದಲ್ಲಿಯೂ ಕೂಡ ಸಾಮಾನ್ಯ. ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ತೀವ್ರಗೊಳ್ಳಬಹುದು.  ಪದೇ ಪದೇ ನಡೆಯುವ ಸಂಘರ್ಷಗಳನ್ನು ದಂಪತಿಗಳು ಪರಿಣಾಮಕಾರಿಯಾಗಿ ನಿಭಾಯಿಸದಿದ್ದರೆ,  ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳಿರುತ್ತವೆ.   

ಮನೋಜ್ ಮತ್ತು ಮಾಯಾ ರಿಲೇಶನ್ ಷಿಪ್ ನಲ್ಲಿದ್ದು ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸುತ್ತಿದ್ದರು.  ಅವರು ತಮ್ಮ ಭಿನ್ನಾಭಿಪ್ರಾಯಗಳ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ.   ತಮ್ಮ ಬಾಲ್ಯದ ಬೆಳೆವಣಿಗೆ, ಹಣಕಾಸು ಮತ್ತು ಮಕ್ಕಳ ಪಾಲನೆಯಂತಹ ವಿಷಯಗಳ ಬಗ್ಗೆ ಚರ್ಚಿಸಲು ಎಂದಿಗೂ ಸಮಯ ತೆಗೆದುಕೊಂಡಿರಲಿಲ್ಲ. ಅವಸರದಲ್ಲಿ ಮದುವೆಯಾದರು.  

ಎರಡು ವರ್ಷದ ದಾಂಪತ್ಯದಲ್ಲಿ ಮನೋಜ್ ಮಾಯಾರಿಗೆ ಒಬ್ಬ ಮಗಳು ಜನಿಸಿದಳು.  ಹಣಕಾಸಿನ ಒತ್ತಡ ಹೆಚ್ಚಾಯಿತು.  ಮಕ್ಕಳನ್ನು ಬೆಳೆಸುವ ವಿಧಾನದಲ್ಲಿ, ಹಣಕಾಸಿನ ವಿಷಯದಲ್ಲಿ ಅವರ ಭಿನ್ನಾಭಿಪ್ರಾಯಗಳು ತೀವ್ರಗೊಂಡವು. ಮುಂದುವರಿದ ಭಾಗವಾಗಿ ಸಂಘರ್ಷಗಳು ಹೆಚ್ಚಾದವು. ಮನೆ ಖರೀದಿಸಲು ಹಣವನ್ನು ಉಳಿಸಬೇಕು ಎಂಬುದು ಮಾಯಾಳ ಬಯಕೆಯಾಗಿತ್ತು.   

ಮತ್ತೊಂದೆಡೆ, ಮನೋಜ್  ದುಂದುವೆಚ್ಚದ ಸ್ವಭಾವವುಳ್ಳವವನಾಗಿದ್ದನು. ನಾವು ಕಷ್ಟಪಟ್ಟು ಹಣ ಸಂಪಾದಿಸುತ್ತೇವೆ, ಆದ್ದರಿಂದ ಹೊರಗೆ ಊಟ ಮಾಡುವುದು ಮತ್ತು ವಾರಾಂತ್ಯದ ಪ್ರವಾಸಗಳನ್ನು ಆನಂದಿಸುವುದು ನಮ್ಮ ಹಕ್ಕು ಎಂದು ಅವನು ಭಾವಿಸಿದ್ದನು. ಅವರ ಈ ವೆಚ್ಚ ಮಾಡುವ ಮತ್ತು ಉಳಿಸುವ ಸ್ವಭಾವವು ಪದೇ ಪದೇ ಜಗಳಗಳಿಗೆ ಕಾರಣವಾಯಿತು. ಇದು ಅಂತಿಮವಾಗಿ ಪರಸ್ಪರರನ್ನು  ದೂಷಿಸುವ ಪ್ರವೃತ್ತಿಯಾಗಿ ಪರಿಣಮಿಸಿತು.  

ಮಾಯಾಳ  ತಾಯಿಯು ಯಾವಾಗಲೂ ಕೆಲಸದಲ್ಲಿರುತ್ತಿದ್ದರಿಂದ,  ಆಕೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ.  ಪರಿಣಾಮವಾಗಿ, ಮಾಯಾಳು ಮಗಳ   ಜೊತೆ ಹೆಚ್ಚಿನ  ಸಮಯ ಕಳೆಯಲು ಇಚ್ಛಿಸಿದ್ದರಿಂದ, ತನ್ನ ಕೆಲಸದ ಅವಧಿಯನ್ನು ಕಡಿಮೆಗೊಳಿಸಿದಳು. ಇದರಿಂದ  ಅವರ ಹಣಕಾಸಿನ ಒತ್ತಡ  ಮತ್ತಷ್ಟು ಹೆಚ್ಚಿತು. ಮಾಯಾಳು ಮಗಳ ಬಗ್ಗೇನೆ ಹೆಚ್ಚು ಲಕ್ಷ ಕೊಡುತ್ತಿದ್ದಾಳೆಂದು ಮನೋಜನ ದೂರು, ಆದ್ದರಿಂದ ಮಾಯಾಳನ್ನು ಪದೇ ಪದೇ ಟೀಕಿಸುತ್ತಿದ್ದನು.  

ಮಾಯಾ ಬೆಳೆದ ಕುಟುಂಬದಲ್ಲಿ ಹಣಕಾಸಿನ ಅಭಾವವಿದ್ದ ಕಾರಣ, ಧಾರಾಳವಾಗಿ ಹಣ ಖರ್ಚು ಮಾಡುವ  ಮನೋಜನ ವರ್ತನೆ ಮಾಯಾಳಿಗೆ ಇಷ್ಟವಾಗುತ್ತಿರಲಿಲ್ಲ. ಅವಳು ಮನೋಜನನ್ನು ತೀವ್ರವಾಗಿ ಟೀಕಿಸುತ್ತಿದ್ದಳು. ಆಗ ಮನೋಜ್ ತುಂಬಾ ಸಿಟ್ಟಾಗುತ್ತಿದ್ದ. 

ಕಾಲಕ್ರಮೇಣ, ಮನೋಜ್  ಮತ್ತು ಮಾಯಾ ತಮ್ಮನ್ನು ಒಂದಾಗಿಸಿದ್ದ ಪ್ರೀತಿಯ ಭಾವನೆಗಳನ್ನು ಮರೆತರು. ಅವರ ಕೋಪ ಮತ್ತು ಅಸಮಾಧಾನವು ಒಮ್ಮೆ ಸಂತೋಷವಾಗಿದ್ದ ಅವರ ದಾಂಪತ್ಯ ಜೀವನವನ್ನು  ಅಲ್ಲೋಲಕಲ್ಲೋಲ ಮಾಡಿತು.‌ 

  "ನಾವು ಜಗಳವಾಡುವಾಗ ವಿವೇಚನೆ ಕಳೆದುಕೊಳ್ಳುತ್ತೇವೆ ಮತ್ತು ನಮ್ಮ ಪಟ್ಟು ಸಡಿಲಿಸುವುದಿಲ್ಲ,  ಇದರಿಂದ ಯಾರೂ ಗೆಲ್ಲುವುದಿಲ್ಲ. 'ನಿನಗೆ ಯಾವಾಗಲೂ ನೀನೇ ಸರಿ ಎನ್ನಬೇಕು' ಎಂದು ಮನೋಜ್  ಹೇಳಿದಾಗ, ಮಾಯಾಳು  ತನ್ನನ್ನು ಸಮರ್ಥಿಸಿಕೊಳ್ಳಲು ಅವನ ಮೇಲೆ ವಾಗ್ದಾಳಿ ನಡೆಸುತ್ತಿದ್ದಳು. ನಂತರ ನಾವಿಬ್ಬರೂ ಕ್ರೂರವಾಗಿ ನಡೆದುಕೊಳ್ಳುತ್ತೇವೆ, ಕೆಟ್ಟ ಮಾತುಗಳನ್ನು ಆಡುತ್ತೇವೆ ಮತ್ತು ಪರಸ್ಪರ ಕೀಳಾಗಿ ಕಾಣುತ್ತೇವೆ."  ಇವು ಅವರ  ಹೇಳಿಕೆಗಳಾಗಿದ್ದವು.  

ನಾವಿಲ್ಲಿ ಎರಡು ವಿಚಾರಗಳನ್ನು ಮಾಡೋಣ. ಜಗಳಗಳು ಏಕೆ ತೀವ್ರಗೊಳ್ಳುತ್ತವೆ? ಸಂಗಾತಿಗಳು ಪರಸ್ಪರ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ನಕಾರಾತ್ಮಕ ಟೀಕೆಗಳು ಹೆಚ್ಚಾಗಿ ಕೋಪ ಮತ್ತು ನಿರಾಶೆಯನ್ನು ಹೆಚ್ಚಿಸುತ್ತವೆ. ಸಮಸ್ಯೆಗೆ ಭಾವನಾತ್ಮಕ ತೀವ್ರತೆಯೂ ಕಾರಣವಾಗುತ್ತದೆ. ಜೊತೆಯಲ್ಲಿ ಸಾಮಾನ್ಯ ಕೋಪದಿಂದ,   ತಿರಸ್ಕಾರ ತೋರಿಸುವ ಪ್ರವೃತ್ತಿಯೇ ವಿಕೋಪಕ್ಕೆ ಹೋಗುತ್ತದೆ.   

ನಿಮ್ಮ ಕೋಪವನ್ನು ಪ್ರಚೋದಿಸುವ ಅಂಶಗಳು (Triggers) ಯಾವುವು? ನಿಮ್ಮ ಸಂಗಾತಿಯೊಂದಿಗೆ ಜಗಳಕ್ಕೆ ಕಾರಣವಾಗುವ ಭಾವುಕ ಪ್ರಚೋದಕಗಳನ್ನು (triggers) ಅರಿತುಕೊಳ್ಳಲು ಪ್ರಯತ್ನಿಸುವುದು ಯೋಗ್ಯವಾಗಿದೆ. ನೀವು ಎಷ್ಟು ಜಾಗರೂಕರಾಗಿರುತ್ತೀರೋ, ಅಷ್ಟು  ಉತ್ತಮ. ನಿಮ್ಮ ಗತಕಾಲದ ಘಟನೆಗಳಿಂದ ಬಾಧಿತರಾಗುವುದಿಲ್ಲ.‌ ಸಂಬಂಧದಲ್ಲಿ ಪ್ರಚೋದಕಗಳನ್ನು ಪತ್ತೆಹಚ್ಚುವುದು ನಿರಂತರ ಪ್ರಕ್ರಿಯೆಯಾಗಿರಬೇಕು.  ಮೊದಲ ಹಂತವೆಂದರೆ, ನಿಮ್ಮ ಸಂಗಾತಿಯೊಂದಿಗೆ ಈ ಪ್ರಚೋದಕಗಳು ಅಥವಾ "ಹಾಟ್ ಬಟನ್"ಗಳ ಬಗ್ಗೆ ಚರ್ಚಿಸಲು ನಿರ್ಧರಿಸುವುದು. ಉದಾಹರಣೆಗೆ, ಹಣಕಾಸು ಅಥವಾ  ಮಕ್ಕಳನ್ನು ಬೆಳೆಸುವ ಎರಡು  ಸೂಕ್ಷ್ಮ ವಿಷಯಗಳೇ, ಪ್ರಚೋದಕಗಳಾಗಿದ್ದವು. ಈ ಪ್ರಚೋದಕಗಳಿಂದ  ಸಂಘರ್ಷ,  ಅದರ ಫಲವಾಗಿ ತಿರಸ್ಕಾರದ ಮಾತುಗಳು ಬೆಳೆಯುತ್ತಿದ್ದವು.   

ಮನೋಜ್ ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವಾಗ ತನಗಾಗುವ ಪ್ರಚೋದನೆಯ ಬಗ್ಗೆ ಮಾಯಾ ಹೆಚ್ಚು ಜಾಗರೂಕಳಾದಾಗ,  ತಾವು ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಬೇಕು, ಆದರೆ ಹಣದ ಬಗ್ಗೆ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ಆಕೆಗೆ ಅರ್ಥವಾಯಿತು. ಪರಿಣಾಮವಾಗಿ, ಆಕೆ ಹಣಕಾಸಿನ ನಷ್ಟದ ಭಯದ ಬಗ್ಗೆ ಮನೋಜನ ಬಳಿ  ಹೆಚ್ಚು ವಿವೇಚನೆಯಿಂದ ಮಾತನಾಡಲು ಸಾಧ್ಯವಾಯಿತು. ಅವರು ವಾರಕ್ಕೊಮ್ಮೆ ಹೊರಗೆ ಹೋಗುವ ಬದಲು ತಿಂಗಳಿಗೆ ಎರಡು ಬಾರಿ ಊಟಕ್ಕೆ ಹೋಗಲು ರಾಜಿ ಮಾಡಿಕೊಂಡರು. ಆಗ ಮಾಯಾಳಿಗೆ ತನ್ನ ಪ್ರಚೋದಕಗಳ ಬಗ್ಗೆ ಸ್ವಯಂ-ಅರಿವು ಮತ್ತು ಮನೋಜ - ಮಾಯಾರವರಿಗೆ ಪರಸ್ಪರರ ಬಗ್ಗೆ  ಅನುಭೂತಿ ( empathy) ಉಂಟಾಗಿದ್ದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.  

ಕಠಿಣ ಸಂಭಾಷಣೆ ಅಥವಾ ಜಗಳದ ಸಮಯದಲ್ಲಿ ತಮ್ಮ ಯಾವ ಅಗತ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಯೋಚಿಸಲು ಸಮಯ ತೆಗೆದುಕೊಳ್ಳುವುದರಿಂದ ಕೋಪವು ಶಮನಗೊಳ್ಳುತ್ತದೆ.  ಆಗ ನಮ್ಮಲ್ಲಿ ಸ್ವಯಂ ಅರಿವುಂಟಾಗುತ್ತದೆ. ಆಗ ಪರಸ್ಪರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಮನಸ್ಸಾಗುತ್ತದೆ.  ಆಗ ಪರಿಹಾರ ಸಾಧ್ಯ

-ಪ್ರಕಾಶ್ ಎನ್, ಮಂಗಳೂರು