ಮಾಯಾ, ಮನೋಜ್ ಈರ್ವರೂ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ.  ಮದುವೆಯಾಗಿ 5-6 ವರ್ಷಗಳೇ ಕಳೆದಿವೆ.  ಸಂಸಾರ ದೊಡ್ಡದಾಗಿದೆ. ನಾಲ್ಕು ವರ್ಷದ ಮಗುವಿದೆ. ಪೋಷಕರ ಜವಾಬ್ದಾರಿ ಸಮಾನವಾಗಿದೆ. ಇಬ್ಬರು ಸಮನಾಗಿ ಮನೆ ಕೆಲಸವನ್ನು ಹಂಚಿಕೊಳ್ಳುತ್ತಿದ್ದಾರೆ, ಹೆಚ್ಚು ಭಿನ್ನಾಭಿಪ್ರಾಯಗಳಿಲ್ಲ. ಆದರೆ ಪರಸ್ಪರ ಮಾತನಾಡಲು ಸಮಯದ ಕೊರತೆ.  

ಮಾಯಾ ಮಾತು ಆರಂಭಿಸುವಾಗ, ಮನೋಜ್ ಫೋನಿನಲ್ಲಿ ಸ್ಕ್ರೋಲ್ ಮಾಡ್ತಿರುತ್ತಾನೆ. ಕೆಲವೊಮ್ಮೆ ಮನೋಜ್, ಭಾರಿ ಹುರುಪಿನಲ್ಲಿ ಮಾತನಾಡಲು ಸಿದ್ಧನಿದ್ದಾಗ, ಮಾಯಾ ತನಗೀಗ ಸಮಯವಿಲ್ಲವೆಂದೋ ಅಥವಾ ಕೆಲಸದಲ್ಲಿ ತೊಡಗಿಕೊಂಡು ಅರ್ಧಂಬರ್ಧ ಮಾತನ್ನು ಕೇಳಿಸಿಕೊಳ್ಳುತ್ತಾಳೆ, ಪೂರ್ಣವಾಗಿ ಮನಸ್ಸಿಟ್ಟು ಮನೋಜನಿಗೆ ಕಿವಿಯಾಗುವುದಿಲ್ಲ.  

ಈ ಸಮಸ್ಯೆಯನ್ನು ಮಾಯಾ-ಮನೋಜರು ಮಾತ್ರವಲ್ಲ, ಹಲವಾರು ದಂಪತಿಗಳು ಅನುಭವಿಸುತ್ತಿರುತ್ತಾರೆ. ತಾವು ಸಂಗಾತಿಯಿಂದ  ನಿರ್ಲಕ್ಷಕ್ಕೆ ಒಳಗಾಗುತ್ತಿದ್ದೇವೆ ಎಂಬ ಅನುಭವ. ಈ ಸಮಸ್ಯೆಯನ್ನು  ನೆಂಟರೋ ಅಥವಾ ಗೆಳೆಯರ ಬಳಿಯೋ ಚರ್ಚಿಸುತ್ತಾರೆ. ಅವರು ನೀಡುವ ಸಲಹೆ ಹೆಚ್ಚಿನ ಸಮಯ ಅನುಕೂಲವಾಗಲ್ಲ, ಒಮ್ಮೊಮ್ಮೆ ಕೆಲಸ ಮಾಡಬಹುದು. ಈ ಸಂದರ್ಭಗಳಲ್ಲಿ, ಯಾರದ್ದು ತಪ್ಪು, ಸರಿಯೆನ್ನುವ ಪ್ರಶ್ನೆಯಿಲ್ಲ. ಪರಸ್ಪರರಲ್ಲಿ ಸರಿಯಾದ ಸಂಭಾಷಣೆ ನಡೆಯುತ್ತಿಲ್ಲ. ಹೀಗೇಕಾಗುತ್ತಿದೆ?   

ಮೊದಲನೆಯದಾಗಿ, ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಮಾತನಾಡಲು ಸಿದ್ಧರಿದ್ದಾರಾ, ನೋಡಿ. ನಿಮ್ಮ ಕಣ್ಣುಗಳನ್ನು ನೋಡಿ ಮಾತನಾಡುತ್ತಿದ್ದಾರಾ, ಅಥವಾ ಅವರ ಲಕ್ಷ ಟಿವಿ ಪರದೆ, ಕೈಯಲ್ಲಿರುವ ಮೊಬೈಲ್ ಕಡೆಯೋ, ಲ್ಯಾಪ್ ಟಾಪಿನಲ್ಲಿ ಟೈಪ್ ಮಾಡುತ್ತಿದ್ದಾರೆಯೋ ಗಮನಿಸಿ. ಅಥವಾ ಮಾತನಾಡುವ,   ಮನಸ್ಥಿತಿಯಲ್ಲಿಲ್ಲದೆ, ಯಾವುದೋ ಚಡಪಡಿಕೆ, ತಲೆಯಾಡಿಸುತ್ತಿದ್ದರೂ, ಗಮನ ಬೇರೆಡೆಯಿರಬಹುದು.  

ಎರಡನೆಯದಾಗಿ, ಮಾತನಾಡಲು ಆರಂಭಿಸಿದಾಗ, ಸಂಗಾತಿಯು  ಪ್ರತಿಕ್ರಿಯಿಸುತ್ತಿದ್ದಾರೆಯೇ ಎನ್ನುವುದು  ಮುಖ್ಯವಾಗುತ್ತದೆ.  ಅಥವಾ ನಿಮ್ಮ ವಿಷಯದಲ್ಲಿ ನಿಜವಾದ ಆಸಕ್ತಿಯನ್ನು ತೋರಿಸದೆ "ಹುಂ," "ಸರಿ," ಅಥವಾ "ಓಕೆ" ನಂತಹ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರಾ, ನೋಡಿ.  

ಮತ್ತೊಂದು ಸೂಚನೆಯೆಂದರೆ,  ನಿಮ್ಮ ದಿನದ ಯಾವುದೋ ಸೂಕ್ಷ್ಮ ವಿಷಯವನ್ನು ನೀವು ಹಂಚಿಕೊಳ್ಳುತ್ತಿರಬಹುದು,  ಆಗ ನಿಮ್ಮ ಸಂಗಾತಿಯು ವಿಷಯವನ್ನು ದಿಢೀರನೆ ಬದಲಾಯಿಸುತ್ತಾರೆ. ತಾವು ಯಾವುದೋ ತಮಗನಿಸಿದ ಘಟನೆಗಳ ಬಗ್ಗೆ ಹೇಳತೊಡಗುತ್ತಾರೆ. ನೀವು ಮುಖ್ಯವಾದದ್ದನ್ನು ಹಂಚಿಕೊಂಡಾಗ ನಿಮ್ಮ ಸಂಗಾತಿ  ಹಗುರವಾಗಿ ಪ್ರತಿಕ್ರಿಯಿಸಿದರೆ, ಉದಾಹರಣೆಗೆ, "ಮತ್ತೆ ಶುರುವಾಯ್ತು" ಅಥವಾ "ನೀನು ಅತಿಯಾಗಿ ಸೂಕ್ಷ್ಮವಾಗಿ ಯೋಚಿಸುತ್ತಿದ್ದೀಯಾ" ಎಂಬ ಮಾತುಗಳು ಬರಬಹುದು. ಆಗ  ನಿಮ್ಮಿಬ್ಬರ ನಡುವೆ ಭಾವನಾತ್ಮಕ ಸಂಪರ್ಕವೇರ್ಪಡುವುದಿಲ್ಲ. ಸಂಗಾತಿಯ ಉದ್ದೇಶ ನಿಮ್ಮನ್ನು ಕಡೆಗಣಿಸಬೇಕೆಂಬುದಲ್ಲ,  ಅವರ ಮನಸ್ಸು ಬೇರೇನೋ ಒತ್ತಡಕ್ಕೆ ಒಳಗಾಗಿರಬಹುದು, ಆದರೆ ನಿಮಗದು,   ನಿಮ್ಮ ಭಾವನೆಗಳಿಗೆ ಬೆಲೆಯಿಲ್ಲವೆಂದು  ಭಾಸವಾಗಬಹುದು.  

ಸಂಗಾತಿಗಳು ಆಲಿಸುವುದನ್ನು ಏಕೆ ನಿಲ್ಲಿಸುತ್ತಾರೆ? ದೈನಂದಿನ ಚಟುವಟಿಕೆಗಳು ಮತ್ತು ಒತ್ತಡದ ಕೆಲಸಗಳು,  ನಮ್ಮ ಭಾವನಾತ್ಮಕ ಶಕ್ತಿಯನ್ನು ಕುಗ್ಗಿಸುತ್ತದೆ. ನಿಮ್ಮ ಸಂಗಾತಿಯು ಕೆಲಸದಿಂದ ಮಾನಸಿಕವಾಗಿ ದಣಿದು, ಹಣಕಾಸಿನ ಚಿಂತೆಯಲ್ಲಿ ಅಥವಾ ಕೌಟುಂಬಿಕ ಜವಾಬ್ದಾರಿಗಳ ಒತ್ತಡದಿಂದ ಮನೆಗೆ ಬರಬಹುದು. ನಾವು ಅತಿಯಾದ ಒತ್ತಡದಲ್ಲಿದ್ದಾಗ, ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ನಮ್ಮ ಸಾಮರ್ಥ್ಯ  ಕ್ಷೀಣಿಸುತ್ತಿರುತ್ತದೆ.  

ದೀರ್ಘ ದಿನಚರಿಯ ನಂತರ ಒಬ್ಬ ಸಂಗಾತಿಗೆ ಸಂಪರ್ಕ ಮತ್ತು ಸಂಭಾಷಣೆಯ ತುರ್ತು ಅಗತ್ಯವಿರಬಹುದು, ಆದರೆ ಇನ್ನೊಬ್ಬರಿಗೆ ಸುಧಾರಿಸಿಕೊಳ್ಳಲು ಶಾಂತ ಸಮಯ ಬೇಕಾಗಬಹುದು. ಇವೆರಡೂ ವಿಧಾನಗಳು ತಪ್ಪಲ್ಲ, ಆದರೆ ಪರಸ್ಪರ ಅಗತ್ಯಗಳನ್ನು ಅರ್ಥಮಾಡಿಕೊಳ್ಳದಿದ್ದಾಗ, ಅದು ಎರಡೂ ಕಡೆಯಲ್ಲಿಯೂ ನಿರಾಶೆಯನ್ನು ಉಂಟುಮಾಡುತ್ತದೆ. ದಂಪತಿಗಳು ವಿಭಿನ್ನ ಸಂವಹನ ಶೈಲಿಯನ್ನು ಹೊಂದಿರಬಹುದು. 

ಉದಾಹರಣೆಗೆ,  ಮಾಯಾ: ಇಂದು ನಿಮ್ಮ ಆಫೀಸಿನ ಕೆಲಸ ಬೇಗ ಮುಗಿಯಬಹುದಾ? ಬೇರೆ ಏನಾದರೂ ಕೆಲಸವಿದೆಯಾ? ನೇರ ಮಾತು ಬಯಸುವ ಪತಿಗೆ, ಈ ಸುತ್ತಿ ಬಳಸುವ ಪ್ರಶ್ನೆಗಳು ಕಿರಿಕಿರಿ ಉಂಟುಮಾಡುತ್ತವೆ.  

ಮನೋಜ್: ಇಂದು ನೀನು ಆಫೀಸಿಂದ ಬಂದವಳು, ರೆಡಿಯಿರು, ನಾವಿಬ್ಬರು ಪೇಟೆಗೆ ಹೋಗೋಣ, ಎಂದು ಟೈಮ್ ಟೇಬಲ್ ಹಾಕುತ್ತಾನೆ. ಸ್ವಲ್ಪ ಸಮಯ ಬೇಕಾಗುವ ಮಾಯಾಗೆ, ಈ ಹೇಳಿಕೆಗಳು ತನ್ನ ಮೇಲೆ ಮನೋಜ್ ಒತ್ತಡ ಹಾಕ್ತಾ ಇದ್ದಾನೆಂದೆನಿಸುತ್ತದೆ.  

ನಮ್ಮೆಲ್ಲರಲ್ಲೂ ಮಾಹಿತಿಯನ್ನು ಗ್ರಹಿಸುವ ಮತ್ತು ವ್ಯಕ್ತಪಡಿಸುವ ವಿಶಿಷ್ಟ ವಿಧಾನಗಳಿವೆ. ಕೆಲವು ಜನರು ನೇರವಾಗಿ ವಿಷಯಕ್ಕೆ ಬರಲು ಬಯಸುತ್ತಾರೆ, ಆದರೆ ಇತರರಿಗೆ ಹೆಚ್ಚಿನ ವಿವರ ಮತ್ತು ಭಾವನಾತ್ಮಕವಾಗಿ ಅರ್ಥೈಸಿಕೊಳ್ಳಲು ಸಮಯ ಬೇಕಾಗುತ್ತದೆ. ಕೆಲವರು ಮಾತನಾಡುವ ಮೊದಲು ಯೋಚಿಸಲು ಇಷ್ಟಪಟ್ರೆ, ಇನ್ನು ಕೆಲವರು ಮಾತನಾಡುತ್ತಲೇ ಯೋಚಿಸುತ್ತಾರೆ. 

ಪ್ರತಿಯೊಂದು ಬಾರಿ ನೀವು ಕೆಲವು ವಿಷಯಗಳನ್ನು ಎತ್ತಿದಾಗ ಅದು ಜಗಳಕ್ಕೆ ಕಾರಣವಾದರೆ, ನಿಮ್ಮ ಸಂಗಾತಿಯು ನಿಮ್ಮ ಸಂವಹನದ ಪ್ರಯತ್ನಗಳನ್ನು ಒತ್ತಡ ಮತ್ತು ಸಂಘರ್ಷದೊಂದಿಗೆ ಜೋಡಿಸಲು ಪ್ರಾರಂಭಿಸುತ್ತಾರೆ. ಸಂಭಾಷಣೆ ಪ್ರಾರಂಭವಾಗುವ ಮೊದಲೇ ಅವರು ನಿಷ್ಕ್ರಿಯಗೊಳ್ಳುತ್ತಾರೆ.  ಹಿಂದೆ ನಡೆದ ಸಂಭಾಷಣೆಗಳು ವಿಮರ್ಶೆ, ನಿಂದನೆ ಅಥವಾ ಸಂಘರ್ಷವನ್ನು ಒಳಗೊಂಡಿದ್ದರೆ, ನಿಮ್ಮ ಸಂಗಾತಿಯು ಮೌನವಾಗಿ, ದೂರ ಸರಿಯುತ್ತಾರೆ.‌ 

ಸಂಘರ್ಷದ ಸಮಯದಲ್ಲಿ ಯಾರಾದರೂ ತೀವ್ರ ಒತ್ತಡಕ್ಕೆ ಒಳಗಾದಾಗ, ಅವರ ಮನಸ್ಸು  ಮಾಹಿತಿಯನ್ನು ಪರಿಣಾಮಕಾರಿಯಾಗಿ ಗ್ರಹಿಸಲಾರದು.  ಅವರ ಹೃದಯ ಬಡಿತ ಹೆಚ್ಚಾಗುತ್ತದೆ, ಒತ್ತಡದ ಹಾರ್ಮೋನ್‌ಗಳು ದೇಹವನ್ನು ಆವರಿಸುತ್ತವೆ, ಮತ್ತು ಆತ್ಮರಕ್ಷಣೆಯ ಭಾಗವಾಗಿ ಆಲಿಸುವ ಸಾಮರ್ಥ್ಯ ಸ್ಥಗಿತಗೊಳ್ಳುತ್ತದೆ. 

ಆದ್ದರಿಂದ ಸಂಗಾತಿಯು ನಿಮ್ಮೊಂದಿಗೆ  ಮಾತನಾಡುವಾಗ, ಗಮನವಿಟ್ಟು ಆಲಿಸಿ, ಬರೀ ಶಬ್ದಗಳನ್ನು ಕೇಳಿಸಿಕೊಂಡರೆ ಸಾಲದು. ಆಲಿಸುವುದು ಸಕ್ರಿಯ ಮತ್ತು ಆಸಕ್ತಿಯಿಂದ ಕೂಡಿದ್ದಿರಬೇಕು. ಇದಕ್ಕೆ ಏಕಾಗ್ರತೆ, ಕಳಕಳಿಯಿರಬೇಕು. ಮಾತನಾಡುವ ವ್ಯಕ್ತಿಯ ಮಾತು ಮತ್ತು ಭಾವದಲ್ಲಿ, ನೀವು  ಮಗ್ನರಾಗಿರಬೇಕು.‌ ಆಗ ಅದು ಅರ್ಥಪೂರ್ಣ ಸಂಭಾಷಣೆಯಾಗುತ್ತದೆ.‌ ಆ ಮನಸ್ಥಿತಿಯು ದಾಂಪತ್ಯದಲ್ಲಿ ಸಾಮರಸ್ಯಕ್ಕೆ ಎಡೆಯಾಗುತ್ತದೆ.‌