ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಮಧುರ ಹಾಗೂ ಕರಗುವ ಕಂಠದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ಗಾಯಕಿ ಎಸ್ ಜಾನಕಿ. ದಕ್ಷಿಣ ಭಾರತದ "ಗಾನ ಕೋಗಿಲೆ" ಎಂದೇ ಪ್ರಸಿದ್ಧರಾಗಿರುವ ಅವರು, ತಮ್ಮ ಸುದೀರ್ಘ ಐದು ದಶಕಗಳ ವೃತ್ತಿಜೀವನದಲ್ಲಿ ಸಾವಿರಾರು ಗೀತೆಗಳಿಗೆ ಜೀವ ತುಂಬಿದ್ದಾರೆ.
ಜನನ ಮತ್ತು ಬಾಲ್ಯ
ಎಸ್ ಜಾನಕಿ (ಶಿಷ್ಟ್ಲಾ ಜನಕಿ) ಅವರು ಜನವರಿ 23, 1938 ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಎಂಬ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತದ ಕಡೆಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ನಾದಸ್ವರ ವಿದ್ವಾನ್ ಪೈದಿ ಸ್ವಾಮಿ ಅವರ ಬಳಿ ಸಂಗೀತದ ಆರಂಭಿಕ ಪಾಠಗಳನ್ನು ಕಲಿತ ಜಾನಕಿ, ತದನಂತರ ಚೆನ್ನೈಗೆ ವಲಸೆ ಬಂದು ಸಂಗೀತ ಲೋಕಕ್ಕೆ ಕಾಲಿಟ್ಟರು.
ವಿವಾಹ ಮತ್ತು ಕೌಟುಂಬಿಕ ಜೀವನ
ಎಸ್ ಜಾನಕಿ ಅವರು ವಿ. ರಾಮಪ್ರಸಾದ್ ಅವರೊಂದಿಗೆ ವಿವಾಹವಾದರು. ರಾಮಪ್ರಸಾದ್ ಅವರು ಜಾನಕಿ ಅವರ ಸಂಗೀತ ವೃತ್ತಿಜೀವನಕ್ಕೆ ಮತ್ತು ಅವರ ಪ್ರತಿಭೆಗೆ ಅಪಾರ ಬೆಂಬಲವನ್ನು ನೀಡಿದ್ದರು. ಈ ದಂಪತಿಗೆ ಮುರಳಿ ಕೃಷ್ಣ ಎಂಬ ಒಬ್ಬನೇ ಮಗನಿದ್ದ. 1992 ರಲ್ಲಿ ಪತಿ ರಾಮಪ್ರಸಾದ್ ಅವರು ನಿಧನರಾದರು. ಇದ್ದ ಏಕೈಕ ಮಗ ಇದೇ ವರ್ಷ ಜನವರಿಯಲ್ಲಿ ಅಕಾಲಿಕ ನಿಧನ ಹೊಂದಿದ ಬಳಿಕ ಜಾನಕಿಯಮ್ಮ ಬಹಳ ದುಃಖಿತರಾಗಿದ್ದರು.
ಗಾಯನ ಲೋಕಕ್ಕೆ ಪಾದಾರ್ಪಣೆ
1957 ರಲ್ಲಿ ತಮಿಳು ಚಿತ್ರ 'ವಿಧಿ ಇನ್ ವಿಲಾಯಟ್ಟು' ಚಿತ್ರದ ಮೂಲಕ ಜಾನಕಿ ತಮ್ಮ ಹಿನ್ನೆಲೆ ಗಾಯನವನ್ನು ಆರಂಭಿಸಿದರು. ಅಲ್ಲಿಂದ ಮುಂದೆ ಅವರು ತಿರುಗಿ ನೋಡಲೇ ಇಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಸುಮಾರು 17 ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು 48,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕೇವಲ ಪ್ರೇಮಗೀತೆಗಳಷ್ಟೇ ಅಲ್ಲದೆ, ಭಕ್ತಿಗೀತೆಗಳು, ತಾಯಿ-ಮಗನ ಬಾಂಧವ್ಯದ ಹಾಡುಗಳು ಹಾಗೂ ಶಾಸ್ತ್ರೀಯ ಗೀತೆಗಳನ್ನು ಅದ್ಭುತವಾಗಿ ಹಾಡಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಮತ್ತು ಜಾನಕಮ್ಮ
ಎಸ್ ಜಾನಕಿ ಅವರಿಗೂ ಮತ್ತು ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಕನ್ನಡ ಭಾಷೆ ಅವರ ಮಾತೃಭಾಷೆಯಲ್ಲದಿದ್ದರೂ, ಅವರು ಹಾಡಿದ ಕನ್ನಡ ಹಾಡುಗಳ ಉಚ್ಚಾರಣೆ ಮತ್ತು ಭಾವನೆಗಳನ್ನು ನೋಡಿದರೆ ಅವರು ಕನ್ನಡಿಗರೇ ಇರಬೇಕು ಎನ್ನುವಷ್ಟು ಅಪ್ಯಾಯಮಾನವಾಗಿರುತ್ತಿತ್ತು.
ಗಾನಗಂಧರ್ವ ಡಾ. ರಾಜ್ಕುಮಾರ್ ಮತ್ತು ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಜಾನಕಿ ಹಾಡಿದ ನೂರಾರು ಯುಗಳ ಗೀತೆಗಳು ಇಂದಿಗೂ ಸದಾಹಸಿರು. 'ಕರುಣಾಮಯಿ', 'ಹಾವಿನ ಹೆಡೆ', 'ಸನಾದಿ ಅಪ್ಪಣ್ಣ' ಸೇರಿದಂತೆ ನೂರಾರು ಚಿತ್ರಗಳ ಹಾಡುಗಳು ಕನ್ನಡಿಗರ ನೆನಪಿನಲ್ಲಿ ಎಂದಿಗೂ ಶಾಶ್ವತ. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ.
ಎಸ್ ಜಾನಕಿ ಅವರು 2016 ರಲ್ಲಿ ತಮ್ಮ 60 ವರ್ಷಗಳ ಸುದೀರ್ಘ ಗಾಯನ ವೃತ್ತಿಜೀವನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು. ಮಲಯಾಳಂ ಚಿತ್ರವೊಂದರ ಹಾಡು ಅವರ ಕೊನೆಯ ಧ್ವನಿಮುದ್ರಿತ ಗೀತೆಯಾಯಿತು. ತಮಗೆ ಒಲಿದು ಬಂದ ಭಾರತ ಸರ್ಕಾರದ ಅತ್ಯುನ್ನತ "ಪದ್ಮಭೂಷಣ" ಪ್ರಶಸ್ತಿಯನ್ನು, ದಕ್ಷಿಣ ಭಾರತದ ಕಲಾವಿದರಿಗೆ ತಡವಾಗಿ ಮನ್ನಣೆ ಸಿಗುತ್ತಿದೆ ಎಂಬ ಕಾರಣ ನೀಡಿ ಅವರು ನಯವಾಗಿಯೇ ತಿರಸ್ಕರಿಸಿ ತಮ್ಮ ಸ್ವಾಭಿಮಾನವನ್ನು ಮೆರೆದಿದ್ದರು.
೨೦೨೬ರ ಜುಲೈ ೧೧ರಂದು ಮೈಸೂರಿನಲ್ಲಿ ವಯಸ್ಸಾದ ಕಾರಣಗಳಿಂದ ೮೮ನೇ ವಯಸ್ಸಿನಲ್ಲಿ ಜಾನಕಿ ಅವರು ನಿಧನರಾದರು. ಅವರ ನಿಧನವು ಸಂಗೀತ ಜಗತ್ತಿಗೆ ಅಪಾರ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಜಾನಕಮ್ಮನವರ ಕಂಠದಿಂದ ಮೂಡಿಬಂದ ಹಾಡುಗಳು ಭಾರತೀಯ ಸಂಗೀತ ಲೋಕದ ಅಮೂಲ್ಯ ಆಸ್ತಿಯಾಗಿ ಸದಾ ಜೀವಂತವಾಗಿರುತ್ತವೆ.
(ಮಾಹಿತಿ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!