ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ), ಕಡಲಿಗೆಷ್ಟೊಂದು ಬಾಗಿಲು, ಲಹರಿ, ಮಹಿಳೆ ಮತ್ತು ಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ ೨೦೦೦, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಹರಿಹರ ಶ್ರೀ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಗೊರೂರು ಸಾಹಿತ್ಯ ಪ್ರತಿಷ್ಠಾನ, ಸುಶೀಲಾ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ,, ಕಾವ್ಯಾನಂದ ಪ್ರಶಸ್ತಿ, ಹಾ.ಮಾ.ನ. ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಪ್ರಶಸ್ತಿ ದೊರಕಿದೆ. ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.
***
ಜೀವಶಕ್ತಿ
ತಾಯಿಯೊಡಲು ಬಗೆದು ಬಗೆದು
ಅಲ್ಲೋಲ ಕಲ್ಲೋಲ
ಮೀತಿ ಮೀರಿ ಬಳಸಿ ಬಳಸಿ
ಜೀವತೈಲ ಖಾಲಿಯೋ ಖಾಲಿ
ನಿಂತು ಯಂತ್ರ ಅನಿಯಂತ್ರ
ಜೀವಚಕ್ರ ಸ್ಥಗಿತ
ಎಲ್ಲ ಶಕ್ತಿ ಮೂಲ ಖಾಲಿ
ನಮಗೆ ನಾಳೆಯೆಲ್ಲಿ?
ಬದಲಿ ಶಕ್ತಿ ಮೂಲ ಹುಡುಕಿ
ತಾಯ ಮಡಿಲಲ್ಲಿ
ಜೀವ ಪಡೆಯಬೇಕು
ಮಮತೆ ಕುಡಿಯೊಡೆಯಬೇಕು
ಹೊಲಗದ್ದೆಗಳ ದಿಣ್ಣೆಯಲ್ಲಿ
ಹಿಪ್ಪೆ ಹೊಂಗೆ ಸುರಹೊನ್ನೆ
ಮರ ಮರವ ಬೆಳೆದು
ಹೂ ಕಾಯಿ ಹಣ್ಣು ನಲಿವು
ಪ್ರಕೃತಿ ಒಲಿದು
ಪ್ರೀತಿ ತುಂಬಿದ ಹಾಡು
ಬೀಜ ಬೀಜ ತುಂಬಿ ತಂದು
ಅರೆಸಿ ಸೋಸಿ
ಜಿವ ತೈಲ ಬಸಿದು
ನಿಂತ ಜೀವಯಂತ್ರಕೆ
ಮರುಚಾಲನೆ
ಜೈವಾನಿಲದ ಬೆನ್ನ ಮೇಲೆ
ಓಡುವ ನಾಳೆಯ ಕುದುರೆ
ತಾಯಿ ನೆಲದ ಜೀವ ಪ್ರೀತಿ
ಬತ್ತದ ಹಾರೈಕೆಯೊರತೆ.
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!