ಡಾ. ನಿಂಗು ಸೊಲಗಿ ಅವರು ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ರಂಗಮುಖೇನ ಶಿಕ್ಷಣ ನೀಡಿ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತಾ, ಶಾಲಾ ಅಂಗಳದಲ್ಲಿ ರಂಗ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸುವ ಮೂಲಕ ತಮ್ಮ ರಂಗಭೂಮಿಯ ಅನುಭವಗಳನ್ನು ಗಟ್ಟಿಗೊಳಿಸುತ್ತಾ ಬಂದವರು. ವೃತ್ತಿ ಮತ್ತು ಪ್ರವೃತ್ತಿಗಳನ್ನು ಒಂದು ಮಾಡಿಕೊಂಡು, ಶಾಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುತ್ತಾ, ತಮ್ಮ ಎಲ್ಲಾ ನಿರಂತರ ಚಟುವಟಿಕೆಗಳ ಅನುಭವಗಳನ್ನು ಕ್ರೋಢೀಕರಿಸಿ ಈ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.

***

ಬೆತ್ತಲಾಗುತಿದೆ ವನಸಿರಿ

ಬೆತ್ತಲಾಗ್ಯಾದೊ ವನಸಿರಿ

ಬತ್ತಿ ಹೋಗ್ಯಾದೊ ಹೃದಯ

ಬತ್ತಿ ಉರಿದಿದೆ ಜಗವು

ಮಾನವನ ಮನಸೆಲ್ಲ

ಮಸಣವನೆ ತೋರುತಿದೆ

ಗಿಡಮರಗಳ ಕೊಚ್ಚಿ ಹಾಕಿ

ಹುಚ್ಚೆದ್ದು ಕುಣಿಯುತಿದೆ

ಕಾರ್ಖಾನೆ ಮೋಟಾರ್ ಗಳು

ಹೂಂಕರಿಸುತ ಹೊಗೆಯನುಗುಳಿ

ಕಲುಷಿತ ಗಾಳಿಜಲಗಳೆಲ್ಲ

ಗೋಳಾಡ್ತಾವೊ…

ಬಿರಿದ ಭೂಮಿಯ ಮೇಲೆ

ಬಡವನ ಬರಿದಾದ ಒಡಲು

ವಟ್ಟಿಕ್ಕಿ ಒದರುತಿದೆ

ಎದೆಗೂಡ ಕಬ್ಬಕ್ಕ್ಯಾಗಿ

ಕೋಟಿ ಕೋಟಿ ನೋಟ ನುಂಗಿದ 

ಮೇಟಿ - ರಾಟಿ ಮೆಟ್ಟಿದ ಮಂದಿ

ಕೋಟಿ ಕೋಟಿ ಹಣವನು ಸುರಿದ್ರೂ

ಕಾಳ್ಕಡಿಯೆ ಸಿಗ್ತಿಲ್ಲವಲ್ಲೊ

ಬಂತು ಬಂತು ಬಂದಿತು ಕಾಲ

ಬರಗಾಲದ ಬವಣೆಯ ಕಾಲ 

ಬರುತಿದೆ ಬರುತಿದೆ ನೋಡಲ್ಲಿ

ಧರೆ ಹೊತ್ತಿ ಉರಿಯುವ ಕಾಲ 

ಎಚ್ಚರ ! ಎಚ್ಚರ !! ಮಾನವನೇ ಎಚ್ಚರ .

(ಗಾನ ವಿಜ್ಞಾನ ಚೇತನ ಕೃತಿಯಿಂದ ಆಯ್ದ ಕವನ)